ETV Bharat / state

632 ಪಿಯು ಕಾಲೇಜುಗಳ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

author img

By

Published : Jun 2, 2023, 7:09 AM IST

ಭೌಗೋಳಿಕ ವಿಸ್ತೀರ್ಣ ಸೇರಿದಂತೆ ಅಗತ್ಯತೆಗಳನ್ನು ಪೂರೈಸದೆ ಕಾರ್ಯನಿರ್ವಹಿಸುತ್ತಿರುವ 632 ಪಿಯು ಕಾಲೇಜುಗಳ ಸ್ಥಿತಿಗತಿಗಳ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

High Court
ಹೈಕೋರ್ಟ್

ಬೆಂಗಳೂರು: ನಿರ್ದಿಷ್ಟ ಭೌಗೋಳಿಕ ವಿಸ್ತೀರ್ಣ ಸೇರಿ ಇತರೆ ಅಗತ್ಯತೆಗಳನ್ನು ಪೂರೈಸದೆ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ 2013 ರಲ್ಲಿ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿರುವ 632 ಪಿಯು ಕಾಲೇಜುಗಳ ಈಗಿನ ಸ್ಥಿತಿಗತಿಗಳ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಹುಬ್ಬಳ್ಳಿಯ ವಿದ್ಯಾ ನಗರದಲ್ಲಿ ಚೌಗಲೆ ಶಿಕ್ಷಣ ಸಂಸ್ಥೆಗೆ ಪಿಯು ಕಾಲೇಜು ಕಟ್ಟಡ ನಿರ್ಮಾಣಕ್ಕೆ ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್ ಎಂ. ಅರಮನಿ ಹಾಗೂ ಮತ್ತಿತರರು 2009 ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.

ಕರ್ನಾಟಕ ಪದವಿಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಪ್ರವೇಶ ಮತ್ತು ಅನುದಾನ) ನಿಯಮಗಳು-2006 ಕ್ಕೆ 2018ರಲ್ಲಿ ತಿದ್ದುಪಡಿ ತಂದಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. 2013ರ ಜುಲೈ 8ರಂದು ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ರಾಜ್ಯದಲ್ಲಿ 632 ಪಿಯು ಕಾಲೇಜುಗಳು ನಿಯಮದಂತೆ ನಿರ್ದಿಷ್ಟ ಭೌಗೋಳಿಕ ವಿರ್ಸ್ತೀಣ ಸೇರಿದಂತೆ ಇತರ ಅಗತ್ಯತೆಗಳನ್ನು ಪೂರೈಸಿಲ್ಲ ಎಂದು ತಿಳಿಸಲಾಗಿದೆ. ಆದರೆ ಆ ಕಾಲೇಜುಗಳಿಗೆ ಶಿಕ್ಷಣ ಇಲಾಖೆ ನೀಡಿರುವ ನೋಟಿಸ್‌ಗೆ ಕಾಲೇಜುಗಳ ಕೊಟ್ಟ ವಿವರಣೆ ಏನು? ಅದು ಸರ್ಕಾರಕ್ಕೆ ಸಮಧಾನ ತಂದಿದೆಯೇ? ಸಮಧಾನ ತಂದಿಲ್ಲ ಎಂದಾದರೆ ಕಾಲೇಜುಗಳ ವಿರುದ್ಧ ಕೈಗೊಂಡ ಕ್ರಮಗಳೇನು ಎಂಬ ಸಮಗ್ರವಾದ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸಬೇಕು ಎಂದು ತಿಳಿಸಿದೆ.

ಅಲ್ಲದೇ, 2018 ರಲ್ಲಿ ಜಾರಿಗೆ ಬಂದಿರುವ 'ಕರ್ನಾಟಕ ಪದವಿಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಪ್ರವೇಶ ಮತ್ತು ಅನುದಾನ) ತಿದ್ದುಪಡಿ ನಿಯಮಗಳು-2017' ಪ್ರಕಾರ ಕಾಲೇಜುಗಳು ಸಲ್ಲಿಸಿದ ವರದಿ ಆಧರಿಸಿ ಪರಿಶೀಲನೆ ನಡೆಸುವ ಅವಕಾಶವಿದೆಯೇ?, ಒಂದೊಮ್ಮೆ ಅವಕಾಶವಿದ್ದರೆ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲು ನಿಯಮಗಳಲ್ಲಿ ಅವಕಾಶವಿದೆಯೇ ಎಂಬ ಬಗ್ಗೆಯೂ ವರದಿ ನೀಡುವಂತೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಚೌಗಲೆ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜುನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಕಾಲೇಜು ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಅರ್ಜಿಯಲ್ಲಿ ನಂತರ ಸೇರ್ಪಡೆಯಾದ ಬೆಂಗಳೂರಿನ ಮಾಡರ್ನ್ ಪಿಯು ಕಾಂಪೋಸಿಟ್ ಕಾಲೇಜು ಪರ ವಕೀಲ ಜಿ.ಆರ್ ಮೋಹನ್ ವಾದ ಮಂಡಿಸಿ, ನಮ್ಮ ಕಕ್ಷಿದಾರರ ಕಾಲೇಜು 2004ರಲ್ಲಿ ಸ್ಥಾಪನೆಗೊಂಡಿದೆ. ನಿಯಮಗಳು ಮೊದಲು 2006 ರಲ್ಲಿ ಜಾರಿಗೆ ಬಂದು, ನಂತರ 2018ರಲ್ಲಿ ತಿದ್ದುಪಡಿಗೊಂಡಿವೆ. ನಿಯಮಗಳು ಜಾರಿಗೆ ಬರುವ ಮುನ್ನ ನಮ್ಮ ಕಾಲೇಜು ಸ್ಥಾಪನೆಗೊಂಡಿರುವುದರಿಂದ ಹೊಸ ನಿಯಮಗಳು ನಮ್ಮ ಕಕ್ಷಿದಾದರಿಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಧೀನ ನ್ಯಾಯಾಲಯದ ಆದೇಶ ರದ್ದು: ಹಣಕಾಸು ವಂಚನೆ ಆರೋಪದಲ್ಲಿ ಜಾಮೀನಿನ ಮೇಲಿರುವ ಅವಧಿಯಲ್ಲಿ ಪೂರ್ವಾನುಮತಿ ಪಡೆಯದೆ ಮೊಮ್ಮಗಳಿಗೆ ತುರ್ತು ಚಿಕಿತ್ಸೆ ಕೊಡಿಸಲು ವಿದೇಶಕ್ಕೆ (ಇಂಗ್ಲೆಂಡ್‌ಗೆ) ತೆರಳಿದ್ದರಿಂದ ವೃದ್ಧೆಯೊಬ್ಬರಿಗೆ ಮಂಜೂರು ಮಾಡಲಾಗಿದ್ದ ಜಾಮೀನನ್ನು ರದ್ದುಪಡಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಅಧೀನ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಪದ್ಮನಾಭನಗರದ ನಿವಾಸಿಯಾದ ವೃದ್ಧೆ ಸರಿತಾ ಶರ್ಮಾ (60) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದ ವಾಸ್ತಾಂಶ ಪರಿಶೀಲಿಸಿದರೆ ಅರ್ಜಿದಾರರು ಮೊಮ್ಮಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಉದ್ದೇಶದಿಂದ ಇಂಗ್ಲೆಂಡ್​ಗೆ ತೆರಳಿದ್ದರು. ಆಕೆಯ ಪರ ವಕೀಲರು ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಇಂಗ್ಲೆಂಡ್​ಗೆ ತೆರಳಿದ ಉದ್ದೇಶವನ್ನು ತಿಳಿಸಬೇಕಿತ್ತು. ಅರ್ಜಿಯನ್ನು ಎರಡು ಬಾರಿ ನ್ಯಾಯಾಲಯ ಮಾನ್ಯ ಮಾಡಿದೆ. ನಂತರ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯದೆ ಇಂಗ್ಲೆಂಡ್​​ಗೆ ತೆರಳಲಾಗಿದೆ ಎಂಬ ತೀರ್ಮಾನಕ್ಕೆ ಬಂದು ಜಾಮೀನು ರದ್ದುಪಡಿಸಿದೆ ಹಾಗೂ ಅರ್ಜಿದಾರೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ವಿಚಾರಣಾ ನ್ಯಾಯಾಲಯದ ಈ ಕ್ರಮ ಸರಿಯಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಂತಿಮವಾಗಿ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್, ಅರ್ಜಿದಾರೆಯ ವಿರುದ್ಧದ ಜಾಮೀನು ರಹಿತ ವಾರೆಂಟ್ ಅನ್ನು ಅಮಾನತ್ತಿನಲ್ಲಿರಿಸಿದೆ. ಜತೆಗೆ ಅರ್ಜಿದಾರರು ಅಧೀನ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ರಹಿತ ವಾರೆಂಟ್ ಹಿಂಪಡೆಯಲು ಮನವಿ ಮಾಡಬೇಕು ಎಂದು ನಿರ್ದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಧೀನ ನ್ಯಾಯಾಲಯವು ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡುವಾಗ ತನ್ನಿಂದ ಪೂರ್ವಾನುಮತಿ ಪಡೆಯದೇ ದೇಶಬಿಟ್ಟು ತೆರಳಬಾರದು ಎಂಬುದಾಗಿ ಷರತ್ತು ವಿಧಿಸಿರಲಿಲ್ಲ. ಹಾಗಾಗಿ ಪೂರ್ವಾನುಮತಿ ಪಡೆಯದೇ ವಿದೇಶಕ್ಕೆ ತೆರಳಿರುವುದಕ್ಕೆ ನ್ಯಾಯಾಲಯದ ವಿಧಿಸಿದ ಷರತ್ತು ಉಲ್ಲಂಘಿಸಲಾಗಿದೆ ಎಂಬುದಾಗಿ ಪರಿಗಣಿಸಲಾಗದು. ಅಲ್ಲದೆ ಜಾಮೀನು ಮಂಜೂರಾತಿ ಆದೇಶ ರದ್ದುಪಡಿಸುವ ಮುನ್ನ ಜಾಮೀನಿಗೆ ಭದ್ರತಾ ಖಾತರಿ ನೀಡಿದವರಿಗೆ ನೋಟಿಸ್ ನೀಡಬೇಕಿತ್ತು. ತದನಂತರ ಮುಂದಿನ ಕಾನೂನು ಕ್ರಮ ಜರುಗಿಸಬೇಕಿತ್ತು ಎಂದು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ ಹೀಗಿದೆ..: ಸಾರ್ವಜನಿಕರಿಗೆ ಹಣಕಾಸು ವಂಚನೆ ವಿಚಾರವಾಗಿ ಸಿಬಿಐ ಪೊಲೀಸರು ಚಿಟ್ ಮತ್ತು ಹಣ ಚಲಾವಣೆ ಯೋಜನೆ (ನಿಷೇಧ) ಕಾಯ್ದೆ-1978ರ ಅಡಿಯಲ್ಲಿ ಅರ್ಜಿದಾರೆಯ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣವು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆ ಹಂತದಲ್ಲಿದೆ. ಪ್ರಕರಣ ಸಂಬಂಧ ಈ ಹಿಂದೆ ಅರ್ಜಿದಾರೆಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ವಿಚಾರಣೆಗೆ ಗೈರಾಗಲಾಗಿದೆ ಎಂದು ಹೇಳಿ 2023ರ ಫೆ.24ರಂದು ಜಾಮೀನು ಮಂಜೂರಾತಿ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್​ ಅರ್ಜಿದಾರೆಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ರದ್ದುಪಡಿಸಿದೆ.

ಇದನ್ನೂ ಓದಿ: ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣದಲ್ಲಿ ರಿಯಾಯಿತಿ ಕೋರಿ ಅರ್ಜಿ: ಹೈಕೋರ್ಟ್ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.