ETV Bharat / state

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದೇನೆ: ವಿ. ಸೋಮಣ್ಣ

author img

By

Published : Jun 23, 2023, 6:00 PM IST

ರಾಜ್ಯದ ಯಾವ ನಾಯಕರ ಜೊತೆಗೂ ನಾನು ಮಾತಾಡಿಲ್ಲ. ಇವರ ಕೈಯಲ್ಲಿ ಆಗದ ಕೆಲಸವನ್ನು ನಾನು ಮಾಡಿದ್ದೇನೆ. ಪ್ರಾಣದ ಹಂಗು ತೊರೆದು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಸೋಲಿನ ಬಗ್ಗೆ ಯಾರಿಗೆ ತಿಳಿಸಬೇಕೋ ಅವರಿಗೆ ತಿಳಿಸಿದ್ದೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.

i-have-demanded-to-give-bjp-state-president-post-v-somanna
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದೇನೆ : ವಿ ಸೋಮಣ್ಣ

ಬೆಂಗಳೂರು: ನಾನು ಚುನಾವಣೆಯಲ್ಲಿ ಸೋತಿರಬಹುದು, ಆದರೆ ನನಗೆ ಕೊಟ್ಟ ಟಾಸ್ಕ್​ನಲ್ಲಿ ಗೆದ್ದಿದ್ದೇನೆ. ಹಾಗಾಗಿ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಹೈಕಮಾಂಡ್​​ಗೆ ಮನವಿ ಮಾಡಿದ್ದೇನೆ. ನೂರು ದಿನಗಳ ಕಾಲ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಪಕ್ಷದ ಸಂಘಟನೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂದು ತೋರಿಸಿ ಕೊಡುತ್ತೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.

ವಿಜಯನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ನಾನು ದೆಹಲಿಗೆ ಹೋಗಿ ಬಂದಿದ್ದೇನೆ. ವರಿಷ್ಠರ ಭೇಟಿ ಮಾಡಿ ಕೆಲ ಸಂಗತಿಗಳ ಬಗ್ಗೆ ಹೇಳಿದ್ದೇನೆ. ನಾನು 45 ವರ್ಷ ರಾಜಕಾರಣ ಮಾಡಿದ ಅನುಭವದ ಆಧಾರದ ಮೇಲೆ ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿದ್ದು, ಪತ್ರವನ್ನೂ ಬರೆದಿದ್ದೇನೆ. ಪಕ್ಷ ಕೊಟ್ಟ ಎಲ್ಲಾ ಟಾಸ್ಕ್​ಗಳನ್ನು ಸ್ವೀಕಾರ ಮಾಡಿ ಅತ್ಯಂತ ಶ್ರಮಪಟ್ಟು ನಿರ್ವಹಿಸಿದ್ದೇನೆ. ಮೊನ್ನೆಯ ಚುನಾವಣೆಯಲ್ಲಿ ಸಾಕಷ್ಟು ಹಿನ್ನಡೆ ಆಗಿದೆ, ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ನನಗೆ ಇದೆಯಾ ಎಂದು ಕೆಲವರು ಮಾತಾಡಿಕೊಳ್ಳಬಹುದು. ಆದರೆ ನಾನು ಪಕ್ಷದಲ್ಲಿ ಹಿರಿಯನಿದ್ದೇನೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ದೊಡ್ಡವರ ರೀತಿಯೇ ನನ್ನದೂ ಒಂದು ತೆರೆದ ಪುಸ್ತಕ ಎಂದು ಬಿಎಸ್​ ಯಡಿಯೂರಪ್ಪ ರೀತಿಯ ರಾಜಕಾರಣಿ ಎಂದು ತಮ್ಮ ಹಿರಿತನವನ್ನು ಸಮರ್ಥಿಸಿಕೊಂಡಿದ್ದಾರೆ.

43 ದಿನಗಳ ಕಾಲ 50 ಡಿಗ್ರಿ ಬಿಸಲಲ್ಲಿ ಓಡಾಡಿ ಉಪ ಚುನಾವಣೆಗಳನ್ನು ಗೆಲ್ಲಿಸಿದ್ದೇನೆ. ಪಕ್ಷದ ಬಹುತೇಕ ನಾಯಕರಿಗೆ ನಾನು ವಿನಂತಿ ಮಾಡಿದ್ದೇನೆ. ನನಗೂ ಒಂದೂವರೆ ತಿಂಗಳಿಂದ ಯಾವುದೇ ಕೆಲಸ ಇಲ್ಲ. ನನಗೂ ಒಂದು ಅವಕಾಶ ಮಾಡಿಕೊಡಿ, ನೂರು ದಿನಗಳ ಕಾಲ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ. ಪಕ್ಷದ ಸಂಘಟನೆಯನ್ನು ಯಾವ ರೀತಿ ಮಾಡಬಹುದು ಎಂದು ತೋರಿಸಿಕೊಡುತ್ತೇನೆ. ದೆಹಲಿಗೆ ತೆರಳಿ ಪ್ರಧಾನಿ ಮೋದಿ ಹೊರತುಪಡಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸೇರಿ ಎಲ್ಲರನ್ನೂ ಭೇಟಿಯಾಗಿ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಮನವಿ ಮಾಡಿದ್ದೇನೆ ಎಂದು ಹೇಳಿದರು.

'ಕನಕಪುರದಲ್ಲಿ ಅಶೋಕ್ ರಿಸ್ಕ್ ತಗೊಂಡಿಲ್ಲ': ರಾಜ್ಯಾಧ್ಯಕ್ಷ ಸ್ಥಾನದ ರೇಸ್​​ನಲ್ಲಿರುವ ಅಶೋಕ್​​ಗೆ ಟಾಂಗ್ ಕೊಟ್ಟ ಸೋಮಣ್ಣ, ನಾನು ಚುನಾವಣೆಗೆ ಮುನ್ನವೇ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ. ನನಗೆ ನೂರು ದಿನ ಕೊಡಲಿ, ನಾನೇನು ಹೇಡಿ ಅಲ್ಲ. ಯಾವುದೇ ಸವಾಲು ತೆಗೆದುಕೊಳ್ಳುವ ಹುದ್ದೆಯಾದರೂ ಚಾಲೆಂಜ್ ಆಗಿ ಸ್ವೀಕರಿಸುತ್ತೇನೆ. ಅಶೋಕ್ ರಾಜ್ಯಾಧ್ಯಕ್ಷರಾದರೆ ಬೇಡ ಅಂತೀವಾ? ನನ್ನದೇ ಒಂದು ಕಾರ್ಯವೈಖರಿ, ನಾನು ತೆಗೆದುಕೊಂಡಿರುವ ರಿಸ್ಕ್ ಇವರು ಯಾರೂ ತಗೊಂಡಿಲ್ಲ. ಕನಕಪುರದಲ್ಲಿ ಅಶೋಕ್ ರಿಸ್ಕ್ ತಗೊಂಡಿಲ್ಲ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಎಲ್ಲರಿಗಿಂತ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ವಿರುದ್ಧ ಚುನಾವಣೆಗೆ ನಿಲ್ಲುವುದಕ್ಕೆ ನನಗೇನು ಹುಚ್ಚು ಹಿಡಿದಿತ್ತಾ? ಎಂದರು.

ನಾನು ರಾಜ್ಯಾಧ್ಯಕ್ಷನಾಗಲು ಯಡಿಯೂರಪ್ಪನವರೂ ಒಪ್ಪಿಕೊಳ್ಳಬೇಕು, ಬೇರೆಯವರೂ ಒಪ್ಪಬೇಕು. ನಾವು ಇಷ್ಟು ದಿನ ಯಡಿಯೂರಪ್ಪ ಹೇಳಿದ್ದನ್ನು ಕೇಳಲಿಲ್ಲವಾ? ಚುನಾವಣೆ ಮುಗಿದ ನಂತರ ಅವರು ನನಗೆ ಒಂದು ಫೋನ್​ ಕಾಲ್​​ ಕೂಡ ಮಾಡಿಲ್ಲ ಎಂದು ಯಡಿಯೂರಪ್ಪ ಬಗ್ಗೆ ಸೋಮಣ್ಣ ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮುತ್ಸದಿ ರಾಜಕಾರಣಿ, ಗ್ಯಾರಂಟಿಗಳ ಬಗ್ಗೆ ಅವರು ಚೆನ್ನಾಗಿ ಹೇಳಿದ್ದಾರೆ. ನೀವು 10 ಕೆಜಿ ಅಂದಾಗ ಕೇಂದ್ರ ಸರ್ಕಾರದ ಬಗ್ಗೆ ಹೇಳಿಯೇ ಇರಲಿಲ್ಲ 10 ಕೆಜಿ ಅಕ್ಕಿ ಕೊಡುವುದು ನಿಮ್ಮ ಜವಾಬ್ದಾರಿ, ನೀವು ಕೊಡಬೇಕು. ಇನ್ನೂ 10-12 ದಿನ ಆಗಲಿ, ನಾನು ಇದರ‌ ಬಗ್ಗೆ ನಮ್ಮದೇ ಆದ ಭಾಷೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.