ETV Bharat / state

ವಿಶ್ವ ಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ: ರಾಜ್ಯದಲ್ಲಿ ಶೌರ್ಯ ಜಾಗರಣ ರಥಯಾತ್ರೆ

author img

By ETV Bharat Karnataka Team

Published : Sep 15, 2023, 10:51 PM IST

ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 10 ರವರೆಗೆ ಶೌರ್ಯ ಜಾಗರಣ ರಥಯಾತ್ರೆ ನೆಡೆಯಲಿದೆ ಎಂದು ಬಜರಂಗದಳ ರಾಷ್ಟ್ರೀಯ ಸಂಚಾಲಕರು ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷದ್ ಪ್ರೆಸ್​ಮೀಟ್​
ವಿಶ್ವ ಹಿಂದೂ ಪರಿಷದ್ ಪ್ರೆಸ್​ಮೀಟ್​

ಬೆಂಗಳೂರು: ವಿಶ್ವ ಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ದೇಶಾದ್ಯಾಂತ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಲಾಗಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 10 ರವರೆಗೆ ಶೌರ್ಯ ಜಾಗರಣ ರಥಯಾತ್ರೆ ನೆಡೆಯಲಿದೆ ಎಂದು ಬಜರಂಗದಳದ ರಾಷ್ಟ್ರೀಯ ಸಂಚಾಲಕ ಸೂರ್ಯನಾರಾಯಣ ಹೇಳಿದರು.

ಪ್ರೆಸ್​ಕ್ಲಬ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಥಯಾತ್ರೆಯು ಸೆಪ್ಟೆಂಬರ್ 25 ರಂದು ಚಿತ್ರದುರ್ಗದಿಂದ ಆರಂಭವಾಗಲಿದೆ. ಕರ್ನಾಟಕ ದಕ್ಷಿಣ ಪ್ರಾಂತದಲ್ಲಿರುವ ಎಲ್ಲಾ ಜಿಲ್ಲೆಗಳ ಮೂಲಕ ಹಾದುಹೋಗುವಂತೆ ಆಯೋಜಿಸಲಾಗಿದೆ. ಈ ರಥಯಾತ್ರೆಯು ಚಿತ್ರದುರ್ಗದಿಂದ ದಾವಣಗೆರೆ, ಸಾಗರ, ಶಿವಮೊಗ್ಗ, ಶೃಂಗೇರಿ, ಚಿಕ್ಕಮಗಳೂರು, ಹಾಸನ, ಅರಸೀಕೆರೆ, ತಿಪಟೂರು, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕುಶಾಲನಗರ, ಮಡಿಕೇರಿ, ಸುಳ್ಯ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು, ಮಂಗಳೂರು ಅಕ್ಟೋಬರ್ 10 ರಂದು ಉಡುಪಿ ತಲುಪಲಿದೆ.

ಅಂದು ಉಡುಪಿಯಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಈ ರಥಯಾತ್ರೆಯು ಸಂಪನ್ನಗೊಳ್ಳಲಿದೆ. ಈ ಮಾರ್ಗಮಧ್ಯದಲ್ಲಿ ಅನೇಕ ಪ್ರಮುಖ ಕೇಂದ್ರಗಳಲ್ಲಿ ಏರ್ಪಡಿಸಲಾಗುವ ಸಭೆಗಳಲ್ಲಿ ಕೇಂದ್ರದ ಮತ್ತು ರಾಜ್ಯದ ಪದಾಧಿಕಾರಿಗಳು ಮಾತನಾಡಿ, ಈ ರಥಯಾತ್ರೆಯ ಸಂದೇಶವನ್ನು ಜನರ ಮುಂದಿಡಲಿದ್ದಾರೆ ಎಂದು ಮಾಹಿತಿ ನೀಡಿದರು. ನಮ್ಮದು ಶೌರ್ಯ ಪರಾಕ್ರಮಗಳ ಇತಿಹಾಸ, ಸಾವಿರಾರು ವರ್ಷಗಳಿಂದ ಈ ರಾಷ್ಟ್ರದ ಮೇಲೆ ಪರಕೀಯರ ಆಕ್ರಮಣಗಳು ನಡೆಯುತ್ತಲೇ ಇದ್ದರೂ ಅದನ್ನು ದಿಟ್ಟವಾಗಿ, ಸಮರ್ಪಕವಾಗಿ ಎದುರಿಸಿದ್ದೇವೆ. ಸನಾತನ ಧರ್ಮವನ್ನು ಮತ್ತು ಈ ಪವಿತ್ರ ಭರತಭೂಮಿಯನ್ನು ಸಂರಕ್ಷಿಸುವಲ್ಲಿ ನೂರಾರು, ಸಾವಿರಾರು ವೀರರು, ಧೀರರು, ಶೂರರು, ಪರಾಕ್ರಮಿಗಳು ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ಅವಶ್ಯಕತೆ ಬಂದಾಗ ಬಲಿದಾನವನ್ನು ಮಾಡಿ ನಮಗೆ ಶ್ರೇಷ್ಠ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಎಂದು ತಿಳಿಸಿದರು.

ತ್ಯಾಗ ಬಲಿದಾನಗಳ ಪರಿಣಾಮವಾಗಿ ಸನಾತನ ಧರ್ಮವು ಸುರಕ್ಷಿತವಾಗಿದೆ. ಇದನ್ನು ಸಂರಕ್ಷಿಸುವ ಹೊಣೆ ಮತ್ತು ಮುಂದಿನ ಪೀಳಿಗೆಗೆ ಯಥಾವತ್ತಾಗಿ ತಲುಪಿಸಿ ನಿರಂತರ ಧರ್ಮ ರಕ್ಷಣೆಯನ್ನು ಮಾಡಬೇಕಾದ ಕಾರ್ಯವು ಪ್ರತಿಯೊಬ್ಬ ಹಿಂದುವಿನ ಮೇಲೆ ಇದೆ. ಈ ವಿಚಾರವನ್ನು ಇಂದಿನ ಜನತೆಗೆ ತಲುಪಿಸಿ, ಅವರಲ್ಲಿ ಧರ್ಮಪ್ರಜ್ಞೆಯನ್ನು ಜಾಗೃತಗೊಳಿಸಿ, ಈ ರಾಷ್ಟ್ರವನ್ನು, ಸನಾತನ ಧರ್ಮವನ್ನು ಸಂರಕ್ಷಿಸಲೆಂದೇ ಜನ್ಮತಾಳಿದ ವಿಶ್ವ ಹಿಂದೂ ಪರಿಷತ್, ಧರ್ಮೋ ರಕ್ಷತಿ ರಕ್ಷಿತಃ ಎಂಬ ಧೈಯಮಂತ್ರದೊಂದಿಗೆ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಈ ಯಶೋಗಾಥೆಯನ್ನು ಎಲ್ಲರಿಗೂ ತಿಳಿಸಿ, ನಮ್ಮ ಪೂರ್ವಜರ ಬಗ್ಗೆ, ಸನಾತನ ಧರ್ಮದ ಬಗ್ಗೆ ನೈಜ ಅರಿವನ್ನು ಮೂಡಿಸುವ ಸಲುವಾಗಿ ಬಜರಂಗದಳವು ಆಯೋಜಿಸಿರುವ ಈ ರಾಷ್ಟ್ರವ್ಯಾಪೀ ರಥಯಾತ್ರೆಯಲ್ಲಿ ಪ್ರತಿಯೊಬ್ಬ ಹಿಂದುವೂ ಭಾಗವಹಿಸಿ, ಕೈ ಜೋಡಿಸಿ, ತನು ಮನದೊಂದಿಗೆ ಸಮರ್ಪಿಸಿಕೊಳ್ಳಬೇಕು ಎಂದು ವಿನಂತಿಸಿದರು.

ಸನಾತನ ಧರ್ಮದ ಕುರಿತು ಇಂಡಿಯಾ ಒಕ್ಕೂಟದ ಹೇಳಿಕೆಗೆ ಪ್ರತ್ರಿಕಿಯಿಸಬೇಕಿಲ್ಲ: ಸನಾತನ ಧರ್ಮದ ಕುರಿತು ಇಂಡಿಯಾ ಒಕ್ಕೂಟದ ಹೇಳಿಕೆಯ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರೆಶ್ನೆಗೆ ಉತ್ತರಿಸಿ ಹಿಂದುತ್ವದ ಬಗ್ಗೆ ಅರಿವಿಲ್ಲದವರು ಈ ರೀತಿ ಮಾತನಾಡುತ್ತಾರೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಸರಿಯಲ್ಲ. ನಾವು ಹಿಂದು ಧರ್ಮವನ್ನ ಜಾಗೃತಿ ಮಾಡುವ ಕೆಲಸ ಮಾಡುತ್ತಾ ಇದ್ದೇವೆ. ಇಂತಹ ಹೇಳಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಬಜರಂಗದಳದ ರಾಷ್ಟ್ರೀಯ ಸಂಚಾಲಕ ಸೂರ್ಯನಾರಾಯಣ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ‌ ನೀಡಲು ಆಗ್ರಹಿಸಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.