ETV Bharat / state

ಮುಸ್ಲಿಂ ವ್ಯಕ್ತಿ ಬಿಜೆಪಿಯಿಂದ ಗೆಲ್ಲುವ ವಿಶ್ವಾಸ ಬಂದಾಗ ಅವರಿಗೆ ಟಿಕೆಟ್ ನೀಡುತ್ತೇವೆ: ಬಿ ಎಸ್​ ಯಡಿಯೂರಪ್ಪ

author img

By

Published : May 8, 2023, 5:08 PM IST

Updated : May 8, 2023, 5:51 PM IST

ನಮಗೆ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಲು ಇನ್ನೂ ಸಮಯ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಬಿ ಎಸ್​ ಯಡಿಯೂರಪ್ಪ
ಬಿ ಎಸ್​ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಬೆಂಗಳೂರು : ಬಿಜೆಪಿಗೆ ಮುಸ್ಲಿಂ ಸಮುದಾಯದ ಬಗ್ಗೆ ವಿಶ್ವಾಸ ಇದೆ. ಅವರ ಸಹಕಾರ ಬೆಂಬಲ ನಮಗೆ ಬೇಕು. ಆದರೆ ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇನ್ನೂ ನಮಗೆ ಬಂದಿಲ್ಲ. ಆ ವಿಶ್ವಾಸ ಬಂದಾಗ ಖಂಡಿತ ಮುಸ್ಲಿಂ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದು ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ನಗರದ ಖಾಸಗಿ ತಾರಾ ಹೋಟೆಲ್​ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ನಡೆಸಿ ಮಾತನಾಡಿದ ಅವರು, ಹಿಂದೂ ಹಬ್ಬಕ್ಕೆ ಮಾತ್ರ ಉಚಿತ ಸಿಲಿಂಡರ್ ಭರವಸೆ ನೀಡಲಾಗಿದೆ ಎಂದ ಮಾತ್ರಕ್ಕೆ ಮುಸ್ಲಿಂರ ವಿರುದ್ಧ ಇದ್ದೇವೆ ಎಂದಲ್ಲ. ಹಿಂದೂ ಮುಸ್ಲಿಂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಸಂವಿಧಾನದ ಆಶಯದಲ್ಲಿರುವಂತೆ ಉಚಿತ ಸಿಲಿಂಡರ್ ಕೊಡುತ್ತಿದ್ದೇವೆ. ಇದರಲ್ಲಿ ಧರ್ಮ ಜಾತಿ ಇಲ್ಲ. ಎಲ್ಲರಿಗೂ ಸಿಲಿಂಡರ್ ಸಿಗಲಿದೆ. ನಾನು ತಂದ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಶೇ. 60 ರಷ್ಟು ಫಲಾನುಭವಿಗಳು ಮುಸ್ಲಿಂರು. ನಾವು ಜಾತಿ, ಧರ್ಮ ನೋಡದೆ ಕೇವಲ ಅಭಿವೃದ್ಧಿ ಮಾತ್ರ ನೋಡುತ್ತೇವೆ ಎಂದು ಸಮರ್ಥಿಸಿಕೊಂಡರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ನಮಗೆ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಲು ಇನ್ನು ಸಮಯ ಬಂದಿಲ್ಲ. ನಾವು ಆ ಸಮುದಾಯವನ್ನು ನಂಬುತ್ತೇವೆ. ಆದರೆ ಆ ಸಮುದಾಯದ ಅಭ್ಯರ್ಥಿ ನಮ್ಮ ಪಕ್ಷದಿಂದ ಗೆಲ್ಲಲಿದ್ದಾರೆ ಎನ್ನುವ ನಂಬಿಕೆ ನಮಗೆ ಇನ್ನೂ ಬಂದಿಲ್ಲ. ಬಂದಾಗ ಟಿಕೆಟ್ ಕೊಡುತ್ತೇವೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಮುಸ್ಲಿಂ ವ್ಯಕ್ತಿಗೆ ಪರಿಷತ್ ಸ್ಥಾನ ನೀಡಿ ಮಂತ್ರಿ ಮಾಡಲಾಗಿತ್ತು ಎಂದರು.

ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ಬಿಜೆಪಿ ಹೈಕಮಾಂಡ್ ನಾಯಕರು ಯಡಿಯೂರಪ್ಪರಂತಹ ನಾಯಕನನ್ನು ಕಡೆಗಣಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಹಿಂದೆ ನಾನೇ ಸ್ವತಃ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಂತರ ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿದ್ದೆವು. ಇದರಿಂದ ನನಗೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ. ನನಗೆ ಬಿಜೆಪಿಯಲ್ಲಿ ಎಲ್ಲ ರೀತಿಯ ಸ್ಥಾನಮಾನ ಗೌರವ ಸಿಕ್ಕಿದೆ. ನಾನು ಬಿಜೆಪಿಯಲ್ಲಿ ಸಂತೃಪ್ತಿಯಿಂದ ಇದ್ದೇನೆ. ನನ್ನದು ಒಂದೇ ಗುರಿ ಮುಂದೆ 135 ಸ್ಥಾನ ಗೆದ್ದು ಸರ್ಕಾರ ಮಾಡೋದು. ಆ ನಂತರ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದು ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡುವುದು. ಆ ಗುರಿ ತಲುಪುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ವೀರಶೈವ ಲಿಂಗಾಯತ ಸ್ವಾಮೀಜಿಗಳು ಕಾಂಗ್ರೆಸ್​ಗೆ ಬೆಂಬಲ ಕೊಟ್ಟಿರುವ ಬಗ್ಗೆ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್ವೈ, 60-70 ಜನ ಲಿಂಗಾಯತ ಸಮಾಜದ ಸ್ವಾಮೀಜಿಗಳು ನನ್ನನ್ನು ಕರೆಸಿಕೊಂಡು ಮಾತಾಡಿದ್ದಾರೆ. ಮೋದಿ ಅಪರೂಪದ ಪ್ರಧಾನಿ, ಈ ಬಾರಿ ವೀರಶೈವ ಲಿಂಗಾಯತರು ಎಲ್ಲರೂ ಬಿಜೆಪಿಗೆ ಬೆಂಬಲ ಕೊಡಬೇಕೆಂದು ನನಗೆ ತಿಳಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ನವರ ಜೊತೆ ನಿಲ್ಲೋದಿಲ್ಲ ಎಂತಲೂ ಹೇಳಿದ್ದಾರೆ. ಅವರು ಎಲ್ಲರೂ ನಮಗೆ ಬೆಂಬಲ ಕೊಡೋದಾಗಿ ಹೇಳಿದ್ದಾರೆ ಎಂದು ಟಾಂಗ್ ನೀಡಿದರು.

ವರುಣಾದಲ್ಲಿ ಈ ಬಾರಿ ಸೋಮಣ್ಣ ಗೆಲ್ಲಲಿದ್ದಾರೆ. ಸೋಮಣ್ಣ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅಲ್ಲಿ ನನ್ನ ಸ್ನೇಹಿತ ಸಿದ್ದರಾಮಯ್ಯ ಸೋಲಲಿದ್ದಾರೆ. ಅದನ್ನ ಈಗಲೇ ಬರೆದುಕೊಳ್ಳಿ ಎಂದು ಸಿದ್ದರಾಮಯ್ಯ ಸೋಲಿನ ಭವಿಷ್ಯ ನುಡಿದರು. ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ದಯನೀಯವಾಗಿ ಸೋಲುತ್ತಾರೆ ವರುಣಾದಲ್ಲಿ ವಿ ಸೋಮಣ್ಣ ಗೆಲ್ಲುತ್ತಾರೆ ಎಂದರು.

ಬಿಜೆಪಿಯನ್ನು ಅಧಿಕಾರಕ್ಕೆ ತರೋದೆ ನನ್ನ ಗುರಿ: ಹೈಕಮಾಂಡ್ ನಾಯಕತ್ವದಲ್ಲಿ ರಾಜ್ಯ ಚುನಾವಣೆ ಎದುರಿಸುತ್ತಿದೆ ಎನ್ನುವುದು ಸರಿಯಲ್ಲ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಬೊಮ್ಮಾಯಿ ಸೇರಿ‌ ನಮ್ಮ ಹಲವರು ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ರಾಜ್ಯ ನಾಯಕರ ಕಡೆಗಣನೆ ಆಗಿಲ್ಲ. ಹೈಕಮಾಂಡ್ ನಾಯಕರು ನಮಗೆ ಬಲ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಾರೆ ಅಂತ ಹಲವರು ಅಂದುಕೊಂಡಿದ್ದಾರೆ. ರಾಜೀನಾಮೆ ನನ್ನದೇ ನಿರ್ಧಾರ ಆಗಿತ್ತು. ಹೊಸಬರಿಗೆ ಅವಕಾಶ ಕೊಡಲಿ ಅಂತ ಕ್ಷೇತ್ರ ಬಿಟ್ಟೆ. ವೀರಶೈವ ಲಿಂಗಾಯತ ಸಮಾಜ ಆಗಲಿ ನಮ್ಮ ಪಕ್ಷ ಆಗಲಿ ನನಗೆ ಎಲ್ಲ ಸ್ಥಾನಮಾನ ಕೊಟ್ಟಿದೆ. ನಾನು ಸಂತೃಪ್ತಿಯಾಗಿದ್ದೇನೆ. ಈ ಸಲ ಬಿಜೆಪಿಯನ್ನು ಅಧಿಕಾರಕ್ಕೆ ತರೋದೆ ನನ್ನ ಗುರಿ ಎಂದರು.

ಇದನ್ನೂ ಓದಿ : 'ನಾವು ಜಾತಿ, ಧರ್ಮದ ರಾಜಕಾರಣ ಮಾಡಲ್ಲ, ಪ್ರಣಾಳಿಕೆ ಅಕ್ಷರಶಃ ಜಾರಿ ಮಾಡುತ್ತೇವೆ'

Last Updated : May 8, 2023, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.