ETV Bharat / state

ತುಂಗಭದ್ರಾ ಅಚ್ಚುಕಟ್ಟು ರೈತರಿಗೆ ನ.30ರ ತನಕ ನೀರು, ಲಭ್ಯತೆಯ ಆಧಾರದಡಿ ತೀರ್ಮಾನ: ಸಚಿವ ಶಿವರಾಜ್ ತಂಗಡಗಿ

author img

By ETV Bharat Karnataka Team

Published : Oct 5, 2023, 8:11 PM IST

ಬೆಂಗಳೂರಿನ ವಿಕಾಸಸೌಧದಲ್ಲಿಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ತುಂಗಭದ್ರಾ ಯೋಜನೆಯ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.

Emergency Irrigation Advisory Committee meeting was held.
ಬೆಂಗಳೂರಿನಲ್ಲಿ ತುಂಗಭದ್ರಾ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.

ಬೆಂಗಳೂರು: ತುಂಗಭದ್ರಾ ಜಲಾಯಶಯದಲ್ಲಿ ಪ್ರಸ್ತುತ 53 ಟಿಎಂಸಿ ನೀರಿನ ಲಭ್ಯತೆ ಇದ್ದು, ಎಡದಂಡೆ ಮುಖ್ಯ ಕಾಲುವೆಗೆ 4,100 ಕ್ಯೂಸೆಕ್‌ನಂತೆ ನ.30ರ ವರೆಗೆ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.

ವಿಕಾಸಸೌಧದಲ್ಲಿ ನಡೆದ ತುಂಗಭದ್ರಾ ಯೋಜನೆಯ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನ.10ರ ವರೆಗೆ 1000 ಕ್ಯೂಸೆಕ್‌ನಂತೆ, ಜಲಾಶಯದ ನೀರಿನ ಮಟ್ಟ 1600 ಅಡಿ ತಲುಪುವವರೆಗೆ ಲಭ್ಯತೆ ಅನುಸಾರ ಮುಂಬರುವ ಒಳಹರಿವಿನ ಪರಿಗಣಿಸಿ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಬಲದಂಡೆ ಕೆಳಮಟ್ಟದ‌ ಕಾಲುವೆಗೆ ನ.30ರ ವರೆಗೆ 850 ಕ್ಯೂಸೆಕ್​ ಬದಲಾಗಿ 750 ಕ್ಯೂಸೆಕ್‌ನಂತೆ, ತುಂಗಭದ್ರಾ ಎಡದಂತೆ ಮೇಲ್ಮಟ್ಟದ ಕಾಲುವೆಗೆ ನ.30ರ ವರೆಗೆ 23 ಕ್ಯೂಸೆಕ್​ನಂತೆ ನೀರು ಹರಿಸಲಾಗುವುದು. ಉಳಿದಂತೆ, ರಾಯ ಬಸವಣ್ಣ ಕಾಲುವೆಗೆ ನ. 30ರ ವರೆಗೆ ಒಟ್ಟು ಕೊರತೆ ಬೀಳುವ ನೀರು 0.109 ಟಿಎಂಸಿ ಆಗಲಿದೆ. ಪ್ರಸ್ತುತ ಕಾಲುವೆಯಲ್ಲಿ ಕಾಮಗಾರಿ ಕೈಗೊಳ್ಳುವುದರಿಂದ ಡಿ.10ರಿಂದ ಫೆ.10ರ ತನಕ ನೀರು ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.‌

ಜಲಾಶಯದಲ್ಲಿ ನೀರಿನ ಸಂಗ್ರಹ ಲಭ್ಯತೆ ಹಾಗೂ ರೈತರಿಗೆ ಈ ಹಿಂದೆ ತಾವು ನೀಡಿದ್ದ ಭರವಸೆಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ.‌ ಪ್ರಸ್ತುತ ಡ್ಯಾಂನಲ್ಲಿ ಐದು ಟಿಎಂಸಿ‌ ನೀರು ಕೊರತೆ ಇದ್ದು, ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ಆಂಧ್ರ ಕೋಟಾದಡಿ ನೀಡಲಾಗುವ ನೀರನ್ನು ನಮಗೆ ಬಿಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈ‌‌ ಹಿಂದೆ 2018ರಲ್ಲಿ‌ ನೀರಿಗೆ ಸಮಸ್ಯೆಯಾದಾಗ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ ಅಲ್ಲಿನ‌ ಸರ್ಕಾರ ಅವರ ಪಾಲಿನ ಒಂದು ಟಿಎಂಸಿಯಷ್ಟು ನೀರು ನೀಡಿತು. ಪ್ರಸ್ತುತ ಅಲ್ಲಿನ‌ ಸರ್ಕಾರಕ್ಕೆ ಇಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿವರಿಸಿದರು.‌

ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಈ ಹಿಂದೆ ಆಗಸ್ಟ್‌ನಲ್ಲಿ ಸಲಹಾ ಸಮಿತಿ ಸಭೆ ನಡೆಸಿದ ನಮಗೆ 11 ಟಿಎಂಸಿ ನೀರಿನ ಲಭ್ಯತೆ ಕೊರತೆ ಇತ್ತು. ಮಲೆನಾಡು ಭಾಗದಲ್ಲಿ ಮಳೆಯಾಗಲಿದೆ ಎಂದು ಭಾವಿಸಿದ್ದೆವು. ಸೂಕ್ತ ಮಳೆಯಾಗದ ಕಾರಣ ಇದೀಗ ನೀರಿಗೆ ಸಮಸ್ಯೆ ಎದುರಾಗಿದೆ. ತುಂಗಭದ್ರಾ ಎಡದಂಡೆಯ ರೈತರು ಪ್ರಸ್ತುತ ಐದು ಲಕ್ಷಕ್ಕಿಂತ ಹೆಚ್ಚು ರೈತರು ಭತ್ತ ಬೆಳೆದಿದ್ದಾರೆ. ಒಟ್ಟು 2,300 ಕೋಟಿಯಷ್ಟು ಬೆಳೆ ಇದೆ. ಆ ಬೆಳೆಯನ್ನು ಉಳಿಸುವ ಕೆಲಸ ಮಾಡಬೇಕಿದ್ದು, ರೈತರ ಹಿತ ಕಾಪಾಡಲಾಗುವುದು.

ಆಂಧ್ರ ಕೋಟಾದ‌ಡಿ ಒಂದು ಟಿಎಂಸಿಯಷ್ಟು ನೀರನ್ನು ಹೊಂದಾಣಿಕೆ ‌ಆಧಾರದ ಮೇಲೆ‌ ಪಡೆಯುವ ಸಲುವಾಗಿ ಅ.11ರಂದು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಕಾರ್ಯದರ್ಶಿಗಳು ಪಾಲ್ಗೊಳ್ಳುವರು. ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಸಚಿವ ಶರಣ್ ಪ್ರಕಾಶ್ ಪಾಟೀಲ್, ಎನ್.ಎಸ್.ಬೋಸರಾಜ್, ಬಿ.ನಾಗೇಂದ್ರ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಸನಗೌಡ ತುರುವಿಹಾಳ್, ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಗಣೇಶ್, ರೈತ ಮುಖಂಡರು ಹಾಗೂ ಇನ್ನಿತರರು ಸಭೆಯಲ್ಲಿದ್ದರು.

ಇದನ್ನೂಓದಿ: ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ, ಟೋಲ್ ಫ್ರೀಗೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.