ETV Bharat / state

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 3ನೇ ತ್ರೈಮಾಸಿಕದಲ್ಲಿ₹293 ಕೋಟಿ ನಿವ್ವಳ ಲಾಭ

author img

By

Published : Feb 3, 2023, 9:58 PM IST

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ ತನ್ನ 3ನೇ ತ್ರೈಮಾಸಿಕದ ವಹಿವಾಟಿನ ವರದಿ ಪ್ರಕಟಿಸಿದೆ.

Ujjivan Small Finance Bank
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ 3ನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, 293 ಕೋಟಿ ರೂ. ನಿವ್ವಳ ಲಾಭ ಪಡೆದುಕೊಳ್ಳುವ ಮೂಲಕ ಶೇ.33 ರಷ್ಟು ಲಾಭ ಗಳಿಸಿದೆ. ಕಳೆದ ತ್ರೈಮಾಸಿಕ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ.5ರಷ್ಟು ಲಾಭಗಳಿಸಿದೆ. ಪ್ರತಿ ತ್ರೈಮಾಸಿಕ ಫಲಿತಾಂಶದಲ್ಲಿ ಶೇ.5ರಷ್ಟು ಲಾಭದತ್ತ ಉಜ್ಜೀವನ್ ಸಾಗಿದೆ ಎಂದು ಎಂಡಿ ಇಟ್ಟಿರ ಡೇವಿಸ್ ತಿಳಿಸಿದ್ದಾರೆ.

ಪ್ರಸ್ತುತ ನಿವ್ವಳ ಸಾಲದ ಮೊತ್ತ 21,895 ಕೋಟಿ ರೂಗೆ ತಲುಪಿದೆ. ಈ 9 ತಿಂಗಳ ಅವಧಿಯಲ್ಲಿ ಶೇ.33 ರಷ್ಟು ಲಾಭಗಳಿಸಿದೆ. ಅಷ್ಟೇ ಅಲ್ಲದೆ, ವಿತರಣೆ ಸಾಲ 4 ಸಾವಿರ ಕೋಟಿ ರೂಪಾಯಿ ತಲುಪಿದೆ. ತೆಲಂಗಾಣ ರಾಜ್ಯದಲ್ಲಿಯೂ ಹೊಸ ಶಾಖೆ ತೆರೆಯಲಾಗಿದೆ. 2024ರೊಳಗಾಗಿ 50 ರಿಂದ 70 ಹೊಸ ಶಾಖೆ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು.

ಡಿಜಿಟಲೀಕರಣ ಗುರಿ: ದೇಶ ಡಿಜಿಟಲೈಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಡಿಜಿಟಲೀಕರಣ ಮಾಡುವ ಗುರಿ ಹೊಂದಿದ್ದು, ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಈಗಾಗಲೇ ಹೆಲೋ ಉಜ್ಜೀವನ್ ಎಂಬ ಅಪ್ಲಿಕೇಷನ್‌ ಹೊರತರಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮ್ಮ ಎಲ್ಲ ಗ್ರಾಹಕರನ್ನು ಈ ಅಪ್ಲಿಕೇಷನ್ ಅಡಿಯಲ್ಲಿಯೂ ತರಲಾಗುವುದು. ಪ್ರಸ್ತುತ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 73 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯ ವೆಚ್ಚಗಳು ಸರಾಸರಿ ಸಂಪತ್ತುಗಳ ಶೇ.6.2ರಷ್ಟಿದೆ. ವೆಚ್ಚದಿಂದ ಆದಾಯದ ಅನುಪಾತ 2023ರ 3ನೇ ತ್ರೈಮಾಸಿಕದಲ್ಲಿ ಶೇ.53.5 ಇದ್ದು 2022ರ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ಶೇ.72ರಷ್ಟಿತ್ತು. ಪಿಪಿಒಪಿ 389 ಕೋಟಿ ಇದ್ದು, 2022ರ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ 154 ಕೋಟಿ ಇತ್ತು. ಪಿಎಟಿ 293 ಕೋಟಿ ಇದ್ದು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 34 ಕೋಟಿ ಹೆಚ್ಚಳವಾಗಿದೆ. ಬಂಡವಾಳ ಸಮರ್ಪಕತೆ ಅನುಪಾತ ಶೇ.26.02 ಇದ್ದು ಟೈಯರ್-1 ಬಂಡವಾಳ ಶೇ.22.84 ಆಗಿದೆ. ಪ್ರಾವಿಷನಲ್ ಎಲ್‌ಸಿಆರ್ ಡಿಸೆಂಬರ್ 2022ರಲ್ಲಿ ಶೇ.198ರಷ್ಟಿದೆ ಎಂದು ವಿವರಣೆ ನೀಡಿದರು.

ಹಿರಿಯ ನಾಗರಿಕರಿಗೂ ಹೆಚ್ಚು ಬಡ್ಡಿ ದರ: ಉಜ್ಜೀವನ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್ ಹಿರಿಯ ನಾಗರಿಕರಿಗೆ ವಿವಿಧ ಅವಧಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ವಿತರಿಸುತ್ತಿದೆ. ಹಿರಿಯ ನಾಗರಿಕರಿಗೆ ಶೇ 0.75ರ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಸಾಮಾನ್ಯ ನಾಗರಿಕರಿಗೆ ಶೇ 3.75 ಮತ್ತು ಶೇ 8ರ ಮಧ್ಯೆ ಮತ್ತು ಹಿರಿಯ ನಾಗರಿಕರಿಗೆ ಶೇ 8.75ರ ವರೆಗೆ ಬಡ್ಡಿದರ ನೀಡುತ್ತದೆ. 80 ವಾರಗಳ (560 ದಿನಗಳು) ಎಫ್‌ಡಿ ಅವಧಿಗೆ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ 8 ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ 80 ವಾರಗಳ ಎಫ್‌ಡಿ ಅವಧಿಗೆ ಬಡ್ಡಿ ದರವು ಶೇ 8.75 ಆಗಿದೆ. ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಿಂದ ಬಡ್ಡಿ ಪಾವತಿ ಆಯ್ಕೆಗಳು ಮಾಸಿಕ, ತ್ರೈಮಾಸಿಕ ಮತ್ತು ಮೆಚ್ಯೂರಿಟಿ ನಂತರ ಸೇರಿವೆ ಎಂದು ಮಾಹಿತಿ ನೀಡಿದರು.

ಇದನ್ನೂಓದಿ:EXPLAINED: ಹೊಸ ತೆರಿಗೆ ಪದ್ಧತಿ vs ಹಳೆಯ ತೆರಿಗೆ ಪದ್ಧತಿ- ನಿಮಗೆ ಯಾವುದು ಸೂಕ್ತ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.