ETV Bharat / state

ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ

author img

By

Published : Dec 7, 2022, 9:47 PM IST

ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಓಡಾಡುವ ವಾಹನ ಸವಾರರ ಮನೆ ಬಾಗಿಲಿಗೆ ದಂಡದ ರಶೀದಿ ಕಳುಹಿಸಲು ಸಂಚಾರಿ ಪೊಲೀಸರು ಹೊಸ​ ಯೋಜನೆ ರೂಪಿಸಿದ್ದಾರೆ.

traffic-police-using-technology-to-control-traffic-violation
ವಾಹನ ಸವಾರರ ಮೇಲೆ ಹೊಸ ಅಸ್ತ್ರ ಪ್ರಯೋಗ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್​ ಜಾಮ್​ ಕಿರಿಕಿರಿ ಕಡಿಮೆ ಮಾಡುತ್ತಿರುವ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ. ಸಂಚಾರಿ ನಿಯಮಗಳನ್ನು ಗಾಳಿಗೆ ತೂರುವವರ ವಿರುದ್ಧ ಸದ್ದಿಲ್ಲದೆ ಹೊಸ ಅಸ್ತ್ರ ಪ್ರಯೋಗಕ್ಕೆ ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಕಳೆದೆರಡು ವಾರಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಗರಿಷ್ಠ ವಾಹನ ದಟ್ಟಣೆ ಇರುವ ಸಮಯದಲ್ಲಿ ಕಚೇರಿಗಳಿಗೆ ತಲುಪುವ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ಹಿಂದೆ ರಸ್ತೆ ಬದಿ ನಿಂತು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದವರಿಗೆ ದಂಡ ಹಾಕುತ್ತಿದ್ದ ಸಂಚಾರಿ ಪೊಲೀಸರು, ಈಗ ಟ್ರಾಫಿಕ್​ ನಿಯಂತ್ರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ವಾಹನ ದಟ್ಟಣೆ ನಿಯಂತ್ರಿಸಲು ಹೊಸ ಪ್ಲಾನ್: ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಓಡಾಡುವ ವಾಹನ ಸವಾರರ ಮನೆ ಬಾಗಿಲಿಗೆ ದಂಡದ ರಶೀದಿ ಕಳುಹಿಸಲು ಹೊಸ​ ಯೋಜನೆಯನ್ನು ಪೊಲೀಸರು ರೂಪಿಸಿದ್ದಾರೆ. ನಗರದಲ್ಲಿ ಈಗಾಗಲೇ ತಂತ್ರಜ್ಞಾನ ಬಳಸಿಕೊಂಡು ದಂಡದ ರಶೀದಿ ಮನೆಗೆ ತಲುಪಿಸುವ ಯೋಜನೆ ಜಾರಿಯಲ್ಲಿದೆ. ಆದರೆ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದು ಪ್ರತಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ಹಾಕಲು ಮುಂದಾಗಿದ್ದಾರೆ.

ಮನೆಗೆ ಬರಲಿದೆ ದಂಡ ರಶೀದಿ: ಅದಕ್ಕಾಗಿಯೇ ಸಿಗ್ನಲ್​ಗಳು, ರಸ್ತೆ ಮತ್ತು ಜಂಕ್ಷನ್​ಗಳಲ್ಲಿರುವ ಸಿಸಿಟಿವಿ, ಬಾಡಿ ಕ್ಯಾಮೆರಾ ಹಾಗೂ ಆ್ಯಪ್ ಆಧಾರಿತ ಮೊಬೈಲ್ ಮೂಲಕ ಸವಾರರಿಗೆ ದಂಡ ಹಾಕಲು ಯೋಜನೆ ರೂಪಿಸಿದ್ದಾರೆ. ಟ್ರಾಫಿಕ್​ ನಿಯಂತ್ರಣ ಮಾಡುವುದರ ಜೊತೆಗೆ ಪೊಲೀಸರು ಬಾಡಿವೇರ್​ ಕ್ಯಾಮೆರಾ ಹಾಗೂ ಮೊಬೈಲ್​ಗಳಲ್ಲಿ ಫೋಟೋ ತೆಗೆದು ಸಾಕ್ಷಿ ಸಮೇತ ದಂಡದ ರಶೀದಿ ಕಳುಹಿಸಲಿದ್ದಾರೆ. ಇದರ ಜೊತೆಗೆ ನೋ ಎಂಟ್ರಿ, ಒನ್ ವೇ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಉಲ್ಲಂಘನೆ ಸೇರಿದಂತೆ ಇತರೆ ನಿಯಮ ಉಲ್ಲಂಘನೆ ಪ್ರಕರಣಗಳ ಮೇಲೆ ಸಿಸಿಟಿವಿ ಮೂಲಕ ಟ್ರಾಫಿಕ್ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ.

30 ಸಾವಿರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ: ನಗರದಲ್ಲಿ ಈ ಮೊದಲು ಪ್ರತಿನಿತ್ಯ 30 ಸಾವಿರ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು ಆದರೂ ಜನ ಸಂಚಾರಿ ನಿಯಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದರು. ಆದ್ದರಿಂದ ಟ್ರಾಫಿಕ್ ನಿಯಂತ್ರಣದ ಜೊತೆಗೆ ತಂತ್ರಜ್ಞಾನದ ಸಹಾಯದಿಂದ ಸವಾರರ ಮೇಲೆ ದಂಡ ಪ್ರಯೋಗ ಮಾಡಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಒಂಚೂರು ಗಮನಿಸಿ.. ವಾಹನ ಚಲಾಯಿಸುವಾಗ ಇನ್ಮೇಲೆ ಇಯರ್ ಫೋನ್​​ ಬಳಸಿದರೆ ದಂಡ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.