ಬೆಂಗಳೂರು: ರಾಜ್ಯ ಸರ್ಕಾರ ಈ ಹಣಕಾಸು ವರ್ಷದಲ್ಲಿ ತನ್ನ ಆರ್ಥಿಕ ನಿರ್ವಹಣೆಗೆ ನೆಚ್ಚಿಕೊಂಡಿರುವುದು ಸಾಲ. ಸಾಲದ ಮೂಲಕವೇ ಬಜೆಟ್ ಅನುಷ್ಠಾನಕ್ಕಾಗಿ ಹಣ ಹೊಂದಿಸುತ್ತಿದೆ. ಡಿಸೆಂಬರ್ವರೆಗೆ ರಾಜ್ಯ ಸರ್ಕಾರ ಮಾಡಿದ ಸಾಲದ ಪರಿಸ್ಥಿತಿಯ ಸಮಗ್ರ ವರದಿ ಇಲ್ಲಿದೆ.
ಕೋವಿಡ್ ಲಾಕ್ಡೌನ್ನಿಂದ ರಾಜ್ಯದ ಬೊಕ್ಕಸ ಸೊರಗಿ ಹೋಗಿದೆ. ಅದಕ್ಕಾಗಿಯೇ ಸರ್ಕಾರ ಈ ಬಾರಿಯೂ ಸಾಲದ ಮೊರೆ ಹೋಗಿದೆ. 2021-22ರ ಸಾಲಿನ ಬಜೆಟ್ ಅನುಷ್ಠಾನ, ಯೋಜನೆ ಜಾರಿಗೆ ಕೂಡ ಸಾಲದ ಮೂಲಕವೇ ಹಣಕಾಸು ಹೊಂದಿಸುತ್ತಿದೆ. ಆದಾಯ ಮೂಲಗಳು ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗದ ಕಾರಣ ರಾಜ್ಯ ಸರ್ಕಾರ ಬಹುವಾಗಿ ಸಾಲವನ್ನೇ ನೆಚ್ಚಿಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಆರ್ಥಿಕ ವರ್ಷದಲ್ಲಿ 71,332 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಒಂದು ಅಂದಾಜಿನ ಪ್ರಕಾರ ಈ ಆರ್ಥಿಕ ವರ್ಷದಲ್ಲೂ ಸುಮಾರು 20,000 ಕೋಟಿ ರೂ. ಆದಾಯ ಕೊರತೆ ಎದುರಾಗಲಿದೆ.
ಮೊದಲ ಎರಡು ತ್ರೈಮಾಸಿಕದಲ್ಲಿ ಸರ್ಕಾರ ಆರ್ಬಿಐ ಮೂಲಕ ಯಾವುದೇ ಸಾಲ ಎತ್ತುವಳಿ ಮಾಡಿರಲಿಲ್ಲ. ಮೂರನೇ ತ್ರೈಮಾಸಿಕದಲ್ಲಿ ನಿರಂತರವಾಗಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡುತ್ತಿದೆ.
14,000 ಕೋಟಿ ಸಾಲ ಎತ್ತುವಳಿ:
ಮೂರನೇ ತ್ರೈಮಾಸಿಕದಲ್ಲಿ ರಾಜ್ಯ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಮಾಡಲು ಪ್ರಾರಂಭಿಸಿದೆ. ಅಕ್ಟೋಬರ್-ಡಿಸೆಂಬರ್ವರೆಗಿನ ಮೂರನೇ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್ ಬಿಐ ಮೂಲಕ ಈವರೆಗೆ 14,000 ಕೋಟಿ ರೂ. ರಾಜ್ಯ ಅಭಿವೃದ್ಧಿ ಸಾಲ (ಎಸ್ ಡಿಎಲ್) ಎತ್ತುವಳಿ ಮಾಡಿದೆ.
ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಆರ್ ಬಿಐಗೆ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ 20,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿತ್ತು. ಕರ್ನಾಟಕ ಸರ್ಕಾರ ಅಕ್ಟೋಬರ್ನಲ್ಲಿ ಮೂರು ಬಾರಿ ತಲಾ 2,000 ಕೋಟಿಯಂತೆ ಒಟ್ಟು 6,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಅದರಂತೆ ಅ.5ರಂದು ಆರ್ಬಿಐ ನಡೆಸಿದ ಹರಾಜಿನಲ್ಲಿ ಮುಕ್ತ ಮಾರುಕಟ್ಟೆಯಿಂದ 2,000 ಕೋಟಿ ರೂ.ಸಾಲ ಮಾಡಿದ್ದರೆ, ಅ.12ರಂದು 2,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಅಕ್ಟೋಬರ್ 18ರಂದು ಮತ್ತೆ 2,000 ಕೋಟಿ ಸಾಲ ಮಾಡಿದೆ. ಆ ಮೂಲಕ ಆರ್ಬಿಐ ಮೂಲಕ ಅಕ್ಟೋಬರ್ ತಿಂಗಳಲ್ಲಿ ಈವರೆಗೆ ಒಟ್ಟು 6,000 ಕೋಟಿ ಸಾಲ ಪಡೆದಿದೆ.
ನವೆಂಬರ್ ತಿಂಗಳಲ್ಲೂ ಮೂರು ಬಾರಿ ತಲಾ 2,000 ಕೋಟಿಯಂತೆ 6,000 ಕೋಟಿ ರೂ. ಸಾಲ ಮಾಡಿದೆ. ನವೆಂಬರ್ 16ರಂದು 2,000 ಕೋಟಿ, ನವೆಂಬರ್ 23ರಂದು 2,000 ಕೋಟಿ ಹಾಗೂ ನವೆಂಬರ್ 23ರಂದು 2,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಾಗಿದೆ.
ಇತ್ತ ಡಿಸೆಂಬರ್ ತಿಂಗಳಲ್ಲಿ ನಾಲ್ಕು ಬಾರಿ ತಲಾ 2,000 ಕೋಟಿಯಂತೆ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಸರ್ಕಾರ ತಿಳಿಸಿದೆ. ಅದರಂತೆ ಡಿಸೆಂಬರ್ 7ರಂದು 2,000 ಕೋಟಿ ರೂ.ವನ್ನು ಆರ್ ಬಿಐ ಮೂಲಕ ಸಾಲ ಪಡೆದಿದೆ. ಮುಂದಿನ ವಾರಗಳಲ್ಲಿ 2,000 ಕೋಟಿಯಂತೆ ಸಾಲ ಎತ್ತುವಳಿ ಮಾಡಲಿದೆ.
ಡಿಸೆಂಬರ್ ಅಂತ್ಯಕ್ಕೆ ಮುಂದಿನ ಮೂರು ತಿಂಗಳ ತ್ರೈಮಾಸಿಕದಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: ಪರಿಚಯಸ್ಥನಿಂದಲೇ ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಕೊಲೆ..!