ETV Bharat / state

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ಸಾವು

author img

By

Published : Jun 14, 2023, 9:29 PM IST

Updated : Jun 15, 2023, 7:38 AM IST

ಬೆಂಗಳೂರು ನಗರದ ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ
ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ

ಬೆಂಗಳೂರು : ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ. ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಘಟನೆ ನಡೆದಿದೆ. ಕೊಪ್ಪಳ ಮೂಲದ ಕುಂಟ್ಯಪ್ಪ ಪೂಜಾರ್ (35) ಮತ್ತು ತುರುವೆಕೆರೆ ಬಳಿಯ ವಿಟ್ಲಪುರ ಮೂಲದ ತಿಮ್ಮೆಗೌಡ (25) ಮೃತರು. ಲಗ್ಗೆರೆ ರಿಂಗ್ ರಸ್ತೆಯ ಕೆಂಪೇಗೌಡ ಆರ್ಚ್ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ 7.30ರಲ್ಲಿ ಅಪಘಾತ ಸಂಭವಿಸಿದೆ.

ಗಾರೆ ಕೆಲಸ ಮಾಡುತ್ತಿದ್ದ ಪೂಜಾರ್, ಲಗ್ಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಕೆಲಸ ಮುಗಿಸಿಕೊಂಡು ಮನೆಗೆ ಹೋಗಬೇಕಾದರೆ ಅಪಘಾತ ಸಂಭವಿಸಿದೆ. ಮತ್ತೊಮ್ಮೆ ತಿಮ್ಮೇಗೌಡ, ತಮ್ಮ ಊರಿನಲ್ಲಿ ವಾಟರ್‌ಮ್ಯಾನ್ ಆಗಿದ್ದ. ಲಗ್ಗೆರೆಯಲ್ಲಿ ನೆಲೆಸಿದ್ದ ಅಕ್ಕನ ಮನೆಗೆ ಬಂದಾಗ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಪೇಗೌಡ ಆರ್ಚ್ ಬಳಿಯ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಚಾಲಕ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ. ಬಸ್ ಹಿಂದೆ ಇಬ್ಬರು ಪಾದಚಾರಿಗಳು ರಸ್ತೆ ದಾಟುತ್ತಿದ್ದರು. ಇದೇ ವೇಳೆ ಹಿಂದೆ ಅತೀ ವೇಗವಾಗಿ ಬಂದ ಮತ್ತೊಂದು ಬಿಎಂಟಿಸಿ ಬಸ್ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗೆ ಗುದ್ದಿದೆ. ಈ ಎರಡು ಬಸ್‌ಗಳ ನಡುವೆ ಸಿಲುಕಿ ಇಬ್ಬರು ಪಾದಚಾರಿಗಳು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ರಾಜಾಜಿನಗರ ಸಂಚಾರ ಠಾಣೆ ಪೊಲೀಸರು, ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಿಎಂಟಿಸಿ ಬಸ್‌ನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ: ಇನ್ನೊಂದೆಡೆ, ನೂತನ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿರುವ ಪರಿಣಾಮ ಮೂವರು ಮೃತಪಟ್ಟಿದ್ದು, ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಚನ್ನಪಟ್ಟಣದ ದೇವರಹೊಸಳ್ಳಿ ಗ್ರಾಮದ ಬಳಿ ಇಂದು ಅಪಘಾತವಾಗಿದೆ. ಮೈಸೂರಿನಿಂದ ಬೆಂಗಳೂರು ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಕಾರು ಓವರ್ ಟೇಕ್ ಮಾಡಲು ಮುಂದಾದಾಗ ಲಾರಿಯ ಹಿಂಬದಿಗೆ ಗುದ್ದಿದೆ ಎಂಬುದು ತಿಳಿದುಬಂದಿದೆ.

ಹಿಂಬದಿ ಸೀಟ್​ನಲ್ಲಿದ್ದ ಮೂವರು ಗಂಭೀರ: ಅಪಘಾತದ ರಭಸಕ್ಕೆ ಒಂದೇ ಕುಟುಂಬದ 13 ವರ್ಷದ ಮಗು, 20 ವರ್ಷದ ಯುವತಿ ಹಾಗು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಚಾಲಕ ಮೃತಪಟ್ಟಿದ್ದಾರೆ. ಹಿಂಬದಿ ಸೀಟ್​ನಲ್ಲಿ ಕುಳಿತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಒಬ್ಬರನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಅವರಿಗೆ ಚಿಕಿತ್ಸೆಯೂ ನಡೆಯುತ್ತಿದೆ. ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿ ವೇಗವೇ ಅಪಘಾತಕ್ಕೆ ಕಾರಣ: ಈಗಾಗಲೇ ಘಟನಾ ಸ್ಥಳಕ್ಕೆ ರಾಮನಗರ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೂತನ ಹೆದ್ದಾರಿಯಲ್ಲಿ ಚಾಲಕರ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೊಪ್ಪಳದ ವಿವಿಧೆಡೆ ರಸ್ತೆ ಅಪಘಾತ: ರಸ್ತೆಬದಿ ನಿಂತಿದ್ದ ಕ್ಯಾಂಟರ್​ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, ಓರ್ವನನ್ನು ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ ಘಟನೆ ಜು.13 ರಂದು ಕೊಪ್ಪಳ ಜಿಲ್ಲೆ ವಣಗೇರಿ ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಜರುಗಿತ್ತು.

ಇದನ್ನೂ ಓದಿ: Bengaluru crime: ಹೆಂಡತಿಯನ್ನ ಕಳುಹಿಸದಿದ್ದಕ್ಕೆ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ!

ವಿಜಯಪುರ ಮೂಲದ ಕಲ್ಲೂರಿನ ಭೋಜಪ್ಪ ಚವ್ಹಾಣ (27), ಬಿದರಕುಂದಿಯ ಗೌರಮ್ಮ ಕನ್ನೂರ(43), ಸುರೇಶ ಹಂಡರಗಲ್( 60) ಮೃತ ದುರ್ದೈವಿಗಳು ಎಂಬುದು ತಿಳಿದುಬಂದಿದೆ. ನಿದ್ದೆಗಣ್ಣಿನಲ್ಲಿ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕುಷ್ಟಗಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Koppal Terrible Road Accident: ಕೊಪ್ಪಳದ ವಿವಿಧಡೆ ಭೀಕರ ರಸ್ತೆ ಅಪಘಾತ: ಒಟ್ಟು ಐವರು ಸಾವು

Last Updated : Jun 15, 2023, 7:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.