ETV Bharat / state

ಸಾಹಿತಿಗಳು ಮತ್ತು ವಿಮರ್ಶಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಶತಾವಧಾನಿ ಡಾ.ಆರ್.ಗಣೇಶ್

author img

By

Published : Feb 19, 2023, 11:05 PM IST

ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಮತ್ತು ಬಸವನಗುಡಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಅಮೃತವರ್ಷ ಆಚರಣೆಯಲ್ಲಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

writers-and-critics-are-like-two-sides-of-the-same-coin
ಸಾಹಿತಿಗಳು ಮತ್ತು ವಿಮರ್ಶಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಶತಾವಧಾನಿ ಡಾ.ಆರ್.ಗಣೇಶ್

ಬೆಂಗಳೂರು: ಸಾಹಿತಿಗಳು ಮತ್ತು ವಿಮರ್ಶಕರು ಸರಸ್ವತಿಯ ಪ್ರತಿರೂಪ. ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶತಾವಧಾನಿ ಡಾ.ಆರ್.ಗಣೇಶ್ ಅಭಿಪ್ರಾಯಪಟ್ಟರು.

ಭಾನುವಾರ ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಮತ್ತು ಬಸವನಗುಡಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಅಮೃತವರ್ಷ ಆಚರಣೆ ಕಾರ್ಯಕ್ರಮದಲ್ಲಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿ ನಂತರ ಮಾತನಾಡಿದ ಶತಾವಧಾನಿ ಡಾ.ಆರ್.ಗಣೇಶ್ ಹೆಸರಾಂತ ಅನುವಾದಕಿ ಮತ್ತು ಸಾಹಿತ್ಯ ವಿಮರ್ಶಕಿ ಎಲ್​ವಿ ಶಾಂತಕುಮಾರಿ ಸೌಜನ್ಯದ ಪ್ರತಿರೂಪ. ಈ ಸೌಜನ್ಯ ದೌರ್ಬಲ್ಯದಿಂದ ಬಂದಿದ್ದಲ್ಲ. ಒಳ್ಳೆತನಕ್ಕು ಮತ್ತು ದೌರ್ಬಲ್ಯಕ್ಕೂ ವ್ಯತ್ಯಾಸ ತಿಳಿಯದಂತಹ ದುಸ್ಸಿಗೆ ಸಮಾಜ ತಲುಪಿದೆ. ದಾರ್ಶನಿಕವಾದ ಉಪಶಾಂತಿಯ ದೊಡ್ಡ ಮೌಲ್ಯ ಅವರಲ್ಲಿದೆ ಹಾಗೂ ವಿಮರ್ಶಕರು ಇಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ. ಈ ರೀತಿಯ ಮನಸ್ಸು, ಬುದ್ಧಿಮತ್ತೆಯು ಶಾಂತಕುಮಾರಿಯವರಲ್ಲಿದೆ ಎಂದರು.

ಸಿದ್ಧಸಾಹಿತಿಗಳು ಈ ಕಾಲಘಟ್ಟದಲ್ಲಿ ಸಿಗುವುದು ತುಂಬಾ ಕಡಿಮೆ. ಶಾಂತಕುಮಾರಿ ಅಂತರಂಗವನ್ನು ನೋಡಿಕೊಳ್ಳಲು ಜೀವನ ಪರಿಪಾಕವನ್ನು ಮಾರ್ಗವಾಗಿ ಕಂಡವರು. ಓದಿದಷ್ಟು ಶೀರ್ಷಿಕೆಗಳನ್ನು ಎಷ್ಟೋ ವಿಮರ್ಶಕರು ಇನ್ನೂ ಕೇಳಿಲ್ಲ, ಆದರೆ ಇಂಗ್ಲೀಷ್, ಗ್ರೀಕ್, ಜರ್ಮನ್, ಫ್ರೆಂಚ್ ಅನುವಾದಗಳನ್ನು ಓದಿ ಬರೆದವರು ಇವರು ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಎಸ್.ಎಲ್.ಭೈರಪ್ಪನವರು ನನ್ನ ಗುರುವಿಗೆ ಸಮಾನರು. ನನಗೆ ಅವರು ಸಾಕಷ್ಟು ಜ್ಞಾನಾರ್ಜನೆ ಮಾಡಿದ್ದಾರೆ. ಇವರ ವಂಶವೃಕ್ಷ ಕಾದಂಬರಿಗೆ ನಾನೇ ವಿರೋಧ ವ್ಯಕ್ತಪಡಿಸಿದ್ದೆ, ನಂತರ ಈ ಕಾದಂಬರಿ ಆಧಾರಿತ ಸಿನಿಮಾಗೆ ಹಾಡನ್ನು ನಾನೇ ಬರೆದಿದ್ದ. ಭೈರಪ್ಪನವರಿಗೆ ದೊಡ್ಡ ಪ್ರಶಸ್ತಿ ಬರಬೇಕು ಎಂಬ ಹಾರೈಕೆ ನನ್ನದು ಇನ್ನೂ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಇವರು ಅರ್ಹರಾಗಿದ್ದಾರೆ ಎಂದು ಹೇಳಿದರು.

ಸಾಹಿತಿ ಪದ್ಮಶ್ರೀ ಪುರಸ್ಕೃತ ಎಸ್.ಎಲ್.ಭೈರಪ್ಪ ಮಾತನಾಡಿ, ಸಾಹಿತ್ಯದ ವಿಚಾರ ಮಾತನಾಡುವಾಗ ನಾವೆಲ್ಲಾ ಬಿಗಿಯಾಗಿರಬಾರದು. ಹಿಂದೂಸ್ತಾನಿ ಸಂಗೀತದಲ್ಲಿ ಯಾವ ರೀತಿಯಲ್ಲಿ ನಿಧಾನವಾಗಿ ವಿಸ್ತಾರಣೆ ಮಾಡುವ ರೀತಿಯಲ್ಲಿ ಒಂದೊಂದು ಸ್ವರ ಮತ್ತು ಅಕ್ಷರವನ್ನು ನಾವು ಗ್ರಹಿಸುವ ಹಾಗೇ ಅದನ್ನು ತಿಳಿಸಿತ್ತಾ ಅರಿತುಕೊಳ್ಳಲು ಸಮಯ ಕೊಡಬೇಕು. ಇದು ನನ್ನ ಅಪೇಕ್ಷೆಯು ಕೂಡ ಹೌದು. ಇವರೊಂದಿಗೆ ಹರಟೆಯ ಸಮಯದಲ್ಲಿ ಎಷ್ಟು ಓದಿದ್ದಾರೆ ಅವರ ವಿಚಾರಗಳು ಯಾವ ರೀತಿಯಿದೆ ಎಂಬುದು ನನಗೆ ಸ್ಪಷ್ಟವಾಗಿ ಅರ್ಥವಾಯಿತು ಹಾಗೂ ನನ್ನ ಕಾದಂಬರಿಗಳನ್ನು ಶಾಂತಕುಮಾರಿ ಮತ್ತು ಎಸ್.ರಾಮಸ್ವಾಮಿಯವರು ಇಬ್ಬರು ಸೇರಿ ಇಂಗ್ಲೀಷ್‌ ಅನುವಾದವನ್ನು ಮಾಡಿರುವುದುಂಟು. ಸಾಹಿತ್ಯವನ್ನು ಇಂಗ್ಲೀಷ್‌ನಲ್ಲಿ ಹೇಳಲು ನನಗೆ ಶಾಂತಕುಮಾರಿಯಂತೆ ಸಾಧ್ಯವಿಲ್ಲ ಎಂದು ಹೇಳಿದರು.

ಅನುವಾದಕಿ ಮತ್ತು ಸಾಹಿತ್ಯ ವಿಮರ್ಶಕಿ ಶಾಂತಕುಮಾರಿ ತಮ್ಮ ಮನದಾಳದ ಮಾತನ್ನು ಆಡುತ್ತಾ ಸಾಹಿತ್ಯ ಭಂಡಾರಕ್ಕೆ ಬರೆಯುವ ಬರವಣಿಗೆಯೆಂದರೆ ವೈಯಕ್ತಿಕ ಕ್ರಿಯೆ, ಪ್ರಕಟಣೆ ಮತ್ತು ವಿತರಣೆ ಇವೆಲ್ಲವೂ ಪ್ರಕಾಶಕರಿಲ್ಲದೆಯೇ ಸಾಧ್ಯವಿಲ್ಲ. ಕಳೆದ 8 ವರ್ಷದಲ್ಲಿ ಬಹಳ ಕಥೆ ಪುಸ್ತಕಗಳ ಗೀಳು ಬಂದಿದ್ದು, ಮೊದಲಿನಿಂದಲೂ ಕಾರಂತರ ಪುಸ್ತಕಗಳೆಂದರೆ ಬಹಳ ಪ್ರೀತಿ ಅವರಿಂದಲೇ ನಾನು ಲೇಖಕಿಯಾಗಿ ಬೆಳೆಯಲು ಸಾದ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಶಾಂತಕುಮಾರಿ ಯವರಿಗೆ ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದಿಂದ ಪ್ರಶಸ್ತಿಯನ್ನು ನೀಡಿ ಗೌರವಿಲಾಯಿತು, ಕಾರ್ಯಕ್ರಮದಲ್ಲಿ ಲೇಖಕ ಎಸ್.ಆರ್.ರಾಮಸ್ವಾಮಿ, ಕಾದಂಬರಿಗಾರ್ತಿ ಸಹನಾ ವಿಜಯ್‌ ಕುಮಾರ್ ಸೇರಿದಂತೆ ಮುಂತಾದವರಿದ್ದರು.

ಇದನ್ನೂ ಓದಿ: ಕೆಲ ರಾಜಕಾರಣಿಗಳಿಗೆ ಬ್ರಾಹ್ಮಣ ಸಮುದಾಯದ ಕುರಿತು ದೃಷ್ಟಿದೋಷವಿದೆ, ತಪಾಸಣೆ ಅಗತ್ಯ: ಎಸ್ ಸುರೇಶ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.