ETV Bharat / state

ತಿಂಗಳೊಳಗೆ ಕಾನೂನು ಮಾಪಕ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ: ಸಚಿವ ಕೆ ಎಚ್​ ಮುನಿಯಪ್ಪ

author img

By ETV Bharat Karnataka Team

Published : Sep 13, 2023, 4:03 PM IST

ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತಿಂಗಳೊಳಗೆ ಭರ್ತಿ ಮಾಡಲಾಗುವುದು ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

ಸಚಿವ ಮುನಿಯಪ್ಪ
ಸಚಿವ ಮುನಿಯಪ್ಪ

ಬೆಂಗಳೂರು: ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಶೀಘ್ರ ಖಾಲಿಯಿರುವ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ ಎಚ್​ ಮುನಿಯಪ್ಪ ಹೇಳಿದ್ದಾರೆ.

ವಿಕಾಸೌಧದಲ್ಲಿ ಇಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಒಟ್ಟು 500 ಹುದ್ದೆಗಳಲ್ಲಿ 200 ಜನರು ಮಾತ್ರ ಕಾರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 300 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಕೆಪಿಎಸ್​ಸಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಿಂಗಳೊಳಗೆ ನೇಮಕ ಮಾಡಿಕೊಳ್ಳಲಾಗುವುದು. ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿಯಮಾನುಸಾರ ಬಡ್ತಿ ನೀಡಲಾಗುವುದು ಎಂದರು.

ದೈನಂದಿನ ವ್ಯವಹಾರದಲ್ಲಿನ ತೂಕ ಮತ್ತು ಅಳತೆಯಲ್ಲಿ ನಿಖರತೆಯನ್ನು ಕಾಪಾಡುವ ಮೂಲಕ ಗ್ರಾಹಕರ ಹಿತರಕ್ಷಣೆ ಮಾಡುತ್ತಿರುವ ಕಾನೂನು ಮಾಪನಶಾಸ್ತ್ರ ಇಲಾಖೆಯ ಸದೃಢಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಇಲಾಖೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.

500 ಕೋಟಿ ರಾಜಸ್ವ ಸಂಗ್ರಹ ಗುರಿ: ಕಾನೂನು ಮಾಪನಶಾಸ್ತ್ರ ಇಲಾಖೆಯ ಮೂಲಕ 100 ಕೋಟಿ ರಾಜಸ್ವ ಸಂಗ್ರಹಿಸಲಾಗುತ್ತಿದೆ. ಪ್ರಸಕ್ತ ವರ್ಷ 500 ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ ಎಂದು ಸಚಿವ ಮುನಿಯಪ್ಪ ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಗಳು, ಪೆಟ್ರೋಲ್​ ಬಂಕ್ಸ್​, ವೇ ಬ್ರಿಡ್ಜ್​, ತಾರಾ ಹೋಟೆಲ್ಸ್​, ಟರ್ಮಿನಲ್ಸ್‌, FCI, KFCSC, CWC, SWC, Airports, APMC, ಆಭರಣದ ಅಂಗಡಿಗಳು ಸೇರಿದಂತೆ ಇನ್ನಿತರ ದೈನಂದಿನ ವ್ಯವಹಾರದಲ್ಲಿ ಉಪಯೋಗಿಸುತ್ತಿರುವ ತೂಕ ಮತ್ತು ನಿಖರತೆಯನ್ನು ಕಾಪಾಡುವ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಹಾಗೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಸರಿಸುಮಾರು ಸಾವಿರ ಕೋಟಿ ರಾಜಸ್ವವನ್ನು ಸಂಗ್ರಹಿಸಲು ಸಭೆಯಲ್ಲಿ ಸೂಚಿಸಿದ್ದೇನೆ ಎಂದರು.

ಅತೀ ಹೆಚ್ಚು ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸಲು ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ವಿವರಿಸದ ಸಚಿವ ಮುನಿಯಪ್ಪ, ಕಾನೂನು ಮಾಪನಶಾಸ್ತ್ರ ಇಲಾಖೆಯು ಈ ಮೊದಲು 137 ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ 32 ಸ್ವಂತ ಕಚೇರಿಗಳನ್ನು ಹೊಂದಿದೆ. ಇನ್ನುಳಿದ 45 ಕಚೇರಿಗಳಿಗೂ ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಸಿಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇ-ಮಾಪನ ತಂತ್ರಾಂಶ ಮೇಲ್ದರ್ಜೇಗೇರಿಸಲು ಕ್ರಮ: ಇಲಾಖೆಯು ಇ-ಮಾಪನ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಪ್ರಪ್ರಥಮವಾಗಿರುತ್ತದೆ. ಇ-ಮಾಪನ ತಂತ್ರಂಶಾವನ್ನು ಮತ್ತಷ್ಟು ಮೇಲ್ದರ್ಜೇಗೇರಿಸಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಮುನಿಯಪ್ಪ ಅವರು ತಿಳಿಸಿದರು. ಇಲಾಖೆಯು ಸುಗಮವಾಗಿ ಕೆಲಸ ಕಾರ್ಯನಿರ್ವಹಿಸಲು ಅಗತ್ಯವಿರುವ ಲ್ಯಾಪ್​ ಟಾಪ್ಗಳನ್ನು ಹಾಗೂ ಸರ್ಕಾರಿ ವಾಹನಗಳನ್ನು ಒದಗಿಸಲಾಗುವುದು ಎಂದರು. ಇಲಾಖೆಯನ್ನು ಪುನರ್​ ರಚಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ವೃಂದ ಮತ್ತು ನೇಮಕಾತಿಯನ್ನು ಮಾಡುವ ಮೂಲಕ ಇ-ಇಲಾಖೆಯನ್ನು ಬಲವರ್ದನೆಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಮಾಧ್ಯಮಗೋಷ್ಟಿಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿ ಪ್ರಕಾಶ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಂಟ್ರೋಲರ್‌ ಅನಿತಾಲಕ್ಷ್ಮೀ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಸರ್ಕಾರಕ್ಕೆ ಧಮ್ಮು, ತಾಕತ್ತು ಎರಡೂ ಇಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.