ETV Bharat / state

ಕಾಂಗ್ರೆಸ್​​ ಸೇರಿದ ನಾಗೇಶ್, ದತ್ತಾ ಭವಿಷ್ಯವೇನು? ಕಷ್ಟವಾಗಲಿದೆಯಾ ಚುನಾವಣಾ ಕಣ?

author img

By

Published : Jan 15, 2023, 5:23 PM IST

ಮುಳಬಾಗಿಲು ಶಾಸಕ ಹಾಗೂ ಮಾಜಿ ಸಚಿವ ಎಚ್​. ನಾಗೇಶ್ ಮತ್ತು ಕಡೂರು ಮಾಜಿ ಶಾಸಕ ವೈಎಸ್​ವಿ ದತ್ತಾ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇವರಿಬ್ಬರಿಗೂ ಕಾಂಗ್ರೆಸ್​ನಲ್ಲಿ ಸಿಗುವ ಸ್ಥಾನಮಾನಗಳೇನು ಹಾಗೂ ಕಾಂಗ್ರೆಸ್ ಪಕ್ಷದ ಬಲದಿಂದ ಇವರು ಚುನಾವಣೆಯಲ್ಲಿ ಜಯ ಗಳಿಸಲಿದ್ದಾರಾ ಎಂಬುದು ಕುತೂಹಲದ ವಿಷಯವಾಗಿದೆ.

ಕಾಂಗ್ರೆಸ್​​ ಸೇರಿದ ನಾಗೇಶ್, ದತ್ತಾ ಭವಿಷ್ಯವೇನು? ಕಷ್ಟವಾಗಲಿದೆಯಾ ಚುನಾವಣಾ ಕಣ?
what-is-the-future-of-nagesh-and-dutta-who-joined-the-congress

ಬೆಂಗಳೂರು: ನಿನ್ನೆಯಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಮುಳಬಾಗಿಲು ಶಾಸಕ ಹಾಗೂ ಮಾಜಿ ಸಚಿವ ಎಚ್​. ನಾಗೇಶ್ ಮತ್ತು ಕಡೂರು ಮಾಜಿ ಶಾಸಕ ವೈಎಸ್​ವಿ ದತ್ತಾಗೆ ಕಾಂಗ್ರೆಸ್​ನಲ್ಲಿ ಮುಂದಿನ ಭವಿಷ್ಯವೇನು ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವುದು ಕಷ್ಟಸಾಧ್ಯವಾಗುವ ಜತೆಗೆ, ಈಗಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಮನವೊಲಿಸುವುದು ಕಷ್ಟಕರ ಎನ್ನಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಈಗಾಗಲೇ ಮರು ಸ್ಪರ್ಧೆಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅವರನ್ನು ಹಿಂದೆ ಸರಿಸುವುದು ಕಷ್ಟಸಾಧ್ಯವಾಗಲಿದೆ.

ನಾಗೇಶ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ ಸಹ ಕ್ಷೇತ್ರದಲ್ಲಿ ಹಿಂದಿನ ಜನಪ್ರಿಯತೆ ಉಳಿಸಿಕೊಂಡಿಲ್ಲ. ಇನ್ನು ವೈಎಸ್​ವಿ ದತ್ತಾ ವಿಚಾರಕ್ಕೆ ಬಂದರೆ ಅವರೂ ಸಹ ಮಾಜಿ ಶಾಸಕರಾಗಿದ್ದು, ಕ್ಷೇತ್ರದಲ್ಲಿ ಹಿಂದಿನ ಹಿಡಿತ ಉಳಿಸಿಕೊಂಡಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ಕಡೂರು ವಿಧಾನಸಭೆ ಕ್ಷೇತ್ರದಲ್ಲಿ ಇವರಿಗೆ ಜೆಡಿಎಸ್​, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಹಾಗೂ ಒಕ್ಕಲಿಗ ಮತದಾರರೇ ಶ್ರೀರಕ್ಷೆಯಾಗಿದ್ದರು. ಅವರನ್ನು ಬಿಟ್ಟು ಕಾಂಗ್ರೆಸ್​ನಲ್ಲಿ ಭವಿಷ್ಯ ಅರಸುತ್ತ ಹೋದರೆ ಗೆಲುವಿನ ದಡ ತಲುಪುವುದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಕಾಂಗ್ರೆಸ್ ಸಹ ಬೇಷರತ್ತಾಗಿ ಈ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾಗಿ ಹೇಳಿದೆ. ಅಲ್ಲಿಗೆ ನಾಗೇಶ್​ ಹಾಗೂ ದತ್ತಾಗೆ ಟಿಕೆಟ್​ ಭರವಸೆ ಸಿಕ್ಕಿದೆ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲದೇ ಕ್ಷೇತ್ರದಲ್ಲಿ ಅವರು ಹೊಂದಿರುವ ಜನಪ್ರಿಯತೆಗಿಂತ ಕಾಂಗ್ರೆಸ್​ನಿಂದ ಸೋತಿರುವ ಅಭ್ಯರ್ಥಿ ಹೆಚ್ಚು ಜನಪ್ರಿಯತೆ ಹೊಂದಿದ್ದರೆ, ಜಿಲ್ಲಾ ಕಾಂಗ್ರೆಸ್ ನಾಯಕರು ಯಾರನ್ನು ಸೂಚಿಸುತ್ತಾರೆ ಎನ್ನುವುದರ ಮೇಲೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇವರ ಭವಿಷ್ಯ ನಿರ್ಧಾರವಾಗಲಿದೆ.

ಪಕ್ಷ ಅನಿವಾರ್ಯ: ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ಸಚಿವರಾಗಿ ನಂತರ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದ್ದ ಎಚ್. ನಾಗೇಶ್ 2023ರ ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಯಾವುದಾದರೂ ಒಂದು ಪಕ್ಷವನ್ನು ಪ್ರತಿನಿಧಿಸಲೇಬೇಕು. ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್​ ಪಕ್ಷಗಳದ್ದೇ ಪ್ರಾಬಲ್ಯ, ಹೀಗಾಗಿ ಕೈ ಹಿಡಿದಿದ್ದಾರೆ.

ಇನ್ನು ವೈಎಸ್​ವಿ ದತ್ತಾಗೆ ದೇವೇಗೌಡರ ಶ್ರೀರಕ್ಷೆ ಈ ಸಾರಿ ಸಿಗುವುದು ಅನುಮಾನ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿಶ್ವಾಸವನ್ನು ಆಗಲೇ ಕಳೆದುಕೊಂಡಾಗಿದೆ. ಒಂದು ಕಾಲದ ಆತ್ಮೀಯರಾಗಿದ್ದ ಎಂ.ಸಿ. ನಾಣಯ್ಯ ಹಾಗೂ ಪಿಜಿಆರ್​ ಸಿಂಧ್ಯಾರಂತಹ ಹಿರಿಯರು ಕಾಂಗ್ರೆಸ್​ ಸೇರಿ ನೆಲೆ ಕಂಡುಕೊಂಡಿರುವಾಗ, ತಾವೂ ಅದೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಉತ್ತಮ ಮಾತುಗಾರರಾಗಿರುವ ಹಿನ್ನೆಲೆ ಮುಂಬರುವ ದಿನದಲ್ಲಿ ಕಾಂಗ್ರೆಸ್ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಬಹುದು ಎಂದು ನಿರ್ಧರಿಸಿದ್ದಾರೆ ಎಂಬ ಮಾತು ಇದೆ. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ಭವಿಷ್ಯ ರಾಜಕೀಯದಲ್ಲಿ ಇನ್ನಷ್ಟು ಬಲಗೊಳಿಸಿಕೊಳ್ಳಬಹುದು ಎಂಬುದು ಈ ಇಬ್ಬರೂ ನಾಯಕರ ಕಾಂಗ್ರೆಸ್ ಸೇರ್ಪಡೆ ಹಿಂದಿನ ಯೋಚನೆ ಆಗಿದೆ ಎಂಬ ಮಾಹಿತಿ ಇದೆ.

ರಾಜಕೀಯ ಇತಿಹಾಸ: ಮುಳಬಾಗಿಲು ವಿಧಾನಸಭೆ ಕ್ಷೇತ್ರದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಎಚ್. ನಾಗೇಶ್ ಮೊದಲ ಬಾರಿಗೆ ಗೆದ್ದವರು. 2013ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಜಿ. ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾಗಿ ಅಭ್ಯರ್ಥಿ ಆಗಿದ್ದರು. ಆದರೆ ಅವರ ಸ್ಪರ್ಧೆ ಅನರ್ಹಗೊಂಡ ಹಿನ್ನೆಲೆ ಕಾಂಗ್ರೆಸ್ ಪಕ್ಷ ನಾಗೇಶ್​ರನ್ನು ಬೆಂಬಲಿಸಿತ್ತು. 6715 ಮತಗಳ ಅಂತರದಿಂದ ಇವರು ಜೆಡಿಎಸ್​ನ ಸಮೃದ್ಧಿ ಮಂಜುನಾಥ್ ವಿರುದ್ಧ ಗೆದ್ದಿದ್ದರು. ಬಿಜೆಪಿ ಇಲ್ಲಿ ಯಾವ ರೀತಿಯಲ್ಲೂ ಲೆಕ್ಕಕ್ಕಿಲ್ಲದ ಪಕ್ಷವಾಗಿದೆ. ಹಿಂದೆ ಕಾಂಗ್ರೆಸ್ ನೀಡಿದ್ದ ಬೆಂಬಲದಿಂದಾಗಿ ನಾಗೇಶ್ ಗೆದ್ದಿದ್ದರು. ಈ ಸಾರಿ ಮಂಜುನಾಥ್ ಸ್ಪರ್ಧೆಗೆ ಮುಂದಾದರೆ ನಾಗೇಶ್​ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮನಸ್ಸು ಮಾಡಿ ನಾಗೇಶ್​ಗೆ ಟಿಕೆಟ್ ನೀಡಿದರೂ, ಗೆಲ್ಲುವುದು ಕಷ್ಟ ಎನ್ನುವ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಇನ್ನು ಕಡೂರು ಮಾಜಿ ಶಾಸಕ ವೈಎಸ್​ವಿ ದತ್ತಾ ರಾಜಕೀಯವಾಗಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂಬ ಮಾಹಿತಿ ಇದೆ. 2018ರಲ್ಲಿ ಬೆಳ್ಳಿಪ್ರಕಾಶ್ ವಿರುದ್ಧ 15,372 ಮತಗಳ ಭಾರಿ ಅಂತರದ ಸೋಲನುಭವಿಸಿದ್ದಾರೆ. ಈ ಸಾರಿಯೂ ಪ್ರಕಾಶ್ ತಮ್ಮ ಜನಪ್ರಿಯತೆ ಉಳಿಸಿಕೊಂಡಿದ್ದು, ದತ್ತಾಗೆ ಒಂದು ತೊಡಕಾಗುತ್ತಾರೆ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಎಸ್​. ಆನಂದ್ ಸಹ ಸಾಕಷ್ಟು ಉತ್ತಮ ಸ್ಪರ್ಧೆ ನೀಡಿ ದತ್ತಾಗಿಂತ 718 ಮತ ಕಡಿಮೆ ಗಳಿಸಿದ್ದರು. ಅವರು ಈ ಸಾರಿಯೂ ಅರ್ಜಿ ಸಲ್ಲಿಕೆ ಮಾಡಿದ್ದು, ಸ್ಪರ್ಧೆಗೆ ಅವಕಾಶ ಕೋರುತ್ತಿದ್ದಾರೆ. ಕ್ಷೇತ್ರದ ಇತಿಹಾಸ ಗಮನಿಸಿದರೆ ವೈಎಸ್​ವಿ ದತ್ತಾ ಇಲ್ಲಿ 2013ರಲ್ಲಿ 42,433 ಮತಗಳ ಭಾರಿ ಅಂತರದಿಂದ ಬೆಳ್ಳಿ ಪ್ರಕಾಶ್ ವಿರುದ್ಧ ಗೆದ್ದಿದ್ದರು. ಆಟೊ ಮೂಲಕವೇ ವಿಧಾನಸಭೆಗೆ ಆಗಮಿಸುತ್ತಿದ್ದ ದತ್ತಾ ಅತ್ಯಂತ ಸರಳ ರಾಜಕಾರಣಿ ಎನಿಸಿಕೊಂಡಿದ್ದಾರೆ. ಇದೇ ಈಗ ಮುಳುವಾಗಿದೆ. ಹಣದ ಪ್ರಭಾವ ಇಲ್ಲದೇ ಚುನಾವಣೆ ಗೆಲ್ಲುವುದು ಅಸಾಧ್ಯ ಅನ್ನುವ ಸ್ಥಿತಿ ನಿರ್ಮಾಣವಾಗಿದ್ದು, ದತ್ತಾಗೆ ಸ್ಪರ್ಧೆ ಕಷ್ಟವಾಗಲಿದೆ ಎನ್ನಲಾಗುತ್ತಿದೆ. ಒಟ್ಟಾರೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಇಬ್ಬರೂ ನಾಯಕರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವುದಾ? ಸಿಕ್ಕರೂ ಗೆಲ್ಲುವ ಅವಕಾಶ ಇದೆಯಾ ಅನ್ನುವ ಜಿಜ್ಞಾಸೆ ಆರಂಭವಾಗಿದೆ.

ನಾಯಕರು ಏನಂತಾರೆ?: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಾರ, ನಾವೆಲ್ಲಾ ಜನತಾ ಪಾರ್ಟಿಯಲ್ಲಿ ಇದ್ದವರು. ಜನತಾ ಪಾರ್ಟಿ ವಿಭಾಗ ಆಗಿ ಆಗಿ ಜೆಡಿಎಸ್ ಜೆಡಿಯು ಆಗಿ ಇಬ್ಭಾಗವಾಯ್ತು. ದತ್ತಾ ಜೆಡಿಎಸ್ ನಲ್ಲೇ ಉಳಿದುಕೊಂಡವರು. ಎಲ್ಲಾ ಪಕ್ಷಗಳ ಸಿದ್ದಾಂತ ತಿಳಿದುಕೊಂಡವರು. ಜೆಡಿಎಸ್​​ನವರಿಗೆ ಯಾವ ಸಿದ್ದಾಂತವೂ ಇಲ್ಲ. ಬಿಜೆಪಿ ಕೋಮುವಾದದ ಸಿದ್ಧಾಂತ. ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯದ ಸಿದ್ಧಾಂತ ಪರವಾಗಿ ಇರುವುದು. ಜೆಡಿಎಸ್ ನವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಇದೆಲ್ಲವನ್ನೂ ದತ್ತಾ ಅವರು ಅರ್ಥಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತೇನೆ. ದತ್ತಾ ಹಾಗೂ ದತ್ತಾ ಅವರ ಬೆಂಬಲಿಗರು ಸೇರ್ಪಡೆ ಆಗಿರೋದ್ರಿಂದ ಕಡೂರು ಕ್ಷೇತ್ರ ಮಾತ್ರ ಅಲ್ಲದೇ ರಾಜ್ಯಕ್ಕೂ ಒಳ್ಳೇ ಸಂದೇಶ ಹೋಗತ್ತೆ. ನಾಗೇಶ್ ಕೂಡ ನಾನು ಸಿಎಂ ಆಗಿದ್ದಾಗ ತಾಂತ್ರಿಕ ವಿಭಾಗದ ನಿರ್ದೇಶಕರಾಗಿದ್ದರು. ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರ ದಲಿತರಿಗೆ, ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುವುದು. ಅವರು ಮಹದೇವಪುರ ಕ್ಷೇತ್ರದವರೇ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬರುತ್ತೆ ಅಂತ ನಾನು ಭಾವಿಸುತ್ತೇನೆ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಕಾರ, ಇದು ಆರಂಭ ಅಷ್ಟೇ. ಇನ್ನು ಮುಂದೆ ವಾರಕ್ಕೊಮ್ಮೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇರಲಿದೆ. ಮುಂದೆ ಪ್ರವಾಸಕ್ಕೆ ಹೋದಾಗ ಅಲ್ಲಿಯೂ ಸೇರ್ಪಡೆ ಆಗುವ ಕಾರ್ಯಕ್ರಮಗಳು ಇವೆ. ಮತ್ತಷ್ಟು ಜನ ಕಾಂಗ್ರೆಸ್ ಸೇರ್ಪಡೆ ‌ಆಗಲಿದ್ದಾರೆ. ಸಾಕಷ್ಟು ಸರ್ವೆಗಳಾಗಿವೆ, ಎಲ್ಲವೂ ನಮ್ಮ ಪರವಾಗಿವೆ. ಸ್ವಂತ ಬಲದ ಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ಪಕ್ಷಕ್ಕೆ ಸೇರುವವರೆಲ್ಲರೂ ಕಾರ್ಯಕರ್ತರಾಗಿ, ನಾಯಕರಾಗಿ‌ ದುಡಿಯಬೇಕು. ವೈಎಸ್​ವಿ ದತ್ತಾ ಹಾಗೂ ಎಚ್​. ನಾಗೇಶ್​ ಅವರು ಬೇಷರತ್ತಾಗಿ ಕಾಂಗ್ರೆಸ್ ಸೇರಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಯೋಗಥಾನ್​: 15 ಸಾವಿರ ವಿದ್ಯಾರ್ಥಿಗಳು ಭಾಗಿ - ಡ್ರೋನ್ ಕ್ಯಾಮರಾದಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.