ETV Bharat / state

ದೆಹಲಿ ಮಾದರಿಯಲ್ಲಿ ಕಾನ್​ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡಲು ನಿರ್ಣಯ: ಸ್ಪೀಕರ್

author img

By

Published : Oct 4, 2021, 3:25 PM IST

ಜನ ನಮ್ಮನ್ನು ಆರಿಸಿ ಕಳುಹಿಸಿರುವುದು ಜನರ ಭಾವನೆಗಳನ್ನೆಲ್ಲ ಹೇಳಬೇಕೆಂದು. ಕಾಂಗ್ರೆಸ್​​​​ನವರು ಮುಕ್ತವಾಗಿ ಎಲ್ಲ ಅವಕಾಶ ಬಳಸಿಕೊಂಡಿದ್ದಾರೆ. ಸಭಾಧ್ಯಕ್ಷನಾಗಿ ಸಂತೋಷವಾಗಿದ್ದೇನೆ ಎಂದ ಅವರು, ಒಂದು ಬಾರಿ ಕೂಡ ಐದು ನಿಮಿಷ, ಹತ್ತು ನಿಮಿಷ ಸದನ ಮುಂದೂಡುವ ಪ್ರಸಂಗ ಬರಲಿಲ್ಲ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ.

vishweshwara-hegde-kageri
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ದೆಹಲಿ ಮಾದರಿಯಲ್ಲಿ ಕಾನ್​ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಬ್ರೂಯಿ ಅತಿಥಿ ಗೃಹದಲ್ಲಿ ಕಾನ್​​​ಸ್ಟಿಟ್ಯೂಷನ್ ಕ್ಲಬ್ ಆಗಿ ಬಳಸಿಕೊಳ್ಳುವುದಕ್ಕೆ ನಿರ್ಧರಿಸಿದ್ದೇವೆ. ಈಗಾಗಲೇ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು. ಪ್ರೆಸ್ ಕ್ಲಬ್ ಇದೆ, ಬಾರ್ ಅಸೋಸಿಯೇಷನ್ ಇದೆ. ಎಲ್ಲರಿಗೂ ಕೂಡ ಅವರವರದ್ದೇ ಆದ ಕ್ಲಬ್​ಗಳಿವೆ. ದೆಹಲಿ ಮಾದರಿಯಲ್ಲಿ ಈ ಕ್ಲಬ್​ ಮಾಡಲಾಗುವುದು ಎಂದರು.

ಬಾಲಬ್ರೂಯಿ ಐತಿಹಾಸಿಕ ಕಟ್ಟಡ. ಅದರ ರಚನೆಗೆ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡುವುದಿಲ್ಲ. ನಾನು ದೆಹಲಿಗೆ ಹೋಗಿ ಕಾನ್ಸ್​​​​​ಸ್ಟಿಟ್ಯೂಷನ್​ ಕ್ಲಬ್ ರಚನೆ ನೋಡಿಕೊಂಡು ಬರುತ್ತೇನೆ. ಬಳಿಕ ನಿಯಮಾವಳಿ ಕಾನೂನುಗಳ ಅಡಿಯಲ್ಲೇ ಏನೇನು ಮಾಡಬೇಕು ಮಾಡುತ್ತೇವೆ. ಕಾನೂನು ಬಿಟ್ಟು ಏನೇನೂ ಮಾಡುವುದಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ಅಧಿವೇಶನ: ಡಿಸೆಂಬರ್ ತಿಂಗಳಲ್ಲಿ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸರ್ಕಾರದಿಂದಲೂ ಕೂಡ ಅಧಿವೇಶನ ನಡೆಸಲು ಚಿಂತನೆ ಇದೆ. ಅದರ ಸಿದ್ಧತೆ ಮಾಡಿಕೊಳ್ಳಲು ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.

ಉತ್ತಮವಾಗಿ ನಡೆದ ಅಧಿವೇಶನ : 13 ರಿಂದ 24ರ ತನಕ ನಡೆದ ಈ ಬಾರಿಯ ಅಧಿವೇಶನ ಉತ್ತಮವಾಗಿತ್ತು. ಅಧಿವೇಶನ ಚೆನ್ನಾಗಿ ನಡೆಯಲು ಸಹಕರಿಸಿದ ಸದನದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ಕಡೆಯೂ ಶ್ಲಾಘನೆಗೆ ಒಳಪಟ್ಟಿತ್ತು‌. ಕಲಾಪದ ಗುಣಮಟ್ಟ, ಹಾಜರಾತಿ, ಚರ್ಚೆ ಈ ಬಾರಿ ಅತ್ಯುತ್ತಮವಾಗಿತ್ತು. ಹತ್ತು ದಿನಗಳ ಅಧಿವೇಶನದಲ್ಲಿ ವರದಿ ಮಂಡಿಸಿದ್ದೇನೆ. 150 ರಲ್ಲಿ 146 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ಎಂದು ತಿಳಿಸಿದರು.

ವಿಶೇಷವಾಗಿ ಈ ಬಾರಿ 19 ವಿಧೇಯಕ ಅಂಗೀಕರಿಸಿದ್ದೇವೆ. ಬಿಲ್ ಬಗ್ಗೆಯೂ ಪರ ವಿರೋಧದ ಅಭಿಪ್ರಾಯ ಇದ್ದೇ ಇತ್ತು‌. ಸರ್ಕಾರದ ಸದನವನ್ನು ಗಂಭೀರವಾಗಿ ತೆಗೆದುಕೊಂಡು ಸಚಿವರೆಲ್ಲರೂ ಉಪಸ್ಥಿತರಿದ್ದರು. ಸದಸ್ಯರ ಎಲ್ಲ ಮಾತುಗಳಿಗೂ ಸರ್ಕಾರ ಸ್ಪಂದಿಸುವ ಕೆಲಸ ಮಾಡಿದೆ. ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿದ್ದು ಕೂಡ ವಿಶೇಷವಾಗಿತ್ತು‌ ಎಂದರು.

ಜನ ನಮ್ಮನ್ನು ಆರಿಸಿ ಕಳುಹಿಸಿರುವುದು ಜನರ ಭಾವನೆಗಳನ್ನೆಲ್ಲ ಹೇಳಬೇಕೆಂದು. ಕಾಂಗ್ರೆಸ್​​​ನವರು ಮುಕ್ತವಾಗಿ ಎಲ್ಲ ಅವಕಾಶ ಬಳಸಿಕೊಂಡಿದ್ದಾರೆ. ಸಭಾಧ್ಯಕ್ಷನಾಗಿ ಸಂತೋಷವಾಗಿದ್ದೇನೆ ಎಂದರೆ, ಒಂದು ಬಾರಿ ಕೂಡ ಐದು ನಿಮಿಷ, ಹತ್ತು ನಿಮಿಷ ಸದನ ಮುಂದೂಡುವ ಪ್ರಸಂಗ ಬರಲಿಲ್ಲ. ಸದನದ ಸಮಯ ವ್ಯರ್ಥವಾಗುವುದಕ್ಕೆ ಯಾವ ಸದಸ್ಯರೂ ಬಿಡಲಿಲ್ಲ. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ವಿಷಯದ ಕುರಿತು ಲೋಕಸಭಾ ಸ್ಪೀಕರ್ ಓ‌ಂ ಬಿರ್ಲಾ ಅವರನ್ನು ಆಹ್ವಾನ ಮಾಡಿದ್ದೆವು. ಕರ್ನಾಟಕದ ವಿಧಾನಸಭಾ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಸಂಸದೀಯ ವ್ಯವಸ್ಥೆ ಬಗ್ಗೆ ಕಾಲಕಾಲಕ್ಕೆ ಸಿಂಹಾವಲೋಕನ ಮಾಡಬೇಕು. ದೋಷಗಳು, ದೌರ್ಬಲ್ಯಗಳು ಸಮಾಜದಲ್ಲಿ ಯಾವ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ನೋಡುತ್ತಿದ್ದೇವೆ. ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಬೇಕಾಗಿದ್ದು, ನಮ್ಮ ಜವಾಬ್ದಾರಿ ಎಂದರು.

ಕಾಂಗ್ರೆಸ್ ನಡೆಗೆ ಬೇಸರ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಓಂ ಬಿರ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿದ್ದರು. ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವೊಲಿಸುವ ಕೆಲಸ ಸಹ ಮಾಡಲಾಗಿತ್ತು. ಅವರು ಭಾಗವಹಿಸಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಓಂ ಬಿರ್ಲಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸದಸ್ಯರ ವಿರೋಧ ಇರಲಿಲ್ಲ. ಆದರೆ, ವಿಧಾನಸಭೆಯಲ್ಲಿ ಅವರನ್ನು ಕರೆಸಿ ಭಾಷಣ ಮಾಡಿಸಿದ್ದಕ್ಕೆ ಕಾಂಗ್ರೆಸ್ ಸದಸ್ಯರಿಂದ ವಿರೋಧ ವ್ಯಕ್ತವಾಯಿತು. ನಾನೂ ಸಹ ಬೇರೆ ರಾಜ್ಯದಲ್ಲಿ ಹೋಗಿ ಭಾಷಣ ಮಾಡಿದ್ದೇನೆ. ಕಾರ್ಯಕ್ರಮ ಮಾಡಲು ನಿರ್ಣಯಿಸಿದ್ದು ನಾವು ( ಸ್ಪೀಕರ್ ಮತ್ತು ಸಭಾಪತಿ). ಜಂಟಿಯಾಗಿಯೇ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಹೇಳಿದರು.

ಓದಿ: ಬೆಂಗಳೂರಿಗರಿಗೆ ಬಿಗ್​ ಶಾಕ್​.. ಇನ್ನೂ 4 ದಿನ ನಗರದಲ್ಲಿ ವರುಣನ ಆರ್ಭಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.