ದೇವೇಗೌಡರ ಮಾನಸ ಪುತ್ರ ಕೈ ತೆಕ್ಕೆಗೆ; ಮಾಜಿ ಸಚಿವ ಎಚ್ ನಾಗೇಶ್​​​​ಗೂ ಸಂಕ್ರಾಂತಿ ಸಿಹಿ

author img

By

Published : Jan 14, 2023, 9:21 PM IST

YSV Dutta and H Nagesh joined Congress party

ದೇವೇಗೌಡರ ಮಾನಸ ಪುತ್ರ ಎಂದು ಕರೆಯಲಾಗುತ್ತಿದ್ದ ಕಡೂರು ಮಾಜಿ ಶಾಸಕ ವೈಎಸ್​ವಿ ದತ್ತ ಮತ್ತು ಮುಳಬಾಗಿಲು ಶಾಸಕ ಎಚ್ ನಾಗೇಶ್ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕಡೂರು ಮಾಜಿ ಶಾಸಕ ವೈಎಸ್​ವಿ ದತ್ತ ಮತ್ತು ಮುಳಬಾಗಿಲು ಶಾಸಕ ಎಚ್ ನಾಗೇಶ್ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

ಬೆಂಗಳೂರು: ಅಪಾರ ಸಂಖ್ಯೆಯ ಬೆಂಬಲಿಗರ ಸಮ್ಮುಖದಲ್ಲಿ ಮುಳಬಾಗಿಲು ಶಾಸಕ ಎಚ್ ನಾಗೇಶ್ ಹಾಗೂ ಕಡೂರು ಮಾಜಿ ಶಾಸಕ ವೈಎಸ್​ವಿ ದತ್ತ ಕಾಂಗ್ರೆಸ್​ಗೆ ಸೇರ್ಪಡೆಯಾದರು. ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಸಚಿವರು ಆಗಿದ್ದ ಹೆಚ್ ನಾಗೇಶ್ ಮತ್ತು ದತ್ತ ಜೆಡಿಎಸ್ ತೊರೆದು ಕೈ ಸೇರಿದರು. ಸಮಾರಂಭದಲ್ಲಿ ‌ಮೈಸೂರು ಮೂಡ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಕೋಲಾರ ಭಾಗದ ಮುಖಂಡ ದಯಾನಂದ ಮತ್ತಿತರ ನಾಯಕರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರ ಜತೆ ಕಾಂಗ್ರೆಸ್ ಸೇರ್ಪಡೆಯಾದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಧ್ರುವ ನಾರಾಯಣ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಬೈರತಿ ಸುರೇಶ್ ಸೇರಿದಂತೆ ಹಲವು ನಾಯಕರ ಉಪಸ್ಥಿತರಿದ್ದರು.

ನಾಯಕರನ್ನು ಸೇರ್ಪಡೆ ಮಾಡಿಕೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಕರ ಸಂಕ್ರಮಣ ರೈತರ ಬದುಕು ಶುಭಾರಂಭ ಆಗುವ ಕ್ಷಣ. ಇಂಥಾ ಪವಿತ್ರ ದಿನದಂದು ವೈಎಸ್​ವಿ ದತ್ತಾ ಹಾಗೂ ಎಚ್ ನಾಗೇಶ್ ಅವರು ಪಕ್ಷ ಸೇರಿದ್ದಾರೆ. ಶಾಸಕ ಎಚ್ ನಾಗೇಶ್ ಇಂದು ಕಾಂಗ್ರೆಸ್ ಪಕ್ಷದ ಸಹ ಸದಸ್ಯತ್ವ ಪಡೆಯುತ್ತಿದ್ದಾರೆ. ವೈಎಸ್​ವಿ ದತ್ತಾ ಅವರು ಸುಮಾರು 48 ವರ್ಷಗಳಿಂದ ನನಗೆ ಗೊತ್ತಿದ್ದಾರೆ. ನಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗಿನಿಂದ ಅವರೊಂದಿಗೆ ಒಡನಾಟವಿದೆ ಎಂದರು.

ಆಡಳಿತ ಪಕ್ಷದ ವಿರುದ್ಧ ದಿನೇ ದಿನೇ ವಿಶ್ವಾಸ ಕಡಿಮೆ ಆಗುತ್ತಿದೆ. ಜನರಿಗೆ ಉತ್ತಮ ಆಡಳಿತ ಕೊಡುವುದಕ್ಕೆ ಆಗುತ್ತಿಲ್ಲ ಎಂದು ಬಹಳ ಜನ ನಮ್ಮ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿ ಕೊಟ್ಟ ಅಧಿಕಾರವನ್ನು ತ್ಯಾಗ ಮಾಡಿ ನಾಗೇಶ್ ಪಕ್ಷ ಸೇರ್ಪಡೆ ಆಗಲು ಬಂದಿದ್ದಾರೆ. ದತ್ತಾ ಅವರು ಪಾಠ ಹೇಳುವಾಗ ನ್ಯಾಷನಲ್ ಕಾಲೇಜಿನಲ್ಲಿ ನಾನು ಸ್ಟೂಡೆಂಟ್ ಆಗಿದ್ದೆ. ಕಡೂರು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದವರು. ಜೆಡಿಎಸ್​ನಲ್ಲಿ ಹಲವು ಹುದ್ದೆಗಳಿದ್ದವರು. ಅಲ್ಲಿ ನಮಗೆ ಭವಿಷ್ಯ ಇಲ್ಲ ಎಂಬುದನ್ನ ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಬಂದಿದ್ದಾರೆ. ಮೈಸೂರಿನ ಮೂಡ ಅಧ್ಯಕ್ಷರಾಗಿದ್ದವರು ಮೋಹನ್ ಹಿಂದೆ ಪಕ್ಷದಲ್ಲಿ ಕೆಲಸ ಮಾಡಿದ್ದವರು. ಬಿಜೆಪಿ ತೊರೆದು ಪಕ್ಷ ಸೇರ್ಪಡೆ ಆಗಿದ್ದಾರೆ. ಈ ಮೂವರ ಜೊತೆ ಪಕ್ಷ ಸೇರುತ್ತಿರುವ ಎಲ್ಲರಿಗೂ ಕಾಂಗ್ರೆಸ್​ ವತಿಯಿಂದ ಸ್ವಾಗತ ಕೋರಿದರು.

ಇಂದು ಆರಂಭ ಇನ್ನೂ ಬಹಳಷ್ಟು ಜನ ಸೇರುವವರಿದ್ದಾರೆ: ಇದು ಆರಂಭ ಅಷ್ಟೇ. ಇನ್ನು ಮುಂದೆ ವಾರಕ್ಕೊಮ್ಮೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇರಲಿದೆ. ಮುಂದೆ ಪ್ರವಾಸಕ್ಕೆ ಹೋದಾಗ ಅಲ್ಲಿಯೂ ಸೇರ್ಪಡೆ ಆಗುವ ಕಾರ್ಯಕ್ರಮಗಳು ಇವೆ. ಮತ್ತಷ್ಟು ಜನ ಕಾಂಗ್ರೆಸ್ ಸೇರ್ಪಡೆ ‌ಆಗಲಿದ್ದಾರೆ. ಸಾಕಷ್ಟು ಸರ್ವೆಗಳಾಗಿವೆ, ಎಲ್ಲವೂ ನಮ್ಮ ಪರವಾಗಿವೆ. ಸ್ವಂತ ಬಲದ ಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ಪಕ್ಷಕ್ಕೆ ಸೇರುವವರೆಲ್ಲರೂ ಕಾರ್ಯಕರ್ತರಾಗಿ, ನಾಯಕರಾಗಿ‌ ದುಡಿಯಬೇಕು.

28 ಜನ ವೀಕ್ಷಕರು ಲೋಕಸಭಾ ಕ್ಷೇತ್ರಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಭಾಗವಹಿಸಿ ಬಂದಿದ್ದೇವೆ. ಪ್ರಿಯಾಂಕಾ ಗಾಂಧಿ ಅವರು ನಾ‌ ನಾಯಕಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯಾರೂ ಗಂಡು ಮಕ್ಕಳು ಸಮಾವೇಶಕ್ಕೆ ಬರಬೇಡಿ. ನಾವೂ ಕೂಡ ವೇದಿಕೆ ಎದುರು ಕೂಡುತ್ತೇವೆ. ಸಮಾವೇಶದ ಎಲ್ಲ ಜವಾಬ್ದಾರಿಯನ್ನು ಹೆಣ್ಣುಮಕ್ಕಳಿಗೆ ಬಿಟ್ಟು ಕೊಟ್ಟಿದ್ದೇವೆ ಎಂದು ಹೇಳಿದರು.

ರಾಷ್ಟ್ರ ಇಂದು ತುರ್ತಿನಲ್ಲಿದೆ: ಮಾಜಿ ಶಾಸಕ ವೈ ಎಸ್ ವಿ ದತ್ತಾ ಮಾತನಾಡಿ, ಇದು ಮಾತನಾಡುವ ಸಮಯವಲ್ಲ, ಕೆಲಸ ಮಾಡುವ ಸಮಯ. ಕಳೆದ ಹಲವು ದಶಕಳಿಂದ ನಾನು ಒಂದೇ ಪಕ್ಷದಲ್ಲಿದ್ದೆ. ಆದರೆ, ಈಗ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇನೆ. ಇದು ನಮ್ಮ ರಾಷ್ಟ್ರದ ತುರ್ತು ಅಗತ್ಯವಾಗಿದೆ. ಸಂವಿಧಾನವನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆದಿವೆ. ಸೌಹಾರ್ದವನ್ನು ಬುಡಮೇಲು ಮಾಡುವ ಕೆಲಸಗಳು ನಡೆಯುತ್ತಿವೆ. ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ ಎಂದು ಯಾವುದೇ ಶರತ್ತುಗಳಿಲ್ಲದೇ ಪಕ್ಷ ಸೇರುತ್ತಿದ್ದೇನೆ ಎಂದರು.

ಪ.ಜಾ, ಪ.ಪಂ ಸುರಕ್ಷಿತವಾಗಿರುವುದು ಕಾಂಗ್ರೆಸ್​ನಿಂದ: ಮಾಜಿ ಸಚಿವ ಎಚ್. ನಾಗೇಶ್ ಮಾತನಾಡಿ, ಜೀವನದಲ್ಲಿ ಇಂದು ನನಗೆ ವಿಶೇಷವಾದ ದಿನ. ಕಾಂಗ್ರೆಸ್ ಸಹಾಯದಿಂದ ನಾನು ಗೆದ್ದು ನಂತರ ಬಿಜೆಪಿ ಬೆಂಬಲ ನೀಡಿದೆ. ಎಸ್​ಸಿ ಎಸ್​​ಟಿ ಇಂದು ಸುರಕ್ಷಿತವಾಗಿ ಇದ್ದಾರೆ ಅಂದರೆ ಅದಕ್ಕೆ ಕಾಂಗ್ರೆಸ್ ಕಾರಣ. ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸಿದ್ಧಾಂತ ಇಷ್ಟ ಆಗಿ ಸೇರುತ್ತಿದ್ದೇನೆ. ನನ್ನ ತಂದೆ ತಾಯಿಗಳೂ ಕೂಡ ಕೈಗೆ ಮತವನ್ನು ಕೊಡುತ್ತಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿ ನಮ್ಮ ಜನಾಂಗಕ್ಕೆ ತಿಳಿಹೇಳುತ್ತೇನೆ ಎಂದರು.

ಜೆಡಿಎಸ್​ ಸಿದ್ಧಾಂತ ಇಲ್ಲದ ಪಕ್ಷ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪಕ್ಷ ಸೇರ್ಪಡೆ ಆದವರಿಗೆ ಸ್ವಾಗತ ಬಯಸುತ್ತೇನೆ. ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಹೆಚ್ಚು ಕಾಲ ಇರುವ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ. ಉಳಿದವೆಲ್ಲಾ ಸ್ವಾತಂತ್ರ್ಯ ನಂತರ ಹುಟ್ಟಿಕೊಂಡ ಪಕ್ಷಗಳು. ನಾವೆಲ್ಲಾ ಜನತಾ ಪಾರ್ಟಿಯಲ್ಲಿ ಇದ್ದವರು. ಜನತಾ ಪಾರ್ಟಿ ವಿಭಾಗ ಆಗಿ ಜೆಡಿಎಸ್ ಜೆಡಿಯು ಆಗಿ ಇಬ್ಭಾಗವಾಯ್ತು. ದತ್ತಾ ಜೆಡಿಎಸ್​​ನಲ್ಲೇ ಉಳಿದುಕೊಂಡವರು. ಎಲ್ಲಾ ಪಕ್ಷಗಳ ಸಿದ್ಧಾಂತ ತಿಳಿದುಕೊಂಡವರು ಎಂದರು.

ಜೆಡಿಎಸ್ ಅವರಿಗೆ ಯಾವ ಸಿದ್ಧಾಂತವೂ ಇಲ್ಲ. ಬಿಜೆಪಿ ಕೋಮುವಾದದ ಸಿದ್ಧಾಂತ. ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯದ ಸಿದ್ಧಾಂತ ಪರವಾಗಿ ಇರುವುದು. ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ದತ್ತಾ ಅವರು ದೇಶದ, ರಾಜ್ಯದ ರಾಜಕಾರಣದ ದೃಷ್ಟಿಯಿಂದ ರೈತರ, ಬಡವರಿಗೆ ನ್ಯಾಯ ಕೊಡುವ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಸೇರುವುದು ಖಚಿತ: ಊಹಾಪೋಹಗಳಿಗೆ ತೆರೆ ಎಳೆದ ದತ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.