ETV Bharat / state

ಅಮಿತ್ ಶಾ ಜೊತೆ ಮಾತುಕತೆ ಫಲಪ್ರದ, ಎಲ್ಲಾ ಸಮಸ್ಯೆಗಳು ಸುಖಾಂತ್ಯ: ವಿ.ಸೋಮಣ್ಣ

author img

By ETV Bharat Karnataka Team

Published : Jan 15, 2024, 12:26 PM IST

Updated : Jan 15, 2024, 1:28 PM IST

ಅಮಿತ್​ ಶಾ ಜೊತೆಗಿನ ಮಾತುಕತೆಯಲ್ಲಿ ಪುತ್ರನಿಗೆ ಯಾವುದೇ ಸ್ಥಾನಮಾನದ ಬೇಡಿಕೆ ಇಟ್ಟಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

Former Minister V Somanna
ಮಾಜಿ ಸಚಿವ ವಿ ಸೋಮಣ್ಣ

ವಿ.ಸೋಮಣ್ಣ ಹೇಳಿಕೆ

ಬೆಂಗಳೂರು: "ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ ನಂತರದ ಘಟನೆಗಳಿಂದಾದ ಎಲ್ಲಾ ಸಮಸ್ಯೆಗಳೂ ಈಗ ಸುಖಾಂತ್ಯ ಕಂಡಿವೆ. ರಾಜ್ಯಸಭೆ ಸ್ಥಾನ ಕೇಳಿರುವುದು ನಿಜ. ಮುಂದೆ ಏನೆಲ್ಲಾ ಜವಾಬ್ದಾರಿ ಕೊಡುತ್ತಾರೋ ನೋಡಬೇಕು" ಎಂದು ವಿ.ಸೋಮಣ್ಣ ಹೇಳಿದರು.

ವಿಜಯನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೆಹಲಿಯಲ್ಲಿ ನಮ್ಮ ನಾಯಕರ ಭೇಟಿಯ ಜೊತೆಗೆ ದೇವಸ್ಥಾನಗಳನ್ನೂ ನೋಡಿಕೊಂಡು ಬಂದೆ. ಈ ಸಲದ ದೆಹಲಿ ಭೇಟಿ ನನಗೆ ದೊಡ್ಡ ಅನುಭವ ಕೊಟ್ಟಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌.ನಡ್ಡಾ ಅವರ ಭೇಟಿ ಮಾಡಿದ್ದೇನೆ" ಎಂದರು.

"ಯಾವುದಾದರೂ ಮೂರು‌ ಲೋಕಸಭೆ ಕ್ಷೇತ್ರಗಳ ಜವಾಬ್ದಾರಿ ಕೊಡಿ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿದ್ದೇನೆ. ಇದರ ಜೊತೆಗೆ ರಾಜ್ಯಸಭೆ ಸ್ಥಾನ ಕೊಡಿ ಅಂತ ಕೇಳಿದ್ದೇನೆ. ಅಮಿತ್ ಶಾ ಅರ್ಧ ಗಂಟೆ ಕಾಲ‌ ಮಾತನಾಡಿದರು. ನನಗೆ 73 ವರ್ಷ, ಆರೋಗ್ಯವಾಗಿದ್ದೇನೆ. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು. ಈ ತಿಂಗಳ ಕೊನೆಗೆ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು, ಎಲ್ಲವೂ ಬಗೆಹರಿಯಲಿದೆ. ಶಾ ಅವರ ಬಳಿ ನನ್ನ ಮಗನಿಗೆ ಯಾವುದೇ ಸ್ಥಾನವನ್ನು ನಾನು ಕೇಳಿಲ್ಲ" ಎಂದು ತಿಳಿಸಿದರು.

"ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನ ಅರುಣ್ ಸೋಮಣ್ಣ ಕೈತಪ್ಪಿದೆ ಎನ್ನುವ ಮಾತು ಸರಿಯಲ್ಲ. ನಾನು ಯಾರ ಬಳಿಯೂ ಮಗನಿಗೆ ಸ್ಥಾನಮಾನ ಕೇಳಲಿಲ್ಲ. ಸಿ.ಕೆ.ರಾಮಮೂರ್ತಿಯವರನ್ನು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷನಾಗಿ ಮಾಡಿದ್ದಾರೆ. ಹಳೆಯದೆಲ್ಲದರ ಪೋಸ್ಟ್ ಮಾರ್ಟಂ ಈಗ ಬೇಡ, ಸಿ.ಕೆ.ರಾಮಮೂರ್ತಿಯೂ ಒಳ್ಳೆಯವನೇ, ನಮ್ಮ ಹುಡುಗನೇ. ಎರಡು ಸಲ ಕಾರ್ಪೊರೇಟರ್ ಆಗಿ, ಈಗ ಶಾಸಕ‌ನಾಗಿದ್ದಾನೆ. ಅವನಿಗೂ ಅರ್ಹತೆ ಇದೆ. ಅರ್ಹತೆ ಇರುವವರಿಗೆ ಯಾರಿಗೆ ಬೇಕಾದರೂ ಕೊಡಲಿ. ಆದರೆ ಪಕ್ಷ ವಿರೋಧಿ ಕೆಲಸ ಮಾಡಿದವರಿಗೆ ಬೇಡ. ಹಾಗಾಗಿ ರಾಮಮೂರ್ತಿ ಅಂಥವರನ್ನು ರಾಜ್ಯಾಧ್ಯಕ್ಷರು ಜಿಲ್ಲಾಧ್ಯಕ್ಷ‌ ಮಾಡಿರೋದು ಸರಿ ಇದೆ" ಎಂದರು‌.

ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ನಯವಾಗಿಯೇ ವಿರೋಧ ವ್ಯಕ್ತಪಡಿಸಿದ ಸೋಮಣ್ಣ, "ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ನಿಷ್ಕಲ್ಮಷ ಭಾವನೆ ಇದೆ. ಏನು ಬಾಯಿಗೆ ಬರುತ್ತೋ‌ ಅದನ್ನು ಅವರು ನನ್ನ ಹಾಗೆ ಮಾತಾಡಿ ಬಿಡುತ್ತಾರೆ. ಹಿಂದೆಮುಂದೆ ನೋಡುವುದೇ ಇಲ್ಲ. ಆದರೆ ಸಿದ್ದರಾಮಯ್ಯ ಕೇವಲ‌ ಸಿದ್ದರಾಮಯ್ಯ ಅಲ್ಲ, ಈ ರಾಜ್ಯದ ಮುಖ್ಯಮಂತ್ರಿ. ಹಾಗಾಗಿ ಸಿದ್ದರಾಮಯ್ಯ ಏನೋ ಮಾತಾಡ್ತಾರೆ ಅಂತ ನಾವ್ಯಾಕೆ ಚಿಕ್ಕವರಾಗಬೇಕು? ನಾವು ಚಿಕ್ಕವರಾಗುವುದು ಬೇಡ. ಸಿದ್ದರಾಮಯ್ಯ ಏನು ಮಾತಾಡ್ತಾರೆ ಅನ್ನೋದು ಅವರ ವಿವೇಚನೆಗೆ ಬಿಟ್ಟಿದ್ದು. ಅನಂತ್ ಕುಮಾರ್ ಹೆಗಡೆ ಸುಸಂಸ್ಕೃತ ಕುಟುಂಬದಿಂದ ಬಂದವರು. ನಾವು ನಮ್ಮ ಭಾಷೆ ಹಿಡಿತದಲ್ಲಿ ಇಟ್ಕೋಬೇಕಾಗುತ್ತದೆ. ಅನಂತ್ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕವಾಗಿ ನನಗೆ ಸ್ವಲ್ಪ ಬೇಸರ ತರಿಸಿದೆ. ಸಿದ್ದರಾಮಯ್ಯ ಏಳು ಕೋಟಿ ಜನರ ಪ್ರತಿನಿಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷೆ ಏನು?, ಹೇಗೆ ಅಂತ‌ ನಮಗೆ ಬೇಡ. ಅವರು ಹೇಗೆ ಸಿಎಂ ಆದರು ಅನ್ನೋದೂ ನಮಗೆ ಬೇಡ. ಸಿದ್ದರಾಮಯ್ಯ ನಡವಳಿಕೆ ಹೇಗಿರಬೇಕು‌ ಅನ್ನೋದಕ್ಕಿಂತ ನಮ್ಮ ನಡವಳಿಕೆ ವಿಭಿನ್ನವಾಗಿರಬೇಕು ಅಷ್ಟೇ" ಎಂದರು.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ವಿಚಾರದ ಕುರಿತು ಮಾತನಾಡಿದ ಸೋಮಣ್ಣ, "ಈ ದೇಶದ ಇತಿಹಾಸ, ಸಂಸ್ಕೃತಿ ವಿಶ್ವಕ್ಕೆ ಪರಿಚಯಿಸುವ ಜಾಗ ಅದು. ನಾನು ಅಥವಾ ಇನ್ನೊಬ್ಬರು ಹೋಗೋದು ಬೇರೆ ವಿಚಾರ. ಇಡೀ ದೇಶಕ್ಕೆ ಅದರ ಹೆಗ್ಗಳಿಕೆ ಸಲ್ಲಲಿದೆ. ರಾಮ ಅನ್ನೋದು ನಂಬಿಕೆ, ದೇವರು. ಅದರಲ್ಲಿ ಪ್ರಧಾನಿ ಯಶಸ್ಸಾಗಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: ವಿ.ಸೋಮಣ್ಣರಿಗೆ ರಾಜ್ಯಸಭಾ ಟಿಕೆಟ್ ನೀಡಿದರೆ ಸ್ವಾಗತ: ಆರ್​.ಅಶೋಕ್​

Last Updated : Jan 15, 2024, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.