ETV Bharat / state

ವರಮಹಾಲಕ್ಷ್ಮಿ ಹಬ್ಬ: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ; ಕೋಲಾರದಲ್ಲಿ ಹೂಗಳಿಗೆ ಭಾರಿ ಡಿಮ್ಯಾಂಡ್‌

author img

By ETV Bharat Karnataka Team

Published : Aug 24, 2023, 9:28 PM IST

ನಾಳೆ ವರಮಹಾಲಕ್ಷ್ಮಿ ಹಬ್ಬ. ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಜನರು ಪೂಜಾ ಸಾಮಗ್ರಿ, ಹೂವು ಮತ್ತು ಹಣ್ಣಿನ ಖರೀದಿಯಲ್ಲಿ ತೊಡಗಿದ್ದರು.

ವರಮಹಾಲಕ್ಷ್ಮೀ ಹಬ್ಬಕ್ಕೆ ಜೋರಾದ ಖರೀದಿ
ವರಮಹಾಲಕ್ಷ್ಮೀ ಹಬ್ಬಕ್ಕೆ ಜೋರಾದ ಖರೀದಿ

ವರಮಹಾಲಕ್ಷ್ಮಿ ಹಬ್ಬ: ಹೂವು, ಹಣ್ಣಿಗೆ ಹೆಚ್ಚಿದ ಬೇಡಿಕೆ

ಬೆಂಗಳೂರು: ಬೆಲೆ ಏರಿಕೆಯ ನಡುವೆಯೂ ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ನಗರದ ಕೆ.ಆರ್.ಮಾರುಕಟ್ಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು. ನೆರೆ ಜಿಲ್ಲೆ ಕೋಲಾರದಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿತ್ತು.

ಬೆಲೆ ಹೆಚ್ಚು ಕಾರಣಕ್ಕೆ ಇಂದೇ ಜನರು ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಇದರಿಂದಾಗಿ ನಗರದ ಮಾರುಕಟ್ಟೆಗಳೆಲ್ಲ ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದವು. ಬಿರುಬಿಸಿಲನ್ನೂ ಲೆಕ್ಕಿಸದೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ದಾಸರಹಳ್ಳಿ, ಮಡಿವಾಳ, ವಿಜಯನಗರ, ಜಯನಗರ, ಗಾಂಧಿ ಬಜಾರ್ ಸೇರಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿ, ಲಕ್ಷ್ಮೀಪೂಜೆಗೆ ಅಗತ್ಯವಿರುವ ಅಲಂಕಾರಿಕ ಸಾಮಗ್ರಿಗಳು ವ್ಯಾಪಾರವಾಗುತ್ತಿದ್ದವು. ಜನರು ತಾವರೆ, ಕೇದಗೆ, ಮಲ್ಲಿಗೆ ಹೂವು, ಮಳ್ಳೆ ಹೂವು, ಸುಗಂಧರಾಜ ಸೇರಿ ನಾನಾ ಸುಗಂಧಿತ ಹೂವುಗಳ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಾಳೆ, ಸೀಬೆ, ಸೇಬು, ಸೀತಾಫಲ, ಅನಾನಸ್, ದ್ರಾಕ್ಷಿ, ಆರೆಂಜ್ ಸೇರಿದಂತೆ ಇತ್ಯಾದಿ ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದರು. ಬಾಳೆ ಸಸಿ, ಮಾವಿನ ಸೊಪ್ಪು, ಗಾಜಿನ ಬಳೆ, ಬಾಗೀನ ಸಾಮಗ್ರಿ ವ್ಯಾಪಾರವಾಗುತ್ತಿತ್ತು. ನಗರದ ಮಾರುಕಟ್ಟೆಗಳಲ್ಲಿ ಲಕ್ಷ್ಮೀ ಮೂರ್ತಿಗಳಿಗೆ, ಅಲಂಕಾರಕ್ಕಾಗಿನ ಬಣ್ಣದ ಕಾಗದಗಳು, ಬಲೂನು, ಕೃತಕ ಹಾರ, ಹೂವುಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಲಕ್ಷ್ಮೀ ಮೂರ್ತಿಗಳು 2,500 ರೂ.ಯಿಂದ 5,000 ರೂ ವರೆಗೂ ಮಾರಾಟವಾಗುತ್ತಿದ್ದವು.

ಕೋಲಾರದಲ್ಲಿ ಹೂವಿಗೆ ಡಿಮ್ಯಾಂಡ್: ಕೋಲಾರ ನಗರದ ಹಳೇ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದ ಬಳಿ ಹೂವಿನ ಖರೀದಿ ಭರಾಟೆ ಜೋರಾಗಿತ್ತು. ಕೋಲಾರದ ಹೂವಿಗೆ ತಮಿಳುನಾಡು, ಅಂಧ್ರದಿಂದಲೂ ವರ್ತಕರು ಬಂದು ಖರೀದಿಸುತ್ತಿದ್ದರು. ವಿಶೇಷವಾಗಿ ತಿರುಪತಿಯಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಇದ್ದು, ಇದು ಹೂವು ಬೆಳೆಗಾರರಲ್ಲಿ ಖುಷಿ ತಂದಿದೆ. ಬಿಳಿ ಸೇವಂತಿಗೆ, ಸೇವಂತಿಗೆ, ಕಾಕಡ, ಮಲ್ಲಿಗೆ ಹೂವಿಗೆ ಉತ್ತಮ ಬೆಲೆ ಇದ್ದು ಮುಂದಿನ ತಿಂಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ಕೆ.ಜಿ ಕನಕಾಂಬರ 1500 ರೂ. ವರೆಗೂ ಮಾರಾಟವಾಗುತ್ತಿದ್ದು, ದಾಖಲೆಯ ದರ ಕಾಣುತ್ತಿದೆ. ಮಲ್ಲಿಗೆ 800 ರೂ, ರೋಜಾ 250, ಮಾರಿಗೋಲ್ಡ್ 220, ಚಾಕ್ಲೇಟ್ ಡೇರ್ 250, ಡೇರ್ 220 ರೂ.ಗೆ ಮಾರಾಟವಾಗುತ್ತಿವೆ.

ಮಳೆ ವ್ಯತ್ಯಯದಿಂದಾಗಿ ಬೆಂಗಳೂರಿನಲ್ಲಿ ಹೂವು, ಹಣ್ಣಿನ ಬೆಲೆ ಏರಿಕೆಯಾಗಿದೆ. ಬಾಳೆಹಣ್ಣು, ಮಲ್ಲಿಗೆ, ಕನಕಾಂಬರ ಸೇರಿ ಹೂವುಗಳ ಉತ್ಪಾದನೆ, ಮಾರುಕಟ್ಟೆಗೆ ಪೂರೈಕೆ ಕುಸಿತವಾಗಿ ಬೆಲೆ ಹೆಚ್ಚಳವಾಗಿದೆ. ಒಂದು ಕೆ.ಜಿ. ಏಲಕ್ಕಿ ಬಾಳೆಹಣ್ಣಿನ ಬೆಲೆ 100 ರೂ ಯಿಂದ 120 ರೂ ಇದೆ.

ಹಣ್ಣಿನ ದರ (ಕೆ.ಜಿಗೆ):

  • ಏಲಕ್ಕಿ ಬಾಳೆ 100 ರಿಂದ 120 ರೂ
  • ಪಚ್ಚಬಾಳೆ 40 ರಿಂದ 45 ರೂ
  • ಸೀತಾಫಲ 70 ರಿಂದ 80 ರೂ
  • ದಾಳಿಂಬೆ 150 ರಿಂದ 180 ರೂ
  • ಸೀಡ್‌ಲೆಸ್ ದ್ರಾಕ್ಷಿ 200 ರಿಂದ 250 ರೂ
  • ಮೂಸಂಬಿ 70 ರಿಂದ 80 ರೂ
  • ಗ್ರೀನ್ ಸೇಬು 200 ರಿಂದ 250 ರೂ
  • ಅನಾನಸ್ 50 ರಿಂದ 60 ರೂ

ಹೂವು ದರ (ಕೆ.ಜಿ):

  • ಮಲ್ಲಿಗೆ 600 ರಿಂದ 1000 ರೂ
  • ಮಳ್ಳೆ 600 ರಿಂದ 700 ರೂ
  • ಕನಕಾಂಬರ 1200 ರಿಂದ 1,500 ರೂ
  • ಸೇವಂತಿಗೆ 250 ರಿಂದ 300 ರೂ
  • ಗುಲಾಬಿ 250 ರಿಂದ 300 ರೂ
  • ಕಣಿಗಲ 300 ರಿಂದ 350 ರೂ
  • ಸುಗಂದರಾಜ 250 ರಿಂದ 300 ರೂ

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ: ಸರ್ಕಾರದಿಂದ ಮಹಿಳೆಯರಿಗೆ ಅರಿಶಿನ, ಕುಂಕುಮ, ಬಳೆ ಉಡುಗೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.