ETV Bharat / state

B S Yediyurappa: ದೆಹಲಿಯಿಂದ ವಾಪಸಾದ ಯಡಿಯೂರಪ್ಪ.. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆಯಾಗಿಲ್ಲ ಎಂದ ಮಾಜಿ ಸಿಎಂ

author img

By ETV Bharat Karnataka Team

Published : Sep 14, 2023, 1:56 PM IST

Updated : Sep 14, 2023, 3:37 PM IST

ಪಕ್ಷದ ವರಿಷ್ಠರ ಜೊತೆ ಚರ್ಚಿಸಲು ನಿನ್ನೆ ದೆಹಲಿಗೆ ತೆರಳಿದ್ದ ಬಿ ಎಸ್​ ಯಡಿಯೂರಪ್ಪ ಇಂದು ಬೆಂಗಳೂರಿಗೆ ಹಿಂದಿರುಗಿದ್ದಾರೆ.

Yeddyurappa returned from Delhi
ದೆಹಲಿಯಿಂದ ವಾಪಾಸಾದ ಯಡಿಯೂರಪ್ಪ

ದೆಹಲಿಯಿಂದ ವಾಪಸಾದ ಯಡಿಯೂರಪ್ಪ

ಬೆಂಗಳೂರು: ಬುಧವಾರ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಬೆಂಗಳೂರಿಗೆ ಇಂದು ವಾಪಸಾಗಿದ್ದಾರೆ. ದೆಹಲಿಯಿಂದ ಏರ್​ ಇಂಡಿಯಾ ವಿಮಾನದಲ್ಲಿ 12.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಬೆಂಗಳೂರಿನತ್ತ ಮಾಜಿ ಸಿಎಂ ಪ್ರಯಾಣ ಬೆಳೆಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಿ ಎಸ್​ ಯಡಿಯೂರಪ್ಪ ಅವರು, ದೆಹಲಿ ಸಭೆಯಲ್ಲಿ ರಾಜ್ಯದ ವಿಚಾರ ಯಾವುದೂ ಚರ್ಚೆಯಾಗಿಲ್ಲ. ಕೇವಲ ಜಿ20 ಸಕ್ಸಸ್ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದ ಯಾವ ವಿಚಾರವನ್ನೂ ಯಾರೂ ಚರ್ಚೆ ಮಾಡಿಲ್ಲ. ಕಾವೇರಿ ನೀರು ಬಿಡಬಾರದು ಎಂಬ ನಮ್ಮ ನಿಲುವು ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್​ಗೆ ನಮ್ಮ ಕಾವೇರಿ ಭಾಗದ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕು ಅಷ್ಟೇ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆ ಆಗಿಲ್ಲ: ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಯಾವುದೇ ಮಾತುಕತೆ ನಡೆಸಲಿಲ್ಲ. ಆದರೆ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಿಂದ ವಾಪಸಾದ ಬಳಿಕ ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದೆ. ಈ ವೇಳೆ ರಾಜ್ಯ ರಾಜಕೀಯದ ಮೈತ್ರಿ ಬಗ್ಗೆ ಏನೂ ಚರ್ಚೆ ಆಗಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಾಗಿಯೇ ಏನು ಪ್ರಸ್ತಾಪ ಮಾಡಲಿಲ್ಲ. ಹಾಗಾಗಿ ನಾನಾಗಿಯೇ ಏನು ಕೇಳಲಿಲ್ಲ. ಮೋದಿ, ಅಮಿತ್ ಶಾ ಅವರ ಮನಸ್ಸಲ್ಲಿ ಏನಿದೆಯೊ ಗೊತ್ತಿಲ್ಲ. ಎಲ್ಲವನ್ನೂ ಅವರೇ ತೀರ್ಮಾನ ಮಾಡುತ್ತಾರೆ ಎಂದರು.

ಮೈತ್ರಿ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಸಹಮತ ಇದೆ. ರಾಜ್ಯ ನಾಯಕರ ಮನಸ್ಸಲ್ಲಿ ಏನಿದೆ ಗೊತ್ತಿಲ್ಲ. ನಾನು ವೈಯಕ್ತಿಕ ತೀರ್ಮಾನ ಮಾಡೋದಕ್ಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತಮಿಳುನಾಡಿಗೆ ಕಾವೇರಿಯಿಂದ ಒಂದು ತೊಟ್ಟು ನೀರನ್ನೂ ಬಿಡಬಾರದು. ಈಗಾಗಲೇ ನೀರು ಬಿಟ್ಟು ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ. ಕೂಡಲೇ ನೀರು ಬಿಡುವುದನ್ನ ನಿಲ್ಲಿಸಬೇಕು. ಕೋರ್ಟ್​​ಗೆ ಕಾವೇರಿ ಕಣಿವೆಯ ವಾಸ್ತವ ಪರಿಸ್ಥಿತಿ ವಿವರಿಸಬೇಕು. ಆ ಮೂಲಕ ರಾಜ್ಯವನ್ನು ಕುಡಿಯುವ ನೀರಿನ ಸಂಕಷ್ಟದಿಂದ ಹಾಗೂ ಬೆಳನಷ್ಟವಾಗುವುದರಿಂದ ಕಾಪಾಡಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 195 ತಾಲೂಕುಗಳಲ್ಲಿ ಭೀಕರ ಬರಗಾಲ ಇದೆ. ಸರ್ಕಾರದ ಆದೇಶ ನೋಡಿದೆ. ಕೂಡಲೇ ಬರ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಇನ್ನಿತರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗ್ರಹಿಸಿದರು.

ಇದನ್ನೂ ಓದಿ: ಬರ ಘೋಷಣೆ: 161 ತೀವ್ರ, 34 ಸಾಧಾರಣ ಬರಪೀಡಿತ ತಾಲೂಕುಗಳು- ರಾಜ್ಯ ಸರ್ಕಾರ ಆದೇಶ

Last Updated : Sep 14, 2023, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.