ETV Bharat / state

ಬೆಂಗಳೂರು: ಆಧಾರ್ ಸಂಖ್ಯೆ, ಬೆರಳಚ್ಚು ಸಂಗ್ರಹಿಸಿ ಬ್ಯಾಂಕ್‌ ಖಾತೆಗಳಿಂದ ಹಣ ದೋಚುತ್ತಿದ್ದ ಇಬ್ಬರು ವಂಚಕರು ಸೆರೆ

author img

By ETV Bharat Karnataka Team

Published : Oct 31, 2023, 10:06 PM IST

ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುತ್ತಿದ್ದ ಬಿಹಾರ ಮೂಲದ ಇಬ್ಬರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.

Etv Bharatarrest-of-two-fraudsters-who-embezzling-money-through-who-were-collecting-aadhaar-number-and-finger-print-and
ಆಧಾರ್ ಸಂಖ್ಯೆ- ಬೆರಳಚ್ಚು ಸಂಗ್ರಹಿಸಿ ಹಣ ಲಪಟಾಯಿಸುತ್ತಿದ್ದ ಇಬ್ಬರು ವಂಚಕರ ಸೆರೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ‌ ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂನಡಿ (ಎಇಪಿಎಸ್) ಬಯೊಮೆಟ್ರಿಕ್ ಮೂಲಕ ಬ್ಯಾಂಕ್ ಖಾತೆಯಲ್ಲಿ ಹಣ ದೋಚುವ ಟ್ರೆಂಡ್ ಮಾಡಿಕೊಂಡಿರುವ ಸೈಬರ್ ಖದೀಮರು ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಜನರನ್ನು ವಂಚಿಸುತ್ತಿದ್ದಾರೆ. ಹೀಗೆ ರಾಜಧಾನಿ ಬೆಂಗಳೂರಿನಲ್ಲಿ ಬೆರಳಚ್ಚುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಖಾತೆದಾರರರಿಗೆ ಅರಿವಿಲ್ಲದಂತೆ ಹಣ ದೋಚುತ್ತಿದ್ದ ಇಬ್ಬರು ಬಿಹಾರ ಮೂಲದ ಆರೋಪಿಗಳನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ನಗರದ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 115 ಎಇಪಿಎಸ್ ವಂಚನೆ ಪ್ರಕರಣಗಳಲ್ಲಿ ಮೊದಲ ಬಾರಿಗೆ ಆರೋಪಿಗಳನ್ನು ಬಂಧಿಸಿದಂತಾಗಿದೆ. ಮೊಹಮ್ಮದ್ ಪರ್ವಾಜ್ ಹಾಗೂ ಅಬುಜರ್ ಬಂಧಿತರು. ಕಳೆದ ಮೂರು ವರ್ಷಗಳಿಂದ ಕಸ್ಟಮರ್ ಸರ್ವಿಸ್ ಸೆಂಟರ್ ನಡೆಸುತ್ತಿದ್ದರು. ಆಧಾರ್ ಕಾರ್ಡ್, ಪಾನ್ ಕಾರ್ಡ್, ಹಣ ವರ್ಗಾವಣೆ ಸೇರಿದಂತೆ ಇನ್ನಿತರ ಸರ್ವಿಸ್‌ಗಳನ್ನು ನೀಡುತ್ತಿದ್ದರು‌. ಇತ್ತೀಚಿನ ದಿನಗಳಲ್ಲಿ ಬೆರಳಚ್ಚು ಹಾಗೂ ಆಧಾರ್ ಕಾರ್ಡ್ ನಂಬರ್ ಬಳಸಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಲ್ಲಿನ ಹಣ ಎಗರಿಸುವ ಬಗ್ಗೆ ಅರಿತುಕೊಂಡಿದ್ದರು.

ಬಿಹಾರದ ತಮ್ಮ ಸರ್ವಿಸ್ ಸೆಂಟರ್​ನಲ್ಲಿ ಕುಳಿತುಕೊಂಡೇ ಸರ್ಕಾರಿ ಜಾಲತಾಣಗಳಿಗೆ ಗ್ರಾಹಕರ ಆಧಾರ್ ಕಾರ್ಡ್ ನಂಬರ್ ಹಾಗೂ ಬೆರಳಚ್ಚು ಸಿಗುವ ಮಾಹಿತಿ ಪರಿಶೀಲಿಸುತ್ತಿದ್ದರು‌. ಕರ್ನಾಟಕ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಜಾಲತಾಣದಲ್ಲಿ ಶೋಧಿಸಿದಾಗ ಸಾರ್ವಜನಿಕವಾಗಿ ಸಿಗುವಂತಹ ನೋಂದಣಿಗೆ ಸಂಬಂಧಿಸಿಂತೆ ಆಧಾರ್ ಕಾರ್ಡ್ ನಂಬರ್ ಹಾಗೂ ಬೆರಳಚ್ಚು ಸಂಗ್ರಹಿಸಿದ್ದಾರೆ. ಬೆರಳಚ್ಚುಗಳನ್ನು ಡೌನ್‌ಲೋಡ್ ಮಾಡಿ, ವಿವಿಧ ಸಾಫ್ಟ್‌ವೇರ್ ಮುಖಾಂತರ ಬೆರಳಚ್ಚು ಸ್ಪಷ್ಟವಾಗಿ ಕಾಣಿಸುವ ವ್ಯವಸ್ಥಿತವಾಗಿ ರೂಪಿಸಿಕೊಂಡು ಮೈಕ್ರೊ ಎಟಿಎಂಗಳ ಮುಖಾಂತರ ಬ್ಯಾಂಕ್ ಖಾತೆದಾರರ ಹಣ ಎಗರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಈಶಾನ್ಯ ವಿಭಾಗದ ಸೆನ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಕಾವೇರಿ ವೆಬ್​ಸೈಟ್ ಬಳಸಿ ನೋಂದಣಿ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಂಡು ಪ್ರತ್ಯೇಕ ಇಬ್ಬರು ವ್ಯಕ್ತಿಗಳ ಅಕೌಂಟ್​ಗಳಲ್ಲಿ ಹಣ ಎಗರಿಸಿದ್ದರು. ಹಣ ಕಡಿತ ಮುನ್ನ ದೂರುದಾರರಿಗೆ ಒಟಿಪಿ ಸಂದೇಶ ಶೇರ್ ಮಾಡಿರಲಿಲ್ಲ. ಅಲ್ಲದೆ ಬ್ಯಾಂಕ್‌ನಿಂದಲೂ ಮಾಹಿತಿ ನೀಡಿರಲಿಲ್ಲ. ಅಪರಿಚಿತ ಲಿಂಕ್ ಕ್ಲಿಕ್​ಗಳ ಮಾಡದಿದ್ದರೂ ಹಣ ಕಡಿತ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್​ಪೆಕ್ಟರ್ ಮಲ್ಲಿಕಾರ್ಜುನ್ ಹಾಗೂ ಪಿಎಸ್ಐ ರಮಣ್ ಗೌಡ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು.

ಹಣ ಕಡಿತಗೊಂಡಿರುವ ಬ್ಯಾಂಕ್‌ಗಳಿಂದ ಹಣ ಎಲ್ಲಿಂದ ವಿತ್‌ಡ್ರಾ ಆಗಿದೆ ಎಂಬುದನ್ನು ಪರಿಶೀಲನೆ ಮಾಡುವ ವೇಳೆ ಬಿಹಾರದ ಕಸ್ಟಮರ್ ಸರ್ವಿಸ್​ ಸೆಂಟರ್​ವೊಂದರ ಮೈಕ್ರೊ ಎಟಿಎಂ ಸಾಧನ ಮೂಲಕ ಹಣ ವರ್ಗಾಯಿಸಿಕೊಂಡಿರುವ ಬಗ್ಗೆ ಗೊತ್ತಾಗಿದೆ. ಸೆಂಟರ್ ಲಿಂಕ್ ಐಡಿ ಮೂಲಕ ವಿಳಾಸ ಪತ್ತೆ ಹಚ್ಚಿ ಬಿಹಾರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ಕರ್ನಾಟಕವೇ ಯಾಕೆ ಟಾರ್ಗೆಟ್?: ಇಎಪಿಎಸ್ ಮೂಲಕ ವಂಚಕರು ಹಣ ವಂಚಿಸಬೇಕಾದರೆ ಇವರಿಗೆ ಬೇಕಾಗಿರುವುದು ಆಧಾರ್ ಕಾರ್ಡ್ ನಂಬರ್ ಹಾಗೂ ಖಾತೆದಾರನ ಬೆರಳಚ್ಚು ಮಾತ್ರ. ಇವೆರಡು ಸಿಕ್ಕರೆ ಖಾತೆಯಿಂದ ಹಣ ಎಗರಿಸುವುದು ಇನ್ನಷ್ಟು ಸುಲಭವಾಗಲಿದೆ.‌ ಹೀಗಾಗಿ ತಮಗೆ ಬೇಕಾದ ಬೆರಳಚ್ಚು ಹಾಗೂ ಆಧಾರ್ ಕಾರ್ಡ್ ನಂಬರ್​ಗಳನ್ನು ಸರ್ಕಾರಿ ಇಲಾಖೆಗಳಿಗೆ ಹೆಚ್ಚು ಮೊರೆ ಹೋಗುತ್ತಾರೆ. ಅದರಲ್ಲಿಯೂ ಕರ್ನಾಟಕದ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಕಾವೇರಿ ಜಾಲತಾಣದಲ್ಲಿ ಆಸ್ತಿ ನೋಂದಣಿ ಸೇರಿದಂತೆ ಇನ್ನಿತರ ನೋಂದಣಿ ಮಾಡಿಸಿಕೊಂಡಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಾರ್ವಜನಿಕವಾಗಿ ಸಿಗುವುದರಿಂದ ಅವರ ದಾಖಲಾತಿಗಳನ್ನು ಡೌನ್‌ಲೋಡ್ ಮಾಡಿಕೊಂಡು ವ್ಯವಸ್ಥಿತವಾಗಿ ವಂಚಿಸುವ ಕಲೆಯನ್ನ ಆರೋಪಿಗಳು ರೂಢಿಸಿಕೊಂಡಿದ್ದಾರೆ. ನಗರದಲ್ಲಿ ದಾಖಲಾಗಿರುವ ಇದೇ ಮಾದರಿಯ 115 ಪ್ರಕರಣಗಳಲ್ಲಿ ಬಹುತೇಕ ರಿಜಿಸ್ಟ್ರಾರ್ ಕಚೇರಿಗಳಿಂದ ಆರೋಪಿಗಳು ಡೇಟಾ ಎರವಲು‌ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು‌ ಅಧಿಕಾರಿಗಳು ತಿಳಿಸಿದ್ದಾರೆ.

Illegal gold
ಅಕ್ರಮ ಚಿನ್ನ ವಶ

ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನ ಬಂಧನ (ದೇವನಹಳ್ಳಿ): ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ 57 ಲಕ್ಷ ಮೌಲ್ಯದ 951 ಗ್ರಾಂ ಜಪ್ತಿ ಮಾಡಲಾಗಿದೆ. ಅಕ್ಟೋಬರ್ 30 ರಂದು ಬ್ಯಾಂಕಾಕ್ ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಸಂಶಯಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, 951.40 ಗ್ರಾಂ ತೂಕದ 57, 46,456 ರೂಪಾಯಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: 12 ವರ್ಷಗಳಿಂದ ಕಳ್ಳತನವೇ ಫುಲ್‌ಟೈಮ್‌ ಕೆಲಸ: 75ಕ್ಕೂ ಹೆಚ್ಚು ಪ್ರಕರಣದಲ್ಲಿ ಬೇಕಿದ್ದ ಆರೋಪಿಗಳು ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.