ETV Bharat / state

ಕಾಂಗ್ರೆಸ್​ನ ಫ್ರೀ ವಿದ್ಯುತ್​ಗೆ ಸದನದಲ್ಲಿ ಟಾಂಗ್ ನೀಡಿದ ಇಂಧನ ಸಚಿವ ಸುನೀಲ್ ಕುಮಾರ್..!

author img

By

Published : Feb 13, 2023, 6:26 PM IST

ಫ್ರೀ ವಿದ್ಯುತ್​ ಯೋಜನೆ ಘೋಷಣೆ ಮಾಡಿ ವಿದ್ಯುತ್​ ಸರಬರಾಜು ಕಂಪೆನಿಗಳನ್ನು ಸಾಲದ ಕೂಪಕ್ಕೆ ದೂಡುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ ಎಂದು ಸಚಿವ ಸುನೀಲ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

Minister Suneel Kumar
ಸಚಿವ ಸುನೀಲ್​ ಕುಮಾರ್​

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಜನತೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಕೆ ಮಾಡುವ ಘೋಷಣೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ಸದನದ ಹೊರಗೆ ವಾಗ್ದಾಳಿ ನಡೆಸಿದ್ದ ಬಿಜೆಪಿ ಇದೀಗ ಸದನದ ಒಳಗಡೆಯೂ ವಿಷಯ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದೆ. ಉಚಿತ ಘೋಷಣೆ ಮಾಡಿ ವಿದ್ಯುತ್‌ ಸರಬರಾಜು ಕಂಪನಿಗಳನ್ನು ದಿವಾಳಿ ಮಾಡುವುದಲ್ಲ ಎಂದು ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರಿಗೆ ಹತ್ತು ಹಲವು ಉಚಿತ ಘೋಷಣೆಗಳನ್ನು ಪ್ರಕಟಿಸುವ ಕಾರ್ಯ ಆರಂಭಗೊಂಡಿದ್ದು, ಉಚಿತ ವಿದ್ಯುತ್ ವಿಷಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ, ಮಾತಿನ ಸಮರಕ್ಕೆ ವೇದಿಕೆ ಕಲ್ಪಿಸಿದೆ. ಕಾಂಗ್ರೆಸ್​ನ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಅಷ್ಟೊಂದು ಹಣ ಹೇಗೆ ಭರಿಸುತ್ತೀರಿ, ಈಡೇರಿಸಲಾಗದ ಭರವಸೆ ಯಾಕೆ ನೀಡುತ್ತೀರಿ ಎಂದು ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ, ಇಂಧನ ಸಚಿವರಾದಿಯಾಗಿ ಇಡೀ ಸಂಪುಟವೇ ಉಚಿತ ವಿದ್ಯುತ್ ಯೋಜನೆಯನ್ನು ಪ್ರಶ್ನಿಸಿದೆ.

ಇಷ್ಟು ದಿನ ಸದನದ ಹೊರಗೆ ಕಾಂಗ್ರೆಸ್​ನ ಉಚಿತ ವಿದ್ಯುತ್ ಭರವಸೆಯನ್ನು ಟೀಕಿಸಿದ್ದ ಇಂಧನ ಸಚಿವ ಸುನೀಲ್ ಕುಮಾರ್ ಇದೀಗ ಸದನದ ಒಳಗಡೆಯೂ ಕಾಂಗ್ರೆಸ್​ನ ಫ್ರೀ ಎಲೆಕ್ಟ್ರಿಸಿಟಿ ಸ್ಕೀಮ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಹೆಸರನ್ನಾಗಲಿ ಫ್ರೀ ಯೋಜನೆ ಘೋಷಣೆಯನ್ನಾಗಲೀ ನೇರವಾಗಿ ಪ್ರಸ್ತಾಪಿಸದೇ ಉಚಿತ ವಿದ್ಯುತ್ ಕೊಟ್ಟು ಹೆಸ್ಕಾಂಗಳನ್ನು ದಿವಾಳಿ ಮಾಡೋಕೆ ನಾವು ಸಿದ್ಧರಿಲ್ಲ ಎಂದು ಕಾಂಗ್ರೆಸ್​ಗೆ ಟಾಂಗ್ ನೀಡಿದ್ದಾರೆ.

ಉಚಿತ ವಿದ್ಯುತ್ ಯೋಜನೆ ಭರಾಟೆಯಲ್ಲಿ ಹೆಸ್ಕಾಂಗಳು ಸಾಲದ ಕೂಪಕ್ಕೆ ಹೋಗುತ್ತಿವೆ. ನಾವು ಅಧಿಕಾರಕ್ಕೆ ಬರುವ ಮುನ್ನ ಹುಬ್ಬಳ್ಳಿ ಹೆಸ್ಕಾಂ ಮತ್ತು ಕೆಪಿಸಿ ಎರಡು ಕೂಡಾ ಸಾಲದ ಸುಳಿಯಲ್ಲಿ ಇದ್ದವು. ಸಿಎಂ ಹಣ ನೀಡಿ ಸಂಸ್ಥೆ ಉಳಿಸಿದ್ದರು. ಆದರೆ, ಮತ್ತೆ ಉಚಿತ ವಿದ್ಯುತ್ ಕೊಟ್ಟು ಹೆಸ್ಕಾಂಗಳನ್ನು ದಿವಾಳಿ ಮಾಡೋಕೆ ನಾವು ಸಿದ್ಧರಿಲ್ಲ ಎಂದು ಬಿಜೆಪಿ ಉಚಿತ ವಿದ್ಯುತ್ ಘೋಷಣೆ ಮಾಡಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು.

ಬೆಸ್ಕಾಂ 14225.17 ಕೋಟಿ, ಮೆಸ್ಕಾಂ 1418.56 ಕೋಟಿ, ಹೆಸ್ಕಾಂ 7706.35 ಕೋಟಿ, ಜೆಸ್ಕಾಂ 3694.02 ಕೋಟಿ, ಸೆಸ್ಕ್ 3509.91 ಕೋಟಿ, ಕೆಪಿಸಿಎಲ್ 31258.81 ಕೋಟಿ, ಕೆಪಿಟಿಸಿಎಲ್ 10302.02 ಕೋಟಿ ಸೇರಿ ಒಟ್ಟು 72114.84 ಕೋಟಿ ರೂ. ಸಾಲದಲ್ಲಿ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿವೆ ಎನ್ನುವ ಅಂಕಿ ಅಂಶಗಳನ್ನು ಉಲ್ಲೇಖಿಸುತ್ತಲೇ ಕಾಂಗ್ರೆಸ್​ನ ಉಚಿತ ವಿದ್ಯುತ್ ಘೋಷಣೆಯನ್ನು ಟೀಕಿಸಿದರು.

ರಾಜ್ಯದಲ್ಲಿ ಈಗಾಗಲೇ 3 ವಿದ್ಯುತ್ ಯೋಜನೆ ಜಾರಿಯಲ್ಲಿವೆ. ಭಾಗ್ಯಜ್ಯೋತಿ/ಕುಟೀರ ಜ್ಯೋತಿಯಡಿ 26 ಲಕ್ಷ ಫಲಾನುಭವಿಗಳು, ರೈತರ ಕೃಷಿ ಪಂಪ್ ಸೆಟ್​ಗೆ ಉಚಿತ ವಿದ್ಯುತ್ ಯೋಜನೆಯಡಿ 33.46 ಲಕ್ಷ ಫಲಾನುಭವಿಗಳು. ಅಮೃತ ಜೋತಿ ಯೋಜನೆಯಡಿ 24 ಲಕ್ಷ ಫಲಾನುಭವಿಗಳಿದ್ದಾರೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ 462.81 ಕೋಟಿ, ನೀರಾವರಿ ಪಂಪ್ ಸೆಟ್​ಗೆ 7965.44 ಕೋಟಿ ಮತ್ತು ಅಮೃತ ಜ್ಯೋತಿ ಯೋಜನೆಯಡಿ 15.34 ಕೋಟಿ ರೂ.ಗಳ ಸಹಾಯಧನವನ್ನು ಸರ್ಕಾರ ವಿದ್ಯುತ್ ಸರಬರಾಜು ಕಂಪನಿಗಳಿಗೆ ಈಗಾಗಲೇ ಪಾವತಿ ಮಾಡಲಾಗುತ್ತಿದೆ.

ವಿದ್ಯುತ್ ಸರಬರಾಜು ಕಂಪನಿಗಳು ಉಚಿತ ವಿದ್ಯುತ್ ನೀಡಲು ಉತ್ಪಾದಕರಿಂದ ಖರೀದಿಸುತ್ತಿರುವ ವಿದ್ಯುತ್ ಬಾಬ್ತಿನ ವೆಚ್ಚವನ್ನು ಭರಿಸಲು ವಿವಿಧ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳಿಂದ ಪಡೆಯುತ್ತಿರುವ ಸಾಲವನ್ನು ಕಂಪನಿಗಳು ತಮ್ಮ ಆಂತರಿಕ ಸಂಪನ್ಮೂಲ ಮತ್ತು ಸರ್ಕಾರದಿಂದ ಒದಗಿಸುವ ಸಹಾಯಧನದ ಮೂಲಕ ಭರಿಸುತ್ತಿವೆ. ಹಾಗಾಗಿ ಮತ್ತೆ ಉಚಿತ ಕೊಡುಗೆ ಮೂಲಕ ಹೆಸ್ಕಾಂಗಳನ್ನು ದಿವಾಳಿ ಮಾಡಲು ನಾವು ಮುಂದಾಗಲ್ಲ ಎಂದು ನೇರವಾಗಿ ಕಾಂಗ್ರೆಸ್​ನ ಫ್ರೀ ವಿದ್ಯುತ್ ಭರವಸೆಯನ್ನು ಟೀಕಿಸಿದರು.

ಇದನ್ನೂ ಓದಿ: ಪರೀಕ್ಷೆ ವೇಳೆ ವಿದ್ಯುತ್ ತೊಂದರೆಯಾಗಲ್ಲ, ಬೇಸಿಗೆ ವಿದ್ಯುತ್ ಬೇಡಿಕೆ ಪೂರೈಕೆಗೆ ಸಿದ್ಧ: ಸುನೀಲ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.