ETV Bharat / state

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ; ಕಾರ್ಯಕರ್ತರು, ಫೇಸ್‌ಬುಕ್‌ ಪೇಜ್ ಅಡ್ಮಿನ್ ವಿರುದ್ಧ ಪ್ರಕರಣ

author img

By

Published : May 2, 2023, 3:27 PM IST

ನೀತಿ ಸಂಹಿತೆ ಉಲ್ಲಂಘಿಸಿ ಕೋಮು ಪ್ರಚೋದನೆ, ಕೋಮು ಸೌಹಾರ್ದತೆಗೆ ಧಕ್ಕೆಯುಂಟುಮಾಡುವ ಸಂದೇಶ ಪ್ರಕಟಿಸಿದ್ದ ಫೇಸ್‌ಬುಕ್‌ ಪೇಜ್ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದ ಆರೋಪ ಕಾಂಗ್ರೆಸ್, ಎಸ್​ಡಿಪಿಐ, ಬಿಎಸ್ಪಿ ಹಾಗೂ ಎಎಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಕೇಳಿ ಬಂದಿದೆ. ಏಪ್ರಿಲ್ 28ರ ಶುಕ್ರವಾರದ ನಮಾಜ್ ವೇಳೆ ಡಿಜೆ ಹಳ್ಳಿಯ ಮಸೀದಿ ಬಳಿ ಎಸ್​ಡಿಪಿಐ, ಕಾಂಗ್ರೆಸ್ ಹಾಗೂ ಬಿಎಸ್ಪಿ ಕಾರ್ಯಕರ್ತರು ಪ್ರಚಾರ ಮಾಡಿದರೆ, ಟಿಪ್ಪು ಸರ್ಕಲ್ ಬಳಿಯ ಮೆಕ್ಕಾ ಮಸೀದಿ ಬಳಿ ಕಾಂಗ್ರೆಸ್, ಬಿಎಸ್ಪಿ ಕಾರ್ಯಕರ್ತರು ಮತ್ತು ಹುಸೇನಿಯಾ ಮಸೀದಿ ಬಳಿ ಎಎಪಿ, ಎಸ್​ಡಿಪಿಐ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಪ್ರಚಾರ ಮಾಡಿದ್ದಾರೆ. ಮಸೀದಿ ಒಳಗೆ ಹೋಗುವವರಿಗೆ, ಹೊರಗೆ ಬರುವವರಿಗೆ ತಮ್ಮ ಪಕ್ಷದ ಪರ ಮತಯಾಚನೆ ಮಾಡುತ್ತಿರುವ ದೃಶ್ಯಗಳು ಲಭ್ಯವಾಗಿದ್ದು, ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೀತಿ ಸಂಹಿತೆ ಉಲ್ಲಂಘಿಸಿರುವುದಲ್ಲದೇ ಕೋಮು ಪ್ರಚೋದನೆ, ಕೋಮು ಸೌಹಾರ್ದತೆಗೆ ಧಕ್ಕೆಯುಂಟುಮಾಡುವ ಸಂದೇಶ ಪ್ರಕಟಿಸಿದ್ದ ಫೇಸ್‌ಬುಕ್‌ ಪೇಜ್ ಅಡ್ಮಿನ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 'ಕರ್ನಾಟಕ ಮತ್ತೊಂದು ವೆಸ್ಟ್ ಬೆಂಗಾಲ್, ಪಂಜಾಬ್, ಕೇರಳದಂತಾದಗದಿರಲಿ. ಹಿಂದೂಗಳು ತಮ್ಮ ಹಕ್ಕುಗಳನ್ನ ರಕ್ಷಿಸಿಕೊಳ್ಳಲು ಬಿಜೆಪಿಗೆ ಮತ ಹಾಕಿ. ಪಂಜಾಬ್, ಕೇರಳದಲ್ಲಿ ಏನಾಗಿದೆ ಎಂದು ನಿಮಗೆ ಗೊತ್ತೇ ಇದೆ ಎಂದು ಪೋಸ್ಟ್ ಪ್ರಕಟಿಸಿದ್ದ PYJM - Padmanabhanagara Constituency ಹೆಸರಿನ ಫೇಸ್‌ಬುಕ್‌ ಪೇಜ್ ಅಡ್ಮಿನ್ ವಿರುದ್ಧ ಎಲೆಕ್ಷನ್ ಎಫ್​ಎಸ್ ಟಿ ಟೀಂ ಲೀಡರ್ ದಯಾನಂದ್ ಎಂಬುವವರು ನೀಡಿದ ದೂರಿನನ್ವಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಕಾಂಗ್ರೆಸ್​ ವಿರುದ್ಧವೂ ದೂರು: ಗಂಗಾವತಿ (ಕೊಪ್ಪಳ): ಏ.20ರಂದು ನಡೆದ ಮತ್ತೊಂದು ಘಟನೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಆರೋಪದಡಿ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದರು. ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರ ಬೃಹತ್ ರೋಡ್ ಶೋ ನಡೆಸಿದ್ದರು. ಈ ಸಂದರ್ಭದಲ್ಲಿ 8 ರಿಂದ 10 ವರ್ಷ ವಯೋಮಾನದ ಮಕ್ಕಳನ್ನು ಬಳಸಿಕೊಂಡು ಅವರಿಗೆ ಪಕ್ಷದ ಧ್ವಜ ನೀಡಿ, ಬಾವುಟ ಕೊಟ್ಟು ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಚುನಾವಣಾ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಚುನಾವಣಾಧಿಕಾರಿ ಸುದೇಶ ಕುಮಾರ ಆರೋಪಿಸಿದ್ದು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆ 1986ರ ಅಡಿಯಲ್ಲಿ ಬಿಜೆಪಿಯ ನಗರ ಘಟಕದ ಅಧ್ಯಕ್ಷನ ಮೇಲೆ ಎಫ್ಐಆರ್ ದಾಖಲಿಸಿದ್ದರು. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಡೆಸಿದ ಬೃಹತ್ ರೋಡ್ ಶೋ ಸಂದರ್ಭದಲ್ಲಿ 6 ರಿಂದ 13 ವರ್ಷ ವಯೋಮಾನದ 15 ರಿಂದ 20 ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಗುರುಪ್ರಸಾದ್ ಆರೋಪಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಾಮೀದ ಮನಿಯಾರ ಅವರ ಮೇಲೆಯೂ ಎಫ್ಐಆರ್ ದಾಖಲಿಸಿದ್ದರು.

ಇದನ್ನೂ ಓದಿ: 15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ, ನಿಮಗೆ ಕೊಡಬೇಕಾದ ಶಿಕ್ಷೆಯನ್ನು ಕಾಂಗ್ರೆಸ್ ಪಕ್ಷ ಕೊಡುತ್ತದೆ: ಡಿಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.