ETV Bharat / state

ಇವಿ ಬ್ಯಾಟರಿ ಉತ್ಪಾದನೆ: ಐಬಿಸಿ ಜೊತೆ ಒಡಂಬಡಿಕೆ ಮಾಡಿಕೊಂಡ ರಾಜ್ಯ ಸರ್ಕಾರ

author img

By

Published : Aug 2, 2023, 8:50 AM IST

ಇಂಟರ್ ನ್ಯಾಷನಲ್‌ ಬ್ಯಾಟರಿ ಕಂಪನಿ (ಐಬಿಸಿ) ಜೊತೆ ರಾಜ್ಯ ಸರ್ಕಾರವು 8,000 ಕೋಟಿ ರೂ. ಹೂಡಿಕೆಗೆ ಅವಕಾಶ ಮಾಡಿಕೊಡಲು ಒಡಂಬಡಿಕೆ ಮಾಡಿಕೊಂಡಿದ್ದು, ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ibc
ಐಬಿಸಿ ಜೊತೆ ಒಡಂಬಡಿಕೆ ಮಾಡಿಕೊಂಡ ರಾಜ್ಯ ಸರ್ಕಾರ

ಐಬಿಸಿ ಜೊತೆ ಒಡಂಬಡಿಕೆ ಮಾಡಿಕೊಂಡ ರಾಜ್ಯ ಸರ್ಕಾರ

ಬೆಂಗಳೂರು : ಮರುಬಳಕೆ ಮಾಡಬಹುದಾದ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ತಯಾರಿಸುವ ಇಂಟರ್ ನ್ಯಾಷನಲ್‌ ಬ್ಯಾಟರಿ ಕಂಪನಿ (ಐಬಿಸಿ) ಮತ್ತು ರಾಜ್ಯ ಸರ್ಕಾರ 8,000 ಕೋಟಿ ರೂ. ಹೂಡಿಕೆಗೆ ಅವಕಾಶ ಮಾಡಿಕೊಡಲು ಒಡಂಬಡಿಕೆ ಮಾಡಿಕೊಂಡಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ ಪಾಟೀಲ್ ಸಮ್ಮುಖದಲ್ಲಿ ಈ ಒಡಂಬಡಿಕೆಗೆ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಐಬಿಸಿ ಇಂಡಿಯಾ ಪರವಾಗಿ ಅದರ ಭಾರತದ ವ್ಯವಹಾರಗಳ ಮುಖ್ಯಸ್ಥ ವೆಂಕಟೇಶ ವಲ್ಲೂರಿ ಸಹಿ ಹಾಕಿದರು.

ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಎಂ.ಬಿ ಪಾಟೀಲ್​ ಅವರು ಈ ಖಾತೆಯ ಹೊಣೆ ವಹಿಸಿಕೊಂಡ ಮೇಲೆ ಬಂಡವಾಳ ಆಕರ್ಷಣೆಯಲ್ಲಿ ಇದೊಂದು ಮೈಲಿಗಲ್ಲಾಗಿದೆ. ಮರುಬಳಕೆಗೆ ಬರುವಂತಹ ಲಿಥಿಯಾನ್‌ ಬ್ಯಾಟರಿಗಳ ಉತ್ಪಾದನೆಯನ್ನು ಈ ಕಂಪನಿಯು ಇನ್ನು ಒಂದು ವರ್ಷದಲ್ಲಿ ರಾಜ್ಯದಲ್ಲಿ ಪ್ರಾರಂಭಿಸಲಿದೆ. ಈ ಉದ್ದೇಶಕ್ಕಾಗಿ ಕಂಪನಿಯ ಕೋರಿಕೆಯಂತೆ ಬೆಂಗಳೂರು ಗ್ರಾಮಾಂತರ ವಲಯದಲ್ಲಿ 100 ಎಕರೆ ಜಮೀನನ್ನು ಕೊಡಲಿದೆ. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಕಂಪನಿಯೊಂದಿಗೆ ಮೂರು ಸುತ್ತು ಮಾತುಕತೆ ನಡೆಸಿ, ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಮನದಟ್ಟು ಮಾಡಿಕೊಡಲಾಗಿತ್ತು ಎಂದು ಸಚಿವರು ತಿಳಿಸಿದರು.

ಈ ಕಂಪನಿಯು ಇಂತಹ ಬ್ಯಾಟರಿಗಳನ್ನು ದಕ್ಷಿಣ ಕೊರಿಯಾದಲ್ಲಿ ಪರೀಕ್ಷಾರ್ಥವಾಗಿ ತಯಾರಿಸುವ ಘಟಕವನ್ನು ಹೊಂದಿದ್ದು, ಅದು ಕೂಡ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ಅತ್ಯುತ್ತಮ ಬ್ಯಾಟರಿಗಳ ಉತ್ಪಾದನೆಗೆ ಡ್ರೈ ರೂಮ್‌ ಮತ್ತು ಕ್ಲೀನ್‌ ರೂಮ್‌ಗಳನ್ನು ಕಂಪನಿ ಸ್ಥಾಪಿಸಲಿದೆ. ಇದು ರಾಜ್ಯದಲ್ಲಿ ಇಂತಹ ಎರಡನೇ ಘಟಕವಾಗಿದ್ದು, ಈ ಕ್ಷೇತ್ರದಲ್ಲಿ ರಾಜ್ಯವು ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ, ಐಬಿಸಿ ಸಂಸ್ಥಾಪಕ ಮತ್ತು ಸಿಇಒ ಡಾ.ಪ್ರಿಯದರ್ಶಿ ಪಾಂಡಾ, ಕಂಪನಿಯ ಸಿಒಒ ಶಶಿ ಕುಪ್ಪಣ್ಣಗಾರಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಎಲೆಕ್ಟ್ರಿಕ್ ವಾಹನಗಳಿಗೆ ಬದಲಿ ಬ್ಯಾಟರಿ ಸಂಶೋಧನೆ ಭಾರತದಿಂದ ಆಗಬೇಕು : ಸಿ.ಎನ್​.ಆರ್ ರಾವ್​

ಎಂ ಬಿ ಪಾಟೀಲ್​ ಟ್ವೀಟ್ ​: ಈ ಕುರಿತು ಟ್ವೀಟ್​ ಮಾಡಿರುವ ಸಚಿವ ಎಂ ಬಿ ಪಾಟೀಲ್, "ವಿದ್ಯುತ್ ಚಾಲಿತ ವಾಹನ (EV) ಗಳಿಗೆ ಅಗತ್ಯವಾದ ಲೀಥಿಯಂ ಕೋಶಗಳ ತಯಾರಿಕೆಗೆ ಹೆಸರಾಗಿರುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪನಿ ಐಬಿಸಿ ಯು ಕರ್ನಾಟಕದಲ್ಲಿ 8000 ಕೋಟಿ ರೂ. ಹೂಡಿಕೆ ಮಾಡಲು ಆಸಕ್ತಿ ತೋರಿದೆ. ಈ ಕುರಿತಂತೆ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ (MOU) ಮಾಡಿಕೊಂಡಿದೆ. ರಾಜ್ಯದಲ್ಲಿ ಸುಮಾರು 100ಎಕರೆ ಪ್ರದೇಶದಲ್ಲಿ ಇಂಟರ್ ನ್ಯಾಷನಲ್‌ ಬ್ಯಾಟರಿ ಕಂಪನಿ (IBC) ತನ್ನ ಸ್ಥಾವರ ನಿರ್ಮಿಸಲಿದೆ. ಭವಿಷ್ಯದಲ್ಲಿ ಹಸಿರು ಇಂಧನ ಕ್ಷೇತ್ರದಲ್ಲಿ ರಾಜ್ಯ ಮಹತ್ತರ ಸಾಧನೆ ಮಾಡಲಿದೆ ಎಂಬ ವಿಶ್ವಾಸ ಮೂಡಿಸಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಎಲೆಕ್ಟ್ರಿಕ್​ ಬೈಕ್​ ಬ್ಯಾಟರಿ ಸ್ಫೋಟಗೊಂಡು ಓರ್ವ ಸಾವು, ಮೂವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.