ETV Bharat / state

B K Hariprasad: ಸಾಮಾಜಿಕ ನ್ಯಾಯದ ಪರವಾದ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್​

author img

By

Published : Jul 25, 2023, 10:40 AM IST

B K Hariprasad: ನಾನು ಸಾಮಾಜಿಕ ಬದಲಾವಣೆಗಾಗಿ ರಾಜಕೀಯಕ್ಕೆ ಬಂದವನು. ಸಾಮಾಜಿಕ ನ್ಯಾಯದ ಪರವಾದ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ ಮುಖಂಡ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ.

voice-for-social-justice-cannot-be-hidden-congress-leader-bk-hariprasad
ಸಾಮಾಜಿಕ ನ್ಯಾಯದ ಪರವಾದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ : ಕಾಂಗ್ರೆಸ್​ ಮುಖಂಡ ಬಿ ಕೆ ಹರಿಪ್ರಸಾದ್​

ಬೆಂಗಳೂರು : "ನಾನು ವೈಯಕ್ತಿಕ ಹಿತಾಸಕ್ತಿಗೆ ಎಂದೂ ರಾಜಕೀಯ ಮಾಡಿದವನಲ್ಲ. ಸಾಮಾಜಿಕ ಬದಲಾವಣೆಗಾಗಿ ರಾಜಕೀಯಕ್ಕೆ ಬಂದವನು. ಸಾಮಾಜಿಕ ನ್ಯಾಯದ ಪರವಾದ ನನ್ನ ಧ್ವನಿಯನ್ನು ಎಂದೂ ಅಡಗಿಸಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್​ ಮುಖಂಡ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, "ನಾನು ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಯಾವ ಅಧಿಕಾರದ ಮೇಲೂ ಲಾಭಿ ನಡೆಸಿದ ಇತಿಹಾಸವಿಲ್ಲ. ಅದರ ಮೇಲೆ ಆಸೆಯೂ ನನಗಿಲ್ಲ" ಎಂದು ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಈಡಿಗ, ಬಿಲ್ಲವ,ನಾಮಧಾರಿ, ದೀವರ ಮಹಾಮಂಡಳಿ ವಿಶೇಷ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್​ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್​, "ನಾನು ಅಸಮಾಧಾನದ ಬಗ್ಗೆ ಮಾತನಾಡುವುದಿಲ್ಲ. ವಿಶೇಷ ಸಭೆಯಲ್ಲಿ ನಾನು ಏನು ಮಾತನಾಡಿದ್ದೇನೋ ಅದಕ್ಕೆ ನಾನು ಬದ್ಧ. ಅದನ್ನು ವಾಪಸ್​ ಪಡೆದುಕೊಳ್ಳುವ ಮಾತೇ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದರು.

"ನಾನು ಹೇಳದ ಮೇಲೆ ಅದು ನನ್ನ ಮಾತಲ್ಲ. ನಾನು ಹೇಳಿದ ಮೇಲೆ, ನನ್ನ ಮಾತಿಗೆ ನಾನು ಬದ್ಧನಾಗಿರುತ್ತೇನೆ. ಮಹಾಮಂಡಳಿಯ ಸಭೆಗೆ ನನ್ನನ್ನು ಕರೆದಿದ್ದರು. ಅಲ್ಲಿ ಹೋಗಿ ಮಾತನಾಡಿದ್ದೇನೆ. ಇದನ್ನು ಯಾರೋ ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದರು.

ಸಿದ್ದರಾಮಯ್ಯ ವಿರುದ್ಧ ಸಭೆಯಲ್ಲಿ ಅಸಮಾಧಾನ : ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್​ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. "ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ವಿಶೇಷವಾಗಿ ನಮ್ಮ ಸಮುದಾಯ ಯಾಕೆ ಮುಂದೆ ಬರುತ್ತಿಲ್ಲ. ಈ ಬಗ್ಗೆ ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಸಮುದಾಯದವರು ಅವಕಾಶ ವಂಚಿತರಾಗುತ್ತಿದ್ದಾರೆ. ಇದರ ಹಿಂದೆ ಯಾರದೋ ಷಡ್ಯಂತ್ರ ಇದೆ" ಎಂದು ಟೀಕಿಸಿದ್ದರು.

"ಕೆಲವರು ಹೇಳಬಹುದು ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರು. ನೀವು ಕೂಡ ಹಿಂದುಳಿದ ವರ್ಗದವರು. ನಾವೆಲ್ಲ ಒಟ್ಟಿಗೆ ಸೇರಬೇಕೆಂದು ಹೇಳಬಹುದು. ಈ ಸಂಬಂಧ ಎಲ್ಲರೂ ಒಟ್ಟಿಗೆ ಸೇರಿ 2013ರಲ್ಲಿ ಬೆಂಬಲ ನೀಡಿದ್ದೇವು. ಯಾವುದೇ ಮಂತ್ರಿ ಅಥವಾ ಮುಖ್ಯಮಂತ್ರಿಗಳ ಮುಂದೆ ಕೈ ಚಾಚುವರು ನಾವಲ್ಲ. ಸ್ವಾರ್ಥಕ್ಕೋಸ್ಕರ ನಾವು ಇದುವರೆಗೆ ಏನನ್ನೂ ಕೇಳಿದವರಲ್ಲ" ಎಂದು ಹೇಳಿದ್ದರು.

"ಈ ಬಾರಿ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ನಮ್ಮ ಸಮುದಾಯದವರು ಅವಕಾಶ ವಂಚಿತರಾಗಿದ್ದರು. ಅಲ್ಪಸಂಖ್ಯಾತರನ್ನು ಮುಂದಿಟ್ಟಕೊಂಡು ನಾವು ಟಿಕೆಟ್ ವಂಚಿತರಾದೆವು. ಲಿಂಗಾಯತರು, ಒಕ್ಕಲಿಗರು ಬ್ರಾಹ್ಮಣರು, ಕುರುಬರು ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ಮಾಡುತ್ತಾರೆ. ಅವರು ಏನಾದರೂ ಬರಬೇಕಾದರೆ ಅವರ ಸ್ಥಾನಗಳನ್ನು, ಸೀಟುಗಳನ್ನು ಬಿಟ್ಟುಕೊಡಲಿ. ಅದನ್ನು ಬಿಟ್ಟು ನಮ್ಮ ಸೀಟುಗಳನ್ನು ಏಕೆ ಬಿಟ್ಟು ಕೊಡಬೇಕು?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

"ನಾವು ಇರುವಂಥ ಸ್ಥಾನಗಳಲ್ಲಿ ನಮಗೆ ಬಿಟ್ಟು ಕೊಡಿ. ನಾನು ಮಂತ್ರಿಯಾಗುವುದು ಬೇರೆ ಪ್ರಶ್ನೆ. ನಾನು ಈಗಾಗಲೇ ದೇಶದಲ್ಲಿ ಐದು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದೇನೆ. ಮುಖ್ಯಮಂತ್ರಿ ಮಾಡುವುದು, ಇಳಿಸುವುದು ನನಗೆ ಚೆನ್ನಾಗಿ ಗೊತ್ತಿದೆ. ನಾವು ಯಾರಿಗೂ ಬಗ್ಗುವವರಲ್ಲ. ಯಾರಲ್ಲೂ ಭಿಕ್ಷೆಯೂ ಬೇಡಲ್ಲ" ಎಂದು ವಾಗ್ದಾಳಿ ನಡೆಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್​, "ರಾಜಕಾರಣದಲ್ಲಿ ಎಲ್ಲರೂ ಸಮಾನರು. ಯಾವುದೇ ಸಮುದಾಯವನ್ನು ತುಳಿಯುವ ಕೆಲಸ ಕಾಂಗ್ರೆಸ್​ ಮಾಡುವುದಿಲ್ಲ. ನಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲ" ಎಂದಿದ್ದರು.

ಹರಿಪ್ರಸಾದ್​ ಹೇಳಿಕೆಯಿಂದ ಅವರ ಹಿರಿತನಕ್ಕೆ ಧಕ್ಕೆ : ಬಿ.ಕೆ.ಹರಿಪ್ರಸಾದ್​ ಹೇಳಿಕೆ ಪ್ರತಿಕ್ರಿಯಿಸಿರುವ ಮಾಲೂರು ಶಾಸಕ ಕೆ.ವೈ.ನಂಜೇಗೌಡ, "ಹರಿಪ್ರಸಾದ್ ಅವರು ತುಂಬಾ ಹಿರಿಯರು. ಅವರಿಗೆ ಪಕ್ಷದಲ್ಲಿ ತುಂಬಾ ಅವಕಾಶಗಳು ಸಿಕ್ಕಿವೆ. ಅವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳಿಂದ ಅವರ ಹಿರಿತನಕ್ಕೆ ಧಕ್ಕೆಯಾಗುತ್ತದೆ" ಎಂದು ಹೇಳಿದ್ದರು.

"ಬಿ.ಕೆ ಹರಿಪ್ರಸಾದ್​ ಯಾವ ಉದ್ದೇಶದಿಂದ ಈ ಮಾತನ್ನು ಹೇಳಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ 136 ಶಾಸಕರ ಬೆಂಬಲ ಇದೆ. ಇದರಿಂದ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಬಿಜೆಪಿಯವರು ಗೊಂದಲ ಹುಟ್ಟುಹಾಕುತ್ತಿದ್ದಾರೆ" ಎಂದು ಸಚಿವ ಆರ್​.ಬಿ.ತಿಮ್ಮಾಪೂರ ಹೇಳಿದ್ದರು.

ಇದನ್ನೂ ಓದಿ : ಸಿದ್ದರಾಮಯ್ಯಗೆ 136 ಶಾಸಕರ ಸಪೋರ್ಟ್ ಇದ್ದು, ಸರ್ಕಾರ ಗಟ್ಟಿಯಾಗಿದೆ: ಸಚಿವ ಅರ್ ಬಿ ತಿಮ್ಮಾಪೂರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.