ETV Bharat / state

ಪೌರ ಕಾರ್ಮಿಕರ ಖಾಯಂಗೆ ರಾಜ್ಯ ಸರ್ಕಾರದ ಆದೇಶ: ಶೀಘ್ರದಲ್ಲೇ ಪಾಲಿಕೆಯಿಂದ ಅಂತಿಮ ನೇಮಕಾತಿ ಅಧಿಸೂಚನೆ..

author img

By

Published : Mar 4, 2023, 6:51 PM IST

ಪೌರ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ ಪೌರ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಆದೇಶ ಹೊರಡಿಸಿದೆ.

Brihath Bangalore Metropolitan Palike
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ 11,307 ಮಂದಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಖಾಯಂಗೊಳಿಸಲು ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಅಂತಿಮ ನೇಮಕಾತಿ ಅಧಿಸೂಚನೆ ಪಾಲಿಕೆಯಿಂದ ಅತಿ ಶೀಘ್ರದಲ್ಲೇ ಹೊರ ಬೀಳಲಿದೆ.

ಪಾಲಿಕೆಯಲ್ಲಿ ಹಾಲಿ ನೇರ ಪಾವತಿ ದಿನಗೂಲಿ ಆಧಾರದಲ್ಲಿ (ಎರಡು ವರ್ಷಗಳಿಗೆ ಕಡಿಮೆ ಇಲ್ಲದಂತೆ) ನಿರಂತರವಾಗಿ ಕೆಲಸ ನಿರ್ವಹಿಸಿರುವ ಪೌರ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾರ್ಚ 2 ರಂದು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಪಾಲಿಕೆಯಲ್ಲಿ ಹಾಲಿ ನೇರ ಪಾವತಿ ಅಥವಾ ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ 2 ವರ್ಷಗಳ ಮೇಲ್ಪಟ್ಟು ಪಾಲಿಕೆಯಿಂದ ವೇತನ ಪಡೆದು ದಾಖಲಾತಿಗಳನ್ನು ನೇಮಕಾತಿಯಲ್ಲಿ ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ.

ಸೇವಾ ಅವಧಿ ಸರಿಸಮವಾಗಿದ್ದರೆ ಲಾಟರಿ ಮೂಲಕ ಆಯ್ಕೆ: ಆದ್ಯತೆ ನೀಡುವಲ್ಲಿ ಅಭ್ಯರ್ಥಿಗಳ ಸೇವಾವಧಿ 2 ವರ್ಷ ಮತ್ತು ಅದಕ್ಕಿಂತ ಹೆಚ್ಚು ಇದ್ದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳ ಜೇಷ್ಠತೆಯನ್ನು ಅವರ ವಯಸ್ಸಿಗೆ ಅನುಗುಣವಾಗಿ ಅಂದರೆ ಹೆಚ್ಚು ವಯಸ್ಕರನ್ನು ಕಡಿಮೆ ವಯಸ್ಕರಿಗಿಂತ ಮೇಲೆ ಪರಿಗಣಿಸಬೇಕು ಹಾಗೂ ಹುಟ್ಟಿದ ದಿನಾಂಕ ಹಾಗೂ ಸೇವಾ ಅವಧಿ ಒಂದೇ ಮಾನಂಡದಲ್ಲಿ ಇದ್ದರೆ, ಲಾಟರಿ ಮುಖಾಂತರ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೇರ ಪಾವತಿ ಪೌರ ಕಾರ್ಮಿಕರ ಸೇವೆ ಕಾಯಂಗೆ ಸರ್ಕಾರದ ಒಪ್ಪಿಗೆ: ಅನುಷ್ಠಾನಕ್ಕೆ ಸಮಿತಿ ರಚನೆ

ಅರ್ಥಿಕ ಹೊರೆ ಪಾಲಿಕೆಯ ಹೆಗಲಿಗೆ: ಪೌರಕಾರ್ಮಿಕರ ವೇತನವನ್ನು ಎಸ್ಎಎಫ್‌ಸಿ ಅನುದಾನದಡಿ ರಾಜ್ಯ ಆರ್ಥಿಕ ಆಯೋಗದ ಶಿಫಾರಸಿನಂತೆ ಇರುವ ಅಧಿಕಾರ ಹಂಚಿಕೆಗೆ ಮಿತಿಗೊಳಿಸುವುದು ಹಾಗೂ ಇದಕ್ಕೆ ತಗಲುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಪಾಲಿಕೆಯ ಸ್ವಂತ ನಿಧಿಯಿಂದ ಭರಿಸಬೇಕು ಎಂದು ಹೇಳಿದ್ದಾರೆ.

ಬೇರೆ ಹುದ್ದೆಗಳಿಗೆ ಆದೇಶ ಅನ್ವಯಿಸುವುದಿಲ್ಲ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ನೇರ ಪಾವತಿಯಡಿ ಮಂಜೂರಾದ ಹುದ್ದೆಗಳು ರದ್ದಾಗುತ್ತವೆ. ಪ್ರಸ್ತಾವಿತ ಪೌರ ಕಾರ್ಮಿಕರ ಖಾಯಂಮಾತಿಯು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಇತರ ವರ್ಗಗಳ ನೌಕರರಿಗೆ ಪೂರ್ವ ನಿದರ್ಶನವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಅಂತಿಮ ನೇಮಕಾತಿ ಅಧಿಸೂಚನೆ ಪ್ರಗತಿಯಲ್ಲಿ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಲಿಕೆ ಅಧಿಕಾರಿಗಳು ಸರ್ಕಾರದ ಆದೇಶ ಕೈ ಸೇರಿದ್ದು, ಪೌರಕಾರ್ಮಿಕರ ನೇಮಕದ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಅದೆಷ್ಟೋ ಪೌರ ಕಾರ್ಮಿಕರು ಕಳೆದ ಕೆಲವು ವರ್ಷಗಳಿಂದ ತಮ್ಮ ಹುದ್ದೆಯನ್ನು ಖಾಯಂಗೊಳಿಸುವಂತೆ ಹೋರಾಟ, ಪ್ರತಿಭಟನೆಗಳನ್ನು ಮಾಡುತ್ತಲೇ ಬಂದಿದ್ದರು.

ಇದನ್ನೂ ಓದಿ: NHM ಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ: ಶೇ 15ರಷ್ಟು ಸಂಭಾವನೆ ಹೆಚ್ಚಿಸಿ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.