ETV Bharat / state

ಬೆಂಗಳೂರಲ್ಲಿ ಐಪಿಎಲ್‌ ಪಂದ್ಯಗಳು ನಡೆಯುವ ದಿನ ವಿಶೇಷ ಬಸ್​ ಸೌಲಭ್ಯ...

author img

By

Published : Apr 1, 2023, 11:02 PM IST

ಬೆಂಗಳೂರಲ್ಲಿ ಐಪಿಎಲ್‌ ಪಂದ್ಯಗಳು ನಡೆಯುವ ದಿನಗಳಲ್ಲಿ ವಿಶೇಷ ಬಸ್​ಗಳ ಸಂಚಾರ ಮಾಡಲಿದೆ ಎಂದು ಬಿಎಂಟಿಸಿ ತಿಳಿಸಿದೆ.

BMTC
ಬಿಎಂಟಿಸಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುವ ದಿನಗಳಂದು ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ನಮ್ಮ ಮೆಟ್ರೋ ತಡ ರಾತ್ರಿಯವರೆಗೆ ಸೇವೆಯನ್ನು ವಿಸ್ತರಿಸಿತ್ತು. ಈ ನಡುವೆ ನಗರದ ಹಲವು ಭಾಗಗಳಿಗೆ ಹೆಚ್ಚುವರಿ ವಿಶೇಷ ಬಸ್​ ಸೇವೆಯನ್ನು ಕೂಡಾ ಬಿಎಂಟಿಸಿ ಘೋಷಿಸಿದೆ.

5 ಲೀಗ್ ಪಂದ್ಯಾವಳಿಗಳು ಏಪ್ರಿಲ್ 10, 17, 26 ಮತ್ತು ಮೇ 21 ರಂದು ಬೆಂಗಳೂರಿನಲ್ಲಿ ನಡೆಯಲಿವೆ. ಈ ಹಿನ್ನೆಲೆ ರಾತ್ರಿ 11 ಗಂಟೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕೆಂಗೇರಿ ಕೆಎಚ್​ಬಿ ಕ್ವಾರ್ಟರ್ಸ್, ನೆಲಮಂಗಲ, ಯಲಹಂಕ, ಆರ್.ಕೆ.ಹೆಗಡೆ ನಗರ, ಬಾಗಲೂರು, ಹೊಸಕೋಟೆ ಕಡೆ ಇರಲಿದೆ ಎಂದಿದೆ. ಎಚ್ಎಎಲ್ ರಸ್ತೆ, ಹೂಡಿ, ಅಗರ ದೊಮ್ಮಸಂದ್ರ, ಹೊಸೂರು ರಸ್ತೆ, ಜಯದೇವ ಆಸ್ಪತ್ರೆ, ನಾಯಂಡನಹಳ್ಳಿ, ಮಾಗಡಿ ರಸ್ತೆ, ಯಶವಂತಪುರ, ಹೆಬ್ಬಾಳ, ನಾಗವಾರ, ಟ್ಯಾನರಿ ರಸ್ತೆ, ಹೆಣ್ಣೂರು ರಸ್ತೆ, ಟಿನ್ ಫ್ಯಾಕ್ಟರಿ ಮಾರ್ಗವಾಗಿ ಸಂಚರಿಸಲಿವೆ ಎಂದು ಬಿಎಂಟಿಸಿ ಸಂಸ್ಥೆ ಮಾಹಿತಿ ನೀಡಿದೆ.

ತಡರಾತ್ರಿಯವರೆಗೆ ಮೆಟ್ರೋ ರೈಲುಗಳು ಸಂಚಾರ: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಪಂದ್ಯಗಳು ನಿಗದಿಯಾಗಿರುವ ದಿನಗಳಲ್ಲಿ ಮೆಟ್ರೋ ರೈಲಿನ ಸಮಯವನ್ನು ವಿಸ್ತರಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ನಿನ್ನೆ ಪ್ರಕಟಣೆ ಹೊರಡಿಸಿತ್ತು.

ಐಪಿಎಲ್‌ ಪಂದ್ಯಗಳು ನಡೆಯುವ ದಿನಗಳಲ್ಲಿ ನಮ್ಮ ಮೆಟ್ರೋ ರೈಲುಗಳು ತಡರಾತ್ರಿಯವರೆಗೆ ಸಂಚಾರಿಸಲಿವೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. ಬೈಯಪ್ಪನಹಳ್ಳಿ- ಕೆಂಗೇರಿ ಮತ್ತು ನಾಗಸಂದ್ರ- ರೇಷ್ಮೆ ಸಂಸ್ಥೆಗಳ ರೈಲು ಸೇವೆಗಳನ್ನು ರಾತ್ರಿ 1 ಗಂಟೆಯವರೆಗೆ ಮೆಟ್ರೋ ಸೇವೆ ವಿಸ್ತರಿಸಲಾಗುವುದು. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕೊನೆಯ ರೈಲು 1.30ಕ್ಕೆ ಹೊರಡಲಿದೆ ಎಂದು ತಿಳಿಸಿತ್ತು. ಐಪಿಎಲ್‌ ಪಂದ್ಯಗಳು ಇರುವ ದಿನಗಳಂದು ಎಂ.ಜಿ. ರೋಡ್‌ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಹತ್ತುವವರು ಮತ್ತು ಇಳಿಯುವವರಿಗೆ ಪೇಪರ್ ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿತ್ತು.

ಪೇಪರ್ ಟಿಕೆಟ್‌ಗಳ ಬೆಲೆ 50 ರೂ. ಆಗಿರುತ್ತದೆ. ಐಪಿಎಲ್‌ ಕ್ರಿಕೆಟ್ ಪಂದ್ಯಗಳ ದಿನದಂದು ರಾತ್ರಿ 8ರಿಂದ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ-ಕೆಂಗೇರಿ ಮತ್ತು ನಾಗಸಂದ್ರ-ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಈ ಕಾಗದ ಟಿಕೆಟ್‌ ಮೂಲಕ ಪ್ರಯಾಣಿಸಬಹುದು. ಈ ಟಿಕೆಟ್‌ ಒಂದೇ ಪ್ರಯಾಣಕ್ಕೆ ಸೀಮಿತವಾಗಿರುತ್ತದೆ. ಈ ಪೇಪರ್ ಟಿಕೆಟ್‌ಗಳು ಮಾತ್ರವಲ್ಲದೇ ಸ್ಮಾರ್ಟ್ ಕಾರ್ಡ್‌ಗಳು, ಸಾಮಾನ್ಯ ದರದಲ್ಲಿ ಕ್ಯೂಆರ್ ಟಿಕೆಟ್‌ಗಳೂ ಲಭ್ಯವಿರಲಿದೆ ಎಂದು ಮಾಹಿತಿ ನೀಡಿತ್ತು.

ಹೊಸ ಮಾರ್ಗದಲ್ಲಿಲ್ಲ ಸಮಯ ವಿಸ್ತರಣೆ: ಹೊಸದಾಗಿ ಉದ್ಘಾಟನೆಗೊಂಡ ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಇನ್ನೂ ನೇರಳೆ ಮಾರ್ಗಕ್ಕೆ ಸಂಪರ್ಕಿಸದ ಕಾರಣ ಸಮಯದ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ: IPL 2023: ಪಂಜಾಬ್​ಗೆ 7 ರನ್​ ಗೆಲುವು... ಕೆಕೆಆರ್​ ಜಯಕ್ಕೆ ಮುಳುವಾದ ವರುಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.