ETV Bharat / state

ಬಿಸಿಯೂಟ ನೌಕರರ ಪರದಾಟ: ಮೂರು ತಿಂಗಳಿಂದ ವೇತನ ಪಾವತಿಸದ ರಾಜ್ಯ ಸರ್ಕಾರ

author img

By

Published : Nov 6, 2022, 8:32 PM IST

ಕಳೆದ ಮೂರು ತಿಂಗಳುಗಳಿಂದ ರಾಜ್ಯ ಸರ್ಕಾರವು ಬಿಸಿಯೂಟ ನೌಕರರಿಗೆ ವೇತನ ಪಾವತಿ ಮಾಡಿಲ್ಲ. ಇದರಿಂದಾಗಿ ಬಿಸಿಯೂಟ ನೌಕರರು ಸಂಕಷ್ಟಕೀಡಾಗಿದ್ದಾರೆ.

three-months-salary-of-midday-meal-staff-not-paid-by-state-govt
ಬಿಸಿಯೂಟ ನೌಕರರ ಪರದಾಟ: ಮೂರು ತಿಂಗಳಿಂದ ವೇತನ ಪಾವತಿಸದ ರಾಜ್ಯ ಸರ್ಕಾರ

ಬೆಂಗಳೂರು : ಎರಡು ವರ್ಷ ಕೋವಿಡ್​​ನಿಂದಾಗಿ ಸ್ಥಗಿತವಾಗಿದ್ದ ಶಾಲಾ ಮಕ್ಕಳ ಬಿಸಿಯೂಟ ಯೋಜನೆ ಈ ಶೈಕ್ಷಣಿಕ ವರ್ಷದಿಂದ ಆರಂಭವಾಗಿದೆ. ಆದರೆ ಕಳೆದ ಮೂರು ತಿಂಗಳಿಂದ ಬಿಸಿಯೂಟ ನೌಕರರಿಗೆ ಸರ್ಕಾರ ವೇತನ ಪಾವತಿ ಮಾಡಿಲ್ಲ. ಇದರಿಂದಾಗಿ ಬಿಸಿಯೂಟ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕರ್ನಾಟಕ ರಾಜ್ಯ ಸರಕಾರದ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಈಗಾಗಲೇ ಆರಂಭವಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಶಾಲಾ ಮಕ್ಕಳ ಬಿಸಿಯೂಟ ಸ್ಥಗಿತವಾಗಿತ್ತು. ಈ ಶೈಕ್ಷಣಿಕ ವರ್ಷದ ಮೇ 16ರಿಂದ ಬಿಸಿಯೂಟವನ್ನು ಸರ್ಕಾರ ಪುನರಾರಂಭಿಸಿತ್ತು. ಆದರೆ ಆರಂಭದಲ್ಲಿ ಕೆಲವರಿಗೆ ಎರಡು ತಿಂಗಳ ವೇತನ ಮಾತ್ರ ಪಾವತಿಸಲಾಗಿದೆ.

ಬಿಸಿಯೂಟ ನೌಕರರು ತಮ್ಮ ಬಾಕಿ ವೇತನ ಪಾವತಿಗಾಗಿ ಬೆಂಗಳೂರಿನಲ್ಲಿ ಧರಣಿ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತಮ್ಮ ಕೆಲಸವನ್ನೇ ನಂಬಿಕೊಂಡಿದ್ದ ರಾಜ್ಯದ 1.18 ಲಕ್ಷ ಅಕ್ಷರ ದಾಸೋಹದ ನೌಕರರು ತೊಂದರೆ ಅನುಭವಿಸುವಂತಾಗಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಮೇ, ಜೂನ್, ಜುಲೈ ತಿಂಗಳಲ್ಲಿ ಶಿಕ್ಷಣ ಇಲಾಖೆ ಅರ್ಧದಷ್ಟು ಬಿಸಿಯೂಟ ನೌಕರರಿಗೆ ವೇತನವನ್ನು ಪಾವತಿಸಿತ್ತು. ಆದರೆ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ರಾಜ್ಯ ಸರ್ಕಾರ ವೇತನ ಪಾವತಿಸಲು ಮರೆತಂತಿದೆ. ಮಾಸಿಕ ತಲಾ 3,700 ರೂ.ರಂತೆ ಬಿಸಿಯೂಟ ನೌಕರನಿಗೆ ವೇತನ ನೀಡಲಾಗುತ್ತದೆ. ಬಿಸಿಯೂಟ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಯೋಜನೆಗೆ ಅನುದಾನ ನೀಡುತ್ತಿದೆ. ಆದರೆ ಕಳೆದ ಮೂರು ತಿಂಗಳಿಂದ ಶಿಕ್ಷಣ ಇಲಾಖೆ ಬಿಸಿಯೂಟ ನೌಕರರಿಗೆ ವೇತನ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಬಿಸಿಯೂಟ ನೌಕರರ ಪರದಾಟ: ಮೂರು ತಿಂಗಳಿಂದ ವೇತನ ಪಾವತಿಸದ ರಾಜ್ಯ ಸರ್ಕಾರ

ಬಿಸಿಯೂಟ ನೌಕರ ಒಕ್ಕೂಟದ ಪದಾಧಿಕಾರಿಗಳು ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ವೇತನ ಶೀಘ್ರ ಬಿಡುಗಡೆಗೆ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಅಧಿಕಾರಿಗಳು ಇಂದು, ನಾಳೆ ಹಣ ಬಿಡುಗಡೆ ಮಾಡುತ್ತೇವೆ ಎಂಬ ಪೊಳ್ಳು ಭರವಸೆ ನೀಡುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಹೇಳುವಂತೆ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಪಾವತಿ ಮಾಡಬೇಕಾಗಿರುವುದರಿಂದ ನೌಕರರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ವೇತನ ಪಾವತಿ ವಿಳಂಬವಾಗಿದೆ ಎಂಬ ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಬಿಸಿಯೂಟ ನೌಕರರ ಒಕ್ಕೂಟದ ಮಾಲಿನಿ ಮೇಸ್ತಾ ಅವರು ಆರೋಪಿಸಿದ್ದಾರೆ.

ಬಿಸಿಯೂಟಕ್ಕೆ ಹಂಚಿಕೆ, ಬಿಡುಗಡೆಯಾದ ಹಣ: ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಈ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ 432.82 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 526.76 ಕೋಟಿ ರೂ. ಸೇರಿದಂತೆ 959.58 ಕೋಟಿ ರೂ. ಹಂಚಿಕೆ ಮಾಡಿದೆ. ಅಕ್ಟೋಬರ್​​ವರೆಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಪೈಕಿ 131.69 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ರಾಜ್ಯ ಸರ್ಕಾರ 108.20 ಕೋಟಿ ರೂ. ಬಿಡುಗಡೆ ಮಾಡಿದೆ. ಆ ಮೂಲಕ ಒಟ್ಟು 239.89 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಈವರೆಗೆ ಕೇಂದ್ರ ಸರ್ಕಾರ ಬಿಸಿಯೂಟಕ್ಕಾಗಿ 127.75 ಕೋಟಿ ರೂ. ಖರ್ಚು ಮಾಡಿದೆ. ರಾಜ್ಯ ಸರ್ಕಾರ 96.19 ಕೋಟಿ ರೂ. ವೆಚ್ಚ ಮಾಡಿದೆ. ಆ ಮೂಲಕ ಒಟ್ಟು 223.94 ಕೋಟಿ ರೂ. ವೆಚ್ಚ ಮಾಡಿದೆ. ಅಂದರೆ ಒಟ್ಟು ಅನುದಾನ ಹಂಚಿಕೆಯಲ್ಲಿ ಅಕ್ಟೋಬರ್ ವರೆಗೆ ಕೇವಲ ಶೇ.23.34 ಮಾತ್ರ ಬಳಕೆಯಾಗಿದೆ. ಹಣಕಾಸು ವರ್ಷದ ಏಳು ತಿಂಗಳು ಕಳೆದರೂ ಬಿಸಿಯೂಟ ನೌಕರರಿಗೆ ವೇತನ ನೀಡಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ.

ಇದನ್ನೂ ಓದಿ : ನಾವು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ನಿಮಗೆ ಗೌರವ ಸಲ್ಲಿಸುತ್ತೇವೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.