ETV Bharat / state

26 ಪ್ರತಿಪಕ್ಷಗಳ 'ಇಂಡಿಯಾ'ದ ಸಭೆಯಲ್ಲಿ ಮಾಡಿದ ದೃಢ ಸಂಕಲ್ಪವೇನು..?

author img

By

Published : Jul 18, 2023, 6:07 PM IST

ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಇಂಡಿಯಾದ 26 ಪ್ರತಿಪಕ್ಷಗಳು ಸಾಮೂಹಿಕ ಸಂಕಲ್ಪ ಮಾಡಿವೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ ಓದಿ...

opposition parties
ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಇಂಡಿಯಾದ 26 ಪ್ರತಿಪಕ್ಷಗಳು ಸಾಮೂಹಿಕ ಸಂಕಲ್ಪ ಮಾಡಿವೆ

ಬೆಂಗಳೂರು: ಮಹಾಘಟಬಂಧನಕ್ಕೆ ಇಂಡಿಯಾ (INDIA) ಎಂಬ ಹೆಸರನ್ನು ಇರಿಸಲಾಗಿದ್ದು, ಸರ್ವಾನುಮತದಿಂದ ನಿರ್ಧಾರ ಕೈಗೊಂಡಿರುವ ಕೇಂದ್ರದ ಪ್ರತಿಪಕ್ಷಗಳು ಇದರ ಜೊತೆ ಒಂದಿಷ್ಟು ಸಂಕಲ್ಪವನ್ನು ಸಹ ತೊಟ್ಟಿದ್ದಾರೆ. ಇಂಡಿಯಾಗೆ ಸೇರಿದ 26 ರಾಜಕೀಯ ಪಕ್ಷಗಳು ಸಾಮೂಹಿಕ ಸಂಕಲ್ಪ ಮಾಡಿವೆ. ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ ಅಂತಿಮ ಸಂಕಲ್ಪ ಕೈಗೊಳ್ಳಲಾಗಿದ್ದು, ಇದರ ವಿವರ ಇಂತಿದೆ.

opposition parties
26 ಪ್ರತಿಪಕ್ಷಗಳ 'ಇಂಡಿಯಾ'ದ ಸಭೆಯಲ್ಲಿ ಮಾಡಿದ ದೃಢ ಸಂಕಲ್ಪ

ಸಂವಿಧಾನದ ಆಧಾರ ಸ್ತಂಭಗಳು ದುರ್ಬಲ: ಭಾರತದ 26 ಪ್ರಗತಿಪರ ಪಕ್ಷಗಳ ವ್ಯಾಪ್ತಿಯಲ್ಲಿರುವ ನಾಯಕರು, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಭಾರತದ ಕಲ್ಪನೆಯನ್ನು ರಕ್ಷಿಸಲು ತಮ್ಮ ಈ ದೃಢ ಸಂಕಲ್ಪವನ್ನು ಕೈಗೊಂಡಿದ್ದಾರೆ. ನಮ್ಮ ಗಣರಾಜ್ಯದ ಚಾರಿತ್ರ್ಯದ ಮೇಲೆ ಬಿಜೆಪಿಯವರು ವ್ಯವಸ್ಥಿತ ರೀತಿಯಲ್ಲಿ ತೀವ್ರ ಪ್ರಮಾಣದಲ್ಲಿ ಹಲ್ಲೆ ನಡೆಸುತ್ತಿದ್ದಾರೆ. ನಮ್ಮ ರಾಷ್ಟ್ರದ ಇತಿಹಾಸದಲ್ಲಿ ನಾವು ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಭಾರತೀಯ ಸಂವಿಧಾನದ ಆಧಾರ ಸ್ತಂಭಗಳಾದ - ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ ಮತ್ತು ಫೆಡರಲಿಸಂ - ಕ್ರಮಬದ್ಧವಾಗಿ ಮತ್ತು ಭಯಂಕರವಾಗಿ ದುರ್ಬಲಗೊಳಿಸಲಾಗುತ್ತಿದೆ.

ಮಣಿಪುರವನ್ನು ನಾಶಪಡಿಸಿದ ಮಾನವೀಯ ದುರಂತದ ಬಗ್ಗೆ ನಾವು ನಮ್ಮ ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ಈ ವಿಚಾರದಲ್ಲಿ ಪ್ರಧಾನಿಯವರ ಮೌನ ಆಘಾತಕಾರಿ ಮತ್ತು ಅಚ್ಚರಿದಾಯಕವಾಗಿದೆ. ಮಣಿಪುರವನ್ನು ಶಾಂತಿ ಮತ್ತು ಸೌಹಾರ್ದತೆಯ ಹಾದಿಗೆ ಮರಳಿ ತರುವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂಡಿಯಾ ಬಲಗೊಂಡು ಪ್ರಯತ್ನ ಮಾಡಬೇಕಿದೆ ಎಂಬ ಪ್ರಮುಖ ಸಂಕಲ್ಪ ಮಾಡಲಾಗಿದೆ.

ಮೀರಿದ ಸಾಂವಿಧಾನಿಕ ಮಾನದಂಡಗಳು: ಸಂವಿಧಾನದ ಮೇಲೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ಮೇಲಿನ ನಿರಂತರ ದಾಳಿಯನ್ನು ಎದುರಿಸಲು ಮತ್ತು ತಡೆಯಲು ನಿರ್ಧರಿಸಲಾಗಿದೆ. ನಮ್ಮ ರಾಜಕೀಯದ ಫೆಡರಲ್ ರಚನೆಯನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನ ರಾಷ್ಟ್ರದಲ್ಲಿ ನಡೆಯುತ್ತಿದೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಎಲ್‌ಜಿಗಳ ಪಾತ್ರವು ಎಲ್ಲಾ ಸಾಂವಿಧಾನಿಕ ಮಾನದಂಡಗಳನ್ನು ಮೀರಿ ಇದೆ. ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಸರ್ಕಾರವು ಸಂಸ್ಥೆಗಳ ದುರುಪಯೋಗ ನಮ್ಮ ಪ್ರಜಾಪ್ರಭುತ್ವ ದುರ್ಬಲಗೊಳಿಸುತ್ತಿದೆ. ಬಿಜೆಪಿಯೇತರ ರಾಜ್ಯಗಳ ಕಾನೂನುಬದ್ಧ ಅಗತ್ಯಗಳು, ಅವಶ್ಯಕತೆಗಳು ಮತ್ತು ಅರ್ಹತೆಗಳನ್ನು ಕೇಂದ್ರವು ಸಕ್ರಿಯವಾಗಿ ನಿರಾಕರಿಸುತ್ತಿದೆ ಎಂಬ ನಿರ್ಧಾರಕ್ಕೆ ಬಂದಿವೆ.

ದಾಖಲೆ ಪ್ರಮಾಣದ ನಿರುದ್ಯೋಗದಿಂದ ಆರ್ಥಿಕ ಬಿಕ್ಕಟ್ಟು: ನಿರಂತರವಾಗಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಮತ್ತು ದಾಖಲೆ ಪ್ರಮಾಣದ ನಿರುದ್ಯೋಗದಿಂದಾಗಿ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದಿದೆ. ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿದ್ದು, ಈ ವಿಚಾರದಲ್ಲಿ ಗಮನ ಹರಿಸಲು ತೀರ್ಮಾನಿಸಿದ್ದೇವೆ. ನೋಟು ಅಮಾನ್ಯೀಕರಣವು MSME ಮತ್ತು ಅಸಂಘಟಿತ ವಲಯಗಳಿಗೆ ಹೇಳಲಾಗದ ಆಘಾತವನ್ನು ತಂದಿದೆ. ಇದರ ಪರಿಣಾಮವಾಗಿ ನಮ್ಮ ಯುವಕರಲ್ಲಿ ದೊಡ್ಡ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. ರಾಷ್ಟ್ರದ ಸಂಪತ್ತನ್ನು ತಮ್ಮ ಪರ ಒಲವು ಹೊಂದಿರುವ ಆತ್ಮೀಯರು ಅಥವಾ ಆಪ್ತರಿಗೆ ಯಾವುದೇ ಜಾಗರೂಕತೆ ಇಲ್ಲದ ರೀತಿ ಮಾರಾಟ ಮಾಡುವುದನ್ನು ನಾವು ವಿರೋಧಿಸುತ್ತೇವೆ. ನಾವು ಬಲವಾದ ಮತ್ತು ಕಾರ್ಯತಂತ್ರದ ಸಹಕಾರ ಪಡೆದು ಸಾರ್ವಜನಿಕ ವಲಯದ ಜೊತೆಗೆ ಸ್ಪರ್ಧಾತ್ಮಕ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಖಾಸಗಿ ವಲಯದೊಂದಿಗೆ ನ್ಯಾಯಯುತ ಆರ್ಥಿಕತೆಯನ್ನು ನಿರ್ಮಿಸಬೇಕು. ಇದರಲ್ಲಿ ಉದ್ಯಮದ ಮನೋಭಾವವನ್ನು ಬೆಳೆಸಲಾಗುತ್ತದೆ. ವ್ಯಾಪ್ತಿ ವಿಸ್ತರಿಸಲು ಪ್ರತಿ ಅವಕಾಶವನ್ನು ನೀಡಲಾಗುತ್ತದೆ. ಕಿಸಾನ್ ಮತ್ತು ಖೇತ್ ಮಜ್ದೂರ್ ಕಲ್ಯಾಣಕ್ಕೆ ಯಾವಾಗಲೂ ಹೆಚ್ಚಿನ ಆದ್ಯತೆ ಸಿಗಬೇಕು ಎಂಬುದು ನಮ್ಮ ಒಲವು ಎಂಬ ತೀರ್ಮಾನಕ್ಕೆ ಇಂಡಿಯಾ ಸಂಕಲ್ಪ ಕೈಗೊಂಡಿದೆ.

ಜಾತಿ ಗಣತಿ ಜಾರಿ ವಿಚಾರ: ಅಲ್ಪಸಂಖ್ಯಾತರ ವಿರುದ್ಧ ಸಮಾಜದಲ್ಲಿ ಉದ್ಭವಿಸುತ್ತಿರುವ ದ್ವೇಷ ಮತ್ತು ಹಿಂಸೆಯನ್ನು ಸೋಲಿಸಲು ನಾವು ಒಟ್ಟಾಗಿ ಬಂದಿದ್ದೇವೆ. ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಕಾಶ್ಮೀರಿ ಪಂಡಿತರ ಮೇಲೆ ಹೆಚ್ಚುತ್ತಿರುವ ಅಪರಾಧಗಳನ್ನು ನಿಲ್ಲಿಸಿ, ಎಲ್ಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ನ್ಯಾಯಯುತ ವಿಚಾರಣೆಗೆ ಬೇಡಿಕೆ ಮತ್ತು ಮೊದಲ ಹಂತವಾಗಿ, ಜಾತಿ ಗಣತಿ ಜಾರಿಗೊಳಿಸುವುದು ನಮ್ಮ ದ್ಯೇಯ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಬಿಜೆಪಿಯ ವ್ಯವಸ್ಥಿತ ಪಿತೂರಿ ವಿರುದ್ಧ ಹೋರಾಟ: ನಮ್ಮ ಭಾರತೀಯರಲ್ಲಿ ಕೆಲವರನ್ನು ಮಾತ್ರ ಗುರಿಯಾಗಿಸುವ, ಕಿರುಕುಳ ನೀಡುವ ಮತ್ತು ನಿಗ್ರಹಿಸುವ ಬಿಜೆಪಿಯ ವ್ಯವಸ್ಥಿತ ಪಿತೂರಿಯ ವಿರುದ್ಧ ಹೋರಾಡಲು ನಾವು ನಿರ್ಧರಿಸಿದ್ದೇವೆ. ಅವರ ದ್ವೇಷದ ವಿಷಪೂರಿತ ಪ್ರಚಾರವು ಆಡಳಿತ ಪಕ್ಷ ಮತ್ತು ಅದರ ಒಡೆದು ಆಡಳಿತ ನಡೆಸುವ ಸಿದ್ಧಾಂತವನ್ನು ವಿರೋಧಿಸುವ ಎಲ್ಲರ ವಿರುದ್ಧ ದೊಡ್ಡ ಮಟ್ಟದಲ್ಲಿ ಹಿಂಸೆ ಆಗುವುದಕ್ಕೆ ಕಾರಣವಾಗಿದೆ. ಈ ದಾಳಿಗಳು ಸಾಂವಿಧಾನಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ ಭಾರತ ಗಣರಾಜ್ಯವನ್ನು ಸ್ಥಾಪಿಸಿದ ಮೂಲಭೂತ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಮತ್ತು ನ್ಯಾಯ - ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವನ್ನು ನಾಶಪಡಿಸುತ್ತಿವೆ. ಭಾರತೀಯ ಇತಿಹಾಸವನ್ನು ಮರು ಶೋಧಿಸುವ ಮತ್ತು ಪುನಃ ಬರೆಯುವ ಮೂಲಕ ಸಾರ್ವಜನಿಕ ಸಂಭಾಷಣೆಯನ್ನು ಹಾಳುಮಾಡಲು ಬಿಜೆಪಿಯ ಪುನರಾವರ್ತಿತ ಪ್ರಯತ್ನಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗಿದೆ.

ಪರ್ಯಾಯ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಸೂಚಿಯನ್ನು ರಾಷ್ಟ್ರಕ್ಕೆ ಪ್ರಸ್ತುತಪಡಿಸಲು ನಾವು ಪ್ರತಿಜ್ಞೆ ಮಾಡುತ್ತೇವೆ. ಹೆಚ್ಚು ಸಮಾಲೋಚನೆ, ಪ್ರಜಾಸತ್ತಾತ್ಮಕ ಮತ್ತು ಭಾಗವಹಿಸುವ ಆಡಳಿತದ ಸಾರ ಮತ್ತು ಶೈಲಿ ಎರಡನ್ನೂ ಪರಿವರ್ತಿಸಲು ನಾವು ಭರವಸೆ ನೀಡುತ್ತೇವೆ. ಜೈ ಹಿಂದ್ ಎಂದು ಇಂಡಿಯಾದ ಸಂಕಲ್ಪ ಮಾಹಿತಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮೋದಿ v/s ಇಂಡಿಯಾ ಕದನ ಎಂದ ರಾಹುಲ್​: ಭಾರತ ಗೆಲ್ಲುತ್ತೆ ಬಿಜೆಪಿ ಸೋಲುತ್ತೆ ಎಂದು ಭವಿಷ್ಯ ನುಡಿದ ಮಮತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.