ETV Bharat / state

ಮೈತ್ರಿ ವಿರೋಧಿಸುವವರು ಯಡಿಯೂರಪ್ಪರನ್ನು ಇಳಿಸಿದಾಗ ಯಾಕೆ ಮೌನವಾಗಿದ್ದರು?: ಮುನಿರತ್ನ

author img

By ETV Bharat Karnataka Team

Published : Oct 9, 2023, 9:26 PM IST

ಜೆಡಿಎಸ್‌ ಜೊತೆಗಿನ ಮೈತ್ರಿ ಬಗ್ಗೆ ಹೈಕಮಾಂಡ್ ಸಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಜಿ ಸಚಿವ ಮುನಿರತ್ನ ಸಮರ್ಥಿಸಿಕೊಂಡರು.

ಮಾಜಿ ಸಚಿವ ಮುನಿರತ್ನ
ಮಾಜಿ ಸಚಿವ ಮುನಿರತ್ನ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನು ಏಕಾಏಕಿ ರಾಜ್ಯ ನಾಯಕರ ಅಭಿಪ್ರಾಯ ಆಲಿಸದೇ ಕೆಳಗಿಳಿಸಿದಾಗ ಮೌನವಾಗಿದ್ದವರು ಈಗೇಕೆ ಮೈತ್ರಿ ವಿಚಾರದಲ್ಲಿ ನಮ್ಮ ಅಭಿಪ್ರಾಯ ಕೇಳಬೇಕಿತ್ತು ಎನ್ನುತ್ತಿದ್ದಾರೆ ಎಂದು ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರದಲ್ಲಿ ಅಸಮಾಧಾನ ಹೊರಹಾಕಿರುವ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರನ್ನು ಮಾಜಿ ಸಚಿವ ಮುನಿರತ್ನ ಪ್ರಶ್ನಿಸಿದ್ದಾರೆ.

ವೈಯಾಲಿಕಾವಲ್ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು, ಇಂದು ಮೈತ್ರಿ ಬಗ್ಗೆ ಯಾಕೆ ಕೇಳ್ತಾರೆ. ಸಿಎಂ ಬದಲಾವಣೆ ಮಾಡಿದಾಗಲೇ ಮಾತನಾಡಿಲ್ಲ. ಅಂದು ಕೂಡ ಹೈಕಮಾಂಡ್ ನಮ್ಮನ್ನೂ ಒಂದು ಮಾತು ಕೇಳಬೇಕಿತ್ತು ಎಂದು ಹೇಳಬಹುದಿತ್ತಲ್ಲ. ಈಗ ಮೈತ್ರಿ ಬಗ್ಗೆ ಹೈಕಮಾಂಡ್ ಕೇಳಬೇಕಿತ್ತು ಎಂದು ಯಾಕೆ ಹೇಳುತ್ತೀರಿ?. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾರನ್ನೂ ಹೊರಗಿಟ್ಟಿಲ್ಲ. ಯಡಿಯೂರಪ್ಪ ಬದಲಾವಣೆ ವೇಳೆ ಯಾರನ್ನೂ ಕೇಳಲಿಲ್ಲ. ಆಗಲೂ ನಾವು ಒಪ್ಪಿದ್ದೇವೆ. ಯಡಿಯೂರಪ್ಪ ಮೇಲೆ ಅಭಿಮಾನ ಇದ್ದವರು ಕೇಳಬಹುದಿತ್ತು ಎಂದರು.

ಸೋಮಣ್ಣನಿಗೆ ಅನ್ಯಾಯವಾಗಿದೆ: ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನಗೊಂಡಿದ್ದಾರೆ. ಸೋಮಣ್ಣಗೆ ಅನ್ಯಾಯ ಆಗಿರುವುದು ನಿಜ. ಅವರು ಒಳ್ಳೆಯ ಹೆಸರು ಇರುವ ವ್ಯಕ್ತಿ. ಅವರಿಗೆ ಎರಡು ಕ್ಷೇತ್ರದ ಬದಲು ಒಂದು ಕ್ಷೇತ್ರ ಕೊಡಬಹುದಿತ್ತು. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಪಕ್ಷ ಕೊಡುತ್ತದೆ ಎನ್ನುವ ವಿಶ್ವಾಸ ಇದೆ. ಸೋಮಣ್ಣ ಬಗ್ಗೆ ನನಗೆ ಅಭಿಮಾನ ಇದೆ ಎಂದು ಹೇಳಿದರು.

ಆರ್.ಆರ್.ನಗರ ವಾರ್ಡ್​ಗೆ ಅನುದಾನ ಬಿಡುಗಡೆ ಮಾಡದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮುನಿರತ್ನ, 198 ವಾರ್ಡ್‌ಗಳ ಕಾಮಗಾರಿ ಎಸ್ಐಟಿ ತನಿಖೆಗೆ ನೀಡಿದ್ದಾರೆ. ಎಲ್ಲಾ ವಾರ್ಡ್‌ಗಳ ಇನ್ಸ್‌ಪೆಕ್ಷನ್ ಮಾಡಿದ್ದಾರೆ. ಎಸ್ಐಟಿ ಚೆನ್ನಾಗಿದೆ ಅಂತ ಹೇಳಿದ ಮೇಲೆ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ನಮ್ಮ ಕ್ಷೇತ್ರದ ಒಂದು ವಾರ್ಡ್ ಕಂಪ್ಲೆಂಟ್ ನಾನೇ ಕೊಟ್ಟಿದ್ದೆ. ಆದರೆ ನನ್ನ ಕ್ಷೇತ್ರದ 9 ವಾರ್ಡಿಗೆ ಅನುದಾನ ನೀಡಿಲ್ಲ. ಎಸ್ಐಟಿ ಯಾವ ರೀತಿ ತನಿಖೆ ಆಗಿದೆ ನಾನು ತರಿಸಿ ನೋಡುತ್ತೇನೆ. ಡಿಸಿಎಂ ಸಹೋದರ ನಮ್ಮ ಕ್ಷೇತ್ರದ ಲೋಕಸಭಾ ಪ್ರತಿನಿಧಿ‌ ಅವರು ಪ್ರತಿನಿಧಿಸುವ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ. ಟಾರ್ಗೆಟ್ ಅಂತಿರೋದು ನನಗೆ ಗೊತ್ತಿಲ್ಲ. 15 ಜನ ಸಸ್ಪೆಂಡ್ ಮಾಡಿದ್ದಾರೆ. ನನ್ನ ಪತ್ರದ ಆಧಾರದ ಮೇಲೆ ತನಿಖೆ ಆಗಿದ್ದರೆ 198 ವಾರ್ಡಿಗೂ ಅನ್ವಯ ಆಗುತ್ತಿತ್ತು ಎಂದು ತಿಳಿಸಿದರು.

ನಮ್ಮ ಜೊತೆಗಿದ್ದವರಿಗೆ ಒಳ್ಳೆಯದಾಗಲಿ: ಶಾಸಕರು ಪಕ್ಷದಿಂದ ಹೊರ ಹೋಗುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಮುನಿರತ್ನ, ನಾವು 66 ಜನ ಜನರೂ ಒಟ್ಟಿಗೆ ಇದ್ದೇವೆ. ಕೆಲ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡಿದ್ದಾರೆ. ಯಾರನ್ನೆಲ್ಲಾ ಕರೆದುಕೊಂಡಿದ್ದೀರಿ ಅವರಿಗೆ ಟಿಕೆಟ್ ಕೊಡಿ. ಅವರನ್ನು ಗೆಲ್ಲಿಸಿಕೊಂಡು ಬನ್ನಿ. ಅವರನ್ನು ಕೈ ಬಿಡುವ ಕೆಲಸ ಮಾಡಬೇಡಿ. ಅನೇಕರು ಇಷ್ಟು ದಿನ ನಮ್ಮ ಜೊತೆ ಇದ್ದರು. ಅವರಿಗೂ ಒಳ್ಳೆಯದಾಗಲಿ ಎಂದರು.

ಸಂಕ್ರಾಂತಿ ನಂತರ ಸರ್ಕಾರ ಬೀಳಬಹುದು ಅನ್ನೋ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಅಕ್ಕಿ ಕಡಿಮೆ ಇದೆ. ನೆಂಟರು ಬಹಳಷ್ಟು ಇದ್ದಾರೆ. ಅಕ್ಕಿ ಕೊಡೋದಾಗಿ ಹೇಳುತ್ತಿದ್ದಾರೆ. ಆದರೆ 5 ಕೆ.ಜಿ ಅಕ್ಕಿಯಾದರೂ ಕೊಡಿ ಅಂತ ಲೆಟರ್‌ಹೆಡ್ ಹಿಡಿದು ಕಾಯುತ್ತಿದ್ದಾರೆ. ಪಕ್ಕದ ಮನೇಲಿ ಅಕ್ಕಿ ಸಿಗುತ್ತಾ ಅಂತ ಕಾಯುತ್ತಿದ್ದಾರೆ ಎಂದು ನುಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಬಹುದು ಅನ್ನೋ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೋಡಿದರೆ, ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು. ಮಾಜಿ ಪ್ರಧಾನಮಂತ್ರಿಯವರ ಮಗ. ಅವರಿಗೆ ಯಾವುದೋ ಬಲವಾದ ಮಾಹಿತಿ ಸಿಕ್ಕಿರಬಹುದು. ಹಾಗಾಗಿ ಅವರು ಹೇಳಿದ್ದಾರೆ. ಕಾದು ನೋಡೋಣ ಮುನಿರತ್ನ ತಿಳಿಸಿದರು.

ಬಿಬಿಎಂಪಿ ಚುನಾವಣೆ ವಿಳಂಬವಾಗುತ್ತಿದೆ. ಸದ್ಯಕ್ಕೆ ನನಗಿರುವ ಮಾಹಿತಿ ಪ್ರಕಾರ ನಾಲ್ಕೈದು ರಿಸರ್ವೇಷನ್ ತಪ್ಪು ಮಾಡುತ್ತಿದ್ದಾರೆ. ತಪ್ಪು ಮಾಡಿ ಕೋರ್ಟಿಗೆ ಹೋಗೋದಕ್ಕೆ ಚಿಂತನೆ ಇದೆ. ಈಗಲೇ ಬಿಬಿಎಂಪಿ ಎಲೆಕ್ಷನ್ ಮಾಡಿದರೆ ಸ್ಥಳೀಯ ನಾಯಕರು ಓಡಿಹೋಗುತ್ತಿದ್ದಾರೆ. ಅದಕ್ಕೆ ನಿನ್ನನ್ನು ಮೆಂಬರ್ ಮಾಡುತ್ತೇವೆ, ಗೂಟದ ಕಾರು ಕೊಡುತ್ತೇವೆ, ನಿನಗೆ ಬಿಬಿಎಂಪಿ ಟಿಕೆಟ್ ಕೊಡುತ್ತೇನೆ ಅಂತ ಕಾಯಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಬಳಿಕ ಕೈಬಿಡುತ್ತಾರೆ. ಬೇಕಾದರೆ ನೋಡಿ. ಇಲ್ಲಿಂದ ಹೋಗಿರೋರನ್ನು ನೋಡಿದರೆ ಪಾಪ ಎನಿಸುತ್ತಿದೆ. ದಿನಾ ಟಿಕೆಟ್‌ಗಾಗಿ ಅವರ ಮನೆಗೆ ಅಲೆಯುತ್ತಿದ್ದಾರೆ. ಆಯುಧ ಪೂಜೆ ಬರ್ತಿದೆ. ಇವರನ್ನು ಕುರಿ ತರ ಕಡೀತಾರೆ ಎಂದು ಮುನಿರತ್ನ ವ್ಯಂಗ್ಯವಾಡಿದರು.

ಇದನ್ನೂ ಓದಿ : ಮುನಿರತ್ನ ಮನಸ್ಥಿತಿಯಲ್ಲೇ ಎಲ್ಲ ಶಾಸಕರಿದ್ದಾರೆ, ಯಾರೂ ಬಿಜೆಪಿ ತೊರೆಯುವುದಿಲ್ಲ: ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.