ETV Bharat / state

ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂಕಷ್ಟ.. ರೈತರ ಸಾಲ ಮನ್ನಾ ಮಾಡಿ: ಎಚ್ ಕೆ ಪಾಟೀಲ್ ಒತ್ತಾಯ

author img

By

Published : Sep 16, 2022, 10:57 PM IST

ಗದಗ ಜಿಲ್ಲೆಯಲ್ಲಿ 500 ಕೋಟಿಯಷ್ಟು ಮಳೆಯಿಂದ ಹಾನಿಯಾಗಿದ್ದು, ತಕ್ಷಣ 200 ಕೋಟಿ ರೂ. ಪುನರ್ ನಿರ್ಮಾಣಕ್ಕೆ ನೀಡಬೇಕು ಎಂದು ಪಾಟೀಲ್​ ಒತ್ತಾಯಿಸಿದ್ದಾರೆ.

H K Patil
ಎಚ್ ಕೆ ಪಾಟೀಲ್

ಬೆಂಗಳೂರು: ಮಳೆಯಿಂದ ಅತಿವೃಷ್ಟಿ, ಪ್ರವಾಹ ಉಂಟಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ತಕ್ಷಣವೇ ರೈತರ ಸಾಲ ಮನ್ನಾ ಮಾಡಬೇಕೆಂದು ಕಾಂಗ್ರೆಸ್‌ ಸದಸ್ಯ ಎಚ್.ಕೆ.ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ನಿಯಮ 69ರಡಿ ಅತಿವೃಷ್ಟಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಗದಗ ಜಿಲ್ಲೆಯಲ್ಲಿ 500 ಕೋಟಿಯಷ್ಟು ಮಳೆಯಿಂದ ಹಾನಿಯಾಗಿದ್ದು, ತಕ್ಷಣ 200 ಕೋಟಿ ರೂ. ಪುನರ್ ನಿರ್ಮಾಣಕ್ಕೆ ನೀಡಬೇಕು. ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದು, ಕೇಂದ್ರದ ಬಳಿಗೆ ಸರ್ವ ಪಕ್ಷದ ನಿಯೋಗ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದರು.

ವಿಮಾ ಕಂಪನಿಗಳಿಂದ ಬೆಳೆ ಹಾನಿಗೆ ರೈತರಿಗೆ ಸರಿಯಾದ ವಿಮಾ ಪರಿಹಾರ ಸಿಗುತ್ತಿಲ್ಲ. 2019 ರಲ್ಲಿ ರೈತರು 2276 ಕೋಟಿ ರೂ. ಬೆಳೆ ವಿಮೆ ಕಂತು ಪಾವತಿಸಿದ್ದಾರೆ. ಆದರೆ 1357 ಕೋಟಿ ರೂ. ವಿಮೆ ಪರಿಹಾರ ಪಾವತಿಯಾಗಿತ್ತು. ಅದರಲ್ಲಿ 1015 ಕೋಟಿ ರೂ. ಮಾತ್ರ ನೀಡಲಾಗಿದೆ. ವಿಮೆ ಕಂಪನಿಗೆ ಲಾಭವಾಗಿದೆ ಎಂದು ಆರೋಪಿಸಿದರು.

ಬೆಳೆಹಾನಿಗೆ ಕಟ್ಟುವ ಬೆಳೆವಿಮೆ ಏನಾಯಿತು?: ಸಾವಿರಾರು ಕೋಟಿ ವಿಮೆ ಕಟ್ಟಿದ್ದರೂ ರೈತರಿಗೆ ಮಾತ್ರ ವಿಮೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದ ಎಚ್.ಕೆ.ಪಾಟೀಲ್ ಮಾತಿಗೆ ಶಾಸಕ ಈಶ್ವರ ಖಂಡ್ರೆ ಸಾಥ್ ನೀಡಿ, ಸಾವಿರಾರು ಕೋಟಿ ವಿಮಾ ಕಂಪನಿಗಳು ಬೆಳೆ ವಿಮೆಯಿಂದ ಕಟ್ಟಿಸಿಕೊಳ್ಳುತ್ತವೆ.‌ ಆದರೆ ವಿಮಾ ಕಂಪನಿಗಳು ರೈತರಿಗೆ ವಾಪಸು ಕೊಡ್ತಿರುವುದು ಎಷ್ಟು? ರೈತರಿಂದ ಸಂಗ್ರಹವಾದ ಶೇ. 50ರಷ್ಟು ಸಹ ಬೆಳೆ ವಿಮೆ ಪರಿಹಾರ ಕೊಡ್ತಿಲ್ಲ. ಕೂಡಲೇ ರೈತರಿಗೆ ಆದ ಬೆಳೆ ವಿಮೆ ಬರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರದಿಂದ ಆಗುವ ಪರಿಹಾರ ಕ್ರಮಗಳು ಚುರುಕಾಗಿ ಆಗಬೇಕು ಎಂದು ಆಗ್ರಹಿಸಿದರು.

ಎಸ್‌ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ಎಷ್ಟು ಸಭೆ ಮಾಡಿದ್ದಾರೆ. ಕೇಂದ್ರದ ಅಧ್ಯಯನ ತಂಡ ಕಾರಿನಲ್ಲಿ ಬಂದು ಹೆದ್ದಾರಿ ಮೇಲೆ ನಿಂತು ಅಧ್ಯಯನ ಮಾಡಿತೇ? ಅಧ್ಯಯನ ತಂಡದವರು ಯಾವುದನ್ನು ನೋಡಿದರು, ಯಾವುದನ್ನು ಬಿಟ್ಟರೋ ಗೊತ್ತಿಲ್ಲ ಎಂದು ಎಚ್.ಕೆ. ಪಾಟೀಲ್ ಅಸಮಾಧಾನ ಹೊರಹಾಕಿದರು.

ಜೆಡಿಎಸ್‍ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಅತಿವೃಷ್ಟಿ ಪ್ರವಾಹದಿಂದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಅವರ ಬೆಳೆ ಸಾಲವನ್ನು ಮನ್ನಾ ಮಾಡಿ ಎಂದು ಒತ್ತಾಯಿಸಿದರು.

ಈ ಮಧ್ಯೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಎ.ಟಿ. ರಾಮಸ್ವಾಮಿ ಒತ್ತುವರಿ ಬಗ್ಗೆ ವರದಿ ಕೊಟ್ಟಿದ್ದಾರೆ. ಸಾವಿರಾರು ಎಕರೆ ಭೂಮಿ ಒತ್ತುವರಿ ವರದಿ ಕೊಟ್ಟಿದ್ದಾರೆ. ಯಾವ ಒತ್ತುವರಿ ತೆರವು ಮಾಡ್ತಿರೋ ಬಿಡ್ತಿರೋ, ಆದರೆ, ನೀರು ಹರಿದು ಹೋಗಲು ಒತ್ತುವರಿ ತೆರವು ಮಾಡಿ ಎಂದು ಎ.ಟಿ. ರಾಮಸ್ವಾಮಿ ಮಾತನಾಡುವ ವೇಳೆ ಲಿಂಬಾವಳಿ ಮನವಿ ಮಾಡಿಕೊಂಡರು.

ಒತ್ತುವರಿ ತೆರವಿನ ಕಾಂಗ್ರೆಸ್ ವಾದಕ್ಕೆ ಆಕ್ಷೇಪ : ಮಳೆ ಹಾನಿ ಹಿನ್ನೆಲೆಯಲ್ಲಿ ಒತ್ತುವರಿ ತೆರವು ವಿಚಾರವಾಗಿ ಕಾಂಗ್ರೆಸ್ ವಾದಕ್ಕೆ ಸಚಿವ ಆರ್.‌ಅಶೋಕ್ ಆಕ್ಷೇಪಿಸಿದರು. ಐಟಿ, ಬಿಟಿ, ಸಾವುಕಾರರ ಕಟ್ಟಡ‌ ಏಕೆ ಒಡೆಯುತ್ತೀರಾ ಎಂದು ಪ್ರಶ್ನಿಸುತ್ತಾರೆ. ಬಡವರ ಒತ್ತುವರಿ ‌ತೆರವುಗೊಳಿಸಿದರೆ ಮಾಧ್ಯಮದವರು ಹಿಂದೆ‌ ಬೀಳ್ತಾರೆ. ಮತ್ತೊಂದು ಕಡೆ ಕಾಂಗ್ರೆಸ್​ನವರು‌ ಏಕೆ ಒಡೆಯುತ್ತೀರಾ ಎಂದು ಪ್ರಶ್ನಿಸುತ್ತಾರೆ
ದೊಡ್ಡ ಸಮಸ್ಯೆ ಆಗಿದೆ ನಮಗೆ ಎಂದರು.

ಐಟಿ ಬಿಟಿ ಸಾವಿರಾರು ಇದ್ದಾರೆ ಒತ್ತುವರಿ ಮಾಡಿರುವವರು 30 ಮಂದಿ. ಬಿಲ್ಡರ್, ಗುತ್ತಿಗೆದಾರರು ಯಾರೇ ಇರಲಿ ಒತ್ತುವರಿ ಮಾಡಿರುವವರು ಕೆಲವೇ ಜನ. ನಾವು ಬಡವರಿಗೊಂದು ಶ್ರೀಮಂತರಿಗೊಂದು ರೀತಿ ಮಾಡೋದು ಬೇಡ. ಎಲ್ಲವನ್ನೂ ಸಮಾನವಾಗಿ ನೋಡುತ್ತೇವೆ. ಈ ಬಗ್ಗೆ ಆಕ್ಷೇಪ ಎತ್ತಿದರೆ ಏನೂ ಮಾಡಕ್ಕಾಗಲ್ಲ, ಕೊನೆಗೆ ತೆರವು ಕಾರ್ಯಾಚರಣೆ ನಿಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಿರ್ಧಾರ ಕೈಬಿಡಬೇಕು: ಎಚ್.ಕೆ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.