ETV Bharat / state

ಶೀಘ್ರದಲ್ಲೇ ಬೆಂಗಳೂರು-ಮುಂಬೈ, ಬೆಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ರೈಲು: ಸಚಿವ ಸೋಮಣ್ಣ

author img

By

Published : Mar 29, 2023, 3:38 PM IST

ಧರ್ಮಸ್ಥಳದಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸಲು ಪೂರಕ ಕೆಲಸ ಆರಂಭಗೊಂಡಿದೆ ಎಂದು ಸಚಿವ ವಿ ಸೋಮಣ್ಣ ಮಾಹಿತಿ ನೀಡಿದರು.

Minister V Somanna
ವಸತಿ ಸಚಿವ ವಿ ಸೋಮಣ್ಣ

ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದ್ದು, ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಈಗ ಅದೇ ಮಾದರಿಯಲ್ಲಿ ಬೆಂಗಳೂರಿನಿಂದ ವಾಣಿಜ್ಯ ನಗರಿ ಮುಂಬೈಗೆ ಮತ್ತು ಮುತ್ತಿನ ನಗರಿ ಹೈದರಾಬಾದ್​ಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ ಎಂದು ವಿವರಿಸಿದರು.

ಈ ಸಂಬಂಧ ಕೇಂದ್ರ ರೈಲ್ವೇ ಸಚಿವರು ಮತ್ತು ರೈಲ್ವೇ ಕಾರ್ಯದರ್ಶಿಗಳಿಗೆ ರಾಜ್ಯ ಸರ್ಕಾರ ಪತ್ರ ಬರೆದಿದ್ದು, ವಂದೇ ಭಾರತ್ ರೈಲನ್ನು ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಹೈದರಾಬಾದ್ ನಡುವೆ ಸಂಚಾರಕ್ಕೆ ಬಿಡಲು ಉತ್ಸುಕತೆ ತೋರಿದ್ದಾರೆ. ಬೆಂಗಳೂರಿನಿಂದ ವಾಣಿಜ್ಯ ನಗರಿ ಮುಂಬೈ ಮತ್ತು ಬೆಂಗಳೂರಿನಿಂದ ಮುತ್ತಿನ ನಗರಿ ಹೈದರಾಬಾದ್​ಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದರೆ ರಾಜ್ಯದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

ಎರಡು ತಿಂಗಳಲ್ಲಿ ಒಂದು ಲಕ್ಷ ಮನೆ: ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 1 ಲಕ್ಷ ಮನೆಗಳನ್ನು ಜನರಿಗೆ ಒದಗಿಸಲಾಗುವುದು. ಕಾಯಕ ಯೋಗಿ ಮತ್ತು ನೆಮ್ಮದಿಯ ನೆಲೆ, ಅಭಿವೃದ್ಧಿಯ ಬಲೆ ಪುಸ್ತಕಗಳನ್ನು ಬಿಡುಗಡೆ ಮಾಡಿದರಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮ್ಮ ಇಲಾಖೆಯ ವತಿಯಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜೀವ್ ಗಾಂಧಿ ವಸತಿ ನಿಗಮದಡಿ ಐದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಜನರಿಗೆ ಮಂಜೂರು ಮಾಡಿದ್ದು, ಈ ಪೈಕಿ ಮೂರೂವರೆ ಲಕ್ಷ ಮನೆಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದ ಸಚಿವರು, ಇನ್ನೂ ಒಂದು ಲಕ್ಷ ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದ್ದು ಇನ್ನೆರಡು ತಿಂಗಳಲ್ಲಿ ಜನರಿಗೆ ವಿತರಣೆಯಾಗಲಿದೆ ಎಂದರು.

ಉಳಿದಂತೆ ಎರಡು ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿದ್ದು, ಒಟ್ಟು ಏಳು ಲಕ್ಷ ಮನೆಗಳನ್ನು ಜನರಿಗೆ ನೀಡಿದಂತಾಗಲಿದೆ. ಇದೇ ರೀತಿ ಆರ್ಥಿಕ ದುರ್ಬಲ ವರ್ಗದವರಿಗೆ ನೀಡಲಾಗುತ್ತಿರುವ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಬಹುತೇಕ ಪೂರ್ಣಗೊಳ್ಳುತ್ತಾ ಬಂದಿದ್ದು, ಅದಾಗಲೇ ಮನೆಗಳ ವಿತರಣೆ ಕಾರ್ಯ ಆರಂಭವಾಗಿದೆ.
ನಾವು ಅಧಿಕಾರಕ್ಕೆ ಬಂದಾಗ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಆದರೆ ನಾವು ಬಂದ ನಂತರ ಈ ಯೋಜನೆಗೆ ಚಾಲನೆ ನೀಡಿದ್ದಲ್ಲದೆ ಇದನ್ನು ಪೂರ್ಣಗೊಳಿಸುವ ಹಂತಕ್ಕೆ ತಂದಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಸತಿ ಕ್ರಾಂತಿ ಮಾಡಲಾಗಿದೆ ಎಂದು ಬಣ್ಣಿಸಿದ ಅವರು, ಬೆಂಗಳೂರು ಹೊರತು ಪಡಿಸಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಆರು ಸಾವಿರ ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಜನರಿಗೆ ವಿತರಿಸಲಾಗಿದೆ. ಈ ಮಧ್ಯೆ ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಆಸ್ತಿ ಹಂಚಿಕೆ ಪತ್ರ ನೀಡಲಾಗಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ಎರಡು ಸಾವಿರ ರೂಪಾಯಿಗಳಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಿ ಈ ಹಕ್ಕು ಪತ್ರ ಮಾಡಿಕೊಡಲಾಗಿದೆ. ಈ ಪೈಕಿ 1.15 ಲಕ್ಷ ಜನರಿಗೆ ಈಗಾಗಲೇ ನೋಂದಣಿ ಮಾಡಿಸಿಕೊಡಲಾಗಿದ್ದು, ಉಳಿದ ಆಸ್ತಿಗಳನ್ನು ಸದ್ಯದಲ್ಲೇ ನೋಂದಣಿ ಮಾಡಿಸಿಕೊಡುವುದಾಗಿ ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಕಾರ್ಯ ನಡೆದಿದ್ದು, ಇನ್ನೆರಡು ತಿಂಗಳಲ್ಲಿ ಬಿಜಾಪುರ ಮತ್ತು ನಾಲ್ಕು ತಿಂಗಳಲ್ಲಿ ಹಾಸನ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ. ಶಿವಮೊಗ್ಗ ವಿಮಾನ ನಿಲ್ದಾಣ ಕಳೆದ ತಿಂಗಳ ಅಂತ್ಯದಲ್ಲಿ ಲೋಕಾರ್ಪಣೆಗೊಂಡಿದ್ದು, ಸದ್ಯದಲ್ಲೇ ಇಂಡಿಗೋ ವಿಮಾನ ಅಲ್ಲಿಂದ ಕಾರ್ಯಾರಂಭ ಮಾಡಲಿದೆ.

ಮೈಸೂರು ವಿಮಾನ ನಿಲ್ದಾಣದಿಂದ ಬೋಯಿಂಗ್ ವಿಮಾನ ಕಾರ್ಯಾರಂಭ ಮಾಡಲಿದೆ ಎಂದ ಅವರು, ಧರ್ಮಸ್ಥಳದಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ನಿರ್ಧಾರಕ್ಕೆ ಪೂರಕವಾಗಿ ಕೆಲಸ ಆರಂಭವಾಗಿದೆ. ಧರ್ಮಸ್ಥಳದಿಂದ ಎಂಟು ಕಿಲೋಮೀಟರ್ ದೂರದಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಲಾಗಿದ್ದು, ಸದ್ಯದಲ್ಲೇ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸುವವರಿಗೆ ವಿಮಾನ ಸೌಲಭ್ಯ ಲಭ್ಯವಾಗಲಿದೆ. ಉಪನಗರ ರೈಲ್ವೆಯಿಂದ ಹಿಡಿದು ಹಲವು ಹಂತದಲ್ಲಿ ರೈಲ್ವೇ ಯೋಜನೆಗಳು ಜಾರಿಗೊಂಡಿದ್ದು, ಆ ಮೂಲಕ ಬಿಜೆಪಿ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದೆ ಎಂದರು.

ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆ: ಈ ಮಧ್ಯೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಸೋಮಣ್ಣ ಅವರು, ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಎದುರಿಸಿ ಗೆಲ್ಲುತ್ತೇವೆ. ಮರಳಿ ಅಧಿಕಾರ ಹಿಡಿಯುತ್ತೇವೆ. ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ ಮೇಲೆ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯವನ್ನು ಮುನ್ನಡೆಸುವ ಶಕ್ತಿ ಅವರಲ್ಲಿದೆ ಎಂದು ಹೇಳಿದರು.

ಬಿಜೆಪಿ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜಕಾರಣದಲ್ಲಿ ನಮಗೆ ಇಷ್ಟವೋ, ಕಷ್ಟವೋ ಹಲವು ಬೆಳವಣಿಗೆಗಳು ನಡೆಯುತ್ತವೆ. ಅದನ್ನು ಜೀರ್ಣಿಸಿಕೊಂಡು ಮುಂದುವರಿಯುವುದು ಅನಿವಾರ್ಯ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ನುಡಿದರು. ಪಕ್ಷದ ವರಿಷ್ಠರಾದ ಅಮಿತ್ ಶಾ ಅವರು ಏಕಕಾಲದಲ್ಲಿ ನಿಮ್ಮನ್ನೂ ಸಂತೈಸುತ್ತಾರೆ, ಅತ್ತ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನೂ ಸಂತೈಸುತ್ತಾರೆ. ಇದನ್ನು ಹೇಗೆ ಅರ್ಥ ಮಾಡಿಕೊಳಳುತ್ತೀರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಮಿತ್ ಶಾ ಅವರು ನಮ್ಮ ರಾಷ್ಟ್ರೀಯ ನಾಯಕರು. ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ನಡೆಯುತ್ತಾರೆ ಎಂದರು.

ಇದನ್ನೂ ಓದಿ: 80 ವರ್ಷ ಮೇಲ್ಪಟ್ಟವರಿಗೆ & ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.