ಆಡಳಿತ-ಪ್ರತಿಪಕ್ಷಗಳ ಜಂಗಿಕುಸ್ತಿಗೆ ವೇದಿಕೆಯಾಗಲಿದೆ ಬೆಳಗಾವಿಯ ಸುವರ್ಣ ವಿಧಾನಸೌಧ

author img

By ETV Bharat Karnataka Desk

Published : Dec 3, 2023, 7:18 AM IST

Belagavi Suvarna Vidhana Soudha

Belagavi winter session: ನಾಳೆಯಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್‌ ಸಜ್ಜಾಗಿವೆ.

ಬೆಂಗಳೂರು: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿದ್ದು, ಆಡಳಿತ-ಪ್ರತಿಪಕ್ಷಗಳ ನಡುವಿನ ಜಂಗಿಕುಸ್ತಿಗೆ ವೇದಿಕೆಯಾಗುವ ಸೂಚನೆ ದೊರೆತಿದೆ.

ಪ್ರತಿಪಕ್ಷದ ನಾಯಕರಿಲ್ಲದೆ ಶಕ್ತಿಹೀನವಾಗಿದ್ದ ಬಿಜೆಪಿ ಇದೀಗ ಆರ್.ಅಶೋಕ್ ನಾಯಕತ್ವದಲ್ಲಿ ಕಲರವ ಮಾಡಲಿದ್ದು, ಜೆಡಿಎಸ್ ಜೊತೆಗಿನ ಮೈತ್ರಿ ಖಚಿತವಾಗಿರುವುದರಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಸೇರಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮುಗಿಬೀಳಲಿದೆ. ಸರ್ಕಾರದ ವಿರುದ್ಧ ಹೋರಾಡುವ ಸಂಬಂಧ ಶುಕ್ರವಾರ ಆರ್.ಅಶೋಕ್ ನಿವಾಸದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದೀರ್ಘ ಚರ್ಚೆ ನಡೆಸಿದ್ದು, ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಬತ್ತಳಿಕೆಯಲ್ಲಿ ಭದ್ರಪಡಿಸಿಕೊಂಡಿದ್ದಾರೆ.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿವರವಾಗಿ ಚರ್ಚಿಸಲಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ.
ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ, ಕರ್ನಾಟಕ ಪವರ್ ಕಾರ್ಪೊರೇಷನ್ ಎದುರಿಸುತ್ತಿರುವ ದುಸ್ಥಿತಿಯನ್ನು ಗಮನಿಸುತ್ತಿಲ್ಲ. ಅದಕ್ಕೆ ನೀಡಬೇಕಾದ ಇಪ್ಪತ್ತೊಂದು ಸಾವಿರ ಕೋಟಿ ರೂಪಾಯಿಗಳ ಬಾಕಿಯನ್ನು ಪಾವತಿಸುತ್ತಿಲ್ಲ. ಪರಿಣಾಮ, ಅದು ವಿದ್ಯುತ್ ಉತ್ಪಾದಿಸುತ್ತಿರುವ ಮಹತ್ವದ ಆಣೆಕಟ್ಟುಗಳನ್ನು ಅಡವಿಟ್ಟು ಸಾಲ ಪಡೆದಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು, ಈ ವಿಷಯ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರವಾಗಿ ಬಳಕೆಯಾಗುವುದು ನಿಶ್ಚಿತ.

ಇದೇ ರೀತಿ ಸರ್ಕಾರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವ ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುವ ಚಾಳಿ ಸರ್ಕಾರದಿಂದ ಅವ್ಯಾಹತವಾಗಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಲಿವೆ. ಈ ಮಧ್ಯೆ, ರಾಜ್ಯಾದ್ಯಂತ ಹೊಸ ಯೋಜನೆಗಳನ್ನು ಜಾರಿ ಮಾಡುವುದಿರಲಿ, ಈಗಾಗಲೇ ಮಂಜೂರಾಗಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಹಿಂಜರಿಯುತ್ತಿದ್ದು, ಇದು ರಾಜ್ಯದ ಅಭಿವೃದ್ಧಿಗೆ ಮಾರಕ ಬೆಳವಣಿಗೆ ಎಂಬುದು ಪ್ರತಿಪಕ್ಷಗಳ ನೇರ ಆರೋಪ.

ಸರ್ಕಾರದ ಈ ನಿಲುವಿನಿಂದಾಗಿ ಅದಾಗಲೇ ಬಹುತೇಕ ಪೂರ್ಣಗೊಂಡ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಹಾಗೆಯೇ, ಶಾಸಕರಿಗೆ ಸೂಕ್ತ ಅನುದಾನ ನೀಡುವ ವಿಷಯದಲ್ಲಿ ಸರ್ಕಾರ ಆಸಕ್ತಿ ತೋರದ ಹಿನ್ನೆಲೆ ಆಡಳಿತ-ಪ್ರತಿಪಕ್ಷಗಳ ಶಾಸಕರು ತತ್ತರಿಸಿದ್ದು, ತಮ್ಮ ತಮ್ಮ ಕ್ಷೇತ್ರಗಳ ಮತದಾರರ ಬಳಿ ಹೋಗಲು ಹಿಂಜರಿಯುವಂತಾಗಿದೆ. ಆಡಳಿತ ಪಕ್ಷದ ಹಲವು ಮಂದಿ ಶಾಸಕರು ನಮ್ಮ ಕ್ಷೇತ್ರಗಳಲ್ಲಿ ಸಂಚರಿಸುವುದು ಕಷ್ಟವಾಗುತ್ತಿದ್ದು, ಇದಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿರುವುದೇ ಕಾರಣ ಎನ್ನುತ್ತಿದ್ದಾರೆ ಎಂಬುದು ಪ್ರತಿಪಕ್ಷಗಳ ವಾದ.

ಬರಗಾಲದಿಂದ ರಾಜ್ಯದ ಬಹುತೇಕ ಎಲ್ಲ ತಾಲೂಕುಗಳು ಸಂಕಷ್ಟಕ್ಕೀಡಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ಆದರೆ, ರಾಜ್ಯದಲ್ಲಿ ಬರಗಾಲವಿದೆ ಎಂಬುದನ್ನು ಘೋಷಿಸಿದ ನಂತರವೂ ಸರ್ಕಾರ, ಈ ಬರಗಾಲವನ್ನು ಎದುರಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡಿಲ್ಲ. ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಈ ಮಟ್ಟದ ಬರಗಾಲದ ಭೀತಿ ಆವರಿಸಿರಲಿಲ್ಲ. ಮುಂಗಾರು ಮಾತ್ರವಲ್ಲ, ಹಿಂಗಾರು ಕೂಡ ವಿಫಲಗೊಂಡಿರುವ ಪರಿಣಾಮವಾಗಿ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತಗೊಂಡಿದೆ. ಪರಿಣಾಮವಾಗಿ ಜನರು ಬೆಲೆ ಏರಿಕೆಯ ಬಿಸಿಗೆ ತುತ್ತಾಗಲಿದ್ದು, ಅವರ ಹಿತ ಕಾಯಲು ಏನು ಮಾಡಬೇಕು ಎನ್ನುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಚಿಂತಿಸಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ.

ರಾಜ್ಯದ ಬರಗಾಲ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವುದಲ್ಲದೆ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದಾರೆ. ಕುಮಾರಸ್ವಾಮಿಯವರು ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿದ್ದು, ಈ ಎಲ್ಲದರ ಪರಿಣಾಮವಾಗಿ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡಲಿದ್ದಾರೆ.

ಪ್ರತಿಪಕ್ಷಗಳು ನಡೆಸಲಿರುವ ದಾಳಿಯನ್ನು ಎದುರಿಸಲು ಸರ್ಕಾರ ಕೂಡ ಸಜ್ಜಾಗುತ್ತಿದ್ದು, ತನ್ನ ವಿರುದ್ಧ ದಾಳಿ ನಡೆದರೆ ಹಿಂದಿನ ಸರ್ಕಾರಗಳ ಅವಧಿಯಲ್ಲಾದ ಲೋಪಗಳ ಕುರಿತು ಅದು ಎತ್ತಿ ಹೇಳಲಿರುವುದು ಖಚಿತ. ಈ ಮಧ್ಯೆ ವಸತಿ ಸಚಿವ ಜಮೀರ್ ಅಹ್ಮದ್ ಅವರು ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ಆಡಿದ ಮಾತು ಕೂಡಾ ಅಧಿವೇಶನದಲ್ಲಿ ಕಾವೇರಿಸುವ ಸಾಧ್ಯತೆ ಇದೆ. ಕರ್ನಾಟಕ ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರೊಬ್ಬರನ್ನು ಸ್ಪೀಕರ್ ಮಾಡಿದ್ದು, ಈಗ ಬಿಜೆಪಿಯವರು ಅವರಿಗೆ ನಮಸ್ಕರಿಸುವ ಸ್ಥಿತಿ ಇದೆ ಎಂದು ಜಮೀರ್ ಆಡಿರುವ ಮಾತು ಪ್ರತಿಪಕ್ಷಗಳನ್ನು ಕೆರಳಿಸಿದೆ.

ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ ಕೈಗೊಂಡ ಜಿಲ್ಲಾಡಳಿತ: ನಾಯಕರ ಸ್ವಾಗತಕ್ಕೆ ಸಜ್ಜಾದ ಕುಂದಾನಗರಿ

ಇನ್ನು ಸರ್ಕಾರದ ಪ್ರಮುಖರ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳನ್ನು ಮಾಡಲು ಜೆಡಿಎಸ್-ಬಿಜೆಪಿ ನಾಯಕರು ಸಜ್ಜಾಗಿದ್ದು, ಇದು ದೊಡ್ಡ ಮಟ್ಟದ ಕೋಲಾಹಲಕ್ಕೆ ಕಾರಣವಾಗುವ ಸಂಭವವಿದೆ. ಸರ್ಕಾರಿ ನೌಕರರ ವರ್ಗಾವಣೆ ಪ್ರಕರಣಗಳಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿ ಕೈ ಜೋಡಿಸಲಿರುವುದರಿಂದ ಕಲಾಪ ರಂಗೇರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.