ETV Bharat / state

ಎರಡು ಸಾವಿರ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಕ್ರಮ : ಸಚಿವ ಪ್ರಭು ಚೌಹಾಣ್

author img

By

Published : Dec 9, 2020, 7:23 PM IST

ಅನೇಕ ವರ್ಷಗಳಿಂದ ಪಶುಸಂಗೋಪನಾ ಇಲಾಖೆಯಲ್ಲಿ ಅನೇಕ ಹುದ್ದೆ ಭರ್ತಿ ಮಾಡದ ಪರಿಣಾಮ ಆಸ್ಪತ್ರೆಗಳಲ್ಲಿ ಜಾನುವಾರುಗಳು ಕಾಯಿಲೆಗೆ ತುತ್ತಾಗಿದ್ದರೆ, ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ..

ಸಚಿವ ಪ್ರಭು ಚವ್ಹಾಣ್
ಸಚಿವ ಪ್ರಭು ಚವ್ಹಾಣ್

ಬೆಂಗಳೂರು : ಹಲವು ವರ್ಷಗಳಿಂದ ಇಲಾಖೆಯಲ್ಲಿ ಖಾಲಿ ಇರುವ 2 ಸಾವಿರ ಹುದ್ದೆಗಳನ್ನ ಶೀಘ್ರ ಭರ್ತಿ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಸುಮಾರು 2 ಸಾವಿರ ಹುದ್ದೆ ಖಾಲಿ ಇವೆ. ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.

ಮುಖ್ಯಮಂತ್ರಿ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಆದಷ್ಟು ಶೀಘ್ರ ಭರ್ತಿ ಮಾಡಿಕೊಳ್ಳಲಾಗುವುದು. ಕಳೆದ ಹಲವು ವರ್ಷಗಳಿಂದಲೂ ಇಲಾಖೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡದ ಪರಿಣಾಮ ಈ ಸಮಸ್ಯೆ ಉದ್ಭವವಾಗಿದೆ ಎಂದರು.

ಇದಕ್ಕೂ ಮುನ್ನ ಶಾಸಕ ಅರಗ ಜ್ಞಾನೇಂದ್ರ ಅವರು, ಅನೇಕ ವರ್ಷಗಳಿಂದ ಪಶುಸಂಗೋಪನಾ ಇಲಾಖೆಯಲ್ಲಿ ಅನೇಕ ಹುದ್ದೆ ಭರ್ತಿ ಮಾಡದ ಪರಿಣಾಮ ಆಸ್ಪತ್ರೆಗಳಲ್ಲಿ ಜಾನುವಾರುಗಳು ಕಾಯಿಲೆಗೆ ತುತ್ತಾಗಿದ್ದರೆ, ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಕಾಲುಬಾಯಿ ಜ್ವರ, ನಾಯಿ ಕಡಿತವಾದ್ರೆ ಚಿಕಿತ್ಸೆ ಕೊಡುವವರು ಯಾರು? ಮೊದಲು ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮಾಡಿದರು.

ಮಾತೃ ಇಲಾಖೆ : ಇಲಾಖೆಯಿಂದ ನೇಮಕಗೊಂಡು ಬೇರೊಂದು ಇಲಾಖೆಗೆ ನಿಯೋಜನೆಗೊಳ್ಳುವ ಅಧಿಕಾರಿಗಳನ್ನು ಪುನಃ ಮಾತೃ ಇಲಾಖೆಗೆ ಕರೆಸಿಕೊಳ್ಳಲು ಕ್ರಮಕೈಗೊಳ್ಳುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.

ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಬಹು ವರ್ಷಗಳಿಂದಲೂ ಇಂತಹ ಸಮಸ್ಯೆಯಿದೆ. ಇಲಾಖೆಯಿಂದ ನೇಮಕಗೊಂಡು ಬೇರೊಂದು ಇಲಾಖೆಗೆ ನಿಯೋಜನೆಗೊಂಡವರು ಬರುವುದೇ ಇಲ್ಲ. ಹೀಗಾಗಿ ಇದಕ್ಕೆ ಇತಿಶ್ರೀ ಹಾಡಬೇಕಾದ ಅಗತ್ಯವಿದೆ ಎಂದರು.

ಇದನ್ನು ಓದಿ:ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಿ ಗೋ ಪೂಜೆ ನೆರವೇರಿಸಿದ ಸಚಿವ ಪ್ರಭು ಚೌವ್ಹಾಣ್!

ಇದಕ್ಕೂ ಮುನ್ನ ರಾಜ್ಯದ ವಿವಿಧ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ನೇಮಕಗೊಂಡ ವೈದ್ಯರು ಬೇರೊಂದು ಇಲಾಖೆಗೆ ಹೋದರೆ ಪುನಃ ಬರುವುದೇ ಇಲ್ಲ. ಇದರಿಂದ ಅನೇಕ ಆಸ್ಪತ್ರೆಗಳಲ್ಲಿ ತೊಂದರೆಯಿದೆ ಎಂದು ಜೆಡಿಎಸ್ ಸದಸ್ಯ ನಾಡಗೌಡ ಹೇಳಿದರು. ವೈದ್ಯರೇ ಇಲ್ಲದಿದ್ದರೆ ಹೊಸ ಆಸ್ಪತ್ರೆಗಳನ್ನು ಕಟ್ಟಿ ಪ್ರಯೋಜನವಾದ್ರೂ ಏನು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಪ್ರಭು ಚೌಹಾಣ್, ಈಗಾಗಲೇ ರಾಜ್ಯ ಸರ್ಕಾರ ಪಶು ಸಂಜೀವಿನಿ ಯೋಜನೆ ಆರಂಭಿಸಿದೆ. ಇದರ ಜೊತೆಗೆ ಸದ್ಯದಲ್ಲೇ ವಾರ್ ರೂಮ್ ಪ್ರಾರಂಭಿಸುತ್ತೇವೆ. ಜಾನುವಾರುಗಳಿಗೆ ತೊಂದರೆಯಾದ್ರೆ ದೂರವಾಣಿ ಮೂಲಕ ಮಾಹಿತಿ ನೀಡಿದ್ರೆ ಸ್ಥಳಕ್ಕೆ ಬಂದು ಚಿಕಿತ್ಸೆ ಕೊಡುತ್ತಾರೆ.

ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನಕ್ಕೆ ಬರಲು ನಮ್ಮ ಇಲಾಖೆಯಲ್ಲಿ ವೈದ್ಯರಾಗಿದ್ದವರು ಮುಂಬಡ್ತಿ ಪಡೆದು ಬೇರೆ ಬೇರೆ ಇಲಾಖೆಗಳಿಗೆ ಹೋಗಿದ್ದಾರೆ. ಅವರನ್ನು ಮಾತೃ ಇಲಾಖೆಗೆ ಕರೆಸಿಕೊಳ್ಳಲು ಚರ್ಚಿಸಲಾಗಿದೆ. ಮತ್ತೊಮ್ಮೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.