ETV Bharat / state

ಜಾಹೀರಾತಿನಲ್ಲಿ ನಾವು ಮತ ಯಾಚನೆ ಮಾಡಿಲ್ಲ, ಹೀಗಾಗಿ ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಸಿಎಂ ಶಿವಕುಮಾರ್

author img

By ETV Bharat Karnataka Team

Published : Nov 28, 2023, 4:56 PM IST

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಚುನಾವಣೆ ಆಯೋಗ ನೋಟಿಸ್​ ನೀಡಿರುವ ಬಗ್ಗೆ ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ತೆಲಂಗಾಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ
ತೆಲಂಗಾಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ

ಬೆಂಗಳೂರು: ತೆಲಂಗಾಣ ಪತ್ರಿಕೆಗಳ ಜಾಹೀರಾತಿನಲ್ಲಿ ನಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡಿದ್ದೇವೆಯೇ ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಹೀರಾತಿನ ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಜಾಹೀರಾತಿನಲ್ಲಿ ಸರ್ಕಾರದ ಕೆಲಸದ ಬಗ್ಗೆ ಮಾಹಿತಿ ಇದೆ.

ಕಾಂಗ್ರೆಸ್ ಪಕ್ಷಕ್ಕೆ ಅಥವಾ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹೀರಾತಿನಲ್ಲಿ ತಿಳಿಸಿಲ್ಲ. ಇದು ಉಲ್ಲಂಘನೆ ಹೇಗೆ ಆಗುತ್ತದೆ?. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಇತರ ಪಕ್ಷಗಳ ಅಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು. ನಾವು ಪತ್ರಿಕೆ ಹಾಗೂ ಮ್ಯಾಗಜಿನ್​ಗಳಲ್ಲಿ ನೀಡುವ ಜಾಹೀರಾತು ಕೆಲವೊಮ್ಮೆ ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಹೋಗುತ್ತದೆ. ನಾವು ಮತ ಯಾಚನೆ ಮಾಡಿದ್ದರೆ ಆಗ ನಿಯಮ ಉಲ್ಲಂಘನೆ ಆಗುತ್ತಿತ್ತು. ಚುನಾವಣಾ ಆಯೋಗದ ನೊಟೀಸ್​ಗೆ ಉತ್ತರ ನೀಡುತ್ತೇವೆ ಎಂದು ತಿಳಿಸಿದರು. ನಿಗಮ ಮಂಡಳಿ ನೇಮಕ ಸಭೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ವಿಚಾರವಾಗಿ ಈಗಾಗಲೇ ಎರಡು ಮೂರು ಸುತ್ತಿನ ಸಭೆಗಳು ನಡೆದಿವೆ. ಇಂದು ಕೂಡ ಸಭೆ ಮಾಡಿ ಪಟ್ಟಿಯನ್ನು ದೆಹಲಿಗೆ ರವಾನಿಸುತ್ತೇವೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ನೋಟೀಸ್ ನೀಡಿರುವುದು ಸರಿಯಲ್ಲ: ರಣದೀಪ್ ಸುರ್ಜೇವಾಲ: ಕರ್ನಾಟಕ ಸರ್ಕಾರ ತನ್ನ ಕಾನೂನಿನ ಚೌಕಟ್ಟಿನಲ್ಲೇ ತೆಲಂಗಾಣದಲ್ಲಿ ಜಾಹೀರಾತು ನೀಡಿದೆ. ಚುನಾವಣೆ ಆಯೋಗ ಕರ್ನಾಟಕ ಸರ್ಕಾರಕ್ಕೆ ನೋಟೀಸ್ ನೀಡಿರುವುದು ಸರಿಯಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ತಿಳಿಸಿದರು.

ಬೆಂಗಳೂರಿಗೆ ಆಗಮಿಸಿದ ಸುರ್ಜೇವಾಲ ಖಾಸಗಿ ಹೊಟೇಲ್‌ವೊಂದರ ಬಳಿ ಮಾತನಾಡುತ್ತ, ಪಂಚ ರಾಜ್ಯ ಚುನಾವಣೆಯಲ್ಲಿ ವಿಜಯ ಸಾಧಿಸುತ್ತೇವೆ. ರಾಜಸ್ಥಾನ ಛತ್ತೀಸಗಢದಲ್ಲಿ ಮರಳಿ ಅಧಿಕಾರಕ್ಕೆ ಬರುತ್ತೇವೆ. ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದೆ. ಕರ್ನಾಟಕದ ಸ್ಥಿತಿ ಮಧ್ಯಪ್ರದೇಶದಲ್ಲೂ ಆಗುತ್ತದೆ. ಕೆಸಿಆರ್ ಕುಟುಂಬದ ಲೂಟಿ ಗೊತ್ತಾಗುತ್ತದೆ. ಅವರ ಹಗರಣ ತೆಲಂಗಾಣ ಹಾಳು ಮಾಡುತ್ತದೆ. 2024ಕ್ಕೆ ಈ ಚುನಾವಣೆ ಟ್ರೇಲರ್ ಇದ್ದ ಹಾಗೆ. ಹೊಸ ಅಧ್ಯಾಯ ಇಲ್ಲಿಂದ ಶುರು ಆಗುತ್ತದೆ. ಆದರೆ ಚುನಾವಣೆ ಆಯೋಗ ಸಂಪೂರ್ಣ ತಪ್ಪು ಮಾಡಿದೆ.‌ ಬಿಜೆಪಿ ಕೂಡ ಇದೇ ರೀತಿ ಜಾಹೀರಾತು ನೀಡಿತ್ತು. ಇದಕ್ಕೆ ಸೂಕ್ತ ಉತ್ತರ ಕರ್ನಾಟಕ ಸರ್ಕಾರ ನೀಡುತ್ತದೆ ಎಂದು ತಿಳಿಸಿದರು.

ನಿಗಮ ಮಂಡಳಿಗಳ ನೇಮಕ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಿಗಮ ಮಂಡಳಿಗಳಿಗೆ ಹಲವು ಸುತ್ತಿನ ಚರ್ಚೆ ಮಾಡ್ತೇವೆ. ಎಲ್ಲ ಅಂಶಗಳನ್ನು ಪರಿಗಣಿಸಿ ನಿರ್ಧಾರ ಮಾಡ್ತೇವೆ. ನಾನೂ ಕೂಡ ಇದೇ ಕಾರಣಕ್ಕೆ ಹಲವು ಬಾರಿ ಬಂದಿದ್ದೇನೆ. ಎಲ್ಲ ಅಂಶಗಳೂ ನಮ್ಮ ಗಮನದಲ್ಲಿವೆ ಎಂದರು.

ಇದನ್ನೂ ಓದಿ: ತೆಲಂಗಾಣ ಮಾಧ್ಯಮಗಳಲ್ಲಿ ಕರ್ನಾಟಕ ಸರ್ಕಾರದ ಸಾಧನೆಗಳ ಜಾಹೀರಾತು: ರಾಜ್ಯ ​ಸರ್ಕಾರಕ್ಕೆ ಚುನಾವಣಾ ಆಯೋಗದ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.