ETV Bharat / state

ವಿದೇಶಿ ಕನ್ನಡಿಗರೊಂದಿಗೆ ಟಿ.ಎಸ್.ನಾಗಾಭರಣ ವಿಡಿಯೋ ಸಂವಾದ

author img

By

Published : Aug 19, 2020, 5:02 PM IST

ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವಿಡಿಯೋ ಸಂವಾದ ನಡೆಸಿ, ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿದರು.

Ts Nagabharana
Ts Nagabharana

ಬೆಂಗಳೂರು: ಕನ್ನಡ ಭಾಷಾ ಕೌಶಲ್ಯ ಆನ್ ಲೈನ್ ಪರೀಕ್ಷೆಗೆ ಸಂಬಂಧಿಸಿದಂತೆ ಪಠ್ಯಕ್ರಮ, ಪರೀಕ್ಷಾ ಕ್ರಮ, ಮೌಲ್ಯಮಾಪನ ಇತ್ಯಾದಿ ವಿಷಯಗಳ ಕುರಿತು ವಿದೇಶಿ ಕನ್ನಡಿಗರೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ವಿಡಿಯೋ ಸಂವಾದ ನಡೆಸಿದರು.

ವಿಧಾನಸೌಧದಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ವಿಡಿಯೋ ಸಂವಾದದ ಮೂಲಕ ಮಾತನಾಡಿ, ಕನ್ನಡಿಗರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅವರಿಗೆ ಕನ್ನಡದ ಪರಿಸರ ನಿರ್ಮಾಣ ಮಾಡುವುದು ನಮ್ಮ ಆಶಯ. ಜೊತೆಗೆ ಗಡಿನಾಡು ಹಾಗೂ ಹೊರದೇಶಗಳಲ್ಲಿ ನೆಲೆಸಿರುವ, ಕನ್ನಡ ಕಲಿತಿರುವ ಬಗ್ಗೆ ದೃಢೀಕರಣ ಪತ್ರವನ್ನು ಬಯಸುವವರಿಗೆ ಹಾಗೂ ಉನ್ನತ ಶಿಕ್ಷಣದಲ್ಲಿ ಸೀಟು ಪಡೆಯಲು ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗರು ಉದ್ಯೋಗವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕನ್ನಡ ಭಾಷಾ ಕೌಶಲ್ಯ ಆನ್‌ಲೈನ್ ಪರೀಕ್ಷೆ ಹೆಚ್ಚು ಸಹಕಾರಿಯಾಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಮಾತನಾಡಿ, ಸರ್ಕಾರವು ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡುವ ನೀತಿಯನ್ನು ರೂಪಿಸಿದೆ. ಹಾಗಾಗಿ ಆಸಕ್ತರು ಕನ್ನಡ ಭಾಷಾ ಕೌಶಲ್ಯ ಆನ್ ಲೈನ್ ಪರೀಕ್ಷೆಯನ್ನು ಪಾಸ್ ಮಾಡಿಕೊಂಡು ಉದ್ಯೋಗಿಗಳಾಗಿ ಕನ್ನಡ ನಾಡಿಗೆ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು.

ವಿಶ್ರಾಂತ ಕುಲಪತಿಗಳಾದ ಪ್ರೊ.ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ದೇಶ, ವಿದೇಶಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ನೆಲೆಸಿರುವವರಿಗೆ ಈ ರೀತಿಯ ಕಲಿಕಾ ಪರೀಕ್ಷೆ ವಿಶೇಷವಾಗಿದೆ. ಇದರ ಜೊತೆಗೆ ಸಂವಹನಕ್ಕೆ ಸಹಕಾರಿಯಾಗಬಲ್ಲ ಹಾಗೂ ದಿನನಿತ್ಯ ಬಳಕೆಮಾಡುವ ಪದಗಳ ಕುರಿತ ಡಿಜಿಟಲ್ ಪದಕೋಶವೊಂದನ್ನು ರಚಿಸಿದರೆ ಹೊಸದಾಗಿ ಕನ್ನಡ ಕಲಿಯುವವರಿಗೆ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಅಮೆರಿಕದ ನಲಿಕಲಿ ಅಕಾಡೆಮಿಯ ಅರುಣ್ ಸಂಪತ್, ಸಿಡ್ನಿಯ ಕನಕಾಪುರ ನಾರಾಯಣ, ಸಿಂಗಾಪುರದ ರಾಮನಾಥ್, ವೆಂಕಟ್, ಸ್ವೀಡನ್ ಶಿಕ್ಷಕಿ ವಿಜಯಲಕ್ಷ್ಮಿ, ಅಮೆರಿಕದ ರಾಜೇಶ್, ತಂತ್ರಾಂಶ ತಜ್ಞ ಮಧು ಜ್ಞಾನೇಶ್ವರ್, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಜೈನ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ, ನಲಿ-ಕಲಿ ಸಂಪನ್ಮೂಲ ವ್ಯಕ್ತಿ ಆರ್.ಡಿ.ರವೀಂದ್ರ, ಪ್ರಾಧಿಕಾರದ ಸದಸ್ಯರಾದ ಗುಬ್ಬಿಗೂಡು ರಮೇಶ್, ಅಮೆರಿಕದ ಮಧು ರಂಗಪ್ಪಗೌಡ ಹೀಗೆ ಹಲವು ಮಂದಿ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಿ, ಇಂತಹ ವಿಶೇಷ ಸಭೆಯನ್ನು ಆಯೋಜಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿದೇಶಿ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.