ETV Bharat / state

ಮುಸ್ಲಿಂ ನಾಯಕರು ಬೆಳೆಯಬಾರದು ಎಂಬುದೇ ಕಾಂಗ್ರೆಸ್ ಮನಸ್ಥಿತಿ ; ಅಸಾದುದ್ದೀನ್​ ಓವೈಸಿ

author img

By

Published : Aug 30, 2021, 6:39 PM IST

ಅಫ್ಘಾನಿಸ್ತಾನದ ಬೆಳವಣಿಗೆ ಬಗ್ಗೆ ಮಾತನಾಡಲು ನನಗೇನು ಸಂಬಂಧ ಇದೆ. ಅಫ್ಘಾನಿಸ್ತಾನ ನನ್ನ ತವರು ಮನೆಯೂ ಅಲ್ಲ, ನಮ್ಮವರು ಅಲ್ಲಿಗೆ ಯಾರೂ ಹೋಗಿಲ್ಲ. ನನಗೂ ಅಪಘಾನಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಅಫ್ಘಾನಿಸ್ತಾನ ಬಗ್ಗೆ ಪ್ರಧಾನಿ ಮೋದಿ ಅವರನ್ನೇ ಕೇಳಬೇಕು. 20 ವರ್ಷದಲ್ಲಿ ಮೂರು ಬಿಲಿಯನ್ ಹಣವನ್ನು ಅಲ್ಲಿ ವೆಚ್ಚ ಮಾಡಲಾಗಿದೆ..

AIMIM Asaduddin Owaisi statement against congress
ಅಸಾದುದ್ದೀನ್​ ಓವೈಸಿ ಸ್ಫೋಟಕ ಹೇಳಿಕೆ

ಬೆಳಗಾವಿ : ರಾಜಕೀಯವಾಗಿ ಮುಸ್ಲಿಂ ಸಮುದಾಯದ ನಾಯಕರು ಬೆಳೆಯಬಾರದು ಎಂಬುವುದೇ ಕಾಂಗ್ರೆಸ್ ಮನಸ್ಥಿತಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಹೇಳಿಕೆ ನೀಡಿದರು.

ಕಾಂಗ್ರೆಸ್ ವಿರುದ್ಧ ಅಸಾದುದ್ದೀನ್​ ಓವೈಸಿ ಕಿಡಿ..

ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ನಾಯಕರು ಬೆಳೆಯಬಾರದು ಎಂದು ಕಾಂಗ್ರೆಸ್ ಬಯಸುತ್ತದೆ. ಆದರೆ, ಗುಲಾಮಗಿರಿ ಮಾಡಲು ಮುಸ್ಲಿಮರು ಬೇಕು ಎಂದು ಕಾಂಗ್ರೆಸ್ ಬಯಸುತ್ತದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರಿಗೆ ಅಧಿಕಾರದ ಹಕ್ಕು ಸಿಗಬೇಕು. ಅದಕ್ಕಾಗಿ ನಾವು ಚುನಾವಣೆ ಎದುರಿಸಿ ಗೆಲ್ಲಬೇಕು.

ಪಾರ್ಲಿಮೆಂಟ್​ನಲ್ಲಿ ಬಹಳಷ್ಟು ಕಾನೂನುಗಳಿಗೆ ಕಾಂಗ್ರೆಸ್ ಬೆಂಬಲಿಸುತ್ತದೆ. ಬಿಜೆಪಿಗೆ ಪ್ರತಿಯೊಂದು ಕಾನೂನು ರಚಿಸಲು ಕಾಂಗ್ರೆಸ್ ಪರೋಕ್ಷವಾಗಿ ಸಾಥ್ ಕೊಡುತ್ತಿದೆ. ಬಿಜೆಪಿ ಬಿ ಟೀಂ ಎಐಎಂಐಎಂ ಅಲ್ಲ. ಕಾಂಗ್ರೆಸ್ ಎಂದು ಟೀಕಿಸಿದರು.

ದೇಶದಲ್ಲಿ ಮುಸ್ಲಿಮರ ಪರಿಸ್ಥಿತಿ ಬ್ಯಾಂಡ್​ ಬಜಾ ಅವರಂತೆ ಆಗಿದೆ. ಮದುಮಗ ಇರುವವರೆಗೆ ಮಾತ್ರ ಬ್ಯಾಂಡ್​ ಬಜಾ ಇರುತ್ತದೆ. ಅದೇ ಮದುಮಗ ಒಳಗೆ ಹೋದ್ರೆ ಬೆಂಡ್ ಬಾಜಾದವರು ಹೊರಗೆ ಸೈಡ್ನಲ್ಲಿ ಉಳಿದು ಬಿಡ್ತಾರೆ. ನಮ್ಮವರು ಆರು ಜನ ಸ್ಪರ್ಧೆ ಮಾಡಿದ್ದಕ್ಕೆ ಕಾಂಗ್ರೆಸ್​ಗೆ ಹೊಟ್ಟೆ ನೋವು ‌ಶುರುವಾಗಿದೆ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಬೇಕು ಎಂದರು.

ಜೆಡಿಎಸ್ ಜೊತೆ ಮೈತ್ರಿ ಇಲ್ಲ : ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಎಂಐಎಂ ಮೈತ್ರಿ ಮಾಡಿಕೊಂಡ ಕಾರಣ ಅಂದು ನಾವು ಅಭ್ಯರ್ಥಿಗಳನ್ನು ಹಾಕಿರಲಿಲ್ಲ. ಚುನಾವಣೆ ನಂತರ ಅವರು ಕಾಂಗ್ರೆಸ್ ಜೊತೆಗೆ ಕೈಜೋಡಿಸಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ತಪ್ಪಾಯ್ತು ಎಂದು ನಮಗೆ ಆಗಲೇ ಮನವರಿಕೆ ಆಯಿತು.

ಪ್ರಮಾಣವಚನ ಸ್ವೀಕಾರ ವೇಳೆ ಕುಮಾರಸ್ವಾಮಿ ನನಗೆ ಕರೆ ಮಾಡಿ ಆಹ್ವಾನಿಸಿದರು. ಕಾಂಗ್ರೆಸ್ ಜೊತೆ ಸೇರಿ ನೀವು ದೊಡ್ಡ ತಪ್ಪು ಮಾಡಿದ್ರಿ, ಇದು ನಿಮ್ಮ ಪಕ್ಷಕ್ಕೂ ಹಾನಿ ಆಗುತ್ತೆ, ನಿಮಗೆ ವೋಟು ಹಾಕಿದ ಮತದಾರರಿಗೆ ನಿರಾಶೆ ಆಗುತ್ತೆ ಎಂದು ಹೇಳಿದ್ದೆ. ಇದೇ ಕಾರಣಕ್ಕೆ ಪಾಲಿಕೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರು.

ಇದನ್ನೂ ಓದಿ:ಪಾಲಿಕೆ ಚುನಾವಣೆಯಲ್ಲಿ AIMIM ಸ್ಪರ್ಧೆ: ಬೆಳಗಾವಿಗೆ ಆಗಮಿಸಿದ ಓವೈಸಿ

ನಾನು ಗಲ್ಲಿ ಲೀಡರ್ : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಿವಸೇನೆ,ಎನ್ ಸಿಪಿ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಆದರೆ, ಅದೇ ಶಿವಸೇನೆ ಸಂಸದ ಸಂಸತ್ತಿನಲ್ಲಿ ಬಾಬ್ರಿ ಮಸೀದಿ ಕೆಡವಿದ್ದು ನಮಗೆ ಹೆಮ್ಮೆಯಿದೆ ಅಂತಾರೆ. ಮುಸ್ಲಿಮರು ರಾಜಕೀಯ ಹಕ್ಕು ಪಡೆದಾಗ ದೇಶ ಶಕ್ತಿಶಾಲಿ ಆಗಲಿದೆ.

ಈ ದೇಶದಲ್ಲಿ ಮುಸ್ಲಿಂ ನಾಯಕರು ಯಾರಿದ್ದಾರೆ ಹೇಳಿ. ನಾನಂತೂ ಗಲ್ಲಿ ಲೀಡರ್ ಆಗಿದ್ದೇನೆ. ನಾನು ಬೇಡ ನನ್ನ ಬಿಟ್ಟು ಬೇರೆ ಯಾರು ಇದ್ದಾರೆ ಹೇಳಲಿ. ಲಿಂಗಾಯತ ಸಮುದಾಯದಲ್ಲಿ ಬಿಎಸ್‌ವೈ, ಒಕ್ಕಲಿಗ ಜಾತಿಯಲ್ಲಿ ಡಿಕೆಶಿ, ಕುರುಬ ಜಾತಿಯಲ್ಲಿ ಸಿದ್ದರಾಮಯ್ಯ ‌ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ, ಮುಸ್ಲಿಂ ನಾಯಕರು ಒಬ್ಬರೂ ಬೆಳೆದಿಲ್ಲ.

ಅಫ್ಘಾನ್ ಬಗ್ಗೆ ಮೋದಿಯನ್ನೇ‌ ಕೇಳಿ : ಅಫ್ಘಾನಿಸ್ತಾನದ ಬೆಳವಣಿಗೆ ಬಗ್ಗೆ ಮಾತನಾಡಲು ನನಗೇನು ಸಂಬಂಧ ಇದೆ. ಅಫ್ಘಾನಿಸ್ತಾನ ನನ್ನ ತವರು ಮನೆಯೂ ಅಲ್ಲ, ನಮ್ಮವರು ಅಲ್ಲಿಗೆ ಯಾರೂ ಹೋಗಿಲ್ಲ. ನನಗೂ ಅಪಘಾನಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಅಫ್ಘಾನಿಸ್ತಾನ ಬಗ್ಗೆ ಪ್ರಧಾನಿ ಮೋದಿ ಅವರನ್ನೇ ಕೇಳಬೇಕು. 20 ವರ್ಷದಲ್ಲಿ ಮೂರು ಬಿಲಿಯನ್ ಹಣವನ್ನು ಅಲ್ಲಿ ವೆಚ್ಚ ಮಾಡಲಾಗಿದೆ.

ಅಲ್ಲಿನ ವಿದ್ಯಾರ್ಥಿಗಳನ್ನು ಕರೆಸಿ ಶಿಕ್ಷಣ, ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ನೀಡಲಾಗಿದೆ. ಈ ರೀತಿ 17 ಸಾವಿರ ಜನರಿಗೆ ತರಬೇತಿ ನೀಡಿದ್ದೇವೆ. ಬಿಜೆಪಿ ಸರ್ಕಾರ ಎಲ್ಲದಕ್ಕೂ ವೇಟ್ ಆ್ಯಂಡ್ ವಾಚ್ ಅನ್ನುತ್ತಾರೆ. ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಗೆಲ್ಲುವುದೇ ನಮ್ಮ ರಣತಂತ್ರ. ಜನರ ವಿಶ್ವಾಸ ಗಳಿಸುವುದು, ಅವರ ಹೃದಯದಲ್ಲಿ ಪ್ರೀತಿ ಗಳಿಸುವುದಾಗಿದೆ. ತಳಮಟ್ಟದಲ್ಲಿ ಪಕ್ಷ ಗಟ್ಟಿ ಮಾಡಬೇಕಿದೆ. ನನ್ನ ಮೇಲೆ, ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ಹಾಕುವಂತೆ ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.