ETV Bharat / state

COVID Vaccination: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಚಿವ ಸದಾನಂದ ಗೌಡರಿಂದ ಸಿಕ್ತು ಸಿಹಿ ಸುದ್ದಿ

author img

By

Published : Jun 29, 2021, 12:59 PM IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೋವಿಡ್ ಸವಾಲನ್ನು ನಿರ್ವಹಿಸಿದ ರೀತಿಯ ಕುರಿತು ಬಿಜೆಪಿ ಸಂಘಟಿಸಿದ್ದ ರಾಜ್ಯಮಟ್ಟದ ಇ-ಚಿಂತನ ಶಿಬಿರದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿದರು. ಡಿಸೆಂಬರ್​ವೊಳಗೆ ಎಲ್ಲರಿಗೂ ಲಸಿಕೆ ನೀಡುವುದಾಗಿ ಅವರು ಹೇಳಿದರು.

Union Minister Sadanan
ಬಿಜೆಪಿ ಇ-ಚಿಂತನ ಶಿಬಿರ

ಬೆಂಗಳೂರು : ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಸೂಚನೆ ನೀಡಿದ್ದು, ಪ್ರಸಕ್ತ ವರ್ಷದ ಡಿಸೆಂಬರ್ ತಿಂಗಳೊಳಗಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಒದಗಿಸಲು ಯೋಜಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

'ದೇಶಕ್ಕೆ ಕೋವಿಡ್​ವೊಡ್ಡಿದ ಸವಾಲು ಹಾಗೂ ಅದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎದುರಿಸಿದ ರೀತಿ’ ಬಗ್ಗೆ ಬಿಜೆಪಿಯು ಸಂಘಟಿಸಿದ್ದ ರಾಜ್ಯಮಟ್ಟದ ಇ-ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ಭಾರತ್ ಬಯೋಟೆಕ್ ಸಂಪೂರ್ಣ ಸ್ವದೇಶಿಯವಾದ ‘ಕೊವ್ಯಾಕ್ಸಿನ್’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಕಂಪನಿಯು ಸದ್ಯ ಮಾಸಿಕವಾಗಿ 1.7 ಕೋಟಿ ಡೋಸ್​ಗಳನ್ನು ಉತ್ಪಾದಿಸುತ್ತಿದೆ ಎಂದು ಮಾಹಿತಿ ನೀಡಿದರು.

ಕೊವ್ಯಾಕ್ಸಿನ್ ಲಸಿಕೆಯನ್ನು ಇನ್ನಷ್ಟು ಘಟಕಗಳಲ್ಲಿ ಉತ್ಪಾದಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ಜುಲೈ ವೇಳೆಗೆ ಇದರ ಮಾಸಿಕ ಉತ್ಪಾದನೆ 7.5 ಕೋಟಿ ಡೋಸ್​ಗಳಿಗೆ ಏರಿಕೆಯಾಗಲಿದೆ ಎಂದು ತಿಳಿಸಿದರು.

ಸೆರಂ ಇನ್ಸ್​ಟ್ಯೂಟ್​​ನ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಸೆಪ್ಟೆಂಬರ್ ವೇಳೆಗೆ 11 ಕೋಟಿ ಡೋಸ್​ಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ. ರಷ್ಯಾದಿಂದ ಸ್ಪುಟ್ನಿಕ್ -ವಿ ಲಸಿಕೆಯ ಆಮದು ಈಗಾಗಲೇ ಆರಂಭವಾಗಿದೆ. ಇದರ ಹೊರತಾಗಿ ಭಾರತದಲ್ಲಿಯೂ ಅದರ ಉತ್ಪಾದನೆ ಆರಂಭಿಸಲು 5 ಕಂಪನಿಗಳೊಂದಿಗೆ ಒಪ್ಪಂದವಾಗಿದೆ ಎಂದು ವಿವರಿಸಿದರು.

ಓದಿ : ಲಸಿಕೆ ಕೊರತೆ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ: ಸಚಿವ ಡಾ.ಕೆ.ಸುಧಾಕರ್

ಹೈದರಾಬಾದ್ ಮೂಲದ ಬಯೋಲೊಜಿಕಲ್-ಇ ಕಂಪನಿಯ ಜೊತೆ ಕೋವಿಡ್ ಲಸಿಕೆ ಖರೀದಿಸುವ ಬಗ್ಗೆ ಚರ್ಚಿಸಲಾಗಿದೆ. ಅದು ಡಿಸೆಂಬರ್ ಒಳಗಾಗಿ 30 ಕೋಟಿ ಡೋಸ್​ಗಳನ್ನು ಪೂರೈಸಲಿದೆ. ಹೀಗೆ. ಎಲ್ಲಾ ರೀತಿಯಿಂದಲೂ ಲಸಿಕೆಯ ಲಭ್ಯತೆ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಡಿಸೆಂಬರ್ ಒಳಗಾಗಿ 18 ವರ್ಷ ಮೇಲ್ಪಟ್ಟ ಎಲ್ಲಾ ಭಾರತಿಯರಿಗೂ ಕೋವಿಡ್ ಲಸಿಕೆ ನೀಡಲು ಯೋಜಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಕೋವಿಡ್ ಮೂರನೆ ಅಲೆ ಬರಬಹುದು ಮತ್ತು ಅದು ಮಕ್ಕಳನ್ನು ಹೆಚ್ಚು ಕಾಡಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹಾಗಾಗಿ, ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂಬುವುದು ಪ್ರಧಾನಿ ಮೋದಿಯವರ ಇಚ್ಛೆಯಾಗಿದೆ. ಭಾರತದಲ್ಲಿಯೇ ಮಕ್ಕಳ ಕೊರೊನಾ ಲಸಿಕೆಯ ಅಭಿವೃದ್ಧಿ ಕೊನೆಯ ಹಂತ ತಲುಪಿದ್ದು, ಅದರ ಪರೀಕ್ಷೆಗೆ (ಮಕ್ಕಳ ಮೇಲೆ ಪ್ರಯೋಗ) ಅಗತ್ಯ ಅನುಮತಿ ನೀಡಲಾಗಿದೆ. ಪರೀಕ್ಷೆ ಯಶಸ್ವಿಯಾದರೆ ಮಕ್ಕಳಿಗೂ ಲಸಿಕಾಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಸದಾನಂದಗೌಡ ಮಾಹಿತಿ ನೀಡಿದರು.

ಆರಂಭದಲ್ಲಿ, ಕೋವಿಡ್ ಲಸಿಕೆ ತೆಗೆದುಕೊಳ್ಳುವ ಬಗ್ಗೆ ಜನಸಾಮಾನ್ಯರಲ್ಲಿ ಕಂಡುಬಂದ ಹಿಂಜರಿಕೆಯನ್ನು ಪ್ರಸ್ತಾಪಿಸಿದ ಸದಾನಂದ ಗೌಡ, ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳ ನಾಯಕರು ಸ್ವದೇಶಿ ಲಸಿಕೆ ಬಗ್ಗೆ ಉಂಟುಮಾಡಿದ ತಪ್ಪು ಗ್ರಹಿಕೆಯೇ ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿಗಂತೂ ಅಪಪ್ರಚಾರವೇ ಬಂಡವಾಳವಾಗಿದೆ. ಕೊರೊನಾ ನಿರ್ಮೂಲನೆಗೆ ಲಸಿಕಾಕರಣವೊಂದೇ ಪರಿಹಾರವಾಗಿದೆ. ದೇಶದಲ್ಲಿಯೇ ತಯಾರಿಸಲಾದ ಲಸಿಕೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ. ನಮ್ಮ ಬಿಜೆಪಿ ಕಾರ್ಯಕರ್ತ ಮಿತ್ರರು ಪ್ರತಿಪಕ್ಷದವರ ಅಪಪ್ರಚಾರಕ್ಕೆ ಸಮರ್ಥವಾಗಿ ಎದಿರೇಟು ನೀಡಬೇಕು. ಅವರ ದುರುದ್ದೇಶದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ಸದಾನಂದ ಗೌಡ ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.