ETV Bharat / state

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಮನವಿ ಸಲ್ಲಿಸಲು ಇನ್ನೆರಡು ದಿನ ಕಾಲಾವಕಾಶ: ಸಚಿವ ಅಶೋಕ್

author img

By

Published : Aug 27, 2022, 7:38 PM IST

ಈದ್ಗಾ ಮೈದಾನಕ್ಕೆ ಸಚಿವ ಅಶೋಕ್ ಭೇಟಿ ನೀಡಿದರು. ಮೈದಾನದಲ್ಲಿ ಗಣೇಶೋತ್ಸವಕ್ಕೆ ಮನವಿ ಸಲ್ಲಿಸಲು ಇನ್ನೆರಡು ದಿನ ಅವಕಾಶ ಕೊಡಲಾಗುವುದು ಎಂದು ತಿಳಿಸಿದರು.

Two more days to submit appeal for Ganeshotsava at Chamarajpete Idga Maidan
ಈದ್ಗಾ ಮೈದಾನಕ್ಕೆ ಸಚಿವ ಅಶೋಕ್ ಭೇಟಿ

ಬೆಂಗಳೂರು: ಕಂದಾಯ ಸಚಿವ ಆರ್ ಅಶೋಕ್ ಅವರು ಇಂದು ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಜೊತೆ ಸಭೆ ನಡೆಸಿದರು.

ನಂತರ ಮಾತನಾಡಿದ ಅವರು, ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಉತ್ಸವ ಕುರಿತಂತೆ ಈಗಾಗಲೇ 5 ಮನವಿ ಬಂದಿದೆ. ಅದರಲ್ಲಿ 2ಅನ್ನು ಪರಿಗಣಿಸಿದ್ದೇವೆ. ಇನ್ನೂ ಎರಡು ದಿನ ಮನವಿ ಸಲ್ಲಿಸಲು ಅವಕಾಶ ನೀಡುತ್ತಿದ್ದೇವೆ ಎಂದರು.

ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಜೊತೆ ಸ್ಥಳೀಯ ಸಂಸ್ಥೆಗಳೂ ಮನವಿ ಕೊಟ್ಟಿವೆ. ಗಣೇಶ ಉತ್ಸವಕ್ಕೆ ಅವಕಾಶ ಕೋರಿದ್ದ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೇನೆ. ಸಾರ್ವಜನಿಕ ಜಾಗ ಆಗಿರುವುದರಿಂದ ಗಣೇಶ ಮೂರ್ತಿ ಕೂರಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿದೆ. ಸದ್ಯ ಕಂದಾಯ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನೆರಡು ದಿನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಸೋಮವಾರ ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಕಂದಾಯ ಇಲಾಖೆ ಸುಪ್ರಿಂಗೆ ಕೆವಿಯಟ್ ಹಾಕಿದೆ ಎಂದರು.

ಈದ್ಗಾ ಮೈದಾನಕ್ಕೆ ಸಚಿವ ಅಶೋಕ್ ಭೇಟಿ

ಎಷ್ಟೇ ಜಟಿಲ ಸಮಸ್ಯೆ ಇದ್ದರೂ ಯಾವುದೇ ಅವಘಡ ಆಗದ ರೀತಿ ಬಗೆಹರಿಸುತ್ತೇವೆ. ಇನ್ನೂ ಹಲವು ಸಂಘ ಸಂಸ್ಥೆಗಳು ಮನವಿ ಕೊಡುತ್ತೇವೆಂದು ಹೇಳಿವೆ. ಸಾವಿರ ಅರ್ಜಿಗಳು ಬರಲಿ, ನಾವು ಪರಿಶೀಲನೆ ಮಾಡುತ್ತೇವೆ. ಯಾರು ಅರ್ಜಿ ಸಲ್ಲಿಸುತ್ತಾರೋ ಅವರ ಪೂರ್ವಾಪರ ಅರಿತು ಅನುಮತಿ ನೀಡುತ್ತೇವೆ. ಅಳೆದು ತೂಗಿ ಕಂದಾಯ ಇಲಾಖೆ ಅಂತಿಮ ತೀರ್ಮಾನ ಮಾಡಲಿದೆ. ಇಷ್ಟೇ ಪೆಂಡಾಲ್ ಇರಬೇಕು. ಡೆಕೊರೇಷನ್ ಹೀಗೇ ಇರಬೇಕು. ಸುಗಮ ಸಂಗೀತ, ದೇವರ ಹಾಡು ಇರಬೇಕು ಎನ್ನುವುದು ಸೇರಿದಂತೆ ಕೆಲ ಕಂಡೀಷನ್ ಆಧಾರದ ಮೇಲೆ ಅನುಮತಿ ನೀಡುತ್ತೇವೆ ಎಂದರು.

ಬೇರೆ ಸಂಘಟನೆಗೆ ನಮ್ಮ ಒಪ್ಪಿಗೆ ಇಲ್ಲ: ಬೇರೆ ಸಂಘಟನೆಗೆ ಅವಕಾಶ ಕೊಟ್ಟರೆ ನಮ್ಮ ಒಪ್ಪಿಗೆ ಇರೋದಿಲ್ಲ. ಅನುಮತಿ ಕೊಟ್ಟರೆ ನಮಗೆ ಕೊಡಬೇಕು ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ. ಸಭೆ ಬಳಿಕ ಮಾತನಾಡಿದ ರಾಮೇಗೌಡ, ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದೆ. ಅಂತಿಮವಾಗಿ ನಮ್ಮ ನಿರ್ಧಾರವನ್ನು ಸಂಸದ ಪಿ.ಸಿ ಮೋಹನ್ ಅವರಿಗೆ ತಿಳಿಸುತ್ತೇವೆ. ಅವರು ಏನು ಹೇಳುತ್ತಾರೋ ಅದಕ್ಕೆ ನಾವೆಲ್ಲಾ ಬದ್ಧ ಎಂದರು.

ಇದನ್ನೂ ಓದಿ: ಅದ್ದೂರಿ ಗೌರಿ ಗಣೇಶನ ಹಬ್ಬಕ್ಕೆ ಬೆಂಗಳೂರು ಸಜ್ಜು: ಮಾರುಕಟ್ಟೆಗಳಲ್ಲಿ ಕಳೆಗಟ್ಟಿದ ವ್ಯಾಪಾರ

ಸಭೆಯಲ್ಲಿ ಕಮಿಷನರ್ ಪ್ರತಾಪ್ ರೆಡ್ಡಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸಭೆಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳ ಜೊತೆ ಸೇರಿ ಅವರು ಸಹ ಕ್ರಿಕೆಟ್ ಆಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.