ETV Bharat / state

ಬಜೆಟ್ ಮೇಲೆ ಹತ್ತಾರು ನಿರೀಕ್ಷೆ: ಆರ್ಥಿಕವಾಗಿ ಸೊರಗಿರುವ ರಾಜ್ಯ ಸರ್ಕಾರ ಕೇಂದ್ರ ಆಯವ್ಯಯದ ಮೇಲಿಟ್ಟಿರುವ ನಿರೀಕ್ಷೆಗಳೇನು?

author img

By

Published : Jan 30, 2022, 7:54 PM IST

ಫೆ. 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಕೇಂದ್ರ ಬಜೆಟ್ ಮೇಲೆ ರಾಜ್ಯ ಸರ್ಕಾರ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದೆ. ಈಗಾಗಲೇ ಆರ್ಥಿಕವಾಗಿ ಸೊರಗಿರುವ ರಾಜ್ಯ ಸರ್ಕಾರ ಕೇಂದ್ರ ಬಜೆಟ್ ಮೇಲೆ ಅತಿ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

State Government Expectations on the Union Budget
ಕೇಂದ್ರ ಬಜೆಟ್ ಮೇಲೆ ಹತ್ತಾರು ನಿರೀಕ್ಷೆ

ಬೆಂಗಳೂರು: ಕೇಂದ್ರ ಬಜೆಟ್​ಗೆ ಇನ್ನೇನು ಎರಡೇ ದಿನಗಳಿದ್ದು, ಫೆ. 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇತ್ತ ಕೇಂದ್ರ ಬಜೆಟ್ ಮೇಲೆ ರಾಜ್ಯ ಸರ್ಕಾರ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ರಾಜ್ಯ ಸರ್ಕಾರ ಕೇಂದ್ರದ ಬಜೆಟ್​ನಲ್ಲಿ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಬಹುದೆಂಬ ನಿರೀಕ್ಷೆಯಲ್ಲಿದೆ. ಈಗಾಗಲೇ ಆರ್ಥಿಕವಾಗಿ ಸೊರಗಿರುವ ರಾಜ್ಯ ಸರ್ಕಾರ ಕೇಂದ್ರ ಬಜೆಟ್ ಮೇಲೆ ಅತಿ ಹೆಚ್ಚು ನಿರೀಕ್ಷೆಗಳನ್ನಿಟ್ಟಿದೆ. ಮಾರ್ಚ್ ಮೊದಲ ವಾರದಲ್ಲಿ ಸಿಎಂ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಒಂದೆಡೆ ವಿಧಾನಸಭೆ ಚುನಾವಣೆಯ ಹಿನ್ನೆಲೆ ಜನಪ್ರಿಯ ರಾಜ್ಯ ಬಜೆಟ್ ಮಂಡಿಸುವ ಅನಿವಾರ್ಯದಲ್ಲಿರುವ ಸಿಎಂ, ರಾಜ್ಯದ ಆರ್ಥಿಕತೆಯನ್ನು 2024ರ ವೇಳೆಗೆ 1.5 ಟ್ರಿಲಿಯನ್​​ಗೆ ಕೊಂಡೊಯ್ಯುವ ಮಹದಾಸೆ ಹೊಂದಿದ್ದಾರೆ. ಈ ಕನಸು ನನಸು ಮಾಡಲು ಕರ್ನಾಟಕಕ್ಕೆ ದೊಡ್ಡ ಮಟ್ಟಿನ ಕೇಂದ್ರದ ಹಣಕಾಸು ನೆರವಿನ ಅನಿವಾರ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟಿದೆ.

State Government Expectations on the Union Budget
ಕೇಂದ್ರ ಬಜೆಟ್ ಮೇಲೆ ಹತ್ತಾರು ನಿರೀಕ್ಷೆ

ರಾಷ್ಟ್ರೀಯ ಯೋಜನೆ ಸ್ಥಾನಮಾನದ ನಿರೀಕ್ಷೆ: ರಾಜ್ಯ ಸರ್ಕಾರ ಕರ್ನಾಟಕ ಕೃಷ್ಣಾ ಮೇಲ್ದಂಡೆ ಯೋಜನೆ-3 ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಗಳಿಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡುವ ಬೇಡಿಕೆಯನ್ನು ಇಟ್ಟಿದೆ. ಈ ಸ್ಥಾನಮಾನ ಸಿಕ್ಕರೆ ಯೋಜನಾ ವೆಚ್ಚದ ಶೇ.90ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಭರಿಸಲಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ 3ಕ್ಕೆ 51,148 ಕೋಟಿ ರೂ. ವೆಚ್ಚವಾಗಲಿದ್ದು, ಉತ್ತರ ಕರ್ನಾಟಕದ ಏಳು ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ನೀರಾವರಿಯೇತರ ಭೂಮಿಗೆ ನೀರು ಒದಗಿಸಲಿದೆ. ಈ ಯೋಜನೆಯಿಂದ ಸುಮಾರು 1,21,90,982 ಜನರಿಗೆ ಅನುಕೂಲವಾಗಲಿದೆ. ಅದೇ ರೀತಿ ಎತ್ತಿನಹೊಳೆ ಯೋಜನೆಗೆ 12,912 ಕೋಟಿ ರೂ. ವೆಚ್ಚವಾಗಲಿದ್ದು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಿದೆ. ಈ ಎರಡೂ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲು ಈಗಾಗಲೇ ಕೇಂದ್ರಕ್ಕೆ ಬೇಡಿಕೆ‌ ಇಡಲಾಗಿದೆ. ಕೇಂದ್ರ ಬಜೆಟ್​​ನಲ್ಲಿ ಇದು ಸಾಕಾರವಾಗಲಿದೆ ಎಂಬ ವಿಶ್ವಾಸದಲ್ಲಿ ರಾಜ್ಯ ಸರ್ಕಾರ ಇದೆ.

ರೈಲ್ವೆ ಯೋಜನೆಗಳಿಗೆ ಹೆಚ್ಚುವರಿ ಅನುದಾನ: ರಾಜ್ಯದ ರೈಲ್ವೆ ಯೋಜನೆಗಳಿಗೆ ಅಗತ್ಯ ಅನುದಾನ ಸಿಗುತ್ತಿಲ್ಲ. ಹೀಗಾಗಿ ಚಾಲ್ತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ. ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: ಕೋವಿಡ್​ 3ನೇ ಅಲೆ ಮಧ್ಯೆ ಬಜೆಟ್ ಅಧಿವೇಶನ.. ಇಲ್ಲಿವೆ ಪ್ರಮುಖ ಅಂಶಗಳು

ಪ್ರಮುಖವಾಗಿ ಕಲಬುರಗಿಯಲ್ಲಿ ಹೊಸ ರೈಲ್ವೆ ವಿಭಾಗೀಯ ಕಚೇರಿ ತೆರೆಯಲು ಬೇಡಿಕೆ ಇಟ್ಟಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯಡಿ ಯಾದಗಿರಿ, ಬೀದರ್, ರಾಯಚೂರು ರೈಲ್ವೆ ಯೋಜನೆಗಳನ್ನು ವಿಲೀನ‌ ಮಾಡುವಂತೆ ಕೋರಲಾಗಿದೆ. ಮಂಗಳೂರು ನಗರ ರೈಲ್ವೆ ಯೋಜನೆ ಹಾಗು ಕಲಬುರಗಿ ವಿಭಾಗದ ಯೋಜನೆಗಳನ್ನು ನೈರುತ್ಯ ರೈಲ್ವೆ ವಿಭಾಗದ ವ್ಯಾಪ್ತಿಗೆ ತರಲು ಈಗಾಗಲೇ ಮನವಿ ಮಾಡಲಾಗಿದೆ. ಜೊತೆಗೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬೇಡಿಕೆ ಇಟ್ಟಿದೆ. ಕೇಂದ್ರ ಬಜೆಟ್​​ನಲ್ಲಿ ಈ ನಿರೀಕ್ಷೆಗಳು ಈಡೇರುವ ವಿಶ್ವಾಸ ರಾಜ್ಯದ್ದಾಗಿದೆ.

ಅದೇ ರೀತಿ ಕರ್ನಾಟಕ ಉದ್ದನೆಯ ಕರಾವಳಿ ತೀರ ಹೊಂದಿದ್ದು, ಬೃಹತ್ ಮತ್ತು ಸಣ್ಣ ಬಂದರು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶ ಇದೆ. ಹೀಗಾಗಿ ಹೊಸ ನೀತಿ ರೂಪಿಸಿ ರಾಜ್ಯದಲ್ಲಿ ಬಂದರು ಅಭಿವೃದ್ಧಿಗಾಗಿ ಖಾಸಗಿ ಹೂಡಿಕೆಗೆ ಅವಕಾಶ ನೀಡಲು ಅನುವು ಮಾಡಿಕೊಡುವಂತೆ ಮನವಿ ಮಾಡಲಾಗಿದೆ.

State Government Expectations on the Union Budget
ಸಿಎಂ ಬೊಮ್ಮಾಯಿ

ಕೇಂದ್ರ ಪ್ರಾಯೋಜಿತ ಯೋಜನೆಗೆ ಅನುದಾನ: ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಬಜೆಟ್‌ನಲ್ಲಿ ಮೀಸಲಿರಿಸಿದ ಅನುದಾನವನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಅಂದಾಜು ಅನುದಾನಕ್ಕಿಂತ ಕಡಿಮೆ ಅನುದಾನ ಬಿಡುಗಡೆ ಮಾಡಿದರೆ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಸೊರಗಿದ ಆರ್ಥಿಕ ಸ್ಥಿತಿಗತಿಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಈಗಾಗಲೇ ಬೇಡಿಕೆ ಇಟ್ಟಿದೆ.

ಕೇಂದ್ರ ಸರ್ಕಾರದ ವಸತಿ, ನೀರು ಸರಬರಾಜು, ಶಿಕ್ಷಣ ಮತ್ತು ಆರೋಗ್ಯ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆಯಲ್ಲಿದೆ. ಕನಿಷ್ಠ ಬೆಂಬಲ ಬೆಲೆಯಡಿ ಕೇಂದ್ರದಿಂದ ಕರ್ನಾಟಕಕ್ಕೆ ಸುಮಾರು 3,000 ಕೋಟಿ ರೂ. ಬಾಕಿ ಉಳಿದಿಕೊಂಡಿದೆ. ಹೀಗಾಗಿ ಈ ಮೊತ್ತವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ.

ಬೆಂಗಳೂರಿಗೆ ಹೆಚ್ಚಿನ ಅನುದಾನದ ನಿರೀಕ್ಷೆ: ದೇಶದ ಆರ್ಥಿಕತೆಗೆ ಬೆಂಗಳೂರು ಬಹು ದೊಡ್ಡ ಕೊಡುಗೆ ನೀಡುತ್ತಿರುವುದರಿಂದ, ಬೆಂಗಳೂರು ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಈಗಾಗಲೇ ಕೋರಲಾಗಿದೆ. ಮೆಟ್ರೋ ರೈಲು ಯೋಜನೆ, ಸಬ್ ಅರ್ಬನ್ ರೈಲು ಯೋಜನೆ, ನಗರ ರಸ್ತೆ ಸಾರಿಗೆ ನಿಗಮಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಈ ಸಂಬಂಧ ಹೆಚ್ಚಿಗೆ ಅನುದಾನ ಬಿಡುಗಡೆಯಾಗುವ ವಿಶ್ವಾಸ ಹೊಂದಿದೆ.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದೆ. ಈ ಬಾರಿ 3,000 ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಅಸಮತೋಲನ ನಿರ್ಮೂಲನೆ ಮಾಡಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಲಾಗಿದೆ.

ಜಿಎಸ್ ಟಿ ಪರಿಹಾರ ಅವಧಿ ವಿಸ್ತರಣೆಯ ಬೇಡಿಕೆ: ಕೋವಿಡ್ ಲಾಕ್‌ಡೌನ್ ನಿಂದ ಸೊರಗಿದ ಆದಾಯವನ್ನು ಸರಿದೂಗಿಸಲು ಮುಂದಿನ ಮೂರು ವರ್ಷದವರೆಗೆ ಜಿಎಸ್​ಟಿ ಪರಿಹಾರ ಮೊತ್ತ ನೀಡುವ ಅವಧಿ ವಿಸ್ತರಿಸಲು ರಾಜ್ಯ ಸರ್ಕಾರ ಈಗಾಗಲೇ ಬೇಡಿಕೆ ಇಟ್ಟಿದೆ. ಕೇಂದ್ರ ಬಜೆಟ್​ನಲ್ಲಿ ಈ ಬೇಡಿಕೆ ಈಡೇರುವ ವಿಶ್ವಾಸ ರಾಜ್ಯ ಸರ್ಕಾರದ್ದು. ಜೊತೆಗೆ ಬಾಕಿ ಜಿಎಸ್​​ಟಿ ಪರಿಹಾರ ಮೊತ್ತ ಬಿಡುಗಡೆಯಾಗುವ ನಿರೀಕ್ಷೆಯಲ್ಲೂ ಸರ್ಕಾರ ಇದೆ.

15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 6,000 ಕೋಟಿ ರೂ. ನಿರ್ದಿಷ್ಟ ಹಣಕಾಸು ನೆರವು ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಸ್ವೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಸೊರಗಿರುವ ಬೊಕ್ಕಸಕ್ಕೆ ಇದು ಬಹುವಾಗಿ ವರದಾನವಾಗಲಿದೆ. ಸಂಕಷ್ಟದ ಕಾಲದಲ್ಲಿ ರಾಜ್ಯದ ಅನುದಾನ ಹಂಚಿಕೆಯನ್ನು ಏರಿಕೆ ಮಾಡಿ ಪರಿಷ್ಕರಿಸುವಂತೆ ಮನವಿ ಮಾಡಲಾಗಿದೆ. ಕೇಂದ್ರ ಬಜೆಟ್ ನಲ್ಲಿ ಈ ಬೇಡಿಕೆ ಈಡೇರುವ ನೀರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಅದೇ ರೀತಿ ನಬಾರ್ಡ್ ನಡಿ ಜಾರಿಯಾಗುತ್ತಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಸೇರಿ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ. ರೈತರು ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ನಬಾರ್ಡ್ ನೀಡುತ್ತಿರುವ ಪ್ರಸಕ್ತ 1,500 ಕೋಟಿ ರೂ. ಸಾಲದ ಮೊತ್ತವನ್ನು ಹೆಚ್ಚಿಸುವಂತೆಯೂ ಕೋರಲಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಈ ಬೇಡಿಕೆ ಈಡೇರುವ ನಿರೀಕ್ಷೆಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.