ETV Bharat / state

ಶೇ.91 ರಷ್ಟು ರಾಜಸ್ವ ಸಂಗ್ರಹ, ಆಯವ್ಯಯದ ಶೇ 75 ರಷ್ಟು ವೆಚ್ಚ: ರಾಜ್ಯಪಾಲ ಗೆಹ್ಲೋಟ್

author img

By

Published : Feb 10, 2023, 9:40 PM IST

ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು. ಈ ವೇಳೆ, ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿದರು.

Governor Thawar Chand Gehlot addressed the joint session
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿದರು.

ಬೆಂಗಳೂರು: ರಾಜ್ಯದ ರಾಜಸ್ವ ಸಂಗ್ರಹಣೆಯು ಜನವರಿ 2023ಕ್ಕೆ ಶೇ 91ರಷ್ಟು ಸಾಧಿಸಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ. ವಿಧಾನ ಮಂಡಲದ ಜಂಟಿ ಅಧಿವೇಶನದ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, ರಾಜ್ಯದ ಸ್ವಂತ ತೆರಿಗೆ ರಾಜಸ್ವವು ಕಳೆದ ಸಾಲಿಗೆ ಹೋಲಿಸಿದರೆ ಜನವರಿ 2023ಕ್ಕೆ ಶೇ 21ರಷ್ಟು ಹೆಚ್ಚಳವಾಗಿದೆ. ಜನವರಿ 2023ಕ್ಕೆ ಬಂಡವಾಳ ವೆಚ್ಚವು 33,991 ಕೋಟಿ ರೂಪಾಯಿ ಆಗಿದೆ. ಹಿಂದಿನ ಸಾಲಿನಲ್ಲಿ ಇದು 26,915 ಕೋಟಿ ರೂಪಾಯಿ ಆಗಿತ್ತು. ಜನವರಿ 2023ರ ಹೊತ್ತಿಗೆ ಆಯವ್ಯಯ ಅಂದಾಜಿನ ಶೇ 75 ರಷ್ಟನ್ನು ಸರ್ಕಾರವು ವೆಚ್ಚ ಮಾಡಿದೆ. ಇದು ಕಳೆದ ಕೆಲ ವರ್ಷಗಳಿಗೆ ಹೋಲಿಸಿದ್ದಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತದೆ ಎಂದು ಹೇಳಿದ್ದಾರೆ.

ಭಾಷಣದ ಪೂರ್ಣಪಾಠ: ರಾಜ್ಯದ 1475 ತಾಂಡಾ, ಗೊಲ್ಲರಹಟ್ಟಿ, ಕುರುಬರಹಟ್ಟಿ ಮತ್ತು ಇತರ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿದ್ದು, ಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ 52,000 ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ, ವಿಶ್ವ ದಾಖಲೆ ನಿರ್ಮಿಸಲಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗಲು ಹಲವಾರು ಕ್ರಮಗಳನ್ನು ಕಂದಾಯ ಇಲಾಖೆ ಕೈಗೊಂಡಿದೆ.

ವಿವಿಧ ಸಾಮಾಜಿಕ ಭದ್ರತೆ ಯೋಜನೆ: ಯು ಪಿ ಒ ಆರ್ ಯೋಜನೆಯಡಿ ಬೆಂಗಳೂರು ನಗರದಲ್ಲಿ 1.63 ಲಕ್ಷ ಮತ್ತು ಬಾಗಲಕೋಟ ನಗರದಲ್ಲಿ 20 ಸಾವಿರ ಕರಡು ಪಿಆರ್ ಕಾರ್ಡ್‌ಗಳನ್ನು ಸೃಜಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ವರ್ಗದ ವ್ಯಕ್ತಿಗಳಿಗೆ ಆರ್ಥಿಕ ಭದ್ರತೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಒಟ್ಟು 75.76 ಲಕ್ಷ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. ಇದಕ್ಕಾಗಿ 9483 ಕೋಟಿ ರೂಪಾಯಿಗಳ ಅನುದಾನ ಮೀಸಲಿಡಲಾಗಿದೆ. ವಿವಿಧ ಮಾಸಿಕ ಪಿಂಚಣಿ ಯೋಜನೆಗಳ ಮೊತ್ತವನ್ನು ಪರಿಷ್ಕರಿಸಿ ಜಾರಿಗೊಳಿಸಿದ್ದು ಅದಕ್ಕಾಗಿ ವಾರ್ಷಿಕ 1534 ರೂಪಾಯಿಗಳ ಹೆಚ್ಚುವರಿ ಅನುದಾನ ಒದಗಿಸಿದೆ.

ಮನೆ ಬಾಗಿಲಿಗೆ ಮಾಸಾಶನ ಅಭಿಯಾನದಡಿ ಸ್ವಯಂ ಪ್ರೇರಿತವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ 65 ಸಾವಿರ ಫಲಾನುಭವಿಗಳಿಗೆ ಸ್ವಯಂ ಪ್ರೇರಿತವಾಗಿ ಪಿಂಚಣಿ ಮಂಜೂರು ಮಾಡಲಾಗಿದೆ. 3.84 ಲಕ್ಷ ಮೃತ ವಲಸೆ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಸ್ಥಗಿತಗೊಳಿಸಿ ವಾರ್ಷಿಕ 461 ಕೋಟಿ ರೂಪಾಯಿ ಉಳಿತಾಯ ಮಾಡಲಾಗಿದೆ.

ರೈತರಿಗೆ ಅತಿವೃಷ್ಟಿ, ಅನಾವೃಷ್ಟಿ ಪರಿಹಾರ: ಸರ್ಕಾರವು 2022-23ನೇ ಸಾಲಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಬೆಳೆ ನಷ್ಟ ಅನುಭವಿಸಿದ 14.63 ಲಕ್ಷ ರೈತರಿಗೆ 2031 ಕೋಟಿ ರೂಪಾಯಿ ಪರಿಹಾರ ವಿತರಿಸಿದೆ. ಈ ಪರಿಹಾರ ಮೊತ್ತವು ಎನ್ ಡಿ ಆರ್​ ಎಫ್ , ಎಸ್ ಡಿ ಆರ್ ಎಫ್ ನಿಗದಿಪಡಿಸಿದ ಪರಿಹಾರದೊಂದಿಗೆ ಹೆಚ್ಚುವರಿ ಪರಿಹಾರವನ್ನು ರಾಜ್ಯ ಸರ್ಕಾರದ ಬೊಕ್ಕಸದಿಂದ ಒದಗಿಸಲಾಗಿದೆ. ತಸ್ತೀಕ್ ಭತ್ಯೆಯನ್ನು 48 ಸಾವಿರದಿಂದ 60 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದೆ. ಆನ್ನೈನ್ ಮುಖಾಂತರ ಭಕ್ತಾಧಿಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಐಟಿಎಂಎಸ್ ತಂತ್ರಾಂಶವನ್ನು ರೂಪಿಸಿದೆ. ಕರ್ನಾಟಕ ರಾಜ್ಯದಿಂದ ಕಾಶಿಯಾತ್ರೆ ಕೈಗೊಳ್ಳಲು 30 ಸಾವಿರ ಯಾತ್ರಾರ್ಥಿಗಳಿಗೆ ತಲಾ 5000 ರೂಪಾಯಿಗಳ ಸಹಾಯಧನ ನೀಡಲಾಗುತ್ತಿದೆ. ಪುಣ್ಯ ಕ್ಷೇತ್ರ ಪ್ರವಾಸ ಕೈಗೊಳ್ಳಲು ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಭಾರತ್ ಗೌರವ ಯೋಜನೆಯನ್ನು ಕೈಗೊಂಡಿದೆ.

ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳುವ ಮೂಲಕ ಸುರಕ್ಷಿತ ಮತ್ತು ವಾಹನಗಳ ಸುಲಭ ಸಂಚಾರವನ್ನು ಒದಗಿಸಲು ಉತ್ತಮ ರಸ್ತೆ ಜಾಲವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಬದ್ಧವಾಗಿದೆ. ರಸ್ತೆ ಮತ್ತು ಸೇತುವೆಗಳ ಯೋಜನೆಯಡಿ ಹೊಸ ಕಾಮಗಾರಿಗಳಿಗೆ 5140 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. 2275 ಕಿಲೋ ಮೀಟರ್ ಉದ್ದದ ರಾಜ್ಯ ಹೆದ್ದಾರಿ ರಸ್ತೆಗಳ ಸುಧಾರಣೆಯನ್ನು 3500 ಕೋಟಿ ರೂಪಾಯಿ ವೆಚ್ಚದಲ್ಲಿ, ರಸ್ತೆ ಸುರಕ್ಷತಾ ಕಾಮಗಾರಿಗಳನ್ನು 165 ಕೋಟಿ ರೂಪಾಯಿ ವೆಚ್ಚದಲ್ಲಿ 1008 ಕಿಲೋ ಮೀಟರ್ ಉದ್ದದ ರಾಜ್ಯ ಹೆದ್ದಾರಿ ರಸ್ತೆಗಳ ನವೀಕರಣವನ್ನು 440 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಜನರಿಗೆ ಸಂಪರ್ಕ ಕಲ್ಪಿಸಲು ಗ್ರಾಮಬಂಧು ಸೇತು ಯೋಜನೆಯಡಿ 1411 ಕಾಲು ಸಂಕಗಳ ನಿರ್ಮಾಣವನ್ನು ಕೈಗೊಳ್ಳಲಾಗಿದೆ.

ನೀರಾವರಿ ಯೋಜನೆಗಳಿಗೆ ಅದ್ಯತೆ: ನೀರಾವರಿ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಅದರ ಭಾಗವಾಗಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಒದಗಿಸುವುದು ಮತ್ತು 367 ಕೆರೆ ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾನ್ಯತೆ ನೀಡಿ ಕೇಂದ್ರ ಸರ್ಕಾರವು 5300 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ 527 ಕೆರೆಗಳಿಗೆ ನೀರು ತುಂಬಿಸಲಾಗುವುದು.

ಕಳಸಾ ಬಂಡೂರಾ ನಾಲಾ ತಿರುವು ಯೋಜನೆಗಳ ವಿಸ್ತ್ರತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಸಮ್ಮತಿಸಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸುವ ಪಶ್ಚಿಮ ವಾಹಿನಿ ಯೋಜನೆ ಅಡಿಯಲ್ಲಿ ಕಳೆದ ಮೂರುವರೆ ವರ್ಷಗಳಿಂದ ಒಟ್ಟಾರೆಯಾಗಿ 473 ಕಾಮಗಾರಿಗಳನ್ನು 1506 ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಿರುತ್ತದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಹರಿಯುವ ನದಿಗಳಿಗೆ ಖಾರ್ ಲ್ಯಾಂಡ್ ಬಂಡ್ ನಿರ್ಮಿಸಿ ಲವಣ ಪೀಡಿತ ಪ್ರದೇಶವನ್ನು ಸಂರಕ್ಷಿಸಿ ಕೊಳ್ಳಲು 600 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳನ್ನು 2187 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದಿಸಿದೆ ಎಂದು ಅಧಿವೇಶನಕ್ಕೆ ತಿಳಿಸಿದರು.

ಹಸಿರು ಆಯವ್ಯಯ: ರಾಜ್ಯದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಅಭಿವೃದ್ಧಿ ಚಟುವಟಿಕೆಗಳಿಂದ ಆಗಿರುವ ಹಾನಿ ಸರಿದೂಗಿಸಲು ಹಸಿರು ಆಯವ್ಯಯವನ್ನು ತಯಾರಿಸಿದ್ದು, ಇದರಡಿ ಅನೇಕ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಗ್ಗಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಮಾನವ ಪ್ರಾಣಹಾನಿ, ಅಂಗವಿಕಲತೆ, ಆಸ್ತಿ ನಷ್ಟಗಳಿಗೆ ನೀಡುತ್ತಿದ್ದ ಪರಿಹಾರ ಹಣವನ್ನು ಪರಿಷ್ಕರಿಸಿ ಹೆಚ್ಚಿಸಲಾಗಿದೆ. ಮಾನವ ಪ್ರಾಣಹಾನಿಗೆ ನೀಡುತ್ತಿದ್ದ ಪರಿಹಾರವನ್ನು 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ 9,94,881.11 ಹೆಕ್ಟೇ‌ರ್​ ಪರಿಭಾವಿತ ಅರಣ್ಯವೆಂದು ಗುರುತಿಸಲಾಗಿದ್ದ ಪ್ರದೇಶದಲ್ಲಿ 3,30,186.93 ಹೆಕ್ಟೇರ್ ಪ್ರದೇಶವನ್ನು ಮಾತ್ರ ಪರಿಭಾವಿತ ಅರಣ್ಯವೆಂದು ಅಧಿಸೂಚಿಸಿ ಉಳಿದ 7,73,326.91 ಹೆಕ್ಟೇರ್ ಪ್ರದೇಶದಲ್ಲಿ ವಾಸ್ತವದಲ್ಲಿ ಲಭ್ಯವಿರುವ ಜಮೀನುಗಳನ್ನು ಪರಿಭಾವಿತ ಅರಣ್ಯ ಪಟ್ಟಿಯಿಂದ ಕೈಬಿಡಲಾಗಿದೆ.

ಇನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011ರ ಕಲಂ 2(ಡಿ) ಭೂಮಿ ಎಂಬ ಪರಿಭಾಷೆಗೆ ತಿದ್ದುಪಡಿ ತಂದು ಬಿಬಿಎಂಪಿ ವ್ಯಾಪ್ತಿಯ 18 ಕಿಲೋ ಮೀಟರ್, ಮಹಾನಗರ ಪಾಲಿಕೆ ವ್ಯಾಪ್ತಿಯ 10 ಕಿಲೋ ಮೀಟರ್, ನಗರಪಾಲಿಕ ವ್ಯಾಪ್ತಿಯ 5 ಕಿಲೋ ಮೀಟರ್‌, ಪುರಸಭೆ ವ್ಯಾಪ್ತಿಯ 3 ಕಿಲೋ ಮೀಟರ್‌ಗೆ ಸೀಮಿತಗೊಳಿಸಿ, ಇತರೆ ಪ್ರದೇಶಗಳನ್ನು ಹೊರತುಪಡಿಸಲಾಗಿದೆ. ಕರ್ನಾಟಕವು ತನ್ನ ಪ್ರಗತಿಪರ, ಪುಜಾಸ್ನೇಹಿ ಯೋಜನೆಗಳ ಮುಖೇನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ರಾಜ್ಯಪಾಲರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.