ETV Bharat / state

ಗ್ಯಾರಂಟಿ ಯೋಜನೆಗಳಿಗೆ ಎಸ್​​​ಸಿಎಸ್ಪಿ- ಟಿಎಸ್​​​ಪಿ ಹಣ ಬಳಸಿದರೆ ರಾಜ್ಯಾದ್ಯಂತ ಹೋರಾಟ: ಛಲವಾದಿ ನಾರಾಯಣಸ್ವಾಮಿ

author img

By

Published : Aug 1, 2023, 9:17 AM IST

ದಲಿತರ ಅಭಿವೃದ್ಧಿಗಾಗಿ ಮೀಸಲಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೆ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಎಸ್.ಸಿ.ಎಸ್.ಪಿ - ಟಿ.ಎಸ್.ಪಿ(Scheduled Caste Sub Plan ಮತ್ತುTribal Sub Plan)ಯ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ನಿರ್ಬಂಧವಿದ್ದರೂ ಗ್ಯಾರಂಟಿ ಯೋಜನೆಗಳಿಗೆ ಈ ಹಣ ಬಳಸಲು ಸರ್ಕಾರ ಮುಂದಾಗಿದೆ. ಒಂದು ವೇಳೆ, ಈ ಹಣವನ್ನು ದಲಿತರ ಅಭಿವೃದ್ಧಿಗೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಿದರೆ ರಾಜ್ಯಾದ್ಯಂತ ಬಿಜೆಪಿ ಎಸ್‍ಸಿ ಮೋರ್ಚಾದಿಂದ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಎಸ್​​​​​ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಗಾಗಿ ಎಸ್​ಸಿ ಎಸ್​​ಪಿ - ಟಿಎಸ್​​​​ಪಿಯ 11 ಸಾವಿರ ಕೋಟಿ ರೂಪಾಯಿಯನ್ನು ಬಳಸುತ್ತಿರುವುದಾಗಿ ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದು ದಲಿತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರು ಮತ್ತು ಸಮಾಜ ಕಲ್ಯಾಣ ಸಚಿವರು ಮಾಡುತ್ತಿರುವ ಮಹಾಮೋಸ.

ಹಿಂದಿನ ಕಾಂಗ್ರೆಸ್ ಸರ್ಕಾರವು 2014ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗಾಗಿ ವಿಶೇಷ ಯೋಜನೆಯನ್ನು ಚಾಲ್ತಿಗೆ ತಂದಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಎಸ್​ಸಿಎಸ್ಪಿ - ಟಿಎಸ್ಪಿ ವಿಶೇಷ ಯೋಜನೆ ಜಾರಿಗೊಳಿಸಿದ್ದರು. ಇಡೀ ದಲಿತ ಸಮುದಾಯ ಕಾಂಗ್ರೆಸ್ ಸರಕಾರವು ಒಂದು ಉತ್ತಮ ಯೋಜನೆಯನ್ನು ಕೊಟ್ಟಿದೆ ಎಂದು ಖುಷಿ ಪಟ್ಟಿತ್ತು. ಆದರೆ, ಮಾನ್ಯ ಸಿದ್ದರಾಮಯ್ಯ ಇಲ್ಲಿಯೂ ಕೂಡ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದಲಿತರ ಹೆಸರಿನಲ್ಲಿ ಅವರ ಅಭಿವೃದ್ಧಿಗೆ 26 ಸಾವಿರ ಕೋಟಿ ರೂಪಾಯಿಯನ್ನು ನೀಡಿದ್ದೇನೆ ಎಂದು ಹೇಳಿ, ಅದರ ಅಡಿ 7 ಡಿ ಕಾನೂನನ್ನೂ ಜೊತೆಯಲ್ಲೇ ಜಾರಿ ಮಾಡಿದ್ದರು. ಈ ಹಣ ಖರ್ಚಾಗದಿದ್ದರೆ ಬೇರೆ ಇಲಾಖೆಗಳಿಗೆ ಖರ್ಚು ಮಾಡಬಹುದು ಎಂಬ ಅವಕಾಶವನ್ನು ಇದು ನೀಡಿತ್ತು ಎಂದು ವಿವರಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸರಕಾರ ಕಳೆದ ಬಜೆಟ್‍ನಲ್ಲಿ 30 ಸಾವಿರ ಕೋಟಿ ಮೊತ್ತವನ್ನು ಎಸ್.ಸಿ.ಎಸ್.ಪಿ - ಟಿ.ಎಸ್.ಪಿ.ಗೆ ಮೀಸಲಿಟ್ಟಿದ್ದರು. ಇದನ್ನು ಕೂಡ ಟ್ವೀಟ್ ಮಾಡಿ ಸಿದ್ದರಾಮಯ್ಯನವರು ಅಣಕಿಸಿದ್ದರು. ಕೇವಲ 30 ಸಾವಿರ ಕೋಟಿ ನೀಡಿದ್ದಾರೆ. ಅವರಿಗೆ ಶೇ 24.5 ಹಣ ಮೀಸಲಿಟ್ಟರೆ 45 ಸಾವಿರ ಕೋಟಿ ಕೊಡಬೇಕಿತ್ತು. ಇವರು ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಈಗ ಅವರೇ ಬಜೆಟ್ ಮಂಡಿಸಿದಾಗ ನಾವು ನೀಡಿದ 30 ಸಾವಿರ ಕೋಟಿ ಬದಲಾಗಿ 34 ಸಾವಿರ ಕೋಟಿ ನೀಡಿದ್ದಾರೆ. ನಾವು ನಮ್ಮ ಬಜೆಟ್‍ ಅಡಿ ದಲಿತರ ಹಣ ಅವರ ಅಭಿವೃದ್ಧಿಗಾಗಿಯೇ ಮೀಸಲಾಗಬೇಕೆಂಬ ದೃಷ್ಟಿಯಿಂದ ಬೊಮ್ಮಾಯಿ ಅವರ 7 ಡಿ ರದ್ದು ಮಾಡುವುದಾಗಿ ಪ್ರಕಟಿಸಿದ್ದರು ಎಂದು ತಿಳಿಸಿದ್ದಾರೆ.

ಇದನ್ನು ಕಂಡ ಸಿದ್ದರಾಮಯ್ಯ ತಾವು ಕೂಡ 7 ಡಿ ರದ್ದು ಮಾಡುವುದಾಗಿ ತಿಳಿಸಿದ್ದರು. ಆದರೆ, ಅವರು 24.5 ಹಣ ಮೀಸಲಿಟ್ಟಿರಲಿಲ್ಲ. ಕೇವಲ 4 ಸಾವಿರ ಕೋಟಿ ಹೆಚ್ಚಿಸಿದ್ದರು. ಈಗ 7 ಡಿಯನ್ನು ಹಾಗೇ ಇಟ್ಟು 11 ಸಾವಿರ ಕೋಟಿಯನ್ನು ಮತ್ತೆ ಗ್ಯಾರಂಟಿಗಳಿಗಾಗಿ ತೆಗೆಯಲಾಗಿದೆ. ಇದು ದಲಿತರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಸಚಿವ ಮಹದೇವಪ್ಪ ಮಾಡಿದ ಮಹಾಮೋಸ ಎಂದು ಟೀಕಿಸಿದ್ದಾರೆ.

ಕಳೆದ ವಾರವೇ ಇದನ್ನು ನಾನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದೆ. ಆಗ ಸರಕಾರವು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇವತ್ತು ಸಚಿವ ಮಹದೇವಪ್ಪ ಅವರು ಅದರ ಕುರಿತು ಮಾಹಿತಿ ನೀಡಿದ್ದಾರೆ. ಗ್ಯಾರಂಟಿಗಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ಹಣವನ್ನು ಸರಕಾರ ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಕೂಡದು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರು ತಮ್ಮ ಮನೆಯ ಹುಳಕು ಮುಚ್ಚಿಕೊಳ್ಳಲು ರಾಜಕೀಯ ಬೆರೆಸುತ್ತಿದ್ದಾರೆ: ಕೃಷ್ಣ ಬೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.