ETV Bharat / state

ಡೀಸೆಲ್ ಬಸ್‌ಗಳಿಗೆ ಇವಿ ರೂಪ ಕೊಡಲು ತೈವಾನ್ ಒಲವು, ಹೂಡಿಕೆದಾರರೊಂದಿಗೆ ಸರ್ಕಾರ ಸಮಾಲೋಚನೆ

author img

By

Published : Jun 30, 2023, 8:21 PM IST

Updated : Jun 30, 2023, 11:00 PM IST

ರಾಜ್ಯದಲ್ಲಿ ಕೇಂದ್ರ ಸರಕಾರದ ಸಹಯೋಗದೊಂದಿಗೆ ಇವಿ ಬಸ್‌ಗಳನ್ನು ಓಡಿಸುತ್ತಿದ್ದೇವೆ‌. ಡೀಸೆಲ್‌ ಬಸ್‌ಗಳನ್ನು ವಿದ್ಯುತ್‌ಚಾಲಿತ ವಾಹನಗಳನ್ನಾಗಿ ಪರಿವರ್ತಿಸಬೇಕಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.

Industries Minister MB Patil spoke at the event.
ಸಮಾರಂಭದಲ್ಲಿ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಮಾತನಾಡಿದರು.

ಸಮಾರಂಭದಲ್ಲಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿದರು.

ಬೆಂಗಳೂರು: ಬಿಎಂಟಿಸಿ ಡೀಸೆಲ್ ಬಸ್​ಗಳನ್ನು ವಿದ್ಯುತ್‌ಚಾಲಿತ ವಾಹನಗಳನ್ನಾಗಿ ಪರಿವರ್ತಿಸಿ ಮರುಬಳಕೆಗೆ ಅಣಿಗೊಳಿಸಲು ತೈವಾನ್‌ನ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ. ಇದರಿಂದ ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದೆ. ಇದರ ಸಲುವಾಗಿ ಸಾರಿಗೆ ಇಲಾಖೆಯ ಜತೆ ಮಾತನಾಡುವುದರೊಂದಿಗೆ ಸಂಪರ್ಕ ಸೇತುವಾಗಿ ಕೆಲಸ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಹೂಡಿಕೆ ಮಾಡುವ ಸಂಬಂಧ ಇಂದು ರಾಜ್ಯಕ್ಕೆ ಭೇಟಿ ನೀಡಿರುವ ತೈವಾನ್ ಇಂಡಿಯಾ ಬಿಸ್ನೆಸ್ ಅಸೋಸಿಯೇಷನ್‌ನ (ಟಿಐಬಿಎ) 50ಕ್ಕೂ ಹೆಚ್ಚು ಹೂಡಿಕೆದಾರರ ಜೊತೆ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು. ಸದ್ಯಕ್ಕೆ ನಮ್ಮಲ್ಲಿ ಕೇಂದ್ರ ಸರಕಾರದ ಸಹಯೋಗದೊಂದಿಗೆ ಇವಿ ಬಸ್‌ಗಳನ್ನು ಓಡಿಸುತ್ತಿದ್ದೇವೆ‌. ಆದರೆ ಡೀಸೆಲ್‌ ಬಸ್‌ಗಳನ್ನು ವಿದ್ಯುತ್‌ಚಾಲಿತ ವಾಹನಗಳನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕಿದೆ. ಇದು ಇವತ್ತಿನ ಅಗತ್ಯ ಕೂಡ ಎಂದು ಎಂದು ಹೇಳಿದರು.

ಇದನ್ನೂ ಓದಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಮೂವರು ಗಣ್ಯರಿಗೆ KSOU ಗೌರವ ಡಾಕ್ಟರೇಟ್

ಇದೇ ರೀತಿ ತುಮಕೂರು ಮಶೀನ್‌ ಟೂಲ್ಸ್‌ ಪಾರ್ಕ್ (ಟಿಎಂಟಿಪಿ) ಅನ್ನು ಪುನಶ್ಚೇತನಗೊಳಿಸುವ ಮೂಲಕ ಲಾಭದಾಯಕವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಹಾಗೆಯೇ ಎಲೆಕ್ಟ್ರಾನಿಕ್ಸ್‌ ಸಿಸ್ಟಂ ವಿನ್ಯಾಸ ಮತ್ತು ತಯಾರಿಕೆ (ಇಎಸ್‌ಡಿಎಂ) ಕಾರ್ಯ ಪರಿಸರವನ್ನು ವ್ಯಾಪಕಗೊಳಿಸುವ ಉದ್ದೇಶದಿಂದ ಮೈಸೂರಿನ ಕೋಚನಹಳ್ಳಿ ಮತ್ತು ಧಾರವಾಡದ ಕೋಟೂರು ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಇಎಂಸಿ 2.0 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ತೈವಾನ್‌ ಕಂಪನಿಗಳ ಸಹಭಾಗಿತ್ವ ಹೊಂದುವ ಆಸಕ್ತಿ ಇದೆ ಎಂದು ತಿಳಿಸಿದರು.

ಬೆಂಗಳೂರಿನ ಪೀಣ್ಯ, ಬೊಮ್ಮಸಂದ್ರ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿರುವ ಉದ್ದಿಮೆಗಳು ಮಷಿನ್‌ ಟೂಲ್‌ ತಯಾರಿಕೆಗೆ ಹೆಸರಾಗಿವೆ. ಜತೆಗೆ ಆಟೋಮೋಟಿವ್‌ ಮತ್ತು ವಾಹನ ಬಿಡಿಭಾಗಗಳ ತಯಾರಿಕೆಯು ಮುಂಚೂಣಿಗೆ ಬರುತ್ತಿದೆ. ಇವೆಲ್ಲವೂ ತೈವಾನ್ ಮತ್ತು ಕರ್ನಾಟಕದ ಸಹಭಾಗಿತ್ವಕ್ಕೆ ಪ್ರಶಸ್ತವಾಗಿವೆ ಎಂದು ಅವರು ವಿವರಿಸಿದರು.

ಮರುಬಳಕೆ ಇಂಧನಗಳ ಉತ್ಪಾದನೆ: ಪರಿಸರಸ್ನೇಹಿ ತಂತ್ರಜ್ಞಾನ ಮತ್ತು ಮರುಬಳಕೆ ಮಾಡಬಹುದಾದ ಇಂಧನಗಳ ಉತ್ಪಾದನೆಯಲ್ಲೂ ರಾಜ್ಯವು ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಕರ್ನಾಟಕಲ್ಲಿ ಗ್ರೀನ್‌ ಹೈಡ್ರೋಜನ್‌, ಎಲೆಕ್ಟ್ರಾನಿಕ್ಸ್ ಸಿಸ್ಟಂ ವಿನ್ಯಾಸ ಮತ್ತು ತಯಾರಿಕೆ (ಇಎಸ್‌ಡಿಎಂ), ಏರೋಸ್ಪೇಸ್‌ ವಲಯಗಳು ಗಮನಾರ್ಹವಾಗಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದ್ದೇವೆ. ಇದನ್ನು ತೈವಾನ್‌ ದೇಶದ ಹೂಡಿಕೆದಾರರ ಗಮನಕ್ಕೆ ತರಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್‌ ಕೃಷ್ಣ ಇದ್ದರು. ತೈವಾನ್‌ ನಿಯೋಗದಲ್ಲಿ ಜಾರ್ಜ್ ಎಲಿಯನ್‌, ಚೆನ್ನೈನ ಟಿಇಸಿಸಿ ಡೈರೆಕ್ಟರ್ ಜನರಲ್‌ ರಿಚರ್ಡ್ ಚೆನ್‌ ಮತ್ತಿತರರಿದ್ದರು. ರಾಜ್ಯದ ಉದ್ಯಮ ವಲಯ, ಕಾರ್ಯ ಪರಿಸರ, ಪ್ರೋತ್ಸಾಹಕ ಕ್ರಮಗಳು ಮತ್ತು ಸೌಲಭ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.

ಇದನ್ನೂ ಓದಿ: ಕಾಂಗ್ರೆಸ್​ ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಜು.4 ರಂದು ಸದನದ ಒಳಗೆ, ಹೊರಗೆ ಹೋರಾಟ: ಬಿ.ಎಸ್.ಯಡಿಯೂರಪ್ಪ

Last Updated :Jun 30, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.