ETV Bharat / state

ಪದವೀಧರ, ಶಿಕ್ಷಕರಂತಹ ವಿದ್ಯಾವಂತರ ಚುನಾವಣೆಯಲ್ಲೇ 11,499 ಮತಗಳು ತಿರಸ್ಕೃತ!

author img

By

Published : Jun 16, 2022, 7:20 PM IST

ಪದವೀಧರರು ಹಾಗೂ ಶಿಕ್ಷಕರೇ ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡುವ ಚುನಾವಣೆ ಇದಾಗಿತ್ತು. ಆದರೆ, ಹೆಚ್ಚಿನ ಮತಗಳು ತಿರಸ್ಕಾರಗೊಂಡಿವೆ. ಹೀಗಾಗಿ ವಿದ್ಯಾವಂತರಿಗೆ ಮತ ಹೇಗೆ ಚಲಾಯಿಸಬೇಕು ಎನ್ನುವ ಮಾಹಿತಿಯೇ ಇಲ್ಲವೇ ಎಂಬ ಅನುಮಾನ ಮೂಡತೊಡಗಿದೆ.

11499-votes-rejected-in-graduate-teacher-constituency-election
ಪದವೀಧರ, ಶಿಕ್ಷಕರಂತಹ ವಿದ್ಯಾವಂತರ ಚುನಾವಣೆಯಲ್ಲೇ 11,499 ಮತಗಳು ತಿರಸ್ಕೃತ

ಬೆಳಗಾವಿ: ವಾಯವ್ಯ ಪದವೀಧರ, ಶಿಕ್ಷಕ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ‌ಫಲಿತಾಂಶ ಪ್ರಕಟಗೊಂಡಿದೆ. ಮೂರು ಕ್ಷೇತ್ರಗಳಲ್ಲಿ ಒಟ್ಟು 11,499 ಮತಗಳು ತಿರಸ್ಕೃತಗೊಂಡಿವೆ. ವಿದ್ಯಾವಂತ ಮತದಾರರೇ ಮತ ಚಲಾಯಿಸುವ ವೇಳೆ ಎಡವಟ್ಟು ಮಾಡಿದ್ದು, ಸಾವಿರಾರು ಮತಗಳು ತಿರಸ್ಕಾರಗೊಳ್ಳಲು ಮುಖ್ಯ ಕಾರಣವಾಗಿದ್ದಾರೆ.

ಪದವೀಧರು ಹಾಗೂ ಶಿಕ್ಷಕರೇ ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡುವ ಚುನಾವಣೆ ಇದಾಗಿತ್ತು. ಆದರೆ, ಹೆಚ್ಚಿನ ಮತಗಳು ತಿರಸ್ಕಾರಗೊಂಡಿರುವುದು ಅಭ್ಯರ್ಥಿಗಳ ಬಗ್ಗೆ ಅಕ್ಷರಸ್ಥರ ಆಕ್ರೋಶವೋ ಅಥವಾ ಅಜಾಗರೂಕತೆಯೋ ಎಂಬುವುದೂ ಕೂಡ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಮತ ಹೇಗೆ ಚಲಾಯಿಸಬೇಕು ಎನ್ನುವ ಮಾಹಿತಿಯೇ ಇಲ್ಲವೇ ಎಂಬ ಅನುಮಾನ ಮೂಡತೊಡಗಿದೆ.

ವಿಜೇತ ಅಭ್ಯರ್ಥಿ  ಬಸವರಾಜ ಹೊರಟ್ಟಿ
ವಿಜೇತ ಅಭ್ಯರ್ಥಿ ಬಸವರಾಜ ಹೊರಟ್ಟಿ

ಯಾವ ಕ್ಷೇತ್ರದಲ್ಲಿ ಎಷ್ಟು ಮತ ತಿರಸ್ಕೃತ?: ಮೂರು ಕ್ಷೇತ್ರಗಳ ಪೈಕಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 1,223 ಮತ, ವಾಯುವ್ಯ ಶಿಕ್ಷಕರ ಮತ ಕ್ಷೇತ್ರದಲ್ಲಿ 1,270 ಮತಗಳು ಹಾಗೂ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬರೋಬ್ಬರಿ 9,006 ಮತಗಳು ತಿರಸ್ಕೃತಗೊಂಡಿವೆ. ಈ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳಿಗಿಂತ ಹೆಚ್ಚು ಮತಗಳು ತಿರಸ್ಕೃತಗೊಂಡಿವೆ.

ಮತದಾನ ವೇಳೆ ಅಭ್ಯರ್ಥಿಯ ಹೆಸರಿನ ಮುಂದೆ ರೋಮನ್ ಅಂಕಿ ಒಂದು, ಇಂಗ್ಲಿಷ್ ಅಂಕಿ ಒಂದು ಹಾಕಲು ಅವಕಾಶ ಇತ್ತು. ಒಂದು ಮತ ಪತ್ರದಲ್ಲಿ ಒಬ್ಬರಿಗೆ ಮಾತ್ರ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂಬ ನಿಯಮವಿತ್ತು. ತಿರಸ್ಕೃತಗೊಂಡ ಬಹುತೇಕ ಮತಗಳಲ್ಲಿ 'ಯೆಸ್' ಅಥವಾ 'ರೈಟ್​' ಮಾರ್ಕ್ ಪತ್ತೆಯಾಗಿವೆ.

ವಿಜೇತ ಅಭ್ಯರ್ಥಿ ಹಣಮಂತ ನಿರಾಣಿ
ವಿಜೇತ ಅಭ್ಯರ್ಥಿ ಹಣಮಂತ ನಿರಾಣಿ

ಬಿಜೆಪಿಗೆ ಆಘಾತ: ಬಿಜೆಪಿ ಭದ್ರಕೋಟೆ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಸೋಲು ಕಮಲ ಪಾಳೆಯಕ್ಕೆ ಮರ್ಮಾಘಾತ ನೀಡಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆ‌ ವ್ಯಾಪ್ತಿ ಹೊಂದಿರುವ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 33 ವಿಧಾನಸಭೆ ಕ್ಷೇತ್ರಗಳಿವೆ. 33 ಕ್ಷೇತ್ರಗಳ ಪೈಕಿ 22 ಬಿಜೆಪಿ‌ ಶಾಸಕರಿದ್ದಾರೆ. ಸಾಲದೆಂಬಂತೆ ಐವರು ಸಚಿವರು, ಐವರು ಸಂಸದರು. ತಲಾ ಓರ್ವ ರಾಜ್ಯಸಭೆ ಹಾಗೂ ಪರಿಷತ್ ಸದಸ್ಯರಿದ್ದಾರೆ. ಹೀಗಿದ್ದರೂ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಇದು ಬೆಳಗಾವಿಯ ಹೊಂದಾಣಿಕೆ ರಾಜಕಾರಣಕ್ಕೆ ಬಿಜೆಪಿ ಮತ್ತೊಮ್ಮೆ ಪೆಟ್ಟು ತಿಂದಂತೆ ಆಗಿದೆ.

ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೂಡ ಹೊಂದಾಣಿಕೆ ರಾಜಕಾರಣಕ್ಕೆ ಬಿಜೆಪಿ ಸೋತಿತ್ತು. ಈ ಸಲವೂ ಹೊಂದಾಣಿಕೆ ರಾಜಕಾರಣಕ್ಕೆ ಬಿಜೆಪಿ ಸೋಲು ಕಂಡಿದೆ. ಹೀಗಾಗಿ ಶಹಾಪುರ ಸೋಲಿಗೆ ಬಿಜೆಪಿ ನಾಯಕರು ಪಟ್ಟಿ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಬಗೆಗಿದ್ದ ವಿರೋಧಿ ಅಲೆ, ಹೊಂದಾಣಿಕೆ ‌ರಾಜಕಾರಣ, ಬಿಜೆಪಿ ನಾಯಕರು ಅಭ್ಯರ್ಥಿಯ ಅತಿಯಾದ ವಿಶ್ವಾಸ. ಅತಿ ಹೆಚ್ಚು ಮತದಾರರಿರುವ ಬೆಳಗಾವಿ ಬಿಟ್ಟು ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ನೀಡಿರುವುದು.

ವಿಜೇತ ಅಭ್ಯರ್ಥಿ  ಪ್ರಕಾಶ ಹುಕ್ಕೇರಿ
ವಿಜೇತ ಅಭ್ಯರ್ಥಿ ಪ್ರಕಾಶ ಹುಕ್ಕೇರಿ

ಮೇಲಾಗಿ, 12 ವರ್ಷದಿಂದ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿದ್ದರೂ ಅರುಣ್​ ಶಹಾಪುರ ಶಿಕ್ಷಕರ ಸಮಸ್ಯೆ ಸ್ಪಂದಿಸದಿರುವುದು, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಬಿಜೆಪಿ ಪ್ರಚಾರ ಸಭೆಗಳಲ್ಲಿ ಮುದಿ ಎತ್ತು, ಅನಕ್ಷರಸ್ಥ ಎಂದು ಅಪಪ್ರಚಾರ ಮಾಡಿದ್ದು, ಮತದಾರರು ಮಾತ್ರ ಅಲ್ಲ, ಬಿಜೆಪಿ ಶಾಸಕರ ಜೊತೆಗೂ ಅಂತರ, ಪ್ರಭಾವಿ, ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿ ಮುಂದೆ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸದೇ ಇರುವುದು ಬಿಜೆಪಿ ಅಭ್ಯರ್ಥಿಗೆ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ದ.ಪದವೀಧರ ಕ್ಷೇತ್ರ: ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ.ಮಾದೇಗೌಡ ಜಯಭೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.