ETV Bharat / state

ಅನ್​​​ಲಾಕ್ ನಂತರ ಸುಧಾರಿಸುತ್ತಿರುವ ಬೀದಿ ಬದಿಯ ವ್ಯಾಪಾರ: ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿ ವ್ಯಾಪಾರ-ವಹಿವಾಟು

author img

By

Published : Sep 29, 2020, 8:27 PM IST

ಅನ್​​​ಲಾಕ್ ನಂತರ ಬೀದಿ ಬದಿಯ ವ್ಯಾಪಾರ ಸುಧಾರಿಸುತ್ತಿದ್ದು, ಮೊದಲು ಇದ್ದ ವಹಿವಾಟು ಆಗದಿದ್ದರೂ ಜೀವನೋಪಾಯಕ್ಕೆ ಬೇಕಾದಷ್ಟು ಆದಾಯ ಬರುತ್ತಿದೆ.

Street-side traders who suffered hardship from Corona
ಅನ್​​​ಲಾಕ್ ನಂತರ ಸುಧಾರಿಸುತ್ತಿರುವ ಬೀದಿ ಬದಿಯ ವ್ಯಾಪಾರ

ಬೆಂಗಳೂರು: ಕೊರೊನಾ ಪ್ರೇರಿತ ಲಾಕ್​ಡೌನ್​​ನಿಂದಾಗಿ, ಬೀದಿ ಬದಿಯ ತಿಂಡಿ ತಿನಿಸಿನ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿತ್ತು. ಹಗಲು ರಾತ್ರಿ ಎನ್ನದೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ, ಕುಟುಂಬದ ಹೊಟ್ಟೆ ತುಂಬಿಸುತ್ತಿದ್ದ ವ್ಯಾಪಾರಿಗಳ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿತ್ತು.

ಆದರೆ ಇದೀಗ ಅನ್​​​ಲಾಕ್ ನಂತರ ಬೀದಿ ಬದಿಯ ವ್ಯಾಪಾರ ಸುಧಾರಿಸುತ್ತಿದ್ದು, ಮೊದಲು ಇದ್ದ ವಹಿವಾಟು ಆಗದಿದ್ದರೂ ಜೀವನೋಪಾಯಕ್ಕೆ ಬೇಕಾದಷ್ಟು ಆದಾಯ ಬರುತ್ತಿದೆ. ಶೇಕಡ 60 ರಷ್ಟು ಗ್ರಾಹಕರು ಇದೀಗ ಬೀದಿ ಬದಿ ವ್ಯಾಪಾರಸ್ಥರ ಬಳಿ ಬರುತ್ತಿರುವುದು ಸಾಮಾನ್ಯವಾಗಿದ್ದು, ಪಾಲಿಕೆ ಸೂಚನೆ ಪ್ರಕಾರ ಬೀದಿ ಬದಿ ವ್ಯಾಪಾರಸ್ಥರು ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೆ ಗ್ರಾಹಕರು ಸಹ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಿಂಡಿ ತಿನಿಸುಗಳನ್ನು ತಿನ್ನುತ್ತಿದ್ದಾರೆ.

ಅನ್​​​ಲಾಕ್ ನಂತರ ಸುಧಾರಿಸುತ್ತಿರುವ ಬೀದಿ ಬದಿಯ ವ್ಯಾಪಾರ

ಇನ್ನು ಬೆಂಗಳೂರಿನಲ್ಲಿ ಕೊರೊನಾ ಬರುವ ಮೊದಲಿನಿಂದಲೂ ಕಾಲರಾ ಭೀತಿಯಿಂದ ಬೀದಿ ಬದಿಯ ತಿಂಡಿ ವ್ಯಾಪಾರಕ್ಕೆ ಪಾಲಿಕೆ ನಿಷೇಧ ಏರಿತ್ತು. ಸುಮಾರು 6 ತಿಂಗಳ ಬಳಿಕ ಬೀದಿ ಬದಿಯ ವ್ಯಾಪಾರಿಗಳು ಒಲೆ ಹಚ್ಚಿದ ನಂತರ, ಈಗ ನಗರದ ಹಲವು ಕಡೆಗಳಲ್ಲಿ ತಕ್ಕ ಮಟ್ಟಿಗೆ ಊಟ ತಿಂಡಿಯ ವ್ಯಾಪಾರ ನಡೆಯುತ್ತಿದೆ.

ಇನ್ನು ಲಾಕ್​​ಡೌನ್​​​ ಸಂದರ್ಭದಲ್ಲಿ ಸಂಪೂರ್ಣ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಬೀದಿಬದಿ ವ್ಯಾಪಾರಿಗಳಿಗೆ, ಜನಪ್ರತಿನಿಧಿಗಳು ಹಾಗೂ ದಾನಿಗಳು ನೀಡಿದ ದವಸ ಧಾನ್ಯಗಳು ಸಹಕಾರಿಯಾಗಿದೆ. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ವ್ಯಾಪಾರಸ್ಥರು, ತಮ್ಮ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂದಾಗುತ್ತಿದ್ದಾರೆ.

ಇನ್ನು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂಪಾಯಿ ಸಾಲ ನೀಡುತ್ತಿದೆ. ಇದಲ್ಲದೆ ಸರಿಯಾದ ಸಮಯಕ್ಕೆ ಹಣ ಹಿಂತಿರುಗಿಸಿದರೆ ಒಂದು ಲಕ್ಷದವರೆಗೂ ಸಾಲ ನೀಡುವ ಅವಕಾಶವಿದೆ. ಇದರ ಜೊತೆಗೆ ಯುಪಿಐ ಆಧಾರದ ವಹಿವಾಟು ಮಾಡಿದರು ಸಾಲ ನೀಡಲಾಗುತ್ತಿದೆ.

ಅನ್​​​ಲಾಕ್ ನಂತರ ವ್ಯಾಪಾರ ಮಂದಗತಿಯಲ್ಲಿ ಶುರುವಾಗಿದ್ದು, ವ್ಯಾಪಾರಸ್ಥರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಗ್ರಾಹಕರಿಗೆ ಶುದ್ಧವಾದ ಆಹಾರವನ್ನು ನೀಡುತ್ತಿದ್ದಾರೆ. ಇದು ಗಮನಾರ್ಹ ಅಂಶವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.