ETV Bharat / state

ಸಂಚಾರ ದಟ್ಟಣೆ ತಪ್ಪಿಸಲು ಶಾಲೆ, ಕೈಗಾರಿಕೆಗಳ ಸಮಯ ಬದಲಾವಣೆ: ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಕಾಲಾವಕಾಶ

author img

By ETV Bharat Karnataka Team

Published : Oct 10, 2023, 9:43 PM IST

ಹೈಕೋರ್ಟ್‌ನಲ್ಲಿ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು ತೀರ್ಮಾನ ಕೈಗೊಳ್ಳಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

High Court News
ಹೈಕೋರ್ಟ್ ಸುದ್ದಿ

ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ನಿತ್ಯ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆ ನಿವಾರಿಸುವ ಸಲುವಾಗಿ ಶಾಲೆ, ಕೈಗಾರಿಕೆ, ವಾಣಿಜ್ಯ ಮತ್ತು ಕಂಪನಿಗಳ ಕೆಲಸದ ಅವಧಿ ಬದಲಾವಣೆ ಮಾಡುವ ಸಾಧ್ಯತೆಯ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಗ್ರ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ಮತ್ತೆ 8 ವಾರಗಳ ಕಾಲಾವಕಾಶ ನೀಡಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಎಸ್ಟೀಮ್‌ ಮಾಲ್‌ವರೆಗೆ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಕಾಲಾವಕಾಶ ನೀಡಿದೆ.

ಅರ್ಜಿಯನ್ನು ಸೆ.12ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಬೆಂಗಳೂರು ನಗರದಲ್ಲಿ ನಿತ್ಯ ಉಂಟಾಗುತ್ತಿರುವ ಸಂಚಾರದ ದಟ್ಟಣೆ ಸಮಸ್ಯೆ ನಿವಾರಿಸಬೇಕಿದೆ. ಈ ನಿಟ್ಟಿನಲ್ಲಿ ಶಾಲೆಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡುವ ಕುರಿತಂತೆ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮೂಲಕ ಖಾಸಗಿ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಬಸ್‌ ಆಪರೇಟರ್‌ಗಳು, ಪೋಷಕರ ಸಂಘಗಳು ಪ್ರತಿನಿಧಿಗಳ ಜೊತೆಗೆ ಸಭೆ ಕರೆದು ಸಮಾಲೋಚಿಸಿ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ, ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಹಾಜರಾಗಿ , ಹೈಕೋರ್ಟ್‌ ನಿರ್ದೇಶನದಂತೆ ಸಂಬಂಧಪಟ್ಟವರ ಜೊತೆಗೆ ಸರ್ಕಾರ ಸಮಾಲೋಚನೆ ನಡೆಸಿದೆ. ಅ.5ರಂದು ಕಾರ್ಮಿಕ ಇಲಾಖೆ, ಎಫ್‌ಕೆಸಿಸಿಐ, ವಾಣಿಜ್ಯೋದ್ಯಮಿಗಳು ಹಾಗೂ ಕಾರ್ಮಿಕರ ಒಕ್ಕೂಟಗಳ ಪ್ರತಿನಿಧಿಗಳ ಜೊತೆಗೆ ಸಮಾಲೋಚನೆ ನಡೆಸಲಾಗಿದೆ. ಅ.9ರಂದು ಶಾಲಾ ಆಡಳಿತ ಮಂಡಳಿ, ಪೋಷಕರ ಒಕ್ಕೂಟದೊಂದಿಗೆ ಸಭೆ ನಡೆಸಲಾಯಿತು.

ಹಾಗೆಯೇ, ಸಾರಿಗೆ ಮತ್ತು ಸಂಚಾರ ವಿಭಾಗದ ಪೊಲೀಸ್‌ ಇಲಾಖೆ ಅಧಿಕಾರಿಗಳೊಂದಿಗೂ ಸಭೆ ನಡೆಸಲಾಗಿದೆ. ಸಂಚಾರ ದಟ್ಟಣೆಗೆ ಪರಿಹಾರ ಕಂಡುಹಿಡಿಯಲು ಸಮಾಲೋಚನೆ‌ ಪ್ರಕ್ರಿಯೆ ಮುಂದುವರಿಯಲಿದ್ದು, ಅಂತಿಮ ಅಭಿಪ್ರಾಯ ಕುರಿತಂತೆ ವರದಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.

ಆ ಮನವಿ ಪರಿಗಣಿಸಿದ ಹೈಕೋರ್ಟ್‌, ನ್ಯಾಯಾಪೀಠ ಸೂಚನೆಯ ಮೇರೆಗೆ ಸರ್ಕಾರವು ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಚರ್ಚಿಸಿ, ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಸಭೆಯಲ್ಲಿ ಸಂಬಂಧಪಟ್ಟವರು ಪಾಲುದಾರರು ಭಾಗವಹಿಸಿದ್ದು, ಸಭೆಯ ಅಂತಿಮ ನಿರ್ಧಾರ ತೀರ್ಮಾನಕ್ಕೆ ಬರಬೇಕಿದೆ. ಇದು ಒಂದು ಪ್ರಕ್ರಿಯೆಯಾಗಿದ್ದು, ತೀರ್ಮಾನ ಏನೆಂಬುದನ್ನು ಎದುರು ನೋಡಬೇಕಿದೆ. ಆ ಕುರಿತಂತೆ ಸಮಗ್ರವಾದ ವರದಿ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಎಂಟು ವಾರ ಕಾಲಾವಕಾಶ ನೀಡಲಾಗುತ್ತಿದೆ ಎಂದು ತಿಳಿಸಿ ಚಾರಣೆ ಮುಂದೂಡಿತು.

ಇದನ್ನೂ ಓದಿ : ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕೊರತೆಯಿಂದಾಗಿ ಬಡವರೂ ಸಹ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಂತಾಗಿದೆ: ಹೈಕೋರ್ಟ್ ಬೇಸರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.