ETV Bharat / state

ಕೆಂಪೇಗೌಡರ ಪ್ರತಿಮೆ ಅನಾವರಣದಲ್ಲೂ ಬಿಜೆಪಿ ರಾಜಕೀಯ ಗಿಮಿಕ್ ಮಾಡುತ್ತಿದೆ: ಸಿ ಎಂ ಇಬ್ರಾಹಿಂ ವಾಗ್ದಾಳಿ

author img

By

Published : Nov 10, 2022, 5:43 PM IST

108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವು ರಾಷ್ಟ್ರೀಯ ಕಾರ್ಯಕ್ರಮ ಆಗುವ ಬದಲು ಅದೊಂದು ಬಿಜೆಪಿ ಕಾರ್ಯಕ್ರಮವಾಗಿ ರೂಪಿತಗೊಂಡಿದೆ ಎಂದು ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ.

JDS state president Ibrahim lashed out at the BJP.
ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು : ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಉದ್ಘಾಟನೆ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಟೀಕಿಸಿದ್ದಾರೆ.

ನಗರದ ಜೆಡಿಎಸ್‍ ಕಚೇರಿ ಜೆಪಿ ಭವನದಲ್ಲಿಂದು ಟಿಪ್ಪು ಜಯಂತ್ಯುತ್ಸವದಲ್ಲಿ ಭಾಗವಹಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವು ರಾಷ್ಟ್ರೀಯ ಕಾರ್ಯಕ್ರಮ ಆಗುವ ಬದಲು ಅದೊಂದು ಬಿಜೆಪಿ ಕಾರ್ಯಕ್ರಮವಾಗಿ ರೂಪಿತಗೊಂಡಿದೆ ಎಂದು ಕಿಡಿಕಾರಿದರು.

ಮಾಜಿ ಪ್ರಧಾನಿ ದೇವೆಗೌಡರನ್ನೇ ಅಹ್ವಾನಿಸಿಲ್ಲ : ಪ್ರತಿಮೆ ಅನಾವರಣಕ್ಕೆ ಸರ್ವಪಕ್ಷದವರನ್ನು ಆಹ್ವಾನಿಸಬೇಕಿತ್ತು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ವಂಶಸ್ಥರನ್ನು ಕರೆಯಬೇಕಿತ್ತು. ಕೆಂಪೇಗೌಡರ ವಂಶಸ್ಥರ ಬಗ್ಗೆ ಯಾವ ಮಾಹಿತಿ ಇದೆ ಎಂದು ಪ್ರಶ್ನಿಸಿದ ಅವರು, ಸುತ್ತೂರು, ಸಿದ್ದಗಂಗಾ ಮಠ ಸೇರಿದಂತೆ ಎಲ್ಲ ಮಠಗಳ ಮಠಾಧೀಶರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಂದ ಕೆಂಪೇಗೌಡರ ಪ್ರತಿಮೆ ಅನಾವರಣ ಆಗಬೇಕಿತ್ತು. ಅದರ ಬದಲು ಬಿಜೆಪಿ ರಾಜಕೀಯ ಗಿಮಿಕ್ ಮಾಡುತ್ತಿದೆ ಎಂದು ಇಬ್ರಾಹಿಂ ವಾಗ್ದಾಳಿ ನಡೆಸಿದರು.

ಜೆಡಿಎಸ್ ಮತ ಬೇರೆಲ್ಲೂ ಹೋಗಲ್ಲ: ಪ್ರತಿಮೆ ಅನಾವರಣದಿಂದ ಬಿಜೆಪಿಗೆ ಮತಗಳು ಹೋಗುವುದಿಲ್ಲ. ಜೆಡಿಎಸ್‌ ಮತಗಳು ಜೆಡಿಎಸ್‌ನಲ್ಲೇ ಇರುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂದರೂ ಏನೂ ಆಗಲ್ಲ. ಪಂಚರತ್ನ ಯೋಜನೆ ಮೋದಿ ಓದಲಿ.‌ ಯಾವುದಾದರೂ ಪಕ್ಷ ಈ ಕೆಲಸ ಮಾಡಿದ್ದಾರಾ. ಇವತ್ತು ಪತ್ರಿಕೆಯಲ್ಲಿ ಪ್ರಚಾರ ಕೊಟ್ಟಿದ್ದಾರೆ. ಬಿಜೆಪಿ ನಾಯಕರ ಫೋಟೋ ಬಿಟ್ಟು ಬೇರೆ ಯಾರಾದ್ದಾದರೂ ಹಾಕಿದ್ದಾರಾ? ಎಂದು ಪ್ರಶ್ನಿಸಿದರು.

ಕೆಂಪೇಗೌಡರ ವಂಶಸ್ಥರು ಎಲ್ಲಿ: ಇವರಿಗೇನಾದರೂ ಕೆಂಪೇಗೌಡರ ವಂಶಸ್ಥರು ಎಲ್ಲಿದ್ದಾರೆ ಅಂತ ಗೊತ್ತಾ. ಮೋದಿ ಬೇಸಿಕ್ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಚುನಾವಣಾ ಸಮಯದಲ್ಲಿ ಏನು ಮಾತು ಕೊಟ್ಟಿತ್ತು. ಈ ನಾಲ್ಕು ವರ್ಷದಲ್ಲಿ ಏನಾಯಿತು?. ನೀರಾವರಿ, ಜಿಎಸ್ ಟಿ, ಅಭಿವೃದ್ಧಿ ವಿಚಾರವಾಗಿ ಕೇಳುವ ಶಕ್ತಿ ಇದೆಯೇ ರಾಜ್ಯ ಬಿಜೆಪಿ ನಾಯಕರಿಗೆ?, ಜೀವಂತ ಕೆಂಪೇಗೌಡರು ಕರ್ನಾಟಕದಲ್ಲಿ ಇದ್ದಾರೆ. ಕೆಂಪುಕೋಟೆ ಮೇಲೆ ಬಾವುಟ ಹಾರಿಸುವ ಮೂಲಕ ದೇವೇಗೌಡರು ಕೆಂಪೇಗೌಡರ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಆದರೆ, ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಮಾನ ನಿಲ್ದಾಣ ಮಾರಾಟ ಮಾಡಿ, ಅದಾನಿಗೆ ಕೊಟ್ಟಿದ್ದಾರೆ, ಏನು ಹರಕೆ ಕಟ್ಟಿಕೊಂಡರಾ ಇವರು? ಹೇ ಬೊಮ್ಮಾಯಿ, ನೀನು ಎಸ್ ಆರ್ ಬೊಮ್ಮಾಯಿ ಮಗ. ಬಿಟ್ಟರೆ ವಿಧಾನಸೌಧ ಕೂಡ ಮಾರುತ್ತಾರೆ ಎಂದು ವಾಗ್ದಾಳಿ ನಡೆಸಿದರು.

12 ಮಂದಿ ಸಚಿವರ ಸಿಡಿಗೆ ತಡೆಯಾಜ್ಞೆ: ಇಂದು ರಾಜ್ಯದ ಪರಿಸ್ಥಿತಿ ಏನಾಗಿದೆ. ವಿಮಾನ ನಿಲ್ದಾಣಗಳನ್ನು ಮಾರುತ್ತಿದ್ದಾರೆ. ಏ..ಬೊಮ್ಮಾಯಿ ನಿಮ್ಮ ಸರ್ಕಾರದ ಸಾಲ ಎಷ್ಟಾಗಿದೆ. ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವುದಲ್ಲ. 12 ಮಂದಿ ಸಚಿವರ ಸಿಡಿ ವಿಚಾರ ಪ್ರಚಾರವಾಗದಂತೆ ತಡೆಯಾಜ್ಞೆ ತಂದಿರುವ ವಿಚಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಸದಾನಂದಗೌಡರು ಸ್ಟೇ ತೆಗೆದುಕೊಂಡಿರುವ ವಿಡಿಯೋ ಬಗ್ಗೆ ಅನಾವರಣ ಆಗಬೇಕು. ಕೆಟ್ಟ ಸಂಪುಟ ಇಟ್ಟುಕೊಂಡಿರುವ ನೀವು, ಆ ವಿಡಿಯೋ ಬಗ್ಗೆ ಮೋದಿ ಉತ್ತರ ಕೊಡ್ತಾರಾ?. ನಿಮ್ಮ ಡೋಂಗಿ ನಾಟಕ ಯಾರೂ ನೋಡಲ್ಲ ಅಂದುಕೊಂಡಿದ್ದೀರಾ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಫಸ್ಟ್ ಮಿಸೈಲ್ ತಯಾರಿಸಿದ್ದು ಟಿಪ್ಪು: ಟಿಪ್ಪು ಜಯಂತಿ ಆಚರಣೆಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮವೊದರಲ್ಲಿ ಟಿಪ್ಪು, ಮೈಸೂರು ಅರಸರ ಬಗ್ಗೆ ವರದಿಯಾದವು. ಇವರಿಗೇನು ಗೊತ್ತು ಟಿಪ್ಪು ಬಗ್ಗೆ. ವಿರೋಧ ಮಾಡೋದಕ್ಕೆ ವಿರೋಧಿಸುವುದಲ್ಲ. ಫಸ್ಟ್ ಮಿಸೈಲ್ ತಯಾರಿಸಿದ್ದು ಟಿಪ್ಪು. ಅದೇ ಮಾದರಿಯಲ್ಲಿ ಮಿಸೈಲ್ ಕಲ್ಪನೆ ತಂದಿದ್ದು ಅಬ್ದುಲ್ ಕಲಾಂ ಅವರು. ಬಿಜೆಪಿಯವರು ಬ್ರಿಟಿಷರಿಂದ ಕಲಿಯಬೇಕು. ಯುದ್ಧ ಭೂಮಿಯಲ್ಲಿ ಸತ್ತ ಏಕೈಕ ರಾಜ ಟಿಪ್ಪು. ಇದರ ಬಗ್ಗೆ ಬಿಜೆಪಿಯವರಿಗೇನು ಗೊತ್ತು? ಎಂದು ಪ್ರಶ್ನಿಸಿದರು.

ಬ್ರಾಹ್ಮಣರು ಅಲ್ಪಸಂಖ್ಯಾತರು: ಬ್ರಾಹ್ಮಣರಿಗೆ, ಅಲ್ಪಸಂಖ್ಯಾತ ಮೀಸಲಾತಿ ಕೊಡಬೇಕೆಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಯತ್ನಾಳ್..ನಿನಗೆ ಬ್ರಾಹ್ಮಣರ ಮೇಲೆ ಪ್ರೀತಿ ಹೆಚ್ಚಾಯ್ತೇ?. ಜಂಗಮರ ಬಗ್ಗೆ ನಿನಗೆ ಪ್ರೀತಿ‌ ಇಲ್ಲವೇ?. ಜಂಗಮರೇ ಸತ್ತಾಗ ಎದೆ ಮೇಲೆ ಕಾಲಿಡೋದು. ಪಂಚಮಸಾಲಿ ಮೀಸಲಾತಿ ಬಗ್ಗೆ ಮಾತನಾಡಪ್ಪ, ವಚನ ಕೊಟ್ಟಿದ್ದೀಯ ನೇರವೇರಿಸು. ಮೀಸಲಾತಿ ಕೊಡದಿದ್ರೆ ರಾಜೀನಾಮೆ ಕೊಡ್ತೀಯಾ? ಎಂದು ಯತ್ನಾಳ್ ಗೆ ತಿರುಗೇಟು ನೀಡಿದರು.

ಇದನ್ನೂ ಓದಿ:ಟಿಪ್ಪು ಸುಲ್ತಾನ್​ ಮೈಸೂರಿನ ಹುಲಿ: ಎಂಎಲ್​ಸಿ ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.