ETV Bharat / state

ಆರ್ಥಿಕ ಪ್ರಗತಿಯ ಗುರಿಯಿಲ್ಲದ, ಆರೋಗ್ಯ, ಆಹಾರ ಭದ್ರತೆ ಬಗ್ಗೆ ಕಿಂಚಿತ್ತೂ ಕಾಳಜಿ ಇರದ ನಿರರ್ಥಕ ಬಜೆಟ್ : ಟಿ ಎ ಶರವಣ

author img

By

Published : Feb 1, 2022, 3:30 PM IST

ಬಡವರಿಗೆ ಆಹಾರ ಭದ್ರತೆ ಮತ್ತು ಆರೋಗ್ಯ ಭದ್ರತೆ ನೀಡುವ ಕಡೆ ಈ ಬಜೆಟ್​​ನ ಕೊಡುಗೆ ಸಂಪೂರ್ಣ ಶೂನ್ಯವಾಗಿದೆ. ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ರಹಿತ ಸಾಲ ಕೊಡಬೇಕು. ಯುವ ಜನರಿಗೆ ಸ್ವಂತ ಶ್ರಮದ ಮೇಲೆ ಸ್ವಾಲಂಬಿಗಳಾಗುವಂತೆ ಮಾಡವಂತಹ ಯೋಜನೆಗಳನ್ನು ಘೋಷಿಸುವುದರಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಹಾಗಾಗಿ, ಇದೊಂದು ನಿರರ್ಥಕ ಬಜೆಟ್ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಹೇಳಿದ್ದಾರೆ..

T.A. sharavana criticise
ಟಿ.ಎ. ಶರವಣ ಟೀಕೆ

ಬೆಂಗಳೂರು : ಆರ್ಥಿಕ ಪ್ರಗತಿಯ ಗುರಿಯಿಲ್ಲದ, ಕೃಷಿಯ ದೂರ ದೃಷ್ಟಿಯಿಲ್ಲದ, ಉದ್ಯೋಗ ಸೃಷ್ಟಿ, ಆರೋಗ್ಯ ಮತ್ತು ಆಹಾರ ಭದ್ರತೆ ಬಗ್ಗೆ ಕಿಂಚಿತ್ತೂ ಕಳಕಳಿಯಿಲ್ಲದ ಯಥಾಸ್ಥಿತಿಯ ನಿರರ್ಥಕ ಬಜೆಟ್ ಎಂದು ವಿಧಾನಪರಿಷತ್ ಮಾಜಿ ಜೆಡಿಎಸ್‌ ಸದಸ್ಯ ಟಿ ಎ ಶರವಣ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆಯವ್ಯಯದಲ್ಲಿ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿಂದೆ ರೈತರ ಪ್ರತಿಭಟನೆಯ ವೇಳೆ ಕೊಟ್ಟ ಭರವಸೆ ಈಡೇರಿಸದೇ ಮಾತಿಗೆ ತಪ್ಪಿದ ವಿಶ್ವಾಸದ್ರೋಹಿ ಬಜೆಟ್ ಎಂದು ಟೀಕಿಸಿದ್ದಾರೆ.

ಆಹಾರ ಮತ್ತು ಆರೋಗ್ಯ ಭದ್ರತೆಗೆ ಬಜೆಟ್​ನ ಕೊಡುಗೆ ಶೂನ್ಯ : ಕಳೆದ ಎರಡು ವರ್ಷಗಳಿಂದ ದೇಶದ ಜನಸಾಮಾನ್ಯರು, ಬಡವರ ಬದುಕನ್ನು ಹದ್ದಿನಂತೆ ಕುಕ್ಕಿದ ಕೊರೊನಾ ರೋಗದಿಂದಾಗಿ ಆಹಾರ ಮತ್ತು ಆರೋಗ್ಯ ವಲಯ ಹಿಂದೆಂದೂ ಕಾಣದಂತ ಅಭದ್ರತೆಗೆ ಸಿಲುಕಿದೆ. ಈ ನಿಟ್ಟಿನಲ್ಲಿ ಬಡವರಿಗೆ ಆಹಾರ ಭದ್ರತೆ ಮತ್ತು ಆರೋಗ್ಯ ಭದ್ರತೆ ನೀಡುವ ಕಡೆ ಈ ಬಜೆಟ್​​ನ ಕೊಡುಗೆ ಸಂಪೂರ್ಣ ಶೂನ್ಯವಾಗಿದೆ. ನರೇಗಾ ಯೋಜನೆಯ ವ್ಯಾಪ್ತಿ ವಿಸ್ತರಿಸುವಲ್ಲಿ ಈ ಬಜೆಟ್​ನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ರಹಿತ ಸಾಲ ಕೊಡಬೇಕು. ಯುವ ಜನರಿಗೆ ಸ್ವಂತ ಶ್ರಮದ ಮೇಲೆ ಸ್ವಾಲಂಬಿಗಳಾಗುವಂತೆ ಮಾಡವಂತಹ ಯೋಜನೆಗಳನ್ನು ಘೋಷಿಸುವುದರಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. 60 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಬಜೆಟ್​ನಲ್ಲಿ ಘೋಷಿಸಿರುವುದು ಹಸಿಸುಳ್ಳು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬೆಳವಣಿಗೆ ದರ ಶೇ.9.2ರಷ್ಟು ನಿರೀಕ್ಷೆ ಸೇರಿ ಕೇಂದ್ರ ಬಜೆಟ್‌-2022-23ರ ಹೈಲೈಟ್ಸ್‌...

ಮಹಾತ್ವಾಕಾಂಕ್ಷೆಯ ನದಿ ಜೋಡಣೆಯನ್ನು ಜಾರಿಗೆ ತರುವುದಾಗಿ ಬಜೆಟ್​ನಲ್ಲಿ ಪ್ರಕಟಿಸಲಾಗಿದೆ. ರಾಜ್ಯದ ಕೃಷ್ಣಾ-ಗೋದಾವರಿ, ಹಾಗೆ ಕೃಷ್ಣಾ- ಪೆನ್ನಾರ್ ಇದರಂತೆ ರಾಜ್ಯದ ಜೀವನದಿಗೆ ಕಾವೇರಿ-ಪೆನ್ನಾರ್ ನದಿಗಳನ್ನು ಸಂಪರ್ಕಿಸುವ ಯೋಜನೆ ಪ್ರಕಟಿಸಲಾಗಿದೆ. ಆದರೆ, ರಾಜ್ಯದ ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸು ನೆರವನ್ನು ಘೋಷಿಸಿಲ್ಲ. ಮೇಕೆದಾಟು ಮತ್ತು ಮಹಾದಾಯಿ ಯೋಜನೆ ಕುರಿತಂತೆ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.

ಎನ್​​ಐಎನ್​​ಎಲ್ ಸಂಸ್ಥೆಯ ಖಾಸಗೀಕರಣ : ಖಾಸಗಿ ಬಂಡವಾಳ ಹೂಡಿಕೆಯ ಭರಾಟೆಯಲ್ಲಿ ಸರ್ಕಾರದ ಸಂಸ್ಥೆಗಳನ್ನು ಪರಬಾರೆ ಮಾಡುವ ಪ್ರಯತ್ನ ಮುಂದುವರೆದಿದೆ. ಎನ್​​ಐಎನ್​​ಎಲ್ ಸಂಸ್ಥೆಯನ್ನು ಖಾಸಗೀಕರಣ ಮಾಡುವುದಕ್ಕಾಗಿ ಸರ್ಕಾರ ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ. ಹಾಗೆ ಪ್ರಧಾನಮಂತ್ರಿಗಳ ಗತಿ ಶಕ್ತಿಯೋಜನೆಗಳಲ್ಲಿ ರಾಜ್ಯಕ್ಕೆ ಕೊಡಬೇಕಾದ ಕೊಡುಗೆಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಹೆದ್ದಾರಿ ನಿರ್ಮಾಣ ಬಗ್ಗೆಯೂ ವಿವರಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕ್ರಿಪ್ಟೋ ಕರೆನ್ಸಿ ಮಾದರಿಯಲ್ಲಿ ಡಿಜಿಟಲ್ ಕರೆನ್ಸಿ ಸೃಷ್ಟಿಸಿ, ಪರ್ಯಾಯ ಹಣಕಾಸು ವ್ಯವಸ್ಥೆಯನ್ನು ರೂಪಿಸುವ ಸರ್ಕಾರದ ಈ ಯತ್ನದ ಹಿಂದೆ ಭಾರೀ ಮೊತ್ತದ ಡಿಜಿಟಲ್ ತೆರಿಗೆ ಸಂಗ್ರಹಿಸುವ ಉದ್ದೇಶವಿದೆ. ಇದು ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿಲ್ಲದೆ, ಹೊಸ ರೀತಿಯ ತೆರಿಗೆ ಸೃಷ್ಟಿಸಲು ಯತ್ನ ನಡೆಸಿದೆ ಎನ್ನುವ ಗುಮಾನಿಗೆ ಎಡೆ ಮಾಡಿಕೊಡುತ್ತದೆ.

ಇದಲ್ಲದೇ ಜಿಎಸ್​​ಟಿಯಲ್ಲಿ ರಾಜ್ಯದ ತೆರಿಗೆ ಪಾಲನ್ನು ಸಮರ್ಪಕವಾಗಿ ಸಕಾಲಕ್ಕೆ ನೀಡದೇ, ಸತಾಯಿಸುವ ಕೇಂದ್ರ ಸರ್ಕಾರ, ಹೊಸ ಯೋಜನೆಯಲ್ಲಿ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ಘೋಷಿಸಿರುವುದು ಆಶ್ಚರ್ಯವೇ ಸರಿ. ಈ ಮೂಲಕವಾಗಿ ರಾಜ್ಯಕೀಯವಾಗಿ ಅನುಕೂಲವಾಗುವ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಬೇಕಾಬಿಟ್ಟಿ ಹಣ ಬಿಡುಗಡೆ ಮಾಡುವ ಅವೈಜ್ಞಾನಿಕ ಯೋಜನೆ ಇದಾಗಿದೆ ಎಂದು ಶರವಣ ಟೀಕಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.