ETV Bharat / state

ಸದಸ್ಯ ಸ್ಥಾನಕ್ಕೆ ಒಬಿಸಿ, ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಪ್ರಮಾಣಪತ್ರ ಸಲ್ಲಿಕೆ : ಮಹಿಳೆಯ ಸದಸ್ಯತ್ವ ರದ್ದುಪಡಿಸಿದ ಹೈಕೋರ್ಟ್

author img

By ETV Bharat Karnataka Team

Published : Sep 28, 2023, 10:54 PM IST

ಹಿಂದುಳಿದ ವರ್ಗಗಳ ಅಡಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿ, ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡವೆಂದು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದ ಸದಸ್ಯರೊಬ್ಬರ ಸದಸ್ಯತ್ವವನ್ನು ಹೈಕೋರ್ಟ್ ರದ್ದುಪಡಿಸಿದೆ.

submission-of-fake-st-certificate-for-the-post-of-president-high-court-canceled-membership-of-the-person
ಸದಸ್ಯ ಸ್ಥಾನಕ್ಕೆ ಒಬಿಸಿ, ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಪ್ರಮಾಣ ಪತ್ರ ಸಲ್ಲಿಕೆ : ಸದಸ್ಯತ್ವ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಹಿಂದುಳಿದ ವರ್ಗಗಳ ಅಡಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿ, ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡವೆಂದು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದ ಸದಸ್ಯರೊಬ್ಬರ ಸದಸ್ಯತ್ವವನ್ನು ಹೈಕೋರ್ಟ್ ರದ್ದುಪಡಿಸಿದೆ. ಲಕ್ಷ್ಮೀ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಇಂದಿರೇಶ್ ಅವರಿದ್ದ ಕಲಬುರಗಿಯ ನ್ಯಾಯಪೀಠ, ಅರ್ಜಿದಾರರ ಸದಸ್ಯತ್ವ ರದ್ದುಪಡಿಸಿದೆ. ಅಲ್ಲದೆ, ಆಕೆಯ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಆದೇಶ ನೀಡಿರುವುದಲ್ಲದೆ ಆಕೆಯನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿ ಹೊಸದಾಗಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಆದೇಶ ನೀಡಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅರ್ಜಿದಾರರ ಆಯ್ಕೆ ಕಾನೂನು ಬಾಹಿರ ಮತ್ತು ಸಂವಿಧಾನದ ತತ್ವಗಳಿಗೆ ವಿರುದ್ಧವಾದುದು. ಹಾಗಾಗಿ ಪ್ರತಿವಾದಿ ರಾಜ್ಯ ಚುನಾವಣಾ ಆಯೋಗ ಎರಡು ವಾರಗಳಲ್ಲಿ ಸೊನ್ನ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಆದೇಶಿಸಿದೆ.

ಅಲ್ಲದೆ, ಅರ್ಜಿದಾರರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅಸಂವಿಧಾನಿಕ ಮಾರ್ಗಗಳ ಮೂಲಕ, ಹಾಗಾಗಿ ಕಲಬುರಗಿ ಜಿಲ್ಲಾಧಿಕಾರಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಪ್ರಜಾಪ್ರಭುತ್ವ ಸಂವಿಧಾನದ ಹೆಗ್ಗುರುತಾಗಿದೆ. ಆದ್ದರಿಂದ ಪ್ರತಿವಾದಿಗಳು ಅರ್ಜಿದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸತಕ್ಕದ್ದು ಮತ್ತು ನಿಯಮದಂತೆ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ಅನರ್ಹಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶ ನೀಡಿದೆ. ಜತೆಗೆ, ಅರ್ಜಿದಾರರು ಈವರೆಗೆ ಪಡೆದಿರುವ ಸೌಲಭ್ಯಗಳನ್ನು ವಾಪಸ್ ಪಡೆಯಬೇಕು ಎಂದೂ ಸಹ ನ್ಯಾಯಪೀಠ ನಿರ್ದೇಶನ ನೀಡಿದೆ.

ಇದೇ ವೇಳೆ, ಅರ್ಜಿದಾರರು ಸೊನ್ನ ಗ್ರಾಮ ಪಂಚಾಯ್ತಿಗೆ ಒಬಿಸಿ ಕ್ಯಾಟಗರಿಯಡಿ ಆಯ್ಕೆಯಾಗಿದ್ದಾರೆ. ಅನಂತರ ಅವರು ಹೇಗೆ ಒಬಿಸಿಯಿಂದ ಪರಿಶಿಷ್ಟ ಪಂಗಡಕ್ಕೆ ಬದಲಾಗಲು ಸಾಧ್ಯ? ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿತ್ತು ಎಂಬ ಕಾರಣಕ್ಕೆ ಅರ್ಜಿದಾರರು ತಮ್ಮ ಜಾತಿಯನ್ನು ಹೇಗೆ ಬದಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಸಮಾಜ ಕಲ್ಯಾಣ ಇಲಾಖೆ ಪರ ವಾದಿಸಿದ ವಿಶೇಷ ವಕೀಲ ಸಿ.ಜಗದೀಶ್, ತಳವಾರ ಸಮುದಾಯ ಎಸ್‌ಟಿ ವರ್ಗದಡಿಯೇ ಬರುತ್ತದೆ. ಆದರೆ ಅರ್ಜಿದಾರರು ತಾವು ಆ ಎಸ್‌ಟಿ ಸಮುದಾಯಕ್ಕೆ ಸೇರಿದವರು ಎಂಬುದನ್ನು ಸಾಬೀತುಪಡಿಸುವಲ್ಲಿ ಸಕ್ಷಮ ಪ್ರಾಧಿಕಾರದ ಮುಂದೆ ವಿಫಲರಾಗಿದ್ದಾರೆ. ಹಾಗಾಗಿ ಅರ್ಜಿದಾರರ ವಾದ ಒಪ್ಪತಕ್ಕದ್ದಲ್ಲ ಮತ್ತು ಅವರು ತಾವು ಎಸ್​ಟಿ ಎಂದು ಹಕ್ಕು ಮಂಡಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ನಿಯಮಬಾಹಿರ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಪ್ರಕರಣದ ಹಿನ್ನೆಲೆ : ಲಕ್ಷ್ಮೀ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮ ಪಂಚಾಯ್ತಿಗೆ ಒಬಿಸಿ ಕೆಟಗರಿ ಅಡಿ ಆಯ್ಕೆಯಾಗಿದ್ದರು. ಅನಂತರ 2023ರ ಜು.24ರಂದು ರಾಜ್ಯ ಚುನಾವಣಾ ಆಯೋಗ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿತ್ತು. ಅದರಂತೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎಗೆ ಮೀಸಲಾಗಿತ್ತು. ಅರ್ಜಿದಾರರು ತಾವು ಮೂಲತಃ ತಳವಾರ ಜಾತಿಗೆ ಸೇರಿದ್ದು, ಆ ಜಾತಿ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರುತ್ತದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅಲ್ಲದೆ, ತಮ್ಮ ಒಬಿಸಿ ಜಾತಿ ಪ್ರಮಾಣಪತ್ರವನ್ನು ಬದಲಿಸಿ ಎಸ್​ಟಿ ಜಾತಿ ಪ್ರಮಾಣಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ತಿರಸ್ಕರಿಸಿ ತಹಶೀಲ್ದಾರ್ ಹಿಂಬರಹ ನೀಡಿದ್ದರು. ಅದನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ : ಮುರುಘಾ ಮಠದ ಆಡಳಿತ ಜಿಲ್ಲಾ ನ್ಯಾಯಾಧೀಶರ ನಿಗಾದಲ್ಲಿ ಮುಂದುವರೆಯಲಿದೆ: ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.