ETV Bharat / state

ಕೇಂದ್ರ ಬಜೆಟ್ ಮೇಲೆ ಹತ್ತು ಹಲವು ನಿರೀಕ್ಷೆ ; ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯಕ್ಕೆ ಸಿಗುತ್ತಾ ಭರಪೂರ ಕೊಡುಗೆ?

author img

By

Published : Jan 30, 2023, 6:14 PM IST

ಫೆಬ್ರವರಿ 1ಕ್ಕೆ ಕೇಂದ್ರ ಸರ್ಕಾರದಿಂದ ಬಜೆಟ್​ ಮಂಡನೆ - ರಾಜ್ಯ ಸರ್ಕಾರದಿಂದ ಕೇಂದ್ರ ಹಣಕಾಸು ಸಚಿವೆಗೆ ಬೇಡಿಕೆಗಳ ಪಟ್ಟಿ ಸಲ್ಲಿಕೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು : ಕೇಂದ್ರ ಸರ್ಕಾರ ಫೆಬ್ರವರಿ 1ಕ್ಕೆ(ಬುಧವಾರ) ಬಜೆಟ್ ಮಂಡನೆ ಮಾಡಲಿದೆ. ಚುನಾವಣಾ ಹೊಸ್ತಿಲಲ್ಲಿ ಇರುವ ಬಸವರಾಜ ಬೊಮ್ಮಾಯಿ ಸರ್ಕಾರವು ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇತ್ತ ರಾಜ್ಯಕ್ಕೂ ಇದು ಚುನಾವಣೆ ವರ್ಷ ಆಗಿರುವುದರಿಂದ ಕೇಂದ್ರ ಬಜೆಟ್ ಕರ್ನಾಟಕಕ್ಕೆ ಹೆಚ್ಚಿನ ಕೊಡುಗೆ ನೀಡಲಿದೆ ಎಂಬ ವಿಶ್ವಾಸವನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಹೊಂದಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ಕ್ಕೆ ಸಂಸತ್​ನಲ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ದೇಶದ ಜನರಿಗೆ, ಮಧ್ಯಮ ವರ್ಗ, ದುಡಿಯುವ ವರ್ಗ, ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟಿದೆ. ಇತ್ತ ಕರ್ನಾಟಕದ ಜನರೂ ಕೇಂದ್ರದ ಬಜೆಟ್ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅದರಲ್ಲೂ ರಾಜ್ಯ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ. ಬೊಮ್ಮಾಯಿ‌ ಸರ್ಕಾರವು ಕೇಂದ್ರ ಬಜೆಟ್​ನಿಂದ ಕರ್ನಾಟಕಕ್ಕೆ ಹೆಚ್ಚಿನ ಕೊಡುಗೆ ನೀಡುವ ವಿಶ್ವಾಸದಲ್ಲಿದೆ.

ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಕರ್ನಾಟಕದ ಬಜೆಟ್ ವಿಶ್ ಲಿಸ್ಟ್​ಅನ್ನು ಸಲ್ಲಿಸಿದೆ. ರಾಜ್ಯದ ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ಹಣಕಾಸು ಸಚಿವೆಗೆ ಸಲ್ಲಿಸಲಾಗಿದೆ. ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ಬಜೆಟ್​ನಲ್ಲಿ ರಾಜ್ಯದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಲಾಗಿದೆ. ಆ ಮೂಲಕ ಡಬಲ್‌ ಇಂಜಿನ್ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ತುಂಬಿಸುವ ಇರಾದೆ ಕೇಂದ್ರ ಸರ್ಕಾರದ್ದಾಗಿದೆ.

ರಾಜ್ಯ ಸರ್ಕಾರದ ಬಜೆಟ್ ಬೇಡಿಕೆಗಳೇನು? : ರಾಜ್ಯ ಸರ್ಕಾರ ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ ಫೆಬ್ರವರಿ 17ಕ್ಕೆ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಕೇಂದ್ರದ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದೆ. ರಾಜ್ಯಕ್ಕೆ ಈ ಬಾರಿ ಕೇಂದ್ರ ಬಜೆಟ್​ನಲ್ಲಿ ಹೆಚ್ಚಿನ ಕೊಡುಗೆ ಬರುವ ವಿಶ್ವಾಸ ಹೊಂದಿದೆ. ಆ ಹಿನ್ನೆಲೆ ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಸಚಿವರಿಗೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ.

15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಬರಬೇಕಾದ 5,000 ಕೋಟಿ ರೂ.‌ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮನವಿ ಮಾಡಿದೆ. ಆ ಮೂಲಕ ರಾಜ್ಯಕ್ಕೆ ಹೆಚ್ಚಿನ ಅನುದಾನ ಲಭ್ಯವಾಗಲಿದ್ದು, ಹೆಚ್ಚಿನ ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿದೆ ಎಂಬುದು ರಾಜ್ಯ ಸರ್ಕಾರದ ಬೇಡಿಕೆ.

ಚುನಾವಣೆ ಹೊಸ್ತಿಲಲ್ಲಿ ಇದು ಹೆಚ್ಚಿನ ಲಾಭ ತರಲಿದೆ : ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ಕೇಂದ್ರದ ಮುಂದೆ ಮನವಿ ಮಾಡಿದೆ. ಆ ಮೂಲಕ ಯೋಜನಾ ವೆಚ್ಚದ 80% ಅನುದಾನ ಕೇಂದ್ರ ಸರ್ಕಾರ ಭರಿಸಲಿದೆ. ಬಜೆಟ್​ನಲ್ಲಿ ಈ ಮಹತ್ವದ ಘೋಷಣೆ ಮಾಡುವಂತೆ ಕೋರಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಇದು ಹೆಚ್ಚಿನ ಲಾಭ ತರಲಿದೆ. ಇದರ ಜೊತೆಗೆ ನೀರಾವರಿ ಯೋಜನೆಗಳಾದ ಮೇಕೆದಾಟು, ಎತ್ತಿನ‌ಹೊಳೆ, ಮಹದಾಯಿ ಯೋಜನೆಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಉಳಿದಂತೆ ರಾಜ್ಯಕ್ಕೆ ಹೆಚ್ಚಿನ ರೈಲ್ವೇ ಯೋಜನೆ, ಹೊಸ ರೈಲುಗಳನ್ನು ನೀಡುವಂತೆ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ. ಹೆಚ್ಚಿನ‌ ವಂದೇ ಭಾರತ್ ರೈಲು ನೀಡುವ ಬೇಡಿಕೆಯನ್ನು ಹಣಕಾಸು ಸಚಿವೆ ಮುಂದೆ ಇಟ್ಟಿದೆ. ಬೆಂಗಳೂರು-ಬೆಳಗಾವಿ, ಬೆಂಗಳೂರು-ಹುಬ್ಬಳ್ಳಿ ನಡುವೆ ಹೈ ಸ್ಪೀಡ್​ ರೈಲು ಸಂಪರ್ಕ ಯೋಜನೆ ಕಲ್ಪಿಸಲು ಮನವಿ ಮಾಡಲಾಗಿದೆ. ಅದೇ ರೀತಿ ಹೊಸ ಮೆಟ್ರೋ ಸಂಪರ್ಕ ಕಲ್ಪಿಸಲು ಹೆಚ್ಚಿನ ಅನುದಾನವನ್ನು ಘೋಷಿಸುವಂತೆ ಮನವಿ ಮಾಡಿದೆ.

ಕೇಂದ್ರ ಹಣಕಾಸು ಸಚಿವೆ ಮುಂದೆ ಬೇಡಿಕೆ : ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ ಇನ್ನಷ್ಟು ನಗರಗಳನ್ನು ಸೇರಿಸುವಂತೆ ಕೇಂದ್ರ ಹಣಕಾಸು ಸಚಿವೆ ಮುಂದೆ ಬೇಡಿಕೆ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ರಾಜ್ಯದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಮಂಜೂರು ಮಾಡುವಂತೆ ಕೋರಲಾಗಿದೆ. ಉಳಿದಂತೆ ಸಿಎಂ ಈಗಾಗಲೇ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರದಲ್ಲಿ ಉಪನಗರ ನಿರ್ಮಿಸಲು ಉದ್ದೇಶಿಸಿದ್ದಾರೆ.‌

ಜೊತೆಗೆ ರಾಜ್ಯದಲ್ಲಿ ಇನ್ನೂ 6 ಹೊಸ ಹೈಟೆಕ್ ನಗರಗಳನ್ನು ಕಟ್ಟುವುದಾಗಿ ಸಿಎಂ ಬೊಮ್ಮಾಯಿ‌ ಘೋಷಿಸಿದ್ದಾರೆ. ಮಂಗಳೂರು, ಹುಬ್ಬಳ್ಳಿ -ಧಾರವಾಡ, ಬೆಳಗಾವಿ, ಮೈಸೂರು, ಬೆಂಗಳೂರು ಸಮೀಪದ ದೇವನಹಳ್ಳಿ ಬಳಿ ಟೆಕ್ ಸಿಟಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗಳಿಗೆ ಕೇಂದ್ರದ ಅನುದಾನ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ‌ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಓದಿ : ಫೆ. 6ಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಬೆಂಗಳೂರು, ತುಮಕೂರಿನ ಕಾರ್ಯಕ್ರಮದಲ್ಲಿ ಭಾಗಿ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.