ETV Bharat / state

ಕಾವೇರಿ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಕಾರ; ಹೆಚ್ಚುವರಿ ನೀರು ಕೇಳಿದ ತಮಿಳುನಾಡು ಅರ್ಜಿ ತಿರಸ್ಕೃತ

author img

By ETV Bharat Karnataka Team

Published : Sep 21, 2023, 12:02 PM IST

Updated : Sep 21, 2023, 2:32 PM IST

ಕಾವೇರಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಇಂದು ಹೇಳಿದೆ.

ಕರ್ನಾಟಕಕ್ಕೆ ಸುಪ್ರೀಂಕೋರ್ಟ್​ನಲ್ಲೂ ಹಿನ್ನಡೆ
ಕರ್ನಾಟಕಕ್ಕೆ ಸುಪ್ರೀಂಕೋರ್ಟ್​ನಲ್ಲೂ ಹಿನ್ನಡೆ

ನವದೆಹಲಿ: ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ನೀಡಿದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ ಸುಪ್ರೀಂ ಕೋರ್ಟ್​, ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು. ಇದೇ ಸಂದರ್ಭದಲ್ಲಿ ಹೆಚ್ಚುವರಿ ನೀರು ಬಿಡುಗಡೆ ಕೋರಿ ಸಲ್ಲಿಸಿದ್ದ ತಮಿಳುನಾಡಿನ ಅರ್ಜಿಯನ್ನೂ ವಜಾಗೊಳಿಸಿತು.

ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್​ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿದ್ದ ಆದೇಶವನ್ನು ಇತ್ತೀಚೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಎತ್ತಿ ಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ರಾಜ್ಯದಲ್ಲಿ ಬರಗಾಲವಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಿದೆ. ಒಳಹರಿವು ಇಲ್ಲದ ಕಾರಣ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪುನರ್​ಪರಿಶೀಲಿಸಲು ನಿರ್ದೇಶಿಸಬೇಕು ಎಂದು ಸರ್ಕಾರ ಅರ್ಜಿಯಲ್ಲಿ ಕೋರಿತ್ತು.

ಗುರುವಾರ ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​, ಜಲವಿವಾದದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲಾಗಲ್ಲ. ಪ್ರತಿ 15 ದಿನಗಳಿಗೊಮ್ಮೆ ಪ್ರಾಧಿಕಾರ ಸಭೆ ನಡೆಸಲಿ ಎಂದು ಇದೇ ವೇಳೆ ಸಲಹೆ ನೀಡಿದೆ.

ನಿರ್ವಹಣಾ ಸಮಿತಿ ಹೇಳಿದ್ದೇನು?: ಈಚೆಗೆ ನಡೆದ ಸಭೆಯಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿ, ತಮಿಳುನಾಡಿಗೆ ಸೆಪ್ಟೆಂಬರ್ 13 ರಿಂದ ಅನ್ವಯವಾಗುವಂತೆ ಮುಂದಿನ 15 ದಿನಗಳವರೆಗೆ ನಿತ್ಯ ಬಾಕಿ ಇರುವ 6,500 ಕ್ಯೂಸೆಕ್​ ಸೇರಿದಂತೆ ನಿತ್ಯ 5 ಸಾವಿರ ಕ್ಯೂಸೆಕ್​​ ನೀರನ್ನು ಕರ್ನಾಟಕ ಹರಿಸಬೇಕು. ನಿತ್ಯ ಬಿಟ್ಟ 5 ಸಾವಿರ ಕ್ಯೂಸೆಕ್ ನೀರು ಬಿಳಿಗುಂಡ್ಲು ಅಣೆಕಟ್ಟೆ ಸೇರಿದ್ದನ್ನು ಖಚಿತಪಡಿಸಬೇಕು ಎಂದು ಹೇಳಿದೆ. ಈ ಕುರಿತ ಮುಂದಿನ ಸಭೆಯನ್ನು ಸೆಪ್ಟೆಂಬರ್​ 26 ಕ್ಕೆ ನಡೆಸಲಾಗುವುದು ಎಂದಿದೆ. ಇದನ್ನು ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮುಂದೆ ಪ್ರಶ್ನಿಸಿತ್ತು. ಆದರೆ, ಅಲ್ಲಿಯೂ ಹಿನ್ನಡೆಯಾಗಿ ಸಮಿತಿಯ ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿದಿತ್ತು.

ಇದ್ದ ಕೊನೆಯ ಅವಕಾಶವೂ ಮಿಸ್!​: ಕಾವೇರಿ ಸಮಿತಿ, ಪ್ರಾಧಿಕಾರ ಮತ್ತು ಈಗ ಸುಪ್ರೀಂ ಕೋರ್ಟ್​ನಲ್ಲೂ ನೀರಿನ ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ. ಇದ್ದ ಮೂರೂ ಅವಕಾಶಗಳು ಕೈತಪ್ಪಿದ್ದರಿಂದ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಮಳೆ ಕೊರತೆಯಿಂದಾಗಿ ರಾಜ್ಯ ನಲುಗಿದ್ದರೆ, ಕೆಆರ್​ಎಸ್ ಅಣೆಕಟ್ಟೆಯಲ್ಲಿ ನೀರಿನ ಕೊರತೆ ತೀವ್ರವಾಗಿದ್ದು, ನೀರು ಬಿಟ್ಟಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಬಂದೊದಗುವ ಸಾಧ್ಯತೆ ಗೋಚರಿಸಿದೆ.

ಇದನ್ನೂ ಓದಿ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್​ ನೀರು: ಸಿಡಬ್ಲ್ಯೂಎಂಎ ಆದೇಶ ಮರುಪರಿಶೀಲನೆ ಕೋರಿ ಸುಪ್ರೀಂಕೋರ್ಟ್‌ ಮೊರೆ ಹೋದ ರಾಜ್ಯ ಸರ್ಕಾರ

Last Updated : Sep 21, 2023, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.