ಪಂಚಮಸಾಲಿ ಮೀಸಲಾತಿ ಬಗ್ಗೆ ಸದನದಲ್ಲಿ ಮತ್ತೆ ಪ್ರಸ್ತಾಪ ಮಾಡಿದ ಯತ್ನಾಳ್​​ : ಸಿಎಂ ಕೊಟ್ಟ ಉತ್ತರವೇನು ?

author img

By

Published : Sep 20, 2022, 5:20 PM IST

yatnal-proposed-the-reservation-for-panchamasali-community-in-the-assembly

ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತು ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ ನಂತರ ಕಾನೂನು ಬದ್ದವಾಗಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತು ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ ನಂತರ ಕಾನೂನು ಬದ್ದವಾಗಿ ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪಂಚಮಸಾಲಿ ಸಮುದಾಯ, ವಾಲ್ಮೀಕಿ ಸಮುದಾಯ, ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿ ಹೆಚ್ಚಳದ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಏನೇ ಕ್ರಮ ಕೈಗೊಂಡರೂ ಅದು ಕಾನೂನು ಬದ್ದವಾಗಿರಬೇಕು. ಹಾಗಾಗಿ ಯಾರಿಗೂ ಕೂಡ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿಯ ಗಮನ ಸೆಳೆದರು.

ಆಯೋಗದ ವರದಿ ಬಂದ ಬಳಿಕ ಕ್ರಮ: ಇದಕ್ಕೆ ಸುದೀರ್ಘ ಉತ್ತರ ನೀಡಿದ ಸಿಎಂ, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಬೇಕು ಎಂದು ಹಲವು ದಿನಗಳಿಂದ ಹೋರಾಟ ಮಾಡಲಾಗುತ್ತಿದೆ. ಇದು ತಪ್ಪು ಎಂದು ನಾನು ಹೇಳುವುದಿಲ್ಲ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಿದ್ದೇವೆ.

ಆಯೋಗ ಈಗಾಗಲೇ 10ರಿಂದ 12 ಜಿಲ್ಲೆಗಳಿಗೆ ಭೇಟಿ ಕೊಟ್ಟಿದೆ. ಇನ್ನು ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬೇಕು. ಆದಷ್ಟು ಶೀಘ್ರ ವರದಿ ಸಲ್ಲಿಸಬೇಕೆಂದು ಆಯೋಗಕ್ಕೆ ಸೂಚನೆ ಕೊಟ್ಟಿದ್ದೇವೆ. ವರದಿ ಬಂದ ನಂತರ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ. ವೈಜ್ಞಾನಿಕವಾಗಿ ಮಾಡಬೇಕಾಗಿರುವುದರಿಂದ ಸಮಯ ಬೇಕಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಈ ಹಿಂದೆ ಇದೇ ರೀತಿ ಸಮುದಾಯಗಳ ಮೀಸಲಾತಿ ಹೆಚ್ಚಳ ಬೇಡಿಕೆ ಬಂದಾಗ ಶೇ.50ರಿಂದ 60ಕ್ಕೆ ಹೆಚ್ಚಳ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು. ಆದರೆ, ರಾಜ್ಯ ಸರ್ಕಾರ ನೀಡಿದ ದತ್ತಾಂಶಗಳು ಸರಿ ಇಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ಮತ್ತು ಸುಪ್ರೀಂಕೋರ್ಟ್ ಎರಡೂ ಕೂಡ ತಿರಸ್ಕಾರ ಮಾಡಿವೆ. ಪುನಃ ಇದು ಆಗದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂದು ಹೇಳಿದರು.

ಹಿಂದುಳಿದ ವರ್ಗಗಳಿಗೆ ಶೇ 34ರಷ್ಟು ಮೀಸಲಾತಿ ನೀಡಿದ್ದೇವೆ : ಕರ್ನಾಟಕದಲ್ಲಿ ಪ್ರಸ್ತುತ ವಿವಿಧ ಸಮುದಾಯಗಳಿಗೆ ಶೇ.50ರಷ್ಟು ಮೀಸಲಾತಿ ಪ್ರಮಾಣವನ್ನು ನೀಡುತ್ತಿದ್ದೇವೆ. ಇಂದಿರಾ ಸಹನಿ ಪ್ರಕರಣದಲ್ಲಿ ಮೀಸಲಾತಿ ಶೇ.50ರಷ್ಟು ಮೀರಬಾರದೆಂದು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ. ನಮ್ಮ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಶೇ.34ರಷ್ಟು ಮೀಸಲಾತಿ ಕೊಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಎಲ್ಲಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈಗ ಪ್ರತಿಯೊಂದು ಸಮುದಾಯದಲ್ಲೂ ಜಾಗೃತ ಮನೋಭಾವನೆ ಬಂದಿದ್ದು, ಮೀಸಲಾತಿಯಿಂದ ಸಾಂವಿಧಾನಿಕ ಸೌಲಭ್ಯಗಳ ಬಗ್ಗೆ ಎಲ್ಲರಿಗೂ ಗೊತ್ತು. ಹೀಗಾಗಿ ಎಸ್ಸಿ ಎಸ್ಟಿಯವರು ಶೇ.7.5ರಷ್ಟು ಮೀಸಲಾತಿ ಹೆಚ್ಚಳ, ವಾಲ್ಮೀಕಿ ಸಮುದಾಯ, ಹಾಲುಮತ ಸಮುದಾಯದವರು 2ಎ, ಪ್ರವರ್ಗ-1ರಲ್ಲಿ ಇರುವವರು ಎಸಿಗೆ, ಮರಾಠ, ಕ್ಷತ್ರೀಯದವರು 2ಎ, 3ಬಿನಲ್ಲಿರುವವರು ಹಿಂದುಳಿದ ವರ್ಗಕ್ಕೆ ಕೇಳುತ್ತಿದ್ದಾರೆ ಎಂದು ಹೇಳಿದರು.

ಯಾವುದೇ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಕಾನೂನುಗಳಿವೆ. ಸುಪ್ರೀಂಕೋರ್ಟ್ ಈ ಬಗ್ಗೆ ಹಲವಾರು ಬಾರಿ ಅನೇಕ ತೀರ್ಪುಗಳನ್ನು ನೀಡಿದೆ. ಅವಕಾಶ ವಂಚಿತರು, ಶೈಕ್ಷಣಿಕವಾಗಿ ಹಿಂದುಳಿದ ಸಮಾಜಕ್ಕೆ ಮೀಸಲಾತಿ ನೀಡಬೇಕು. ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬಂಧ ಎರಡು ಸಮಿತಿಗಳ ಶಿಫಾರಸು ನಮ್ಮ ಮುಂದಿದೆ.

ಇದರ ನಡುವೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೂ ವರದಿ ನೀಡುವಂತೆ ಸೂಚಿಸಿದ್ದೇವೆ. ಇದು ಸೂಕ್ಷ್ಮ ವಿಷಯ. ಕಾನೂನು ಚೌಕಟ್ಟಿನೊಳಗೆ ಅಂಕಿ - ಸಂಖ್ಯೆಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬೇಕು. ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಹೀಗಾಗಿ ವರದಿಗಳು ಬರಲಿ ನಿಮ್ಮೆಲ್ಲರ ಅಭಿಪ್ರಾಯ ಪಡೆದೇ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಧರಣಿ ನಡೆಸಿದ ಯತ್ನಾಳ್ ,ಲಕ್ಷ್ಮಿ ಹೆಬ್ಬಾಳ್ಕರ್ : ಲಿಂಗಾಯತ ಪಂಚಮಸಾಲಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಉತ್ತರದಿಂದ ತೃಪ್ತರಾಗದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸರ್ಕಾರದಿಂದ ಸ್ಪಷ್ಟ ಉತ್ತರಬೇಕು. ಈ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯಿರಿ. ಇದುವರೆಗೂ ಸರ್ವ ಪಕ್ಷಗಳ ಸಭೆ ಕರೆದಿಲ್ಲ. ಸರ್ಕಾರ ಏನು ಮಾಡುತ್ತಿದೆ ಎಂದು ಸದನ ಬಾವಿಗಿಳಿದು ಧರಣಿ ನಡೆಸಿದರು.

ಆಗ ಮುಖ್ಯಮಂತ್ರಿಗಳು, ಈಗಾಗಲೇ ಎರಡು ಬಾರಿ ಸರ್ವಪಕ್ಷಗಳ ಸಭೆ ಕರೆದಿದ್ದೇನೆ. ತೀರ್ಮಾನ ಮಾಡುತ್ತೇವೆ ಸಹಕರಿಸಿ ಎಂದರು. ಈ ಹಂತದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಧ್ಯ ಪ್ರವೇಶಿಸಿ, ಮುಖ್ಯಮಂತ್ರಿಗಳು ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾಗಿ ಎಲ್ಲವನ್ನು ಹೇಳಿದ್ದಾರೆ. ಧರಣಿ ಕೈಬಿಡಿ ತೀರ್ಮಾನ ಮಾಡುತ್ತಾರೆ ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಧರಣಿ ವಾಪಸ್ ಪಡೆದು ತಮ್ಮ ಸ್ಥಾನಗಳಿಗೆ ಮರಳಿದರು.

ಇದನ್ನೂ ಓದಿ : ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳಿಗೆ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.