ETV Bharat / state

ಮೊಸರನ್ನದಲ್ಲಿ ಹುಳು ಪತ್ತೆ : ಪೊಲೀಸ್ ಸಿಬ್ಬಂದಿಗೆ ಊಟ ಪೂರೈಸಿದ್ದ ಕೇಟರರ್ಸ್ ವಿರುದ್ಧ ಪ್ರಕರಣ ದಾಖಲು

author img

By ETV Bharat Karnataka Team

Published : Oct 23, 2023, 1:59 PM IST

ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಪೂರೈಸಿದ್ದ ಆಹಾರದಲ್ಲಿ ಹುಳು ಕಂಡು ಬಂದಿದೆ. ಈ ಸಂಬಂಧ ಊಟ ಪೂರೈಸಿದ್ದ ಕೇಟರರ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.

worm-found-in-food-supplied-by-caterers-to-police-personnel
ಮೊಸರನ್ನದಲ್ಲಿ ಹುಳು ಪತ್ತೆ : ಪೊಲೀಸ್ ಸಿಬ್ಬಂದಿಗೆ ಊಟ ಪೂರೈಸಿದ್ದ ಕೇಟರರ್ಸ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ - ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್‌ ಪಂದ್ಯದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಊಟ ಸರಬರಾಜು ಮಾಡಿದ್ದ ಕೇಟರರ್ಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂದ್ಯದ ಸಂದರ್ಭದಲ್ಲಿ ಭದ್ರತೆಗಾಗಿ 970 ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದಕ್ಕೆ ವಹಿಸಿತ್ತು. ಈ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿರುವ ಶಾರದಾ ಕೇಟರರರ್ಸ್​ಗೆ ಊಟ ಸರಬರಾಜು ವಹಿಸಲಾಗಿತ್ತು. ಆದರೆ, ಮಧ್ಯಾಹ್ನ ಪೂರೈಸಲಾದ ಊಟದ ಪೈಕಿ ಮೊಸರನ್ನದಲ್ಲಿ ಹುಳು ಪತ್ತೆಯಾಗಿದ್ದು, ಸಿಬ್ಬಂದಿಗಳ ವಾಟ್ಸ್​​ಆ್ಯಪ್​ ಗ್ರೂಪ್‌ನಲ್ಲಿ ಫೋಟೋ ಹರಿದಾಡುತ್ತಿದೆ. ಈ ಸಂಬಂಧ ಶುಚಿತ್ವ ಕಾಪಾಡದ ಕೇಟರರ್ಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : Viral video: ಮಾಂಸಹಾರದಲ್ಲಿ ಸತ್ತ ಇಲಿ ಪತ್ತೆ ವಿಡಿಯೋ ವೈರಲ್.. ಅಸಲಿಯತ್ತೇ ಬೇರೆ ಎಂದು ದೂರು ನೀಡಲು ಮುಂದಾದ ಹೋಟೆಲ್​​ ಮಾಲೀಕ

ಭದ್ರತಾ ಸಿಬ್ಬಂದಿಗೆ ನೀಡಲಾದ ಆಹಾರದಲ್ಲಿ ಇಲಿ ಪತ್ತೆ : ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ಕಾವೇರಿ ಬಂದ್​ ಹಿನ್ನೆಲೆಯಲ್ಲಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್​ ಸಿಬ್ಬಂದಿಗೆ ನೀಡಲಾದ ಆಹಾರದಲ್ಲಿ ಇಲಿಯೊಂದು ಪತ್ತೆಯಾಗಿತ್ತು. ಈ ಸಂಬಂಧ ತಿಂಡಿ ತರಿಸಲಾಗಿದ್ದ ಹೋಟೆಲ್​ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಾಗಿತ್ತು.

ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್​ ಕರೆ ನೀಡಿದ್ದವು. ಈ ಸಂದರ್ಭ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ತಿಂಡಿಯಲ್ಲಿ ಇಲಿ ಪತ್ತೆಯಾಗಿತ್ತು. ಯಶವಂತಪುರ ಸಂಚಾರ ಠಾಣಾ ಸಿಬ್ಬಂದಿಯೊಬ್ಬರು ಪೊಲೀಸ್‌ ಇಲಾಖೆಯಿಂದ ಸರಬರಾಜು ಮಾಡಲಾಗಿದ್ದ ತಿಂಡಿಯ ಪೊಟ್ಟಣ ತೆರೆದಾಗ ಇಲಿ ಕಂಡು ಬಂದಿತ್ತು. ತಕ್ಷಣ ಎಚ್ಚೆತ್ತ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ವಿಷಯ ತಿಳಿಸಿದ್ದು, ಯಾರೂ ಕೂಡ ಆಹಾರ ಸೇವಿಸದಂತೆ ಸೂಚನೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್ ಅನುಚೇತ್ '' ಸೆಪ್ಟೆಂಬರ್​ 26ರಂದು ಬೆಳಿಗ್ಗೆ 7:30ರ ಸುಮಾರಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಸುಮಾರು 180 ಜನ ಸಿಬ್ಬಂದಿಗೆ ಯಶವಂತಪುರದ ಹೋಟೆಲ್ ಒಂದರಿಂದ ತಿಂಡಿ ತರಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ನೀಡಲಾಗಿದ್ದ ತಿಂಡಿಯಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ತಕ್ಷಣ ಅವರು ಇತರೆ ಸಿಬ್ಬಂದಿಯ ಗಮನಕ್ಕೆ ತಂದು ಯಾರೂ ತಿಂಡಿ ಸೇವಿಸದಂತೆ ತಿಳಿಸಿದ್ದಾರೆ. ತಿಂಡಿ ತರಿಸಲಾಗಿದ್ದ ಹೋಟೆಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಜೊತೆಗೆ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ ವಿರುದ್ಧ ಶಿಸ್ತು ಕ್ರಮ ಜರುಗಿಸಲಿದ್ದೇವೆ" ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.